ಸಿಂದಗಿ: ರೈತರಿಗೆ ದಿನನಿತ್ಯ ಕನಿಷ್ಠ 8 ಗಂಟೆಗಳ ಕಾಲ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಸಿಂದಗಿ ತಾಲೂಕಿನಲ್ಲಿ ಆಹೇರಿ ಗ್ರಾಮದ ಬಳಿ 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು 2018ರಲ್ಲಿ ಭೂಮಿ ಪೂಜೆ ಮಾಡಲಾಗಿತ್ತು. ಮತ್ತೆ ನನ್ನ ಮೂರನೇ ಅವಧಿಯಲ್ಲಿಯೇ ಉದ್ಘಾಟನೆಗೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯಾಗುತ್ತಿದೆ. ಅದರ ಉದ್ಘಾಟನೆಗೆ ರಾಜ್ಯದ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲಕುಮಾರ ಅ.3 ರಂದು ಆಗಮಿಸಲಿದ್ದಾರೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಪ್ರತಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಶಾಶ್ವತ ವಿದ್ಯುತ್ ನೀಡಲು ತಾಲೂಕಿನ ಆಹೇರಿ ಗ್ರಾಮದಲ್ಲಿ ನಿರ್ಮಿಸಲಾದ 220ಕೆವಿ ಸ್ಟೇಷನ್ ರೂ. 1 ಕೋಟಿ 25 ಲಕ್ಷ ವೆಚ್ಚದಲ್ಲಿ 15 ವರ್ಷದ ಬಳಿಕ ಹೊಸ ಆವಿಷ್ಕಾರ ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ನಾಲ್ಕನೆಯ 220ಕೆವಿ ಸ್ಟೇಷನ ಇದಾಗಿದೆ. ಇಲ್ಲಿಯವರೆಗೂ ಸಿಂದಗಿ ತಾಲೂಕು ಬಸವನ ಬಾಗೇವಾಡಿಯ ಮೇಲೆ ಅವಲಂಬಿತರಾಗಿದ್ದ ಈ ಕ್ಷೇತ್ರಕ್ಕೆ ಇಂದು ತಾಲೂಕಿನಲ್ಲಿ ಹೊಸ 220ಕೆವಿ ಸ್ಟೇಷನ್ ನಿರ್ಮಿಸಿ ಮುಕ್ತಿ ದೊರೆಯಲಿದೆ. ಇದರಿಂದ ಘಟಕಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಯಂಕಂಚಿ, ಕಡಣಿ, ಗುಬ್ಬೇವಾಡ ಗ್ರಾಮದಲ್ಲಿ ಈಗಾಗಲೇ ನಿವೇಶನ ಇದೆ. ಮತ್ತು ಅನುದಾನವು ಬಿಡುಗಡೆಯಾಗಿದೆ ಆದರೆ ಟೆಂಡರ್ ಕರೆಯುವುದು ಬಾಕಿ ಉಳಿದಿದೆ ಅದನ್ನು ಮುಂದಿನ ದಿನಮಾನಗಳಲ್ಲಿ ಕರೆಯಲಾಗುವುದು ಎಂದರು.
ಮುಂದಿನ ದಿನಗಳಲ್ಲಿ ಸಿಂದಗಿ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರಿಗೆ ಮತ್ತು ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು 220 ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರವನ್ನು ನಿರ್ಮಿಸಲಾಗಿದೆ. ಇಷ್ಟರಲ್ಲಿಯೇ ದೇವರನಾವದಗಿ, ಕೋರಳ್ಳಿ ಮತ್ತು ಕನ್ನೋಳ್ಳಿ ಗ್ರಾಮಗಳಲ್ಲಿ ಹೊಸ 110ಕೆವಿ ಸ್ಟೇಷನ್ಗಳಿಗೆ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿದ್ದು ಇದರಿಂದ ಕೃಷಿಕರಿಗೆ ಕನಿಷ್ಠ 8 ಗಂಟೆಗಳ ಕಾಲ ಹಗಲ ಹೊತ್ತಿನಲ್ಲಿಯೂ ವಿದ್ಯುತ್ ಪೂರೈಕೆಯಾಗಲಿದೆ ಎಂದು ಹೇಳಿದ ಅವರು, ಮಲಘಾಣ, ಚಾಂದಕವಟೆ, ಆಲಮೇಲ, ದೇವಣಗಾವ ಗ್ರಾಮಗಳಲ್ಲಿ 110 ಕೆವ್ಹಿ ಉಪಕೇಂದ್ರದ ಮೇಲಿನ ವಿದ್ಯುತ್ ಸಂಪರ್ಕದ ಭಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ದೇವರನಾವದಗಿ ಹಾಗೂ ಕೋರಳ್ಳಿ ಭಾಗದ ರೈತರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು 110ಕೆವ್ಹಿ ವಿದ್ಯುತ್ ಉಪಕೇಂದ್ರವನ್ನು ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಆಗಲಿದೆ. ತಾಲೂಕಿನ ಅಭಿವೃದ್ಧಿಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಪ್ರಯತ್ನಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಶ್ರೀಶೈಲಗೌಡ ಬಿರಾದಾರ ಸಿದ್ದು ಬುಳ್ಳಾ ಹಾಗೂ ಶಿವಕುಮಾರ ಬಿರಾದಾರ ಇದ್ದರು.