ಅಂತಾರಾಷ್ಟ್ರೀಯ ಮಟ್ಟದ ಕೃಷಿ ವಿಜ್ಞಾನಿ ವಿಶ್ವ ಸಂಸ್ಥೆಯ ಮಾನ್ಯತೆಯ ಸಂಶೋಧಕರು ಪ್ರೊ ಅಶೋಕ ಸಂಗಪ್ಪ ಆಲೂರ

Must Read

ಪ್ರೊ. ಅಶೋಕ ಸಂಗಪ್ಪ ಆಲೂರರವರು ಕೊಡಗು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು,  ಬಾಗಲಕೋಟೆ ಜಿಲ್ಲೆಯ ಪುಟ್ಟ ಗ್ರಾಮದ ಅಶೋಕ ಆಲೂರ ಎಂಬ ಸುಸಂಸ್ಕೃತ ಲಿಂಗಾಯತ ಧರ್ಮದ ಅಪ್ಪಟ ಬಸವ ಭಕ್ತರ ಕುಟುಂಬದಲ್ಲಿ ಜನಿಸಿ ಇಂದು ವಿಶ್ವ ಸಂಸ್ಥೆಯ ಮಾನ್ಯತೆ ಪಡೆದ ಶ್ರೇಷ್ಠ ಕೃಷಿ ವಿಜ್ಞಾನಿ ಸಂಶೋಧಕ ನಮ್ಮ ಆತ್ಮೀಯ ಸ್ನೇಹಿತರು ಹಾಗೂ ವಚನ ಸಾಹಿತ್ಯ ಚಿಂತಕರಾದ ಡಾ ಅಶೋಕ ಸಂಗಪ್ಪ ಆಲೂರ ಅವರು.

ಪ್ರೊ. ಅಶೋಕ ಸಂಗಪ್ಪ ಆಲೂರರವರು, ಕೃಷಿ, ತೋಟಗಾರಿಕೆ. ಉನ್ನತ ಶಿಕ್ಷಣ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯಲ್ಲಿ ಸುಮಾರು 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ

ಪ್ರೊ ಅಶೋಕ ಸಂಗಪ್ಪ ಆಲೂರ ಅವರು
ಮೂಲತಃ ಬಾಗಲಕೋಟೆ ಜಿಲ್ಲೆಯ ಬೇವೂರಿನ ಲಿಂಗೈಕ್ಯ ಶ್ರೀಮತಿ ದಾನಮ್ಮ ಹಾಗೂ ಲಿಂಗೈಕ್ಯ ಶ್ರೀ ಸಂಗಪ್ಪ ಆಲೂರ ಎಂಬ ಸುಸಂಸ್ಕೃತ ದಂಪತಿಗಳ ಕಿರಿಯ ಸುಪುತ್ರರು.ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೇವೂರಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಬಾಗಲಕೋಟೆಯಲ್ಲಿ ಹಾಗೂ ಬಿಎಸ್ಸಿ (ಕೃಷಿ), ಎಂ.ಎಸ್ಸಿ (ಕೃಷಿ) ಹಾಗೂ ಪಿ.ಹೆಚ್ಚಿ (ಕೃಷಿ) ಪದವಿಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.

ಇದರೊಂದಿಗೆ ಎಂ.ಬಿ.ಎ ಹಾಗೂ ಪಿಜಿಡಿಎಇಎಂ ಪದವಿಗಳನ್ನು ಪಡೆದ ಇವರು ಆಮೇರಿಕಾ, ಜರ್ಮನಿ, ಕೀನ್ಯಾ ಹಾಗೂ ಭಾರತದಲ್ಲಿ 10ಕ್ಕೂ ಹೆಚ್ಚು ಉನ್ನತ ನಿರ್ವಹಣಾ ತರಬೇತಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಪ್ರೊ. ಅಶೋಕ ಸಂಗಪ್ಪ ಆಲೂರರವರು, ಉನ್ನತ ಶಿಕ್ಷಣ, ಮಣ್ಣು ಆರೋಗ್ಯ, ಜಲಾಯನ ಅಭಿವೃದ್ಧಿ, ಕೃಷಿ, ತೋಟಗಾರಿಕೆ, ಗ್ರಾಮೀಣಾಭಿವೃದ್ಧಿ, ಅಂತಾರಾಷ್ಟ್ರೀಯ ಸಹಕಾರ, ಆಹಾರ ಭದ್ರತೆ, ಸಾಂಸ್ಥಿಕ ಅಭಿವೃದ್ಧಿ, ವಾಣಿಜ್ಯೋದ್ಯಮ ಅಭಿವೃದ್ಧಿ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ರೈತ ಉತ್ಪಾದಕ ಸಂಘಗಳ ಸ್ಥಾಪನೆ, ಅಭಿವೃದ್ಧಿ ಹಾಗೂ ನೀತಿ-ನಿಯಮ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಇವರು ಸಲ್ಲಿಸಿದ ಸೇವೆಯನ್ನು ಗುರುತಿಸಿ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು, 6 ರಾಷ್ಟ್ರೀಯ ಪ್ರಶಸ್ತಿಗಳು ಮತ್ತು 6 ರಾಜ್ಯ ಪ್ರಶಸ್ತಿಗಳನ್ನು ನೀಡಲಾಗಿದೆ. ಅಂತಾರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಪ್ರಮುಖವಾದವುವೆಂದರೆ, ಥೈಲ್ಯಾಂಡ್ ಸರ್ಕಾರದಿಂದ ಗೌರವ ಪ್ರಶಸ್ತಿ, ಚೈನಾ ಸರ್ಕಾರದ ಲಿಯಾನಿಂಗ್ ಕೃಷಿ ವಿಜ್ಞಾನ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಮತ್ತು ಚೀನಾದ ಜೋಳ ಸಂಶೋಧನಾ ಸಂಸ್ಥೆ ಪ್ರಶಸ್ತಿ, ಆಹಾರ ಭದ್ರತೆಗಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸ್ವಾಜಿಲ್ಯಾಂಡ್ ಮತ್ತು ಮೊಜಾಂಬಿಕ್ ಸರ್ಕಾರಗಳಿಂದ ಗೌರವ ಸನ್ಮಾನ ಹೀಗೆ ಹಲವು ರಾಷ್ಟ್ರಗಳಿಂದ ಮೆಚ್ಚುಗೆಯ ಪ್ರಮಾಣಪತ್ರ, ನಿಷ್ಠೆ ಪ್ರಶಸ್ತಿ ಹಾಗೂ ಚಿನ್ನದ ಪದಕವನ್ನು ಪಡೆದುಕೊಂಡಿರುವುದು ನಮ್ಮೆಲ್ಲರಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಕರ್ನಾಟಕ ಸರ್ಕಾರ ಇವರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ, ವಿಜ್ಞಾನ ಸಂವಹನಕಾರ ಪ್ರಶಸ್ತಿ ಹಾಗೂ ಸ್ವಾತಂತ್ರೋತ್ತರ ಸನ್ಮಾನ ನೀಡಿ ಗೌರವಿಸಿದೆ. ಹಾಗೂ ಆಂಧ್ರಪ್ರದೇಶ ಸರ್ಕಾರ ಇವರಿಗೆ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ ನೀಡಿ ಗೌರವಿಸಿದೆ.

ಇವರು ಹಲವಾರು ಸರ್ಕಾರಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮಿತಿಗಳು ಮತ್ತು ಮಿಷನ್‌ಗಳಲ್ಲಿ ಅಧ್ಯಕ್ಷರಾಗಿ ಹಾಗೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಅರೆಶುಷ್ಕ ಪ್ರದೇಶಗಳ ಸಂಶೋಧನಾ ಸಂಸ್ಥೆ, ಸ್ವಿಜರ್‌ಲ್ಯಾಂಡ್ ರಾಯಭಾರ, ವಿಶ್ವ ಆಹಾರ ಸಂಸ್ಥೆ ಹಾಗೂ ವಿಶ್ವಬ್ಯಾಂಕ್‌ನ ಹಲವಾರು ಯೋಜನೆಗಳ ಅನುಷ್ಠಾನದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ.

*ವಿದೇಶಿ ರಾಷ್ಟ್ರೀಯ ಯೋಜನೆಗಳು*
ಪ್ರೊ ಅಶೋಕ ಸಂಗಪ್ಪ ಆಲೂರ ಇವರು
50ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಭೇಟಿ ನೀಡಿದ್ದಲ್ಲದೇ ಹಲವಾರು ಅಂತಾರಾಷ್ಟ್ರೀಯ ಯೋಜನೆಗಳಲ್ಲಿ, ನಿಯೋಗಗಳಲ್ಲಿ, ಕಾರ್ಯಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ

ಪ್ರೊ. ಅಶೋಕ ಸಂಗಪ್ಪ ಆಲೂರರವರು ನೂರಾರು ರಾಷ್ಟ್ರೀಯ-ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಧಾನ ಭಾಷಣಗಳನ್ನು ನೀಡಿದ್ದಾರೆ.

ಕೃಷಿ ಮಾನವ ಪರಿಸರ ಸಂಸ್ಥೆ, ಸ್ಟಿರ್ ಅಭಿವೃದ್ಧಿ ಸಂಸ್ಥೆ, ಇಕ್ರೆಸ್ಯಾಟ್ ಹಾಗೂ ತೋಟಗಾರಿಕೆ ವಿಶ್ವವಿದ್ಯಾಯಗಳಲ್ಲಿ ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಇವರು ಅನಂತಪುರದ ಭಾರತೀಯ ಇಂಜಿನಿಯರಿಂಗ್ ಹಾಗೂ ವಿಜ್ಞಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿಗಳಾಗಿ, ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಪ್ರಥಮ ನಿರ್ದೇಶಕರಾಗಿ ರಾಜ್ಯದಲ್ಲಿ 1250ಕ್ಕೂ ಹೆಚ್ಚು ರೈತ ಉತ್ಪಾದಕರ ಸಂಸ್ಥೆಗಳನ್ನು ಬೆಳೆಸಲು ಅವಿರಿತ ಶ್ರಮವಹಿಸಿದ್ದಾರೆ

*ಸಂಶೋಧನಾ ಲೇಖನಗಳು*
ಇವರು 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನೂ, 50ಕ್ಕೂ ಹೆಚ್ಚು ಪುಸ್ತಕಗಳನ್ನೂ, 250ಕ್ಕೂ ಅಧಿಕ ಪ್ರಖ್ಯಾತ ಲೇಖನಗಳನ್ನೂ, 225ಕ್ಕೂ ಅಧಿಕ ಮಣ್ಣು ಸಂಶೋಧನಾ ಅಟ್ಲಾಸ್‌ಗಳನ್ನು ಹಾಗೂ 250 ಕ್ಕೂ ಅಧಿಕ ರೈತರ ಸಾಮಾಜಿಕ-ಆರ್ಥಿಕ ಅಧ್ಯಯನಗಳನ್ನು ಕೈಗೊಂಡು ವಿವಿಧ ಪ್ರಕಟಣೆಗಳನ್ನು ಹೊರ ತಂದಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ‘ವಿಶೇಷ ಅಂಕಣಗಳನ್ನು’ ಬರೆದಿದ್ದಾರೆ.

*ಕುಲಪತಿಗಳಾಗಿ ಸೇವೆ*
ಇವರ ಶಿಕ್ಷಣ ಪ್ರೇಮ ಮತ್ತು ಸಂಶೋಧನಾ ನೈಪುಣ್ಯತೆಯನ್ನು ಕಂಡು ಅಂದಿನ ಕರ್ನಾಟಕ ಸರಕಾರವು 2023 ರಲ್ಲಿ ಕೊಡಗು ವಿಶ್ವದ್ಯಾಲಯದ ಪ್ರಥಮ ಕುಲಪತಿಗಳನ್ನಾಗಿ ನೇಮಕ ಮಾಡಿದೆ. ಇವತ್ತು ಇವರು ಬಹಳಷ್ಟು ಪ್ರಗತಿದಾಯಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಉಪನ್ಯಾಸಗಳನ್ನು ರೂಪಿಸುತ್ತಾ ಕೊಡಗಿನಾದ್ಯಂತ ಮನೆ ಮಾತಾಗಿರುವ ಪ್ರೊ. ಅಶೋಕ ಸಂಗಪ್ಪ ಆಲೂರ ಸರದ ಅವರ ಸೇವೆ ಅವಿಸ್ಮರಣೀಯ ಮತ್ತು ಶ್ಲಾಘನೀಯವಾದುದು.

ಇತ್ತೀಚೆಗೆ ನಡೆದ ಬಸವ ತತ್ವ ಅಭಿಯಾನದಲ್ಲಿ ಪ್ರೊ ಅಶೋಕ ಸಂಗಪ್ಪ ಆಲೂರ ಅವರು ಕೊಡಗಿನ ಎಲ್ಲಾ ಬಸವ ಭಕ್ತರನ್ನು ಮಠಾಧಿಪತಿಗಳನ್ನು ಸಂಘಟಿಸಿ ಹತ್ತು ಸಾವಿರ ಜನರನ್ನು ಕೂಡಿಸಿ ಬಸವ ತತ್ವ ಅಭಿಯಾನವನ್ನು ಯಶಸ್ವಿಗೊಳಿಸಿದ್ದಾರೆ.

*ಆಸಕ್ತಿ ಮತ್ತು ಅಭಿರುಚಿಗಳು*
ವಚನ ಸಾಹಿತ್ಯ ಮತ್ತು ಸಂಶೋಧನೆಯಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಪ್ರೊ ಅಶೋಕ ಸಂಗಪ್ಪ ಆಲೂರ ಅವರು ವೈಚಾರಿಕರು. ಒಂದು ದಿನ ಬೆಳಿಗ್ಗೆ ನನಗೆ ಫೋನ್ ಮೂಲಕ ಕರೆ ಮಾಡಿ, ಸರ್ ನಿನ್ನೆ ಸಂಜೆ ಆದಯ್ಯನವರ ವಚನ ಓದಿದೆ. ಅವುಗಳಲ್ಲಿನ ಕೆಲವು ಸಾಲುಗಳು ಅಲ್ಲಮರ ಮಾತಿನಂತೆ ತೀಕ್ಷ್ಣವಾಗಿವೆ. ಇವರ ಇತಿಹಾಸ ಮತ್ತು ಚರಿತ್ರೆ ಬಗ್ಗೆ ಏಕೆ ಒಂದು ಟ್ರಸ್ಟ್ ಅನ್ನು ನಾವು ಸ್ಥಾಪಿಸಬಾರದು ಎಂದು ಕೇಳಿದರು.ಆಗ ನನಗೂ ಅಭಿರುಚಿ ಹುಟ್ಟಿ ಡಾ ಅಜಿತ ರಾಂಪುರೇ ಕೆನಡಾ ಮತ್ತು ಅರುಬಾ ದ್ವೀಪದ ಔರೆಯುಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಡೀನ್ ಇವರನ್ನು ಡಾ ಸಂಗಮೇಶ ನಾಶಿ ಮತ್ತು ಉದ್ಯೋಗಪತಿ  ಮಲ್ಲಿಕಾರ್ಜುನ ಜಗಜಂಪಿ ಮತ್ತು ಬೇರೆ ಬೇರೆ ಊರಿನ ಅನೇಕರನ್ನು ಸಂಪರ್ಕಿಸಲಾಗಿ ಎಲ್ಲರೂ ಒಮ್ಮನದಿಂದ ಒಪ್ಪಿಕೊಂಡರು.

ಮೃದು ಮಾತು ಸದ್ವಿಚಾರ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಗೌರವ ವಿಶ್ವಾಸದ ಪ್ರತೀಕ ಅಂತರಾಷ್ಟ್ರ ಮಟ್ಟದ ಕೃಷಿ ವಿಜ್ಞಾನಿ ಆದರೂ ನಿಗರ್ವಿ. ಕೌಟುಂಬಿಕ ಜೀವನ ಮತ್ತು ಸಾಂಘಿಕ ಬದುಕಿನ ಬಗ್ಗೆ ನಿರಂತರ ಶ್ರಮ ವಹಿಸುತ್ತಿರುವ ಮಾನವತೆಯ ನಡೆದಾಡುವ ಮೌಲ್ಯಯುತ ಮಾನವ ಹಕ್ಕುಗಳ ವಾರಸುದಾರರು. ಇವರಿಗೆ ಇನ್ನೂ ಹೆಚ್ಚಿನ ಹುದ್ದೆ ಪದವಿಗಳು ಸಿಕ್ಕು ಜಂಗಮ ಸೇವೆಗೆ ಅಣಿಯಾಗಲೆಂದು ಬಸವಾದಿ ಶರಣರನ್ನು ಪ್ರಾರ್ಥಿಸುತ್ತೇನೆ

________________________
ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

LEAVE A REPLY

Please enter your comment!
Please enter your name here

Latest News

ವಿದ್ಯಾರ್ಥಿಗಳು ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು – ರಾಮಚಂದ್ರ ಕಾಕಡೆ

ಮೂಡಲಗಿ- ವಿದ್ಯಾರ್ಥಿಗಳು ಎಲ್ಲಾ ರಂಗಗಳಲ್ಲಿ ಸಾಧನೆ ಮಾಡುವುದರೊಂದಿಗೆ ಗುಣ ಮಟ್ಟದ ಶಿಕ್ಷಣ ಪಡೆದು ಮಾನವೀಯ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಗುಣಮಟ್ಟದ ಸ್ಥಾನ ಪಡೆಯಲು...

More Articles Like This

error: Content is protected !!
Join WhatsApp Group