ವ್ಯಾಸ ಭಾರತವನ್ನು ದೇಸೀಭಾಷೆಗೆ ಮೊದಲಿಗೆ ತಂದಿದ್ದು ಕವಿ ಪಂಪ
ಬೆಂಗಳೂರು – ಸಂಸ್ಕೃತ ಭಾಷೆಯಲ್ಲಿ ವ್ಯಾಸರು ಬರೆದಿದ್ದ ಮಹಾಭಾರತವು ದೇಸೀಭಾಷೆಗಳಲ್ಲಿ ಮೊದಲಿಗೆ ಅನುವಾದಗೊಂಡದ್ದು ಕನ್ನಡದಲ್ಲಿಯೇ. ಕನ್ನಡದ ಆದಿಕವಿ ಪಂಪನು ಮೂಲ ಭಾರತವನ್ನು ಯಥಾ ನಕಲು ಮಾಡದೆ ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ತಂದಿದ್ದು ಚಾರಿತ್ರಿಕ ಸಂಗತಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಕಾಲೇಜಿನ ಕನ್ನಡ ವಿಭಾಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಭಾಷಾಂತರ ಪ್ರಕ್ರಿಯೆ: ಅಂದು-ಇಂದು” ಎಂಬ ಶೀರ್ಷಿಕೆಯ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದ ಭಾಷಾಂತರ ಪ್ರಕ್ರಿಯೆಗೂ ಆಧುನಿಕ ಕಾಲದಲ್ಲಿನ ಭಾಷಾಂತರಕ್ಕೂ ಬಹಳಷ್ಟು ವ್ಯತ್ಯಾಸಗಳಿವೆ ಮತ್ತು ಬೆಳವಣಿಗೆಗಳಾಗಿವೆ. ಕರ್ನಾಟಕದ ಭೂಪ್ರದೇಶದ ಸೀಮೆಯ ವೈಶಿಷ್ಯ ಹಾಗೂ ಕನ್ನಡಿಗರ ಸ್ವೀಕಾರ ಗುಣದ ವೈಶಾಲ್ಯ ಕಾರಣದಿಂದಾಗಿ ಪ್ರಾಚೀನಕಾಲದಿಂದ ಇಂದಿನವರೆಗೂ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮಗಳ ಮೂಲಕ ಹಲವು ರೀತಿಯ ಪ್ರಭಾವ ಸಾಧ್ಯವಾಯಿತು. ಈ ಮೂಲಕ ಕನ್ನಡವು ಹೊರಗಿನದನ್ನು ಸ್ವೀಕರಿಸುತ್ತಲೇ ತನ್ನತನವನ್ನು ಉಳಿಸಿಕೊಳ್ಳುತ್ತಾ ಸಮೃದ್ಧವಾಯಿತು. ಜಗತ್ತಿನ ಬೇರೆ ಬೇರೆ ಭಾಷೆಯ, ಬೇರೆ ಬೇರೆ ದೇಶದ ಜ್ಞಾನವು ಕನ್ನಡಕ್ಕೆ ಬಂದು ಅಪಾರವಾದ ಜ್ಞಾನ ರಾಶಿಯೇ ದಕ್ಕುವಂತಾಯಿತು ಎಂದು ತಿಳಿಸಿದರು.
ಯಾವುದೇ ದೇಶ, ಭಾಷೆ ಮತ್ತು ಸಂಸ್ಕೃತಿಗಳ ದೇಸೀಜ್ಞಾನವು ಅಂತಾರಾಷ್ಟ್ರೀಕರಣಗೊಳ್ಳುವಲ್ಲಿ ಅನುವಾದದ ಪಾತ್ರ ನಿರ್ಣಾಯಕವಾದುದು. ಅಂತಾರಾಷ್ಟ್ರೀಯ ನೆಲೆಯ ಜ್ಞಾನ ಸಂಪತ್ತು ಕನ್ನಡಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬಂದಿರುವುದು ಸಂತಸದ ಸಂಗತಿ. ಆದರೆ ಕನ್ನಡದೊಳಗಿನ ದೇಸೀಜ್ಞಾನವನ್ನು ಅನುವಾದಗಳ ಮೂಲಕ ಅಂತಾರಾಷ್ಟ್ರೀಕರಣಗೊಳಿಸುವಲ್ಲಿ ವಿಫಲಗೊಂಡಿದ್ದೇವೆ. ಆದ್ದರಿಂದ ಕನ್ನಡದಿಂದ ಇತರ ಭಾಷೆಗೆ ಹೆಚ್ಚೆಚ್ಚು ಅನುವಾದ ಕಾರ್ಯಗಳು ನಡೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಆಶಯ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಂಟಹಳ್ಳಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ಡಾ.ಸೈಯದ್ ಮುಯಿನ್ ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಎನ್.ಚಂದ್ರಶೇಖರ್, ಡಾ.ರವಿಶಂಕರ್ ಎ.ಕೆ, ಡಾ.ಎಂ.ಭೈರಪ್ಪ, ಡಾ.ಪ್ರೇಮಕುಮಾರ್ ಕೆ. ಹಾಗೂ ಡಾ.ಕಿರಣಕುಮಾರ್ ಉಪಸ್ಥಿತರಿದ್ದರು. ಆನ್ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮುನ್ನೂರು ಹೆಚ್ಚು ಕನ್ನಡ ಅಧ್ಯಾಪಕರು, ಸಂಶೋಧಕರು ಭಾಗವಹಿಸಿದ್ದರು.