spot_img
spot_img

ಇಷ್ಟಾರ್ಥ ಸಿದ್ಧಿ ನವಲಗುಂದ ರಾಮಲಿಂಗೇಶ್ವರ ಕಾಮದೇವ

Must Read

ಕಾಮದೇವನ ಪುನರ್ಜನ್ಮ ಸ್ಥಾನ ನವಲಗುಂದ

ಹೋಳಿ ಹಬ್ಬದಂದು ನಾವು ಕಾಮದೇವನನ್ನು ಪ್ರತಿಷ್ಠಾಪಿಸುವುದನ್ನು ದೇಶದೆಲ್ಲೆಡೆ ಕಾಣುತ್ತೇವೆ.ಅಲ್ಲಿ ಅಗ್ನಿಸ್ಪರ್ಶದಿಂದ ಕಾಮದಹನವನ್ನು ಮಾಡುವ ಮೂಲಕ ಹೋಳಿ ಆಚರಿಸುವುದನ್ನು ಕೂಡ ಕಾಣುತ್ತೇವೆ. ಆದರೆ ಹೋಳಿ ದಿನ ಅಗ್ನಿಸ್ಪರ್ಶವಾದ ನಂತರ ಕಾಮದೇವ ಪುರ್ನಜನ್ಮ ಪಡೆದ ರೀತಿಯನ್ನು ಎಲ್ಲಿಯಾದರೂ ಕಾಣುವುದಿದ್ದರೆ ಅದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಮಾತ್ರ.

ನವಲಗುಂದ ಧಾರವಾಡ ಜಿಲ್ಲೆಯ ತಾಲೂಕ ಕೇಂದ್ರ. ಇದು ಧಾರವಾಡದಿಂದ ೪೫ ಕಿ.ಮೀ. ಹುಬ್ಬಳ್ಳಿಯಿಂದ ೩೫ ಕಿ.ಮೀ.ನರಗುಂದದಿಂದ ೧೭ಕಿ.ಮೀ.ಗದಗದಿಂದ ೪೫ ಕಿ.ಮೀ. ಸವದತ್ತಿಯಿಂದ ೪೦ ಕಿ.ಮೀ ಅಂತರದಲ್ಲಿರುವ ಸ್ಥಳ.ನೀವು ಯಾವುದೇ ಮಾರ್ಗದಿಂದ ಬಂದರೂ ಕೂಡ ಸುಲಭವಾಗಿ ತಲುಪಲು ಸಾಕಷ್ಟು ವಾಹನ ಸೌಲಭ್ಯ ಹೊಂದಿದ ತಾಲೂಕು ಕೇಂದ್ರ.

ನವಲಗುಂದ ಇದು ಒಂದು ಕಾಲಕ್ಕೆ ಸಾಕಷ್ಟು ನವಿಲುಗಳು ಇಲ್ಲಿನ ಬೆಟ್ಟದಲ್ಲಿ ಇದ್ದ ಕಾರಣ “ನವಿಲುಗುಂದ” ಎಂದು ಕರೆಸಿಕೊಂಡು ನಂತರ ಜನರ ಬಾಯಲ್ಲಿ ನವಿಲುಗಳ ಊರು ನವಲಗುಂದ ಎಂದಾಗಿದೆ.ಕ್ರಿ.ಶ.೯೮೦ ರ ಅರೆಕುರಹಟ್ಟಿಯ ಶಾಸನವೊಂದರಲ್ಲಿ “ನವಿಲುಗುಂದ” ಹೊಯ್ಸಳ ಎರಡನೇ ಬಲ್ಲಾಳನ ಶಾಸನದಲ್ಲಿ(ಕ್ರಿ.ಶ.೧೧೯೯) “ನವಿಲ್ಗುಂದೆ” ಎಂದೂ ಈ ಸ್ಥಳದ ಕುರಿತು ಉಲ್ಲೇಖವಿದೆ.ಇಲ್ಲಿ ಅಜಾತ ನಾಗಲಿಂಗ ಮಠ,ಹುರಕಡ್ಲಿ ಅಜ್ಜನ ಮಠ, ಪಂಚಗೃಹ ಹಿರೇಮಠ,ದೇಸಾಯಿ ವಾಡೆ, ನೀಲಮ್ಮ ತಾಯಿ ಕೆರೆ,ಚನ್ನಮ್ಮನ ಜಲಾಶಯಗಳು ಪ್ರಸಿದ್ಧಿ ಪಡೆದಿವೆ.ಇವುಗಳ ಜೊತೆಗೆ ರಾಮಲಿಂಗೇಶ್ವರ ಕಾಮನ ಮೂಲಕ ಖ್ಯಾತಿ ಪಡೆದಿದೆ.

ಹೋಳಿ ಹುಣ್ಣಿಮೆ ಬಂತೆಂದರೆ ಎಲ್ಲೆಡೆ ಕಾಮನನ್ನು ಪ್ರತಿಷ್ಠಾಪಿಸಿ ಮೋಜಿಗಾಗಿ ಹಬ್ಬವನ್ನು ಆಚರಿಸುವುದನ್ನು ಎಲ್ಲೆಡೆ ನಾವು ನೋಡುತ್ತೇವೆ,. ಆದರೆ ಇಲ್ಲಿ ಮಾತ್ರ ಶೃದ್ಧೆ,ಭಕ್ತಿಗಳ ಜಾತ್ರಾ ಮಹೋತ್ಸವವನ್ನಾಗಿ ರಾಜ್ಯವಷ್ಟೇ ಅಲ್ಲ ನೆರೆ ರಾಜ್ಯಗಳಾದ ಆಂದ್ರಪ್ರದೇಶ,ಮಹಾರಾಷ್ಟ್ರಗಳಿಂದಲೂ ಅಪಾರ ಭಕ್ತರ ದಂಡು ಇಲ್ಲಿಗೆ ಹರಿದು ಬರುತ್ತದೆ., ರಾಮಲಿಂಗೇಶ್ವರ ದೇವಾಲಯದಲ್ಲಿ ಈ ಕಾಮನನ್ನು ಪ್ರತಿಷ್ಠಾಪಿಸುವುದರಿಂದಾಗಿ “ಶ್ರೀ ರಾಮಲಿಂಗೇಶ್ವರ ಕಾಮ” ಎಂದೇ ಇವನಿಗೆ ಹೆಸರು. ಎಲ್ಲ ಕಡೆಗೂ ಇರುವಂತೆ ಇಲ್ಲಿಯೂ ಕೂಡ ಚಾವಡಿ ಓಣಿ ಕಾಮ,ಸಿದ್ದಾಪುರ ಓಣಿ.,ಮಾದರ ಓಣಿ, ತೆಗ್ಗಿನಕೇರಿ ಓಣಿ,ಹಳ್ಳದ ಓಣಿ, ಗೌಟೆ ಓಣಿ, ಮಚ್ಚಿಗರ ಓಣಿ, ಅಕ್ಕಿಯವರ ಓಣಿ, ರಾಮಲಿಂಗ ಓಣಿ ಹೀಗೆ ಹಲವು ಕಾಮಣ್ಣಗಳು ಇಲ್ಲಿವೆ. ಚಾವಡಿ ಓಣಿಯ ಕಾಮ ಇಲ್ಲಿ ತಂದೆಯ ಸ್ವರೂಪದ್ದಾಗಿದೆ. ರಾಮಲಿಂಗ ಹಿರಿಯ ಸಹೋದರನೆಂದೂ ಉಳಿದ ಎಲ್ಲ ಕಾಮಣ್ಣಗಳು ಕಿರಿಯ ಸಹೋದರರೆಂದೂ ಪ್ರತೀತಿ.

ರಾಮಲಿಂಗ ಕಾಮನ ಕುರಿತ ಕಥೆ:

 

ಹಿಂದೆ ಸವಣೂರ ನವಾಬರ ಕಾಲಕ್ಕೆ ಒಬ್ಬ ಋಷಿಮುನಿ ನವಲಗುಂದದಲ್ಲಿ ವಾಸವಾಗಿದ್ದು.ಆತ ಪ್ರತಿ ಅಮವಾಸ್ಯೆಯ ಹಿಂದಿನ ಒಂದೊಂದು ನಕ್ಷತ್ರದ ದಿನದಂದು ೧೦೧ ವನಸ್ಪತಿ ಗಿಡದಲ್ಲಿ ಕಾಮನ ಒಂದೊಂದು ಭಾಗವನ್ನು ತಯಾರಿಸುತ್ತಿದ್ದನಂತೆ, ಹೀಗೆ ತಯಾರಿಸಿದ ಕಾಮ ಪೂರ್ಣಗೊಂಡರೆ ಅವನು ಜೀವಂತ ವ್ಯಕ್ತಿಯಾಗುವನು ಮಹಾಪುರುಷನಾಗುವನು ಎಂಬುದು ಅವರ ಇಚ್ಛೆ. ಆದರೆ ಈ ಕಾಮ ಪೂರ್ಣಗೊಳ್ಳುವ ಮೊದಲೇ ಆ ಋಷಿ ಅಕಾಲಿಕ ಮರಣವನ್ನಪ್ಪಿದ.ಆತ ಕಾಲವಾದಾಗ ಕಾಮನ ಎಲ್ಲ ಭಾಗಗಳೂ ಪೂರ್ಣಗೊಂಡು ತಲೆಯ ಹಿಂಭಾಗದಲ್ಲಿ ಎರಡು ಕೇಂದ್ರಗಳು ಮಾತ್ರ ಉಳಿದಿದ್ದವು.ಅದು ನೋಡಲು ಸುಂದರ ಮೂರ್ತಿಯಾಗಿತ್ತು. ಜೀವಕಳೆ ಬರುವ ಕಾಮ ಋಷಿಯ ಅಕಾಲಿಕ ಮರಣದಿಂದ ಹಾಗೆ ಉಳಿದ. ಅವನನ್ನು ರಾಮಲಿಂಗೆಶ್ವರ ದೇವಾಲಯದಲ್ಲಿ ಊರಿನ ಜನ ಪ್ರತಿಷ್ಠಾಪಿಸತೊಡಗಿದರು.ಹೀಗೆ ಅವನನ್ನು ರಾಮಲಿಂಗೇಶ್ವರ ಕಾಮಣ್ಣ”ನೆಂದೂ ಕರೆಯತೊಡಗಿದರು.

ಇಷ್ಟಾರ್ಥ ಸಿದ್ಧಿ ಕಾಮ:

ಶತಮಾನಗಳಷ್ಟು ಪ್ರಾಚೀನತೆ ಹೊಂದಿದ ರಾಮಲಿಂಗೇಶ್ವರನಿಗೆ ಭಕ್ತಿ ಶೃದ್ಧೆಯಿಂದ ಹರಕೆ ಹೊತ್ತವರಿಗೆ ಇಷ್ಟಾರ್ಥ ಸಿದ್ದಿಯಾಗಿದೆಯೆಂದು ಜನರಿಂದ ಜನರಿಗೆ ಗೊತ್ತಾದಂತೆ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ರಾಜ್ಯದ ಎಲ್ಲೆಯನ್ನು ಮೀರಿತು. ಈ ಕಾಮನಿಗೆ ಭಕ್ತಿಭಾವದಿಂದ ಬಂದು ತಮ್ಮ ಮನದಲ್ಲಿ ಇಚ್ಚೆಯನ್ನು ಪ್ರಕಟಿಸಿ ಹರಕೆ ಹೊತ್ತು ಹೋಗುವುದು ವಾಡಿಕೆ. ಮಕ್ಕಳಾಗದವರು ಸಂತಾನ ಭಾಗ್ಯಕ್ಕಾಗಿ ತೊಟ್ಟಿಲನ್ನು, ವಿವಾಹವಾಗದ ನವ ತರುಣ ತರುಣಿಯರು ವಿವಾಹ ಅಪೇಕ್ಷೆ ಕುರಿತು ಬಾಸಿಂಗವನ್ನು, ಅನಾರೋಗ್ಯದಿಂದ ಬಳಲುವವರು ಕುದುರೆಯನ್ನು, ವ್ಯಾಜ್ಯವುಳ್ಳವರು ಅದರ ಪರಿಹಾರಕ್ಕಾಗಿ ಛತ್ರಿಯನ್ನು ಗುಂಡಗಡಗಿಯನ್ನು ಸಮರ್ಪಿಸುವರು. ಇಲ್ಲಿ ಬಂದು ಕಾಮಣ್ಣನ ದರ್ಶನ ಪಡೆದು ತಮ್ಮ ಮನದಿಚ್ಚೆಗಳನ್ನು, ಬಯಕೆಗಳು ಈಡೇರಲೆಂದು ಪ್ರಾರ್ಥಿಸಿ ಇಂಥ ವಸ್ತುಗಳನ್ನು ಪಡೆದು ಒಂದು ವರ್ಷದೊಳಗಾಗಿ ಅವು ಫಲಿತಗೊಂಡು ಮಾರನೆಯ ವರ್ಷ ತಮ್ಮ ಕೋರಿಕೆಯನುಸಾರ ವಿವಿಧ ವಸ್ತುಗಳನ್ನು ಅರ್ಪಿಸುವ ಮೂಲಕ ಭಕ್ತಿಭಾವವನ್ನು ಮೆರೆಯುತ್ತಾರೆ., ಅಷ್ಟೇ ಅಲ್ಲದೇ ಕಾಮನಿಗೆ ಧೋತರ, ರೇಷ್ಮೆ ಅಂಗಿ,ಪೇಟ(ಪಟಗಾ) ರತಿದೇವಿಗೆ ಸೀರೆ ಕುಪ್ಪಸಗಳನ್ನು ಅರ್ಪಿಸುತ್ತಾರೆ. ಸಂತಾನಫಲವಿಲ್ಲದ ದಂಪತಿಗಳು ಇಲ್ಲಿಗೆ ಬಂದು ರಾಮಲಿಂಗೆಶ್ವರ ದೇವಸ್ಥಾನದಲ್ಲಿ ಸಿಗುವ ಬೆಳ್ಳಿ ತೊಟ್ಟಿಲನ್ನು ಮನೆಗೆ ಒಯ್ದು ಪೂಜಿಸಿ ಆರಾಧಿಸಿದರೆ ಒಮದು ವರ್ಷದೊಲಗಾಗಿ ಅವರಿಗೆ ಸಂತಾನ ಫಲ ದೊರಕುತ್ತದಂತೆ. ಬೇಡಿಕೆ ಈಡೇರಿದ ಬಳಿಕ ಆ ತೊಟ್ಟಿಲ ಜೊತೆಗೆ ಮತ್ತೊಂದು ತೊಟ್ಟಿಲನ್ನು ತಂದು ರಾಮಲಿಂಗ ಕಾಮನಿಗೆ ಒಪ್ಪಿಸಿ ಪೂಜೆ ಸಲ್ಲಿಸುವರು.

ಹೋಳಿ ಆಚರಣೆಯ ಬಗೆ:

ನವಿಲುಗುಂದದಲ್ಲಿ ಕೂಡ ಎಲ್ಲ ಓಣಿಗಳಲ್ಲಿಯೂ ಕಾಮಣ್ಣನನ್ನು ಕೂಡಿಸುತ್ತಾರೆ.ಈ ಕಾಮಣ್ಣನನ್ನು ಹೋಳಿ ಹುಣ್ಣಿಮೆಗೆ ಮೊದಲು ಬರುವ ಏಕಾದಶಿಯಂದು ಪೆಟ್ಟಿಗೆಯಲ್ಲಿರುವ ಅಂಗಾಂಗಗಳನ್ನು ತಗೆದು ನಿಂತಭಂಗಿಯಲ್ಲಿರುವ ಕಾಮಣ್ಣನನ್ನು ಪ್ರತಿಷ್ಟಾಪಿಸುತ್ತಾರೆ ಮರುದಿನ ದ್ವಾದಶಿಯಂದು ದರ್ಶನ ಆರಂಬವಾಗುತ್ತದೆ. ಕಿಲೋ ಮೀಟ ರುಗಳಷ್ಟು ಉದ್ದದ ಸರತಿ ಸಾಲಿನಲ್ಲಿ ಭಕ್ತರು ನಿಂತು ದರ್ಶನ ಪಡೆಯುವ ರೀತಿಯಂತೂ ಅದ್ಭುತ.

ಹೀಗೆ ಪ್ರತಿಷ್ಟಾಪಿಸಿದ ಕಾಮಣ್ಣನಿಗೆ ಸಹೋದರರಂತಿರುವ ಕಾಮಣ್ಣರು ಮೆರವಣಿಗೆಯಲ್ಲಿ ಬಂದು ದರ್ಶನ ಪಡೆದು ಹೋಗುವದು ಸಹೋದರರ ವಾತ್ಸಲ್ಯವನ್ನು ಬಿಂಬಿಸುವ ಸನ್ನಿವೇಶ ಭಾವಾತೀರವಾದದ್ದು.ಹಾಗೆಯೇ ರಾಮಲಿಂಗೇಶ್ವರ ಕಾಮಣ್ಣನು ಕೂಡ ತಂದೆಯ ಸ್ವರೂಪದಲ್ಲಿರುವ ಚಾವಡಿ ಕಾಮಣ್ಣನನ್ನು ಬೇಟಿಗೆ ಮೆರವಣಿಗೆಯಲ್ಲಿ ಹೋಗುವ ದೃಶ್ಯ ಅಲ್ಲಿ ತಂದೆಗೆ ಎದುರಾಗಿ ಕೆಲವು ಕ್ಷಣ ನಿಲ್ಲುವ ರೀತಿ ಎಂಥವರನ್ನೂ ಮನಕಲುಕುತ್ತದೆ. ಇಲ್ಲಿ ಭಕ್ತಿ ಶೃದ್ದೆಗಳು ರೋಮಾಂಚನಗೊಳಿಸುತ್ತವೆ. ಎಲ್ಲ ಕಾಮಣ್ಣರ ದಹನವಾದ ನಂತರ ಮರುದಿನದ ಬೆಳಗಿನ ವೇಳೆ ಈ ಕಾಮಣ್ಣನ ದಹನವಾಗುತ್ತೆದೆ.ಅಂದರೆ ಪುರಾತನ ಕಾಲದ ಎಲ್ಲ ಅಂಗಾಂಗಗಳನ್ನು ತಗೆದಿರಿಸಿ ಉಳಿದ ಆಕೃತಿಯ ದಹನ ಮಾಡುವ ಮೂಲಕ ಬಣ್ಣದ ಓಕುಳಿಯಾಟ ಕೊನೆಗೊಳ್ಳುವುದು.

ಮರುಹುಟ್ಟು:

ಯುಗಾದಿಯ ಮರುದಿನ ಅಂದರೆ ಪ್ರತಿಪದೆಯಂದು ಈ ಕಾಮ ಮರುಹುಟ್ಟು ಪಡೆಯುತ್ತಾನೆ ಎಂಬುದು ಪ್ರತೀತಿ. ಈ ಸಂದರ್ಭ ಇಲ್ಲಿ ದೇವಾಲಯದಲ್ಲಿ ಕುಳಿತ ಕಾಮನನ್ನು ಪ್ರತಿಷ್ಟಾಪಿಸುವುದು ವಾಡಿಕೆ.ಹೋಳಿ ಹಬ್ಬದ ಸಂದರ್ಭ ನಿಂತಭಂಗಿಯಲ್ಲಿರುವ ಕಾಮಣ್ಣನನ್ನು ಪ್ರತಿಷ್ಟಾಪಿಸಿದರೆ ಮರುಹುಟ್ಟು ಪಡೆದ ಸಂದರ್ಭದಲ್ಲಿ ಕುಳಿತ ಭಂಗಿಯಲ್ಲಿರುವ ಅದೇ ಅಂಗಾಂಗ ಬಳಸಿ ಸೃಷ್ಟಿಸುವ ಕಾಮಣ್ಣನ ಮೂರ್ತಿ ಗಮನ ಸೆಳೆಯುತ್ತದೆ. ಯುಗಾದಿಯ ಪ್ರತಿಪದೆಯಂದು ಕೂಡ ಲಕ್ಷಾಮತ ಭಕ್ತರು ಇಲ್ಲಿಗೆ ಆಗಮಿಸುವ ಮೂಲಕ ದರ್ಶನ ಪಡೆಯುವರು. ಹೀಗೆ ಮರುಹುಟ್ಟು ಪಡೆಯುವ ಮೂಲಕ ನವಿಲುಗುಂದದ ರಾಮಲಿಂಗೇಶ್ವರ ಕಾಮಣ್ಣ ಪ್ರಸಿದ್ಧಿ. ವರ್ಷದಲ್ಲಿ ಎರಡು ಸಲ ಅಂದರೆ ಹೋಳಿ ಹುಣ್ಣಿಮೆಯ ಏಕಾದಶಿಯಂದು ಪ್ರತಿಷ್ಟಾಪನೆಗೊಂಡು ದ್ವಾದಶಿಯಂದು ದರ್ಶನ ನೀಡಿ ಹೋಳಿ ಹುಣ್ಣಿಮೆಯ ಬಣ್ಣದೋಕುಳಿಗೆ ಸಾಕ್ಷಿಯಾಗುವ ಈ ಕಾಮ ಯುಗಾದಿಗೆ ಮರುಹುಟ್ಟು ಪಡೆಯುವ ಮೂಲಕ ಭಕ್ತರ ದರ್ಶನಕ್ಕೆ ಲಭ್ಯವಾಗುತ್ತಿರುವುದು ಇಂದಿಗೂ ನಡೆದುಕೊಂಡು ಬಂದಿದೆ. ಅಷ್ಟೇ ಅಲ್ಲ ಇಲ್ಲಿ ಸೇರುವ ಭಕ್ತರ ಸಂಖ್ಯೆ ಲಕ್ಷಾಂತರವಾಗಿದ್ದು ಈ ಸಂದರ್ಭ ಇವನ ದರ್ಶನ ಪಡೆಯುವುದೇ ಒಂದು ಸೌಭಾಗ್ಯ.

ಸಂತಾಹೀನರಿಗೆ ಸಂತಾನ ಭಾಗ್ಯ,ನೆಲೆಯಿಲ್ಲದವರಿಗೆ ನೆಲೆ,ಅನಾರೋಗ್ಯ ಪೀಡಿತರಿಗೆ ಆರೋಗ್ಯ,ಅವಿವಾಹಿತರಿಗೆ ಕಂಕಣಬಾಗ್ಯ ಹೀಗೆ ಹತ್ತು ಹಲವು ಬಯಕೆಗಳಿಗೆ ಭಕ್ತಿಭಾವದಿಂದ ಬೇಡಿಕೊಂಡು ಹರಕೆ ತೀರಿಸುವ ಭಕ್ತರಿಗೆ ಅಕ್ಷರರ್ಶ ಈತ ಕಾಮಧೇನು, ಇಷ್ಟಾರ್ಥ ಸಿದ್ಧಿ ಶ್ರೀ ರಾಮಲಿಂಗೇಶ್ವರ ಕಾಮಣ್ಣ.ಈ ಮಹಿಮಾ ಪುರುಷ ಕೇವಲ ಸಾಂಕೇತಿಕ ಮೂರ್ತಿಯಾಗದೇ ಆರಾಧಿಸುವವರಿಗೆ ಆರಾಧ್ಯದೈವವಾಗಿರುವನು. ಇವನನ್ನು ಕುರಿತು ಇಲ್ಲಿಯ ಶಿಕ್ಷಕ ಪ್ರಕಾಶ ಹೂಗಾರ ಇವರು ಒಂಬತ್ತು ಭಕ್ತಿಗೀತೆಗಳನ್ನು ರಚಿಸಿ ಇಸ್ಮಾಯಿಲ್ ಗೋನಾಳರ ಸಂಗೀತ ಸಂಯೋಜನೆಯಲ್ಲಿ ಎಲ್.ಎನ್.ಶಾಸ್ತ್ರೀ, ಎಂ.ಡಿ.ಪಲ್ಲವಿಯವರಂಥ ಹೆಸರಾಂತ ಗಾಯಕರಿಂದ ಭಕ್ತಿಗೀತೆಗಳ ಸೀಡಿ ಹೊರತಂದಿದ್ದು.

ಕಾಮದೇವನ ಮಹಿಮೆ ಕುರಿತ ಎಲ್ಲ ಗೀತೆಗಳು ಇಲ್ಲಿನ ಹೋಳಿ ಆಚರಣೆಯ ಮೇಲೆ ಬೆಳಕು ಚೆಲ್ಲುತ್ತವೆ. ಇದೇ ಯುಗಾದಿಯ ಪ್ರತಿಪದೆಯಂದು ಮರುಹುಟ್ಟು ಪಡೆಯುವ ಈ ಕಾಮಣ್ಣನನ್ನು ನೋಡಲು ನವಲಗುಂದಕ್ಕೆ ಒಮ್ಮೆ ಭೇಟಿ ನೀಡಿ.


ವೈ.ಬಿ.ಕಡಕೋಳ
ಶಿಕ್ಷಕರು

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!