ಸಿಂದಗಿ: ಸುಜ್ಞಾನನಿಧಿ ಶಿಷ್ಯವೇತನವನ್ನು ಮಾಸಿಕ 400-1000 ವರೆಗೆ ವೃತ್ತಿಪರ ಶಿಕ್ಷಣ ಅವಧಿ ಮುಗಿಯುವವರೆಗೆ ನೀಡಲಾಗುತ್ತಿದೆ ಅಲ್ಲದೆ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾಲೆಗಳಿಗೆ ಕೊರತೆಯಿರುವ ಡೆಸ್ಕ್ ಬೆಂಚ್ ಒದಗಣೆ, ಶಿಕ್ಷಕರ ಕೊರತೆ ಇದ್ದಲ್ಲಿ ಶಿಕ್ಷಕರನ್ನು ಒದಗಿಸುವುದಾಗಿ ಸಿಂದಗಿ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಗಿರೀಶ್ ಕುಮಾರ್ ಎಮ್. ರವರು ತಿಳಿಸಿದರು.
ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಸಿಂದಗಿ ಯೋಜನಾ ಕಛೇರಿಯಲ್ಲಿ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವಿಭಾಗದಿಂದ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಸ್ವಸಹಾಯ ಸಂಘದ ಸದಸ್ಯರ ಮಕ್ಕಳಿಗಾಗಿ ಸುಜ್ಞಾನನಿಧಿ ಶಿಷ್ಯವೇತನವನ್ನು ನೀಡಲಾಗುತ್ತಿದ್ದು, 2022-23ನೇ ಸಾಲಿನ ಒಟ್ಟು 17 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಶಶಾಂಕ ಹಾಗೂ ಉದಯಕುಮಾರ ಅವರಿಗೆ ಮಂಜೂರಾತಿ ಪತ್ರವನ್ನು ಸಾಂಕೇತಿಕವಾಗಿ ಸಿಂದಗಿಯ ಕಛೇರಿಯಲ್ಲಿ ನೀಡಲಾಗಿದೆ ಎಂದರು.
ಈ ಸಂದರ್ಭ ಹಣಕಾಸು ಪ್ರಬಂಧಕರಾದ ತಿಪ್ಪೆಸ್ವಾಮಿ ಜೆ, ಹಿರಿಯ ಕೃಷಿ ಮೇಲ್ವಿಚಾರಕ ಸುರೇಶ್ ಉಪಸ್ಥಿತರಿದ್ದರು.