ಮೂಡಲಗಿ: ನಾವು ಮಾಡುವ ವೃತ್ತಿ ಯಾವುದೇ ಆಗಿದ್ದರು ಸಹ ಅದರಲ್ಲಿನ ಬದ್ಧತೆ ಹಾಗೂ ಕ್ರಿಯಾಶೀಲತೆ ಹೊಂದಿದ್ದರೆ ಅದರಲ್ಲಿ ನಾವು ಯಶಸ್ವಿಯಾಗಲು ಸಾಧ್ಯ ಎಂದು ಪ್ರಧಾನ ಗುರು ಎ.ವ್ಹಿ ಗಿರೆಣ್ಣವರ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಅತಿಥಿ ಶಿಕ್ಷಕರ ಅಭಿನಂದನಾ ಸಮಾರಂಭ ಹಾಗೂ 8 ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕ ವೃತ್ತಿ ತುಂಬಾ ಪವಿತ್ರವಾದದ್ದು. ಇಲ್ಲಿ ಲಾಭ ನಷ್ಟಗಳೆಂಬ ವ್ಯವಹಾರಕ್ಕಿಂತ ಕಾಯಕದಲ್ಲಿ ಮಾನವೀಯತೆ ಶೃದ್ಧೆ ಮುಖ್ಯವಾಗಿರುತ್ತದೆ. ಇದೊಂದು ವ್ಯಾಪಾರೀಕರಣ ವೃತ್ತಿಯಲ್ಲ.
ಜೀವಂತ ಪೈಲುಗಳೇ ನಮ್ಮ ಮುಂದೆ ಇರುವಾಗ ನಮ್ಮ ಜವಾಬ್ದಾರಿ ಹೆಚ್ಚಾಗಿರುತ್ತದೆ. ಹೀಗಿರುವಾಗ ನಾವು ಈ ವೃತ್ತಿಯನ್ನು ಗೌರವಿಸಬೇಕು, ಪ್ರೀತಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಗೌರವಯುತವಾಗಿರಬಹುದು. ಅದಕ್ಕೆಂದೇ ಪ್ರಾಚೀನ ಕಾಲದಿಂದಲೂ ಗುರು ಸ್ಥಾನದ ಮಹತ್ವವನ್ನು ಕುರಿತು ಗುರು ಬ್ರಹ್ಮ, ಗುರು ವಿಷ್ಣು ಎಂದು ವ್ಯಾಖ್ಯಾನಿಸಿದ್ದಾರೆ.
ಕಾರಣ ಇಲ್ಲಿ ಶಿಕ್ಷಕರು ಜಡತ್ವವನ್ನು ತೊಡೆದು ಹಾಕಿ ಸದಾ ಕಾಲ ಪ್ರಯೋಗಶೀಲರಾಗಿರಬೇಕು, ಹಾಗೆಯೇ ವಿದ್ಯಾರ್ಥಿಗಳೂ ಕೂಡ ಅಭ್ಯಾಸದೊಂದಿಗೆ ನಯ, ವಿನಯ, ಹಾಗೂ ನಾಡಿನ ಸಂಸ್ಕೃತಿ ಸಂಸ್ಕಾರ ಮೈಗೂಡಿಸಿಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕೆಂದರು.
ಶಿಕ್ಷಕ ಮಹಾದೇವ ಗೋಮಾಡಿ ಮಾತನಾಡಿ, ಅತಿಥಿ ಶಿಕ್ಷಕರು ಪ್ರಾರಂಭದಿಂದಲೇ ವೃತ್ತಿಯಲ್ಲಿ ಆದರ್ಶಗಳನ್ನು ಶಿಸ್ತನ್ನು ಪಾಲಿಸಿಕೊಂಡಲ್ಲಿ ಮಾತ್ರ ತಮ್ಮ ವೃತ್ತಿ ಜೀವನ ಸುಗಮವಾಗುತ್ತದೆ. ವೃತ್ತಿಯಲ್ಲಿ ಯಾವುದೇ ಅಡೆ ತಡೆ ಬಂದರೂ ಕೂಡ ಅವುಗಳನ್ನು ಸಮ ಚಿತ್ತದಿಂದ ಎದುರಿಸಿ ಮಗುವಿನ ಕಲಿಕೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಅತಿಥಿ ಶಿಕ್ಷಕರಿಗೆ ಶಾಲೆಯ ವತಿಯಿಂದ ತವರುಮನೆ ಉಡುಗೊರೆ ಎಂಬಂತೆ ಸೀರೆ ಕುಪ್ಪುಸ ಅರಿಶಿನ ಕುಂಕುಮ ನೀಡುವದರೊಂದಿಗೆ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಅತಿಥಿ ಶಿಕ್ಷಕರ ಪರವಾಗಿ ಮಾತನಾಡಿದ ಖಾತೂನಬಿ ನದಾಫ ಶಿಕ್ಷಕ ವೃತ್ತಿಯಲ್ಲಿ ಸೇವೆ ಮಾಡುವದು ನಮಗೆ ಪೂರ್ವ ಜನ್ಮದ ಸುಕೃತ ಫಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರಾದ ರೇಖಾ ಗದಾಡಿ, ರೂಪಾ ಗದಾಡಿ, ಖಾತೂನ ನದಾಫ, ಶಿವಲಿಲಾ ಹನಮಣ್ಣವರ, ಜ್ಯೋತಿ ಉಪ್ಪಾರ, ಹೊಳೆಪ್ಪಾ ಗದಾಡಿ ಅವರನ್ನು ಗೌರವಿಸಲಾಯಿತು.
ಈ ಸಮಯದಲ್ಲಿ ಗೋಕಾಕ ಬಿ.ಆರ್.ಸಿ ಎಮ್.ಕೆ.ಕಮ್ಮಾರ, ಶಿಕ್ಷಕರಾದ ಮಹಾದೇವ ಗೋಮಾಡಿ, ಕಿರಣ ಭಜಂತ್ರಿ, ಶಂಕರ ಲಮಾಣಿ, ಲಕ್ಷ್ಮಿ ಹೆಬ್ಬಾಳ, ಕುಸುಮಾ ಚಿಗರಿ, ವಿಮಲಾಕ್ಷಿ ತೋರಗಲ, ಉಪಸ್ಥಿತರಿದ್ದರು.