ಡಾ. ಮಹಾದೇವ ಜಿಡ್ಡಿಮನಿಯವರ ಎರಡು ಕೃತಿಗಳ ಬಿಡುಗಡೆ
ಮೂಡಲಗಿ: ಗುರುವಾದವನು ತಾನೇ..ತನ್ನ ಸೋಲನ್ನು ಒಪ್ಪಿಕೊಳ್ಳಬೇಕು, ಇದು ಗುರುವಿನ ಶ್ರೇಷ್ಠತೆಯನ್ನು ಬಿಂಬಿಸುತ್ತದೆ. ಗುರು ಶಿಷ್ಯರ ಪರಂಪರೆ ಅತ್ಯಂತ ಪವಿತ್ರವಾಗಿದೆ. ಶಿಷ್ಯ ಗುರುವನ್ನು ಮೀರಿ ಬೆಳೆದಾಗ, ಶಿಷ್ಯನ ಏಳ್ಗೆಯನ್ನು ಕಂಡು ಗುರು ಸಂತೋಷ ಪಡುವನು. ಸಮಾಜದಲ್ಲಿ ಬಹುದೊಡ್ಡ ಮೌಲ್ಯವಾಗಿದೆ ಗುರು ಶಿಷ್ಯರ ಸಂಬಂಧ ಅಂಥದ್ದು ಎಂದು ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿಯವರು ಶಿಷ್ಯ ಸಾಹಿತಿ ಮಹಾದೇವ ಜಿಡ್ಡಿಮನಿ ಹಿರಿಮೆಯ ಬಗ್ಗೆ ಕೊಂಡಾಡಿದರು.
ಮೇ ೨೬ ರಂದು ಪಟ್ಟಣದ ಕುರುಹಿನಶೆಟ್ಟಿ ಸೊಸಾಯಿಟಿಯ ಸಭಾ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಮತ್ತು ಸ್ನೇಹ ಸಂಕುಲ ಇವರ ಸಹಯೋಗದಲ್ಲಿ ಸಾಹಿತಿ ಡಾ. ಮಹಾದೇವ ಜಿಡ್ಡಿಮನಿ ಅವರ “ಗುರುಶಿಷ್ಯ” ಹಾಗೂ “ಮಿತ್ರ ಸಂಮಿತ” ಕೃತಿಗಳನ್ನು ಬಿಡುಗಡೆಗೊಳಿಸಿದ ಮಾತನಾಡಿದ ಅವರು, ಶಿಷ್ಯನ ಸಾಧನೆ, ಕೀರ್ತಿಗಳಿಗೆ ಎಮ್ ಎಮ್ ಕಲಬುರ್ಗಿಯವರ ಮಾನಸ ಶಿಷ್ಯರೆನಿಸಿಕೊಂಡಿದ್ದ ಡಾ. ಜಿಡ್ಡಿಮನಿಯವರು ಗುರುವಿನ ಹೆಸರಿಗೆ ಸ್ವಲ್ಪವೂ ಚ್ಯುತಿ ಬರದಂತೆ ಶೋಧ ಸಾಹಿತ್ಯ ಬರೆದಿದ್ದಾರೆ ಎಂದರು.
ಸವದತ್ತಿಯ ಸಾಹಿತಿ ವಾಯ್.ಎಮ್.ಯಾಕೊಳ್ಳಿ ಮಾತನಾಡಿ, ಎಮ್.ಎಮ್.ಕಲಬುರ್ಗಿ ಯವರ ಮಾನಸ ಶಿಷ್ಯರೆಸಿಕೊಂಡಿದ್ದ ಡಾ. ಮಹಾದೇವ ಜಿಡ್ಡಿಮನಿ ಅವರು, ಕಲಬುರ್ಗಿ ಅವರ ಕರುಣೆ ಎಲ್ಲರಿಗೂ ಸಿಗುವುದಿಲ್ಲ. ವಿರಳಾತಿ ವಿರಳರಲ್ಲಿ ಜಿಡ್ಡಿಮನಿ ಅವರಿಗೆ ಅಂಥ ಭಾಗ್ಯ ದೊರೆತಿದೆ. ಲೇಖಕ ಮಹಾದೇವ ಜಿಡ್ಡಿಮನಿ ಅವರ ಗುರು-ಶಿಷ್ಯರ ಸಂಬಂಧವನ್ನು ಆತ್ಮಾನುಬಂಧನ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ಮಕ್ಕಳ ಸಾಹಿತಿ ಪ್ರೊ. ಸಂಗಮೇಶ ಗುಜಗೊಂಡ ಅವರು ‘ಮಿತ್ರ ಸಂಮಿತ’ ಕೃತಿ ಕುರಿತು ಮಾತನಾಡಿದರು. ೭೦ ತ್ರಿಪದಿಗಳನ್ನು ಹೊಂದಿರುವ ಕೃತಿಯು ಲೌಕಿಕದೊಂದಿಗೆ ಆಧ್ಯಾತ್ಮಿಕ ರಸಭಾವದಿಂದ ಓದುಗರನ್ನು ಸೆಳೆಯುತ್ತದೆ. ಸರ್ವಜ್ಞನ ತ್ರಿಪದಿಗಳು ಮತ್ತು ಡಿವಿಜಿ ಅವರ ಮಂಕುತಿಮ್ಮನ ಕಗ್ಗ ತ್ರಿಪದಿಗಳ ಸರಿಸಮನಾಗಿ ಗುರುತಿಸಿಕೊಳ್ಳುತ್ತದೆ ಎಂದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಸಾಹಿತ್ಯದಿಂದ ಮಹಾಭಾರತ, ರಾಮಾಯಣದಂಥ ಮಹಾಕಾವ್ಯಗಳು ರಚನೆಯಾದವು. ಸಾಹಿತ್ಯಕ್ಕೆ ಅಂಥ ಅಗಾಧವಾದ ಶಕ್ತಿ ಇದೆ. ಸಾಹಿತಿಗಳು ತಮ್ಮ ಬರವಣಿಗೆಗಳ ಮೂಲಕ ನಾಡನ್ನು ಸಾಂಸ್ಕೃತಿಕವಾಗಿ ಸಮೃದ್ಧಗೊಳಿಸಬೇಕು ಎಂದರು.
ಕುರುಹಿನ ಶೆಟ್ಟಿ ಅರ್ಬನ್ ಕೋ-ಆಪ್ ಸೊಸಾಯಿಟಿಯ ಅಧ್ಯಕ್ಷ ಸುಭಾಸ ಬೆಳಕೂಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕ ಸಾ ಪ ಅಧ್ಯಕ್ಷ ಡಾ.ಸಂಜಯ ಶಿಂದಿಹಟ್ಟಿ, ಕೃತಿಕಾರ ಮಹಾದೇವ ಜಿಡ್ಡಿಮನಿ, ಸಾಹಿತಿ ಮಾರುತಿ ದಾಸನ್ನವರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪಾಲಭಾವಿಯ ವೀರಯ್ಯ ಮಠಪತಿ, ಚು ಸಾ ಪ ಅಧ್ಯಕ್ಷ ಚಿದಾನಂದ ಹೂಗಾರ, ಇಸ್ಮಾಯಿಲ್ ಕಳ್ಳಿಮನಿ, ಪ್ರೊ. ಐ.ಎಸ್.ಮುರುಕಟನಾಳ, ಪ್ರೊ. ಎಸ್.ಎಮ್.ಕಮದಾಳ, ಶಿವಾನಂದ ಬೆಳಕೂಡ, ಬಾಲಶೇಖರ ಬಂದಿ, ವಿ.ಎಸ್.ಹಂಚಿನಾಳ, ಸಿದ್ರಾಮ ದ್ಯಾಗಾನಟ್ಟಿ, ಮೂಡಲಗಿ ಬಿ ಇ ಒ ಅಜಿತ ಮನ್ನಿಕೇರಿ, ಗೋಕಾಕ ಬಿ ಇ ಇ ಜಿ.ಬಿ.ಬಳಿಗಾರ, ವಾಯ್.ಬಿ.ಪಾಟೀಲ, ಈಶ್ವರಚಂದ್ರ ಬೆಟಗೇರಿ, ಜಯಾನಂದ ಮಾದರ ಉಪಸ್ಥಿತರಿದ್ದರು.
ಇನ್ನೂ ಅನೇಕ ಸಾಹಿತಿಗಳು ಹಾಗೂ ಸಾಹಿತ್ಯಾಸಕ್ತರು ಭಾಗಿಯಾಗಿದ್ದ ಈ ಕಾರ್ಯಕ್ರಮವನ್ನು ಸುರೇಶ ಲಂಕೆಪ್ಪನ್ನವರ ನಿರೂಪಣೆ ಮಾಡಿದರು.