ಸಿಂದಗಿ; ಜಗದ್ಗುರು ರೇಣುಕಾಚಾರ್ಯರು ಅವರ ಜೀವತಾವಧಿಯ ೧೪ ನೂರು ವರ್ಷಗಳಲ್ಲಿ ೭ ನೂರು ವರ್ಷಗಳ ಕಾಲ ತಪಸ್ಸು ಮಾಡಿದ್ದರು. ಇನ್ನೂ ೭ ನೂರು ವರ್ಷ ಜಗತ್ತಿನ ಉದ್ದಾರಕ್ಕೆ ಜೀವನ ಕಳೆದ ಅವರು ಎಲ್ಲಿಲ್ಲಿ ಹೋಗಿದ್ದಾರೆ ಅಲ್ಲಿ ಸ್ಥಾವರ ಲಿಂಗಗಳನ್ನು ಸ್ಥಾಪನೆ ಮಾಡಿದ್ದಾರೆ ಎನ್ನುವುದು ಸಿದ್ಧಾಂತ ಶಿಖಾಮಣಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಸಿ.ಎಂ.ಮನಗೂಳಿ ಕಾಲೇಜಿ ನಿವೃತ್ತ ಪ್ರಾಧ್ಯಾಪಕ ಬಿ.ಎನ್. ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯಲ್ಲಿ ಮಾತನಾಡಿ, ಜಗತ್ತಿನ ಉದ್ದಾರಕ್ಕೆ ೯ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡುವ ಇಚ್ಚೆ ಇಟ್ಟುಕೊಂಡಿದ್ದರು ಆದರೆ ೬ ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡಿ ಹೊರಟು ಹೋಗಿದ್ದರಿಂದ ಅವರ ತಮ್ಮ ಮುಕ್ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡಿದ್ದಾರೆ. ಮನುಷ್ಯನ ದೇಹ ಬಹಳ ಶ್ರೇಷ್ಠವಾದದ್ದು ಅದರ ಆಯುಷ್ಯವನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಶರಣರ, ಸಂತರ ಮಹಾಂತರ ಜೀವನ ಚರಿತ್ರೆಗಳು ಮಾನವ ಸಂಸಾರ, ಸಂಪತ್ತಿನೆಡೆಗೆ ಹೆಚ್ಚಿನ ಗಮನ ಹರಿಸದೆ ಧರ್ಮ, ಸಂಸ್ಕಾರ, ಸಂಸ್ಕೃತಿ ಸಂತರ ಮಹಾಂತರ ಜಯಂತಿಗಳನ್ನು ಆಚರಿಸುವುದರ ಜೊತೆಗೆ ಅವರ ತತ್ವಾಧರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ ಡಾ ಪ್ರಭು ಸಾರಂಗದೇವ ಶಿವಾಚಾರ್ಯರು, ಬೋರಗಿ ಪುರದಾಳ ವಿಶ್ವರಾಧ್ಯ ಮಠದ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಅದ್ಯಕ್ಷತೆ ವಹಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಮಾತನಾಡಿದರು.
ಕೆರೂಟಗಿ ಹಿರೇಮಠದ ಶಿವಬಸವ ಶಿವಾಚಾರ್ಯರು, ಕನ್ನೋಳ್ಳಿ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು, ವೀರಶೈವ ಮಹಾಸಭಾದ ಅಧ್ಯಕ್ಷ ಅಶೋಕ ವಾರದ, ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ ವೇದಿಕೆ ಮೇಲಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ೮:೦೦ಗೆ ಸಂಘದ ಕಾರ್ಯಾಲಯದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ನಂತರ ಮೆರವಣಿಗೆ ಮುಖಾಂತರ ತಾಲೂಕು ಆಡಳಿತ ಹಮ್ಮಿಕೊಳ್ಳಲಾಗುತ್ತಿರುವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ನೂರಾರು ಸಮಾಜ ಬಾಂಧವರು ಪಾಲ್ಗೊಂಡರು.
ಜಂಗಮ ಸಮಾಜದ ಅಧ್ಯಕ್ಷ ಶಂಕರಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಎಂ.ಆರ್.ಡೋಣಿ ನಿರೂಪಿಸಿದರು. ಗಂಗಾಧರ ಸೋಮನಾಯಕ ವಂದಿಸಿದರು.