spot_img
spot_img

Shri Adi Shankaracharya: ಶಂಕರರಿಗೆ ಶಂಕರರೇ ಸಾಟಿ

Must Read

- Advertisement -

ವಿಶ್ವದಾದ್ಯಂತ ಭಾರತ ಪ್ರಸಿದ್ಧಿ ಪಡೆದುದು ತನ್ನ ಶ್ರೀಮಂತ ಸಂಸ್ಕೃತಿಗಾಗಿ, ವಿಶಿಷ್ಟ ಧಾರ್ಮಿಕ ಆಚರಣೆಗಳಿಗಾಗಿ ಮತ್ತು  ಆಧ್ಯಾತ್ಮಿಕ ವಿಚಾರಗಳಿಗಾಗಿ ಎಂಬುದು ಸರ್ವವೇದ್ಯ. ಭಾರತದ ಭವ್ಯ ಪರಂಪರೆಯು ನಡೆದು ಬಂದ ದಾರಿ ಹೂವಿನದ್ದೇನಲ್ಲ.

ನಾನಾ ಕಾರಣಗಳಿಂದ ಅವನತಿಯ ಹಾದಿಯಲ್ಲಿದ್ದಾಗ ಅದರಲ್ಲಿನ ಮೌಢ್ಯ ಕಂದಾಚಾರಗಳನ್ನು ನಿರ್ಮೂಲನ ಮಾಡುವಲ್ಲಿ ಜೀವನ ತೇದ ಮಹನೀಯರು ಅನೇಕರು. ಅವರ ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

ಅವರಲ್ಲಿ ಯುಗಪ್ರವರ್ತಕರೆಂದು ಹೆಸರಾದ ಆಚಾರ್ಯ ಶಂಕರರು ಅಗ್ರಗಣ್ಯರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗೆ ನೋಡಿದರೆ ಶಂಕರರು ಬೆಳೆದು ಬಂದ ರೀತಿ, ಸಾಗಿದ ಹಾದಿ, ಎದುರಿಸಿದ ಸವಾಲುಗಳು, ಮಂಡಿಸಿದ ವಾದ, ಖಂಡಿಸಿದ ಸಿದ್ಧಾಂತಗಳು, ಸಂದರ್ಶಿಸಿದ ಕ್ಷೇತ್ರಗಳು ಒಂದೇ ಎರಡೇ ಹೀಗೆ ಅವರು ಹೊಂದಿಸಿದ ಬಾಳ ಹಾದಿ ಅಸದೃಶ ಅನುಪಮ.

ಶಂಕರರಿಗೆ ಶಂಕರರೇ ಸಾಟಿ:

- Advertisement -

ಮೇರು ಪಾಂಡಿತ್ಯದ,ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿ ಲೋಕೋತ್ತರ ಮನ್ನಣೆಯನ್ನು ಗಳಿಸಿದ ಶಂಕರಾಚಾರ್ಯರು. ಜೀವಿಸಿದ್ದು ಕೇವಲ 32 ವರ್ಷದ ಕಾಲ. ಅತಿ ಕಡಿಮೆ ಅವಧಿ ಜೀವಿಸಿದ್ದರೂ ಧಾರ್ಮಿಕ, ಆಧ್ಯಾತ್ಮಿಕ ಜಗತ್ತಿನಲ್ಲಿ ಅಗ್ರ ಸ್ಥಾನದಲ್ಲಿ ಗುರುತಿಸಲ್ಪಟ್ಟರು ಇಡೀ ಭಾರತವನ್ನೇ ಸಂಚರಿಸಿ ತತ್ವ ಪಸರಿಸಿದವರು ಜಗದ್ಗುರು ಶಂಕರಾಚಾರ್ಯರು.

ಆದ್ದರಿಂದಲೇ ಶಂಕರರಿಗೆ ಶಂಕರರೇ ಸಾಟಿ. ಅವರು ‘ದೇವರ ನಾಡು’ ಖ್ಯಾತಿಯ ಕೇರಳದ ಕಾಲಟಿಯಲ್ಲಿ ಜನಿಸಿದರು. ಯುಗ ಪ್ರವರ್ತಕರು ಎಂಬ ನೆಗಳ್ತೆಗೂ ಭಾಜನರಾಗಿದ್ದಾರೆ. ವಿವರಣೆಗಳನ್ನು ಕೊಡುವಾಗ ಶಂಕರರು ಗೀತಾಚಾರ್ಯನಾಗಿಯೂ, ಉಪಾಧ್ಯಾಯನಾಗಿ, ಯೋಗಿಯಾಗಿ, ವೈಯ್ಯಾಕರಣಿಯಾಗಿ, ಬ್ರಹ್ಮನಿಷ್ಠನಾಗಿ, ಅಷ್ಟೇ ಅಲ್ಲ ಕೀಟಶಾಸ್ತ್ರಜ್ಞನಾಗಿಯೂ ಸ್ಪಷ್ಟವಾಗಿ ತಿಳಿಸಿಕೊಟ್ಟಿದ್ದಾರೆ.

ಇದಷ್ಟೇ ಅಲ್ಲದೇ ಅವರ ಸಾಧನೆಯ ಸಾಲಿನಲ್ಲಿ   ಪರಕಾಯ ಪ್ರವೇಶವಿರಬಹುದು,ಸಾರ್ವತ್ರಿಕ ಮೋಹ ನಾಶಕ ಮಹಾ ಶ್ಲೋಕ ಎಲ್ಲರಿಗೂ ಚಿರಪರಿಚಿತವಾದ ‘ಭಜಗೋವಿಂದಂ’ ಇರಬಹುದು, ಮಂಡನ ಮಿಶ್ರರ ಎದುರು ಮಂಡಿಸಿದ ವಾದದ ಪರಿ ಇರಬಹುದು, ಅಷ್ಟೇ ಅಲ್ಲ ಬಾಲವಟುವಿದ್ದಾಗಲೇ ಕರುಣೆಯಿಂದ ಹರಿಸಿದ ಕನಕಧಾರ ಸೂಕ್ತವಿರಬಹುದು.

- Advertisement -

ತಮ್ಮ ವ್ಯಕ್ತಿತ್ವದ ವಿರಳ ದರ್ಶನ. ಯೋಗ ಸಿದ್ಧಾಂತದ ಮೇರು ಪ್ರದರ್ಶನ, ಭರತಖಂಡದ 4 ಆಯಕಟ್ಟಿನ  ಸ್ಥಳಗಳಲ್ಲಿ ಮಠ ಸ್ಥಾಪನೆಯ ಕೈಂಕರ್ಯವಿರಬಹುದು. ಕೇವಲ 32 ವರ್ಷ ಬದುಕಿದ ಒಬ್ಬ ವ್ಯಕ್ತಿ ಇಷ್ಟೆಲ್ಲವನ್ನೂ ಸಾಧಿಸಬಹುದೇ ಎಂಬ ಅಚ್ಚರಿ ಮೂಡದೇ ಇರದು. ಪ್ರತಿಯೊಂದು ಸಾಧನೆ  ಒಂದಕ್ಕಿಂತ ಒಂದು ಮಿಗಿಲೆಂದೇ ಹೇಳಬೇಕು. 

ಬೆಳೆಯುವ ಸಿರಿ:

ಅಷ್ಟವರ್ಷೇ ಚತುರ್ವೇದೀ
ದ್ವಾದಶೇ ಸರ್ವಶಾಸ್ತ್ರೇವಿತ್

ಷೋಡಶೇ ಕಥವಾನ್ ಭಾಷ್ಯಂ
ದ್ವಾತ್ರಿತೇ ಮುನಿರಭರಗಾತ್ 

ಅಂದರೆ ಕೇವಲ ಎಂಟನೇ ವಯಸ್ಸಿನಲ್ಲೇ ನಾಲ್ಕು ವೇದಗಳ ಪಾರಂಗತ. ಹನ್ನೆರಡನೇ ವಯಸ್ಸಿನಲ್ಲಿ 64 ಶಾಸ್ತ್ರಗಳು ಕರಗತ. ಹದಿನಾರನೇ ವಯಸ್ಸಿನಲ್ಲಿ ಶ್ರೀಮದ್ಭಗವದ್ಗೀತೆ, ಹತ್ತು ಉಪನಿಷತ್ತುಗಳು ಮತ್ತು ಭಗವಾನ್ ಬಾದರಾಯಣರ ಬ್ರಹ್ಮಸೂತ್ರಗಳಿಗೆ (555 ಸೂತ್ರ) ಮತ್ತು ಪ್ರಸ್ಥಾನತ್ರಯಗಳಿಗೆ ಸಂಸ್ಕೃತದಲ್ಲಿ ವಿವರಣೆ ಭಾಷ್ಯ ಬರೆದವರು ಶಂಕರಾಚಾರ್ಯರು. ‘ಬೆಳೆಯುವ ಸಿರಿ ಮೊಳಕೆಯಲ್ಲೇ ನೋಡು ಎಂಬ ಮಾತಿನಂತೆ ಸಣ್ಣವರಿರುವಾಗಲೇ ಅಮೋಘ ಸಾಧನೆ ಮಾಡಿದ ಶಂಕರರಿಗೆ ಮತ್ತಾರೂ ಸಾಟಿಯಾಗಲಾರರು. 

ಬೆಳಕಿಗೆ ತಂದವರು:

ಇಂತಹ ಶಂಕರರನ್ನು ಬೆಳಕಿಗೆ ತಂದವರು ನಮ್ಮ  ಕರ್ನಾಟಕದವರೇ ಆದ ಹೊಳೆನರಸೀಪುರದ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳವರು. ಶಂಕರರ ಸಂಸ್ಕೃತ ಪ್ರಸ್ಥಾನತ್ರಯ ಭಾಷ್ಯಗಳನ್ನು ಆಗಿನ ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜ ಒಡೆಯರ ಸಂಕಲ್ಪದಂತೆ ಮೊತ್ತಮೊದಲ ಬಾರಿಗೆ ಕನ್ನಡಕ್ಕೆ ಭಾಷಾಂತರಿಸಿದ ವಿದ್ವಾಂಸರು. ಇವರು ತಮ್ಮ ಇಡೀ ಜೀವನವನ್ನು ಶಾಂಕರಾದ್ವೈತ ವೇದಾಂತಗಳ ಪ್ರಚಾರಕ್ಕಾಗಿಯೇ ಮುಡುಪಾಗಿಟ್ಟಿದ್ದರು. ಅದಕ್ಕಾಗಿಯೇ ಇವರು ‘ಕರ್ನಾಟಕ ಶಂಕರ’ರೆಂದೇ ಖ್ಯಾತರಾಗಿದ್ದಾರೆ.

ತಾರತಮ್ಯ ತೊಲಗಿದ ರೀತಿ 

ಶಂಕರರು ಒಮ್ಮೆ ತಮ್ಮ ಶಿಷ್ಯರೊಂದಿಗೆ ಕಾಶಿಯ ಬೀದಿಯಲ್ಲಿ ಸಂಚರಿಸುವ ಸಮಯದಲ್ಲಿ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಚಾಂಡಾಲನನ್ನು ನೋಡುತ್ತಾರೆ. ಎಲ್ಲಿ ಅವನ ನೆರಳು ಬಿದ್ದು ಮೈಲಿಯಾಗುವುದೋ ಎಂಬ ಭಯದಿಂದ ‘ದೂರ ಹೋಗು ದೂರ ಹೋಗು’ ಎಂದು ಕಿರುಚುತ್ತಾರೆ. ಆಗ ಚಾಂಡಾಲನು ಮುಗುಳ್ನಗುತ್ತಾ, ‘ಯಾವುದು ದೂರ ಹೋಗಬೇಕು? ಆತ್ಮವೋ ದೇಹವೋ ಎನ್ನುತ್ತ ಮುಂದುವರಿದು’ ಅದ್ವೈತದ ಪ್ರಸಾರದಲ್ಲಿ ಆಚರಣೆಯಲ್ಲಿ ಹೀಗೋ?’ ಎಂದು ನುಡಿಯುತ್ತಾನೆ. ಅಷ್ಟೇ ಜ್ಞಾನೋದಯಗೊಂಡ ಶಂಕರರು ಚಾಂಡಾಲನ ಕಾಲಿಗೆರಗುತ್ತಾರೆ. ಇದು ಜಾತಿ ಪದ್ಧತಿಯ ತಾರತಮ್ಯ ಶಂಕರರಿಂದ ತೊಲಗಿ ಹೋದ ಬಗ್ಗೆ ಅವರ ಜೀವನಗಾಥೆಯಲ್ಲಿ ನಡೆದ ಒಂದು ರೋಚಕ ಪ್ರಸಂಗ. 

ಮೌಢ್ಯ ಹೊಡೆದೋಡೆಸಿದ ರೀತಿ:

7-8ನೇ ಶತಮಾನದಲ್ಲಿ ನಿರೀಶ್ವರ ಧರ್ಮ ವರ್ಧಿಸುತ್ತ ಬಂತು. ಅದರ ಪರಿಣಾಮವಾಗಿ ನಿಜ ತತ್ವ-ಸಿದ್ದಾಂತಗಳು ಮರೆಯಾಗಿ ಸಮಾಜದಲ್ಲಿ ಹಿಂಸೆ,ಅಶಾಂತಿ ತಾಂಡವಾಡತೊಡಗಿತು. ಮೌಢ್ಯ ಕಂದಾಚಾರಗಳು ಹೆಚ್ಚಾಗತೊಡಗಿದವು.

ಈ ಸಂದರ್ಭದಲ್ಲಿ ವೇದ ಉಪನಿಷತ್ತುಗಳ ವಾಕ್ಯಗಳನ್ನು ಬೇಕಾದಂತೆ ತಿರುಚಿ ಜೋಡಿಸಿ ಮೂಲ ಅರ್ಥ ಕೆಡಿಸಲಾಯಿತು. ಇಂತಹ ಧಾರ್ಮಿಕ ಅರಾಜಕತೆಯ ಕೆಡುಕಿನ ಸನ್ನಿವೇಶದಲ್ಲಿ ಶಂಕರರು ಹಿಂದೂ ಧರ್ಮದಲ್ಲಿದ್ದ ಮೌಢ್ಯವನ್ನು ತೆಗೆದುಹಾಕಲು ಶಕ್ತಿ ಮೀರಿ ಪ್ರಯತ್ನಿಸಿದರು. ಅವರ ಪ್ರಯತ್ನದ ಫಲವಾಗಿ ಸನಾತನ ಧರ್ಮ ಮತ್ತೆ ಹೊಳೆಯಲಾರಂಭಿಸಿತು. 

ಅಹಂ ಬ್ರಹ್ಮಾಸ್ಮಿ:

ಅಹಂ ಬ್ರಹ್ಮಾಸ್ಮಿ (ನಾನೇ ಬ್ರಹ್ಮ) ಎಂಬ ಬೃಹದಾರಣ್ಯಕ ಉಪನಿಷತ್ತನ್ನು ಶಂಕರರೇ ಉದಾಹರಿಸಿದ್ದಾರೆ. (ನಾನು ಎಂಬ ಭಾವ ಹೋದಾಗ ಮಾತ್ರ ನಾನು ಆತ್ಮ-ಅಂತರಾತ್ಮನ ದರ್ಶನ ಸಾಧ್ಯ) ಎಂದು ಹೇಳುತ್ತಾರೆ ಶಂಕರರು. ತಾವು ಮಾತ್ರ ಸಾಕ್ಷಾತ್ಕಾರ ಮಾಡಿಕೊಂಡು ತೃಪ್ತಿಪಡಲಿಲ್ಲ. ಪ್ರತಿ ಮಾನವನೂ ತನ್ನ ಸ್ವರೂಪವನ್ನು ತಿಳಿದು ಆನಂದಿಸಲಿ ಎಂಬ ಸದಾಶಯದಿಂದ ತಮ್ಮ ತಿಳಿವನ್ನು ಜಗತ್ತಿನೊಡನೆ ಹಂಚಿಕೊಂಡರು.

ಲೋಕದಲ್ಲಿ ವಿವಿಧ ಬಗೆಯ ಬುದ್ಧಿಮತ್ತೆಯ ಭಾವಶಕ್ತಿಯ ಜನರಿದ್ದಾರೆ ಎಂದು ತಿಳಿದು, ಎಲ್ಲರಿಗೂ ಎಟುಕಬಲ್ಲ ಗ್ರಂಥಗಳನ್ನು ರಚಿಸಿದರು. ಹೀಗೆ ಎಲ್ಲ ಬಗೆಯ ಜನರ ಶ್ರೇಯಸ್ಸನ್ನು ಬಯಸಿದ ಶಂಕರರ ಔದಾರ್ಯಕ್ಕೆ ಸಾಟಿಯೇ ಇಲ್ಲ. 

ಪೂರ್ಣದಿಂದ ಪೂರ್ಣ:

ಓಂ ಪೂರ್ಣಮದಃ ಪೂರ್ಣಮಿದಂ
ಪೂರ್ಣಾತ್ ಪೂರ್ಣ ಮುದಚ್ಛತೇ 

ಪೂರ್ಣಸ್ಯ ಪೂರ್ಣ ಮಾದಾಯ 
ಪೂರ್ಣಮೇವಾಶಿಷ್ಯತೇ 

(ಅದೂ ಪೂರ್ಣ ಇದು ಪೂರ್ಣ. ಪೂರ್ಣದಿಂದ ಪೂರ್ಣವೇ ಸಿಗುತ್ತದೆ. ಪೂರ್ಣದಿಂದ ಪೂರ್ಣವನ್ನು ಕಳೆದಾಗ ಪೂರ್ಣವೇ ಉಳಿಯುತ್ತದೆ.) ಎನ್ನುವ ಈಶಾವಾಸ್ಯ ಉಪನಿಷತ್‍ನ ಅರ್ಥಗರ್ಭಿತ ಶ್ಲೋಕವು ಕಣ್ತೆರೆಸುತ್ತದೆ. 

ಪರಕಾಯ ಪ್ರವೇಶ:

ವೇದ ವಾಙ್ಮಯಿ ಮಂಡನ ಮಿಶ್ರರು ಎಲ್ಲಿ ವಾದದಲ್ಲಿ ಸೋಲುತ್ತಾರೆ ಎಂದು ಹೆದರಿ ಅವರ ಧರ್ಮಪತ್ನಿ, ಸರಸ್ವತಿಯ ಅಪರಾವತಾರವೆಂದೇ ಕರೆಯಲ್ಪಡುತ್ತಿದ್ದ ದೇವಿ ಉಭಯ ಭಾರತಿ ಶಂಕರರಿಗೆ ಒಂದು ವಿಚಿತ್ರ ಸಂಕಟ ತಂದೊಡ್ಡಿದರು. ಗಂಡನ ಪರವಾಗಿ ಪ್ರಶ್ನೆ ಕೇಳುತ್ತ ಆಕೆ, ‘ಕಾಮಶಾಸ್ತ್ರದ ಗುಟ್ಟೇನು?’ ಏನದರ ಮಹತ್ವ ಅಂದು ಬಿಟ್ಟರು. ಶಂಕರರು ಮರುಕ್ಷಣ ಸಾವರಿಸಿಕೊಂಡು ಉತ್ತರಿಸಲು ಸ್ವಲ್ಪ ಕಾಲಾವಕಾಶ ಕೇಳುತ್ತಾರೆ. ನಂತರ ನಡೆದಿದ್ದೇ ಪರಕಾಯ ಪ್ರವೇಶ.

ಅಕಾಲ ಮೃತ್ಯವಿಗೀಡಾದ ಓರ್ವ ರಾಜನ ಶರೀರ ಪ್ರವೇಶಿಸಿದ ಶಂಕರರು ಕಾಮ ಕಲೆಯ ಬಗ್ಗೆ ತಿಳಿದು ನಂತರ ತಮ್ಮ ನಿಜ ಕಾಯಕ್ಕೆ ಮರಳಿ ಉಭಯ ಭಾರತಿಗೆ ಸೂಕ್ತ ಉತ್ತರ ನೀಡಿ ಮಂಡನಮಿಶ್ರರನ್ನು ತನ್ನ ಶಿಷ್ಯರನ್ನಾಗಿಸುತ್ತಾರೆ. ಶಂಕರರು ಕಲಿಯುಗಕ್ಕೆ ಅತ್ಯಪೂರ್ವವಾದ ‘ಪರಕಾಯ ಪ್ರವೇಶ’ ಸಿದ್ಧಿಯನ್ನು ಕೂಡ ಮಾಡಿ ತೋರಿದ್ದು ಈ ಅದ್ಭುತ ಘಟನೆಯು ನಿದರ್ಶಿಸುತ್ತದೆ. 

ಬ್ರಹ್ಮ ಒಂದೇ ಸತ್ಯ:

‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈ ನಾಪರಃ’ ಎಂಬುದು ಅದ್ವೈತ ಸಿದ್ಧಾಂತದ ಸಾರ. ಬ್ರಹ್ಮ ಒಂದೇ ಸತ್ಯ. ಜಗತ್ತು ಮಿಥ್ಯ. ಜೀವನು ಬ್ರಹ್ಮದಿಂದ ಬೇರೆಯಲ್ಲ. ಮಿಥ್ಯೆ ಎಂದರೆ ಸುಳ್ಳು ಅಥವಾ ಶೂನ್ಯವೆಂದು ಅರ್ಥವಲ್ಲ. ಭೇದದಿಂದ ಬರುವ ಸಾಪೇಕ್ಷತೆ ಎಂಬುದು ಅದರ ತಾತ್ಪರ್ಯ, ಹೀಗಾಗಿ ಶಂಕರರು ಜಗತ್ತನ್ನು ನಿರಾಕರಿಸಿಲ್ಲ. ಬದಲಾಗಿ ಅದರ ಯೋಗ್ಯ ಸ್ಥಾನವನ್ನು ತೋರಿಸಿಕೊಟ್ಟಿದ್ದಾರೆ.

ಹಿತವಚನಗಳು:

 • ಜ್ಞಾನವನ್ನು ಗಳಿಸುವುದು ಜ್ಞಾನಯೋಗ, ಭಾವ ಮತ್ತು ಕ್ರಿಯೆಗಳ ಮೂಲಕ ಸಾಧಿಸುವ ಭಕ್ತಿಯೋಗ, ಕರ್ಮಯೋಗಗಳು ಮುಖ್ಯ. ಇಂದ್ರಿಯಗಳನ್ನು ನಿಗ್ರಹದಲ್ಲಿಟ್ಟುಕೊಳ್ಳುವುದರ ನಿಟ್ಟಿನಲ್ಲಿ ಬಯಕೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಚಿತ್ತ ಶುದ್ಧಿಗೆ ಸಹಕಾರಿ.
 • ಪ್ರತಿಯೊಬ್ಬರೂ ಜಾತಿ ವರ್ಣಾಶ್ರಮಗಳ ಹಂಗಿಲ್ಲದೇ ಸದ್ಗುರುವಿನ ಸಹಾಯದಿಂದ ಸುಖ ಶಾಂತಿ ಪಡೆಯಬಹುದು
 • ಸತ್ಯಾನ್ವೇಷಕರಾಗಲು ಶುದ್ಧ ಅಂತಃಕರಣ ಉಳ್ಳವರಾಗಿರಬೇಕು. ಪೂಜೆ ಭಜನೆ ಸ್ತೋತ್ರಗಳಲ್ಲಿ ಅದು ಬೇಕು ಇದು ಬೇಕೆಂದು ಬೇಡದೇ ಪೀಡಿಸದೇ ಕೇವಲ ಭಗವಂತನೇ ಬೇಕೆಂಬ ತೀವ್ರತೆಯಿಂದ ಪ್ರಾರ್ಥಿಸಬೇಕು
 • ತನ್ನನ್ನು ತಾನು ಅರಿಯಲು ಯಾವ ಕರ್ಮಗಳ ಹಂಗೂ ಇಲ್ಲ. ಜಿಜ್ಞಾಸತ್ವ ಮುಮುಕ್ಷುತ್ವಗಳಿದ್ದರೆ ಸಾಕು.
 • ಸುಖ ಶಾಂತಿ ನೆಮ್ಮದಿ ಸಿಗುವುದು ಸತ್ತ ಮೇಲಲ್ಲ. ತತ್ ತ್ವಂ ಅಸಿ ಎಂದು ಸಾರಿದ್ದಾರೆ.
  ನಾನು-ತಾನು ಬಿಡಿಸಿ ಸದ್ಗುರುವಿನ ಮೂಲಕ ಅರಿತವರೆಲ್ಲ ಶಂಕರರೆ.
 • ತಪ್ಪು ತಿಳಿವಳಿಕೆಯೇ ಎಲ್ಲ ಅನರ್ಥಗಳಿಗೂ ಮೂಲ. ಭೇದಭಾವ ಏನಿದ್ದರೂ ಉಪಾಧಿ ಮಾತ್ರದ್ದು ಉಪಾಧಿಗಳಿಗೆ ಅತೀತವಾದ ಸ್ವಸ್ವರೂಪವನ್ನು ಕಂಡುಕೊಳ್ಳಲು ವೇದಾಂತವೆಂಬ ಶಾಸ್ತ್ರವಿದೆಯೆಂದು ವಿವರಿಸಿದ್ದಾರೆ.

ಎಚ್ಚರಿಕೆಯ ಮಾತುಗಳು:

 • ಧನ ಸಂಪಾದನೆ, ಪುಣ್ಯ ಸಂಪಾದನೆ ಮಾನವ ಜನ್ಮದ ಗುರಿಯಲ್ಲ.
 • ದುಃಖಗಳಿಗೆ ಅಜ್ಞಾನವೇ ಕಾರಣ.
  ಮೋಕ್ಷವೆಂದರೆ ಸಾಯುವುದಲ್ಲ. ನೈಜ ಆತ್ಮನಲ್ಲಿ ಉಳಿಯುವುದು.
 • “ಉತ್ತಿಷ್ಟತ ಜಾಗ್ರತಃ ಪ್ರಾಪ್ಯ ವರಾನ್ ನಿಭೋದತಃ (ಏಳಿರಿ ಎಚ್ಚರಗೊಳ್ಳಿರಿ ಸದ್ವಿಚಾರವಂತರಾಗಿ ಮಾನವಜನ್ಮ ಸಾರ್ಥಕಪಡಿಸಿಕೊಳ್ಳಿ.)
 • ಜೀವನ್ಮುಕ್ತಿ ಎಲ್ಲ ಮಾನವರ ಹಕ್ಕು

ಶ್ರೇಷ್ಠ ಮಾರ್ಗ:

ಎಚ್ಚರ (ಜಾಗ್ರತ್) ಕನಸು (ಸ್ವಪ್ನ) ಮತ್ತು ಗಾಢನಿದ್ರೆ (ಸುಷುಪ್ತಿ) ಎಂಬ ಈ ಮೂರು ಅವಸ್ಥೆಗಳು ಸಾಮಾನ್ಯವಾಗಿ ಎಲ್ಲರಿಗೂ ಅನುಭವಕ್ಕೆ ಬರುತ್ತವೆ. ಎಚ್ಚರ ಮತ್ತು ಕನಸುಗಳಲ್ಲಿ ಕಂಡುಬರುವ ಭೇದಭಾವಗಳು ಗಾಢನಿದ್ರೆಯಲ್ಲಿ ಕಂಡು ಬರುವುದಿಲ್ಲ. ಬೇಕಾದುದು(ಇಷ್ಟ) ಬೇಡವಾದುದು(ಅನಿಷ್ಟ) ಎಚ್ಚರವಿದ್ದಾಗ ಕಾಡಿಸುತ್ತವೆ. ಇಷ್ಟ ಅನಿಷ್ಟಗಳಿಗೆ ಮೂಲವೆನಿಸಿದ ಭೇದವೇ ಮರೆಯಾಗಬೇಕು. ಆಗ ಸುಖ-ದುಃಖಗಳನ್ನು  ಮೀರಿದ ಆನಂದಸ್ವರೂಪಿಯಾದ ಅಭೇದ ಸಿದ್ಧಿಸುತ್ತದೆ.

ಅಭೇದವೇ ಅದ್ವೈತ. ಅದ್ವೈತ ತತ್ವವನ್ನು ಉಪನಿಷತ್ತಿನ ತಿರುಳೆಂದು ಗ್ರಹಿಸಿ ಶಾಸ್ತ್ರ-ಯುಕ್ತಿ-ಅನುಭವಗಳಿಗೆ ಸರಿ ಹೊಂದಿಸಿದವರು ಶಂಕರಾಚಾರ್ಯರು. ಶ್ರವಣ ಮನನ ಮತ್ತು ನಿಧಿಧ್ಯಾಸನದ ಮೂಲಕ ಸಾಧನೆ ಅವಶ್ಯಕ ಎಂಬುದನ್ನು  ತಿಳಿಹೇಳಿದ್ದಾರೆ. ಅವರು ತಿಳಿಸಿದ ರೀತಿಯಲ್ಲಿ ತಿಳಿವನ್ನು ಗಳಿಸಿದರೆ ಭಯ ಮಾಯವಾಗುತ್ತದೆ. ಮನುಷ್ಯ ಲೋಕ ಸ್ನೇಹಿಯಾಗುತ್ತಾನೆ. ಮಾತು ಮಾತಿಗೂ ನಾವು ಜಪಿಸುತ್ತಿರುವ ಸರ್ವ ಸಮಾನತೆ ಮತ್ತು ಸ್ವಾತಂತ್ರ್ಯಗಳಿಗೆ ಇದು ಹೇಳಿ ಮಾಡಿಸಿದ ಮಾರ್ಗ. ವಿಶ್ವಶಾಂತಿಗೂ ಈ ಮಾರ್ಗವೇ ಶ್ರೇಷ್ಠ. ಈ ಶ್ರೇಷ್ಠತೆಯನ್ನು ಅರಿತು ಬಾಳಿದರೆ ಬದುಕು ದಿವ್ಯವಾಗುತ್ತದೆ, ಭವ್ಯವಾಗುತ್ತದೆ ಅಲ್ಲವೇ?


ಜಯಶ್ರೀ.ಜೆ. ಅಬ್ಬಿಗೇರಿ

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group