ಬೆಳಗಾವಿ: ಸಾವು-ಕೇಡುಗಳಿಲ್ಲದ ನಿರಾಕಾರ ಚನ್ನಮಲ್ಲಿಕಾರ್ಜುನನ್ನು ಗಂಡನೆಂದು ಒಪ್ಪಿಕೊಂಡು ತಂದೆ ಬಸವಣ್ಣನವರು ಒಪ್ಪುವಂತೆ ಬದುಕುವ ಮೂಲಕ ತವರು ಮನೆಯಾದ ಅನುಭವ ಮಂಟಪದ ಘನತೆಗೆ ಸಿಂಗಾರವಾದ ಜಗನ್ಮಾತೆ ಅಕ್ಕಮಹಾದೇವಿಯವರು ಜೀವ ಜಗತ್ತು ಇರುವವರೆಗೆ ಅಜರಾಮರ ಎಂದು ಲಿಂಗಾಯತ ಧರ್ಮ ಮಹಾಪೀಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ.
ಕೋವಿಡ ಹಿನ್ನಲೆಯಲ್ಲಿ ಬಸವ ಭೀಮ ಸೇನೆಯ ಸಹಯೋಗದಲ್ಲಿ ಶ್ರೀಮಠದಲ್ಲಿ ಅತ್ಯಂತ ಸರಳವಾಗಿ ಮಂಗಳವಾರದಂದು ಏರ್ಪಡಿಸಲಾಗಿದ್ದ ಜಗನ್ಮಾತೆ ಅಕ್ಕಮಹಾದೇವಿಯವರ ಜಯಂತ್ಯೋತ್ಸವದಲ್ಲಿ ಆಶೀರ್ವಚನ ನೀಡಿದ ಅವರು, ನಿರಾಕಾರ ದೇವರನ್ನೆ ಆತ್ಮ ಸಂಗಾತಿ ಮಾಡಿಕೊಂಡಿದ್ದ ಅಕ್ಕಮಹಾದೇವಿಯವರದು ಭಯವಿಲ್ಲದ ಭಕ್ತಿ.
ಅವರ ಭಯಮುಕ್ತ ಭಕ್ತಿ ಮತ್ತು ಭಯ ರಹಿತ ಜೀವನ ಪಯಣವೂ ಮಹಿಳಾ ಸಂಕುಲಕ್ಕೆ ಮಹಿಳಾ ಸಬಲೀಕರಣದ ಹೋರಾಟಕ್ಕೆ ಸರ್ವ ಕಾಲಕ್ಕೂ ಪ್ರೇರಣೆ ಆಗಿದೆ ಎಂದರು.
ಹುಟ್ಟಿ ಸತ್ತವರ್ಯಾರು ದೇವರಲ್ಲ. ಬೇಡುವವರು ದೇವರಲ್ಲ. ಹುಟ್ಟಿ ಸತ್ತವರ ಹೆಸರಿನಲ್ಲಿ ಗುಡಿ ಗುಂಡಾರಗಳನ್ನು ಕಟ್ಟಿ, ಇವ ಮೇಲು ಅವ ಮೇಲು ಎಂದು ಬಡಿದಾಡಿ, ಸಮಾಜದಲ್ಲಿ ಒಡಕು ಮೂಡಿಸುವದನ್ನು ಬಿಟ್ಟು, ನಿರಾಕಾರ ದೇವರಿಗೆ ಭಯವಿಲ್ಲದ ಭಕ್ತರಾಗುವ ಮೂಲಕ ಭಯ ಮುಕ್ತ ಸಮಾಜದ ನಿರ್ಮಾಣ ಮಾಡಬೇಕು. ಬಸವಾದಿ ಶರಣರ ಆಶಯ ಈಡೇರಿಸಬೇಕು ಎಂದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಲಿಂಗಾಯತ ಧರ್ಮದ ಅಧಿನಾಯಕಿ ಅಕ್ಕಮಹಾದೇವಿಯವರ, ಉಡುತಡಿಯಿಂದ ಬಸವಕಲ್ಯಾಣದವರೆಗೆ, ಬಸವಕಲ್ಯಾಣದಿಂದ ಕದಳಿಯವರೆಗಿನ ದಿಗಂಬರ ದಂಡಯಾತ್ರೆಯು, ಹೆಣ್ಣು ಅಬಲೆ, ಹೆಣ್ಣು ಮೈಲಿಗೆಯೆಂದು ಅಡುಗೆ ಮನೆಯಲ್ಲಿ ಕೂಡಿ ಹಾಕಿ, ಕೇವಲ ಭೋಗದ ವಸ್ತುವಾಗಿಸಿದ್ದ.
ಸೀರೆಯ ಸೆರಗಿನಲ್ಲಿ ಕಟ್ಟಿ ಹಾಕಿದ್ದ ಈ ದೇಶದ ಮನುವಾದ ಮತ್ತು ಸನಾತನ ಧರ್ಮವು ಅಕ್ಕಮಹಾದೇವಿಯವರ ನೆನಪಾದಾಗಲೆಲ್ಲ, ನಾವಿನ್ನು ಬದುಕಿದ್ದೇವಾ ಎಂದು ಮತ್ತೆ ಮತ್ತೆ ಮುಟ್ಟಿಕೊಳ್ಳುವಂತೆ ಮಾಡಿದೆ.
ಅಕ್ಕಮಹಾದೇವಿಯವರ ಆ ನಿರ್ಭಯ ಬದುಕು, ಅವರ ವಚನಗಳಲ್ಲಿಯ ಜೀವನಾನುಭವವು ಮಹಿಳಾ ಸಬಲೀಕರಣಕ್ಕೆ. ನಾರಿ ಕುಲ ಸಂಕುಲಕ್ಕೆ ಬಹುದೊಡ್ಡ ಶಕ್ತಿಯಾಗಿದೆ ಎಂದರು.
ಇತ್ತೀಚೆಗೆ ಕೆಲವರು, ಅಕ್ಕಮಹಾದೇವಿಯವರ ಕೇಶರಾಶಿಯಿಂದ ಮುಚ್ಚಲ್ಪಟ್ಟ ನರೆನಗ್ನ ಭಾವಚಿತ್ರ ಹಾಕಬಾರದು. ಅದರ ಬದಲಿಗೆ ಸೀರೆಯುಟ್ಟ ಫೋಟೋ ಹಾಕಬೇಕು ಎಂಬ ಮೂರ್ಖತನದ ವಾದ ಮಂಡಿಸುತ್ತಿದ್ದಾರೆ. ಆದರೇ, ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ಸಿಗುವವರೆಗೆ ಅಕ್ಕಮಹಾದೇವಿಯವರಿಗೆ ಸೀರೆ ಉಡಿಸಲು ಸಾಧ್ಯವಿಲ್ಲ.
ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆಗೆ ವಿರೋಧಿಸುತ್ತಿರುವವರು, ಧರ್ಮದ ಹೋರಾಟದಿಂದ ಸಮಾಜ ಒಡೆಯಿತು. ಧರ್ಮವೇ ಅಲ್ಲದ ಧರ್ಮ ಒಡೆಯುತ್ತದೆ ಎಂದು ಬೊಬ್ಬೆ ಹಾಕುತ್ತಿರುವ ಮನುವಾದಿಗಳಿಗೆ ಅಕ್ಕಮಹಾದೇವಿಯವರು ಸಿಂಹ ಸ್ವಪ್ನವಾಗಿಯೇ ಕಾಡಬೇಕು.
ಅಕ್ಕಮಹಾದೇವಿಯವರಿಗೆ ಸೀರೆ ತೊಡಿಸುವ ಬದಲು, ಮಹಿಳೆಯರು ಮಕ್ಕಳು ಹೋಗುವ ಗುಡಿ ಗುಂಡಾರಗಳ ಮೇಲೆ ಕೆತ್ತಲಾಗಿರುವ ನಗ್ನ ಪ್ರತಿಮೆಗಳಿಗೆ ಬಟ್ಟೆ ತೊಡಿಸಬೇಕು ಎಂದರು.
ಶ್ರೀಮಠದ ಟ್ರಸ್ಟ ಕಾರ್ಯದರ್ಶಿ ಉಳವಪ್ಪ ಅಗಸಗಿ ಮಾತನಾಡಿ, ಪ್ರತಿಯೊಬ್ಬ ಮಹಿಳೆ ಅಕ್ಕಮಹಾದೇವಿಯವರಂತಾಗಬೇಕು.
ಪ್ರತಿಯೊಂದು ಮನೆಯ ಒಬ್ಬ ಹೆಣ್ಣು ಮಗಳಿಗೆ ಅಕ್ಕಮಹಾದೇವಿಯವರ ಹೆಸರಿಡಬೇಕು ಎಂದರು.
ಕೋವಿಡ ಕಾರಣದಿಂದಾಗಿ ಬೇರೆ ಭಕ್ತಾಧಿಗಳಿಗೆ ಆಮಂತ್ರಿಸಿರಲಿಲ್ಲ.
ಆರ್.ಎಸ್.ದರ್ಗೆ, ಬೆಳಗಾವಿ
ಮೋ.ನಂ.9986710560