ಮೂಡಲಗಿ: ‘ಜಾರಕಿಹೊಳಿ ಸಹೋದರರು ಮನಸ್ಸು ಮಾಡಿದರೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಜಂಟಿಯಲ್ಲಿ ಖಂಡಿತ ಯಶಸ್ವಿಯಾಗುತ್ತದೆ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಅಭಿಪ್ರಾಯಪಟ್ಟರು.
ಮೂಡಲಗಿಯಲ್ಲಿ ಶನಿವಾರ ಜರುಗಿದ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸಾಹಿತಿ ಮತ್ತು ಕಲಾವಿದರನ್ನು ಬೆಳೆಸಿದ ಗೋಕಾವಿ ನಾಡು ಸಾಂಸ್ಕೃತಿಕವಾಗಿ ಸಮೃದ್ಧಿ ಹೊಂದಿದ್ದು, ಸಮ್ಮೇಳನಗಳ ಆಯೋಜನಕ್ಕೆ ಉತ್ತಮ ಪರಿಸರವಿದೆ ಎಂದರು.
ಸಾಹಿತಿಗಳಾದವರಿಗೆ ಸಾಹಿತ್ಯಕವಾದ ಜವಾಬ್ದಾರಿಗಳಿದ್ದು ಅವುಗಳನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗ ಮಾತ್ರ ಸಾಹಿತ್ಯ ಸಮ್ಮೇಳನಗಳು ಯಶಸ್ಸುವಾಗುತ್ತವೆ. ಪ್ರಚಾರಕ್ಕಾಗಿ ಸಾಹಿತಿಗಳಾಗದೆ, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಾಗಬೇಕು ಎಂದರು.
ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಆದೇಶವನ್ನು ಮಾಡಿ ಅದು ಅನುಷ್ಠಾನಗೊಳ್ಳಬೇಕು. ಕನ್ನಡ ಭಾಷೆ ಬೆಳವಣಿಗೆಗೆ ಸಾಹಿತಿಗಳು, ಜನಪ್ರತಿನಿಧಿಗಳು ಎಲ್ಲರಲ್ಲಿ ಬದ್ದತೆ ಇರಬೇಕು ಎಂದರು.
ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಮಾತನಾಡಿ, ಸಾಮಾಜಿಕ ಕಳಕಳಿ, ಮಾನವೀಯತೆಯು ಸಾಹಿತ್ಯದ ತಿರುಳಾಗಬೇಕು. ಸಾಹಿತ್ಯವನ್ನು ಬೆಳೆಸಿದರೆ ಸಾಹಿತಿ ತಾನೇ ಬೆಳೆಯುತ್ತಾನೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರೊ. ಶಿವಾನಂದ ಬೆಳಕೂಡ ಮಾತನಾಡಿ, ಯುವ ಸಾಹಿತಿಗಳು ಅಧ್ಯಯನದತ್ತ ಒಲವು ತೋರಬೇಕು. ಓದಿದಷ್ಟು ಸಾಹಿತ್ಯ ಬರಹದ ವಿಸ್ತಾರವಾಗುವುದು ಎಂದರು.
ಜಾನಪದ ಗಾಯಕ ಶಬ್ಬಿರ ಡಾಂಗೆ ಅವರ ಗಾಯನ ಎಲ್ಲರ ಗಮನಸೆಳೆಯಿತು.
ಸಮ್ಮೇಳನದ ಸರ್ವಾಧ್ಯಕ ಪ್ರೊ. ಸಂಗಮೇಶ ಗುಜಗೊಂಡ ಸಮಾರೋಪ ನುಡಿಗಳನ್ನಾಡಿದರು.
ಕಸಾಪ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು.
ಸಾನ್ನಿಧ್ಯ ವಹಿಸಿದ್ದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಶಿವರಡ್ಡಿ ಹುಚ್ಚರಡ್ಡಿ, ಸುಭಾಷ ಕಡಾಡಿ, ಬಸವರಾಜ ಹುಲಕುಂದ, ಯಲ್ಲಪ್ಪ ಮಾನಕಪ್ಪಗೋಳ, ಸಚಿನ ಲಂಕೆನ್ನವರ ವೇದಿಕೆಯಲ್ಲಿದ್ದರು.
ಸತೀಶ ಬಿ.ಎಸ್. ಸ್ವಾಗತಿಸಿದರು, ಬಸವರಾಜ ಕೋಟಿ ನಿರೂಪಿಸಿದರು, ಚಿದಾನಂದ ಹೂಗಾರ ವಂದಿಸಿದರು.