spot_img
spot_img

ಜೋಕುಮಾರ ಬಂದನು

Must Read

- Advertisement -

ಅನಂತನ ಹುಣ್ಣಿಮೆ ಇದನ್ನು ಉತ್ತರ ಕರ್ನಾಟಕದಲ್ಲಿ “ಜೋಕುಮಾರನ ಹುಣ್ಣಿಮೆ” ಎಂದು ಕರೆಯುವರು ಇಂದು ಸಿಂದೋಗಿಯ ಮಾರುತಿ ಬಡಾವಣೆಗೆ ಜೋಕುಮಾರನ ಆಗಮನವಾಯಿತು. ಬಡಾವಣೆಯ ಮಹಿಳೆಯರು ಮರದಲ್ಲಿ ಅಕ್ಕಿ.ಬಿಳಿ ನೂಲ ಎಳೆ ಇತ್ಯಾದಿ ಸಾಮಗ್ರಿಗಳನ್ನು ತಗೆದುಕೊಂಡು ಬಂದರು.ಜೋಕುಮಾರನನ್ನು ಒಂದು ಸ್ಥಳದಲ್ಲಿ ಇರಿಸಿದ್ದ ಮಹಿಳೆಯರು ಪೂಜೆಗೈಯ್ದು ಹಾಡನ್ನು ಹೇಳಿದರು.

ಜೋಕುಮಾರ ನನ ಕುವರ ಅಷ್ಟಮಿ ಗಡಿಗ್ಯಾಗ ಹುಟ್ಟಿದ್ಯೋ ಜೋಕುಮಾರ
ಬಚ್ಚಿ ಬುಟ್ಟಿಯಾಗ ಕುಂತಿರೋ ಜೋಕುಮಾರ
ಲಾಲಿಸಿ ಕೇಳ ಪವಳದ ಹಾಡ ನನ ಕೋಮರಾಮ
ಹಾಕಪ್ಪ ಅಗಳಿ ಹಾಕಪ್ಪ ಜೋಗಪ್ಪ
ಹೆಂಡತಿ ಮಿಂಡನ್ನ ಬಡಿಯಪ್ಪ ನನ ಕೋಮಾರ

ಮನೆಯ ಮುಂದೆ ಬುಟ್ಟಿಯಲ್ಲಿ ಜೋಕುಮಾರನನ್ನು ಪ್ರತಿಷ್ಟಾಪಿಸಿ ಈ ರೀತಿ ಹಾಡು ಹೇಳಿ. ಬಡಾವಣೆಯ ವಿವಿಧ ಮನೆಯವರು ಮರದಲ್ಲಿ ತಂದಿದ್ದ ಮೆಣಸಿನಕಾಯಿ, ಉಪ್ಪು, ಜೋಳ ಆಹಾರ ಪದಾರ್ಥಗಳನ್ನು ಪಡೆದು ಅವರ ಮರದಲ್ಲಿ ನೂಲು ಎಳೆಯನ್ನು ನೀಡಿದರು. ಆ ಎಳೆಯನ್ನು ಅವರು ತಮ್ಮ ಗಂಡು ಮಕ್ಕಳ ನಡುವಿನ ಉಡದಾರದಲ್ಲಿ ಕಟ್ಟಿಕೊಳ್ಳಲು ಕೊಡುತ್ತಿರುವ ದೃಶ್ಯವನ್ನು ಗಮನಿಸಿದೆನು. ಅದನ್ನು ಉಡದಾರದಲ್ಲಿ ಕಟ್ಟಿಕೊಂಡರೆ ನಡ ಗಟ್ಟಿಯಾಗುತ್ತದೆ ಯೆಂಬ ನಂಬಿಕೆ.

- Advertisement -

ಆಶ್ಚರ್ಯ ಈ ಕಂಪ್ಯೂಟರ್ ಯುಗದಲ್ಲಿಯೂ ಇಂದಿಗೂ ಹಳ್ಳಿಗಳಲ್ಲಿ ಇಂಥ ಆಚರಣೆಗಳು ಉಳಿದು ಬಂದಿವೆಯಲ್ಲ ಎನ್ನುತ್ತ ಈ ಜೋಕುಮಾರ ಹಬ್ಬದ ಹಿನ್ನಲೆಯ ಜಾಡನ್ನು ತಿಳಿಯಬೇಕೆಂದು ಅಂದು ಬಂದಿದ್ದ ಮುದುಕಿಯರನ್ನು ಕೇಳಿದಾಗ ಆಶ್ಚರ್ಯಕರ ಸಂಗತಿ ತಿಳಿಸಿದರು.

ಈ ಹಬ್ಬವನ್ನು ಅಂಬಿಗರು, ಮಡಿವಾಳರು, ಬಾರಿಕೇರರು, ಕಬ್ಬಿಗರು, ತಳವಾರರು, ಸುಣಗಾರರರು ಗಂಗಾಮತಸ್ಥರು ಭಯ, ಭಕ್ತಿಯಿಂದ ಮಾಡುತ್ತಾರೆ. ಪ್ರತಿವರ್ಷ ಕುಂಬಾರರ ಮನೆಯಿಂದ ಮಣ್ಣು ತಂದು ಜೋಕುಮಾರಸ್ವಾಮಿಯನ್ನು ಶೃದ್ದಾಭಕ್ತಿಯಿಂದ ತಯಾರಿಸುತ್ತ ಬಂದಿದ್ದು ತಲತಲಾಂತರದಿಂದ ಬೆಳೆದು ಬಂದ ಸಂಪ್ರದಾಯವಾಗಿದೆ.ಮಣ್ಣಿನಿಂದ ಮೂರ್ತಿ ಮಾಡಿ ಬಾಯಿಗೆ ಬೆಣ್ಣೆಯನ್ನು ಒರೆಸಿ,ಬೇವಿನ ತಪ್ಪಲಿನಲ್ಲಿ ಮುಚ್ಚಿ ಅವನ ಗುಪ್ತಾಂಗವನ್ನುನೀಟಾಗಿ ಕಾಣುವಂತೆ ಮಾಡಿ.

- Advertisement -

ಅಕರಾಳ ವಿಕರಾಳ ದೇಹಸ್ವರೂಪವನ್ನು ಮಾಡಿ ತಲೆಗೆ ಪೇಟ ಸುತ್ತಿ ಬುಟ್ಟಿಯಲ್ಲಿ ಹೊತ್ತು ಮನೆ ಮನೆ ತಿರುಗುತ್ತ ಅವನ ಹಿನ್ನಲೆಯನ್ನು ತಿಳಿಸುವ ಹಾಡು ಹೇಳುತ್ತ ಏಳನೇ ದಿವಸ ರಾತ್ರಿ ಜೋಕುಮಾರನನ್ನು ಹರಿಜನರ ಓಣಿಯಲ್ಲಿಟ್ಟು ಬರುತ್ತಾರೆ. ನಂತರ ಅವರು ಪೂಜೆ ಮಾಡಿ ಮಳೆ-ಬೆಳೆ ಕುರಿತು ಭವಿಷ್ಯ ಕೇಳುವರು ಆ ದಿನ ಅನಂತನ ಹುಣ್ಣಿವೆ ಇರುವುದು. ಹುಣ್ಣಿವೆಯ ಆಚರಣೆ ಮಾಡಿ ಅವರ ಮನೆಯಲ್ಲಿ ರಾತ್ರಿ 12 ಗಂಟೆಯ ನಂತರ ಆತನ ಆಕೃತಿಯನ್ನು ಬೆನ್ನು ಹಿಂದು ಮಾಡಿ ತಗೆದುಕೊಂಡು ಹೋಗಿ ಅಗಸರ ಪಡಿಗೆ ಹೋಗಿ ಅಲ್ಲಿ ಆತನ ಕೈಕಾಲು ಮುರಿದು ಮುಚ್ಚುವರು. ಅವರು ಒನಕೆಯಿಂದ ಇವನ ತಲೆಗೆ ಹೊಡೆದು ಕೊಲ್ಲುವರು.ಆಗ ಆತನ ತಲೆಯ ರುಂಡವು ಅಂಗಾತ ಬಿದ್ದರೆ ಆ ವರ್ಷ ಸುಖ.ಡಬ್ಬ ಬಿದ್ದರೆ ದುಃಖ.ಈ ರೀತಿ ಬಾದ್ರಪದ ಅಷ್ಟಮಿಗೆ ಜನಿಸುವ ಜೋಕುಮಾರ ಅನಂತನ ಹುಣ್ಣಿಮೆಯ ದಿನ ಸಾವನ್ನು ಕಾಣುತ್ತಾನೆ ಎಂಬ ಕಥೆಯನ್ನು ಆ ಅಜ್ಜಿಯರು ಸೊಗಸಾಗಿ ಹೇಳಿದರು.

ಬೆಳೆ ಫಸಲು ಬಿಡುವ ಸಂದರ್ಭದಲ್ಲಿ ಮಳೆ ಬೇಕಾಗುತ್ತದೆ.ಆಗ ಜೋಕುಮಾರಸ್ವಾಮಿಯನ್ನು ಪೂಜಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದಾಗಿ ಮಣ್ಣಿನಲ್ಲಿ ಜೋಕುಮಾರನನ್ನು ಮಾಡಿ ಪೂಜಿಸುವ ಸಂಪ್ರದಾಯವಿದೆ, ವಿಶೇಷವಾಗಿ ಉತ್ತರಕರ್ನಾಟಕದಲ್ಲಿ ಪ್ರಚಲಿತವಿರುವ ಈ ಹಬ್ಬಕ್ಕೆ ಅನಂತನ ಹುಣ್ಣಿವೆ. ಜೋಕುಮಾರನ ಹುಣ್ಣಿಮೆ ಅಂತಲೂ ಕರೆಯುವರು.

ಈ ರೀತಿ ಇಂದಿಗೂ ಜೋಕುಮಾರಸ್ವಾಮಿಯ ಹಬ್ಬವನ್ನು ಆಚರಿಸುತ್ತ ಬಂದಿದ್ದು. ಅಗಸರ ಪಡಿಯಲ್ಲಿ ಮುಚ್ಚಿದ ನಂತರದ 3 ದಿನಗಳು ಅಗಸ ಜನಾಂಗದವರು ಆ ಸ್ಥಳಕ್ಕೆ ಬಟ್ಟೆ ಒಗೆಯಲು ಹೋಗುವುದಿಲ್ಲ.ಏಕೆಂದರೆ ಆ ಸ್ಥಳದಲ್ಲಿ ಸೂತಕದ ಛಾಯೆ ಇರುವುದು ಎಂಬುದು ಇಂದಿಗೂ ಉಳಿದುಕೊಂಡು ಬಂದಿರುವ ನಂಬಿಕೆ. ಅದರ ಅರ್ಥ ಜೋಕುಮಾರನು ಆ ಸ್ಥಳದಲ್ಲಿ ನರಳುತ್ತಿರುತ್ತಾನೆ ಎಂಬ ನಂಬಿಕೆ.

ಬಾದ್ರಪದ ಶುಕ್ಲ ಪಕ್ಷದ ಚೌತಿಯಂದು ಗಣೇಶ ಹಬ್ಬ ಬಂದರೆ ನವಮಿಗೆ ಹೋಗುತ್ತದೆ. ಭಾದ್ರಪದ ಅಷ್ಟಮಿಗೆ ಜೋಕುಮಾರನ ಜನನವಾಗುವುದರಿಂದ ಗಣೇಶನಿಗೂ ಜೋಕುಮಾರನಿಗೂ ಕೇವಲ ಒಂದು ದಿನ ಭೇಟಿ ಆಗುತ್ತದೆ. ಇವರಿಬ್ಬರೂ ಸಹೋದರರು ಎಂಬುದನ್ನು ಗ್ರಾಮೀಣ ಜನತೆ ಕಥೆಯೊಂದನ್ನು ತಿಳಿಸುವರು. ಪಾರ್ವತಿದೇವಿಗೆ ಐದು ಜನ ಮಕ್ಕಳು ಸೂರ್ಯ, ಚಂದ್ರ, ಗಣಪತಿ, ಜೋಕುಮಾರ, ಕಾಮ, ಇವರೆಲ್ಲರೂ ಒಂದು ದಿನ ಮನೆಯೊಂದಕ್ಕೆ ಊಟಕ್ಕೆ ಹೋಗುತ್ತಾರೆ.

ಊಟ ಮಾಡುವಾಗ ಚಂದ್ರನಿಗೆ ತಾಯಿಯ ಮೇಲೆ ಕನಕರ ಭಕ್ತಿ ಉಂಟಾಗಿ ತಾಯಿಗೂ ಕೊಡಲೆಂದು ತನ್ನ ಉಗುರಿನಲ್ಲಿ ಆಹಾರ ಪದಾರ್ಥಗಳನ್ನು ತರುತ್ತಾನೆ ಉಳಿದವರು ಹಾಗೆ ಬಂದಿರುತ್ತಾರೆ ಆಗ ಪಾರ್ವತಿ ಊಟ ಹೇಗಾಯಿತು ಎನ್ನಲು ಚಂದ್ರ ತಾನು ತಂದಿದ್ದ ಆಹಾರ ಪದಾರ್ಥಗಳನ್ನು ತಾಯಿಗೆ ನೀಡುತ್ತಾನೆ ಉಳಿದವರು ಸುಮ್ಮನೆ ನಿಲ್ಲಲು ಮಾತೃ ಭಕ್ತಿಯನ್ನು ಕಂಡು ಅವನಿಗೆ “ನೀನು ದಿನವೂ ತಂಪಾದ ಹೊತ್ತಲ್ಲಿ ಹೋಗಿ ತಂಪಾದ ಹೊತ್ತಿನಲ್ಲಿ ಬಾ” ಎನ್ನುವಳು.

ಅಲ್ಲಿಯೇ ನಿಂತಿದ್ದ ಸೂರ್ಯನನ್ನು ಕಂಡು”ನೀನು ಉರಿ ಉರಿ ಉರಿದುಕೊಂಡು ಇರು”ಎನ್ನುವಳು.ನಂತರ ಗಣಪತಿಗೆ “ಹುಟ್ಟಿದ ಐದನೆಯ ದಿನ ತಿನ್ನಬೇಕಾದದ್ದನ್ನೆಲ್ಲ ತಿಂದು ಬಾವಿಯೋ ಕೆರೆಯೋ ಬಿದ್ದು ಸಾಯಿ”ಎಂದು ಹರಸಿದರೆ ಕಾಮನಿಗೆ ಹುಣ್ಣಿಮೆ ದಿನ ಹುಟ್ಟಿ ಮರುದಿನ ದಹನವಾಗುವ ಮೂಲಕ ಸಾಯಿ ಎಂದರೆ ಜೋಕುಮಾರನಿಗೆ ಹುಟ್ಟಿದ ಏಳನೇ ದಿನಕ್ಕೆ ಸಾಯಿ”ಎಂದು ಹರಸಿದಳಂತೆ ಹೀಗೆ ಹಬ್ಬಗಳೆಲ್ಲ ಕೂಡ ಹೋಳಿ ಹಬ್ಬ ನಂತರ ಗಣೇಶ ಚತುರ್ಥಿ. ಜೊತೆಗೆ ಜೋಕುಮಾರ ಹುಣ್ಣಿಮೆ(ಅನಂತನ ಹುಣ್ಣಿಮೆ) ಆಚರಣೆಯಲ್ಲಿವೆ ಎಂಬುದು ಗ್ರಾಮೀಣ ಜನರ ತಿಳುವಳಿಕೆ.

ಇನ್ನೊಂದು ಐತಿಹ್ಯದ ಪ್ರಕಾರ ಜೋಕ ಋಷಿಯ ಮಗ ಮಡಿವಾಳನ ಮಗಳನ್ನು ಮೋಹಿಸಿ ಅವಳ ತಂದೆಯಿಂದ ಸಾವನ್ನು ಕಾಣುವ ಕಥೆ.ಮತ್ತೊಂದು ಐತಿಹ್ಯದಂತೆ ಅಷ್ಟಮಿ ದಿನ ಜನಿಸಿದ ಈತ ಹೆಂಡತಿಯಿಂದ ಮೋಸ ಹೋಗುವ ಕಥೆಯನ್ನು ಹೇಳುವರು.ಏನೇ ಇರಲಿ ಹಿಂದಿನ ಜನರ ಸಂಪ್ರದಾಯ ಆಚರಣೆಗಳು ಇಂದಿಗೂ ಉಳಿದುಕೊಂಡು ಬಂದಿವೆ.

ಅಷ್ಟೇ ಅಲ್ಲ ಜೋಕುಮಾರನನ್ನು ಬುಟ್ಟಿಯಲ್ಲಿ ಹೊತ್ತು ತಂದಾಗ ಅವರಿಗೆ ಉಪ್ಪು ಮೆಣಸಿನಕಾಯಿ ಕೊಟ್ಟರೆ ಮನೆಯಲ್ಲಿಯ ಚಿಕ್ಕಾಡ ತಗಣಿ ಹೋಗುತ್ತವೆ.ಅಂಬಲಿ ಕೊಟ್ಟರೆ ಪೈರು ಹುಲುಸಾಗಿ ಬರುತ್ತದೆ.ಜೋಕುಮಾರ ಸತ್ತು ಪರಮಾತ್ಮನ ಹತ್ತಿರ ಹೋಗಿ ಭೂಲೋಕದಲ್ಲಿ ಮಳೆ ಬೆಳೆ ಸರಿ ಇಲ್ಲ ಅವರಿಗೆ ಮಳೆಯ ಅವಶ್ಯಕತೆ ಇದೆ ಎಂಬ ವರದಿ ಮಾಡುತ್ತಾನೆ ಆದ್ದರಿಂದ ಜೋಕುಮಾರ ಮಳೆ ಕೊಡಿಸುವ ದೇವರು ಎಂಬ ನಂಬಿಕೆಗಳು ಇವೆ.


ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group