spot_img
spot_img

ಜೂನ್ 21: ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಹೀಗೊಂದು ಚಿಂತನ ಯೋಗ – ಸುಯೋಗ

Must Read

- Advertisement -

‘ಯೋಗಾಭ್ಯಾಸ’ ಇತ್ತೀಚೆಗೆ ಬಹು ಜನಪ್ರಿಯ ವಿಷಯ. ಭಾರತದ ವೈಜ್ಞಾನಿಕ ಪ್ರತಿಭೆಯ ಒಂದು ಭಾಗ ಸಹ ಇದು. ಯೋಗ ಚಿರಪುರಾತನ, ನಿತ್ಯನೂತನ, ಇದೊಂದು ದರ್ಶನ. ಆದರೆ ಇಂದಿನ ಹವ್ಯಾಸಗಳು, ನಮ್ಮ ಶಿಕ್ಷಣ ಪದ್ಧತಿ, ಸಾಮಾನ್ಯ ಜನರ ಬುದ್ಧಿಮಟ್ಟ ಎಲ್ಲ ಒಂದು ವಿಚಿತ್ರ ರೀತಿಯದಾಗುತ್ತಿದೆ. ಹಾಲಿವುಡ್ಡಿನ ಹಾವಭಾವಗಳು, ವೇಷಭೂಷಣಗಳು ನಮಗೆ ಚಿರಪರಿಚಿತ. ಹಾಂಕಾಂಗ್ ಜೀವನ ನಮಗೆ ಬೇಕು.

ಮಾಸ್ಕೊ ಮಾಂಟ್ರಿಯಲ್ಲಿನ ಚಟುವಟಿಕೆಗಳು ಮನೆಮಾತು. ಆದರೆ ‘ಯೋಗ’- ಈ ಪದದ ವ್ಯಾಪ್ತಿ, ಮಹತ್ವ ಮಾತ್ರ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ; ಕೆಲವರಿಗೆ ಬೇಕಾಗಿಲ್ಲ. ನಮ್ಮ ಶರೀರ ಸ್ಥಿತಿ ನಮಗೆ ಬೇಕಾದ ಗಾಳಿ, ನೀರು ಹೇಗಿರಬೇಕೆಂಬ ಅರಿವಿನಿಂದ ವಂಚಿತರಾದ ನತದೃಷ್ಟರು ನಾವು.

ಯೋಗಾಭ್ಯಾಸವು ಕಾಡು ಸೇರಿದ ಪರಿವ್ರಾಜಕರಿಗೆ ಮಾತ್ರ ಎಂದು ಜನಸಾಧಾರಣದಲ್ಲಿ ನಂಬಿಕೆ ಇದೆ. ಇದನ್ನು ನಿವಾರಿಸಬೇಕು. ಯೋಗಾಭ್ಯಾಸವು ಎಲ್ಲರಿಗೂ ಹೌದು. ಲಿಂಗ, ವಯಸ್ಸು, ಆರೋಗ್ಯ, ಉದ್ಯೋಗ ಈ ಯಾವ ತಾರತಮ್ಯವೂ ಅದಕ್ಕಿಲ್ಲ. ಆದರೆ ಕೆಲವು ವಿನಾಯಿತಿಗಳಿವೆ. ಯಾರು ಬೇಕಾದರೂ ಯೋಗಾಭ್ಯಾಸ ಮಾಡಿ, ಮುಂಚಿಗಿಂತ ಹೆಚ್ಚು ಆರೋಗ್ಯ, ಉಲ್ಲಾಸ ಪಡೆಯಬಹುದು.

- Advertisement -

ಆದರೆ ಯೋಗಾಭ್ಯಾಸಕ್ಕೆ ತಾಳ್ಮೆ ಬೇಕು, ಕ್ರಮವರಿತ ನಿತ್ಯಾನುಷ್ಠಾನ ಬೇಕು. ಅದರ ರೀತಿಯೇ ಹಾಗೆ. ಸೌಂದರ್ಯ ಲೇಪನವನ್ನು ಮಾಡಿಕೊಂಡ ಮಾರನೆಯ ದಿವಸ ಸುಕ್ಕು ಕಟ್ಟಿದ ಮುಖವು ಸುಕೋಮಲವಾಗಬೇಕೆಂಬಂತೆ ಯೋಗಾಭ್ಯಾಸದಿಂದ ರಾತ್ರೋರಾತ್ರಿ ಪ್ರತಿಫಲ ದೊರಕುವುದಿಲ್ಲ. ಸೌಂದರ್ಯ ಲೇಪನವು ಫಲ ಕೊಡಬಹುದು, ಕೊಡದೆ ಇರಬಹುದು. ಯೋಗಾಭ್ಯಾಸವು ದಿಟವಾಗಿ ಫಲ ಕೊಡುತ್ತದೆ. ಅದಕ್ಕೆ ಯಾವ ವೆಚ್ಚವನ್ನೂ ಮಾಡಬೇಕಾಗಿಲ್ಲ.

ಯೋಗಾಭ್ಯಾಸದ ಪ್ರಕಾರ ನೀವು ನಿಮ್ಮ ಬದುಕನ್ನು ಕ್ರಮಪಡಿಸಿಕೊಳ್ಳಲು ಪ್ರಾರಂಭಿಸಿದ ತರುವಾಯ ಅನವಶ್ಯಕವಾದ ಹಲಕೆಲವು ವೆಚ್ಚಗಳನ್ನು ನೀವು ಉಳಿಸಬಹುದು. ಯೋಗಾಭ್ಯಾಸಕ್ಕೆ ಬೇಕಾದುದು ನಿಮ್ಮ ಮನೆಯ ಒಂದು ಮೂಲೆ; ಅಲ್ಲೊಂದು ಚಾಪೆ; ಅದರ ಮೇಲೆ ಯೋಗಾಸನ ಮಾಡಿದರೆ ಸಾಕು. ದಿನಕ್ಕೆ ಅರ್ಧಗಂಟೆ ಅಭ್ಯಾಸ ಮಾಡುವುದರಿಂದ ಡಾಕ್ಟರ ಬಳಿಗೆ ಪದೇ ಪದೇ ಓಡುವುದೂ ತಪ್ಪುತ್ತದೆ, ಇಡೀ ಜೀವನದಲ್ಲಿ ಔಷಧಿ ಪಥ್ಯಗಳ ವೆಚ್ಚವನ್ನು ನಿವಾರಿಸಿಕೊಳ್ಳಬಹುದು. ಇವತ್ತಿನ ದುಬಾರಿ ಪ್ರಪಂಚದಲ್ಲಿ ಈ ಪ್ರಯತ್ನವನ್ನು ಮಾಡುವುದು ಸರ್ವಥಾ ಯುಕ್ತ.

- Advertisement -

ಸ್ವಸ್ಥ್ಯ ಆರೋಗ್ಯಕ್ಕೆ ಯೋಗ

ಆಧುನಿಕ ಜೀವನದ ಧಾವಂತಗಳಿಂದ ನಮ್ಮ ಶಾಂತಿ ನೆಮ್ಮದಿಗಳನ್ನು ಹಾಳುಮಾಡುತ್ತಿರುವ ಅಶಾಂತಿ, ಒತ್ತಡಗಳು ಉದ್ವೇಗಗಳೇ ಮುಂತಾದ ಕುತ್ತುಗಳು ಒದಗುತ್ತಿವೆ. ಈವರೆಗೆ ಕೇಳರಿಯದ ಹೊಸ ಬಗೆಯ ತರಹಾವಾರಿ ವ್ಯಾಧಿಗಳು, ಜಾಡ್ಯಗಳು ಉಂಟಾಗುತ್ತಿವೆ.

ನಮ್ಮ ಯುವಜನರೂ ಈ ಸಮಸ್ಸೆಗಳಿಗೆ ಈಡಾಗಿ, ಅವುಗಳಿಂದ ಪಾರಾಗಲು ಮದ್ಯ, ರಾಸಾಯನಿಕಗಳೇ ಮುಂತಾದ ಮಾದಕದ್ರವ್ಯಗಳನ್ನು ಮೊರೆ ಹೋಗುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಯೋಗವೊಂದು ವರದಾನ. ಹಲವು ಮಂದಿ ನಿರಂತರ ಧೂಮಪಾನ ಮಾಡುವವರು, ರಾಸಾಯನಿಕಗಳಿಗೆ ಶರಣಾದವರು ಯೋಗಾಭ್ಯಾಸ ಮಾಡಿದುದರ ಪರಿಣಾಮವಾಗಿ ತಮ್ಮ ಚಟದಿಂದ ವಿಮುಕ್ತರಾಗಿರುವರಲ್ಲದೆ ಪ್ರಶಾಂತಿ, ಸ್ಥಿಮಿತ, ನೆಮ್ಮದಿ ಕಂಡುಕೊಂಡಿದ್ದಾರೆ.

ಸುಖ ಪಡಬೇಕೆಂಬ ಗೀಳು, ಬಾಹ್ಯ ಸಾಧನಗಳಿಂದ ಬಹಿರಂಗ ಸುಖವನ್ನು ಪಡೆಯಬಹುದೆಂಬ ಚಟ ಸಾಧಾರಣ ಗಂಡುಹೆಣ್ಣುಗಳನ್ನು ಆವರಿಸಿದೆ. ಇದು ಹೋಗಬೇಕು. ಭಾರತೀಯರ ಪ್ರಕಾರ, ಸುಖ-ದುಃಖ, ಅಶಾಂತಿ ಮುಂತಾದವುಗಳ ಮೂಲ ಹೊರಗಿಲ್ಲ, ಒಳಗಿದೆ. ಮನಸ್ಸಿನ ಅಂತರಾಳದಲ್ಲಿ ಅಡಗಿದೆ. ಯೋಗಾಭ್ಯಾಸವೊಂದೇ ಬದುಕಿನ ಸಮಸ್ಯೆಗಳನ್ನು ವಾಸ್ತವಿಕ ತಿಳಿವಿನಿಂದ, ಕೊಂಚಮಟ್ಟಿನ ವಿರಕ್ತಿಭಾವದಿಂದ, ಎದುರಿಸಲೂ ಸಾಮಥ್ರ್ಯವನ್ನು ನಮಗೆ ನೀಡಬಲ್ಲದು, ನೈಜವಾದ ನೆಮ್ಮದಿಯನ್ನು ದೊರಕಿಸಿಕೊಡಬಲ್ಲದು.

ಪಾತಂಜಲಿ ಯೋಗದ ಗುರಿ, ಮನುಷ್ಯನನ್ನು ಭವಬಂಧನದಿಂದ ಬಿಡುಗಡೆ ಮಾಡುವುದು. ಮನಸ್ಸು ವಸ್ತುವಿನ ಅತ್ಯುನ್ನತವಾದ ಅವಸ್ಥೆ. ಚಿತ್ತ(ಮನಸ್ಸು) ಅಥವಾ ಅಹಂಕಾರ (ತಾನು ಎಂಬ ಅರಿವು) ಎಂಬ ಬಲೆಯಿಂದ ಮುಕ್ತನಾದ ಮನುಷ್ಯ ಶುದ್ಧಾತ್ಮನಾಗುತ್ತಾನೆ.

ಯೋಗ ದೀಪಿಕಾ

ಸೃಷ್ಟಿಯ ಆದಿಕಾಲದಲ್ಲಿ ಮನುಷ್ಯ ಯಾವುದೇ ರೋಗವಿಲ್ಲದೆ ಸುಖವಾಗಿದ್ದನು. ಸೃಷ್ಟಿ ವಿಕಾಸವಾದಂತೆ ಹಲವಾರು ದೌರ್ಬಲ್ಯಕ್ಕೆ ತುತ್ತಾಗಿ ಮಾನಸಿಕ ಹಿಂಸೆ ಅನುಭವಿಸತೊಡಗಿದಂತೆ ನಾನಾ ರೋಗಗಳು ಉದ್ಭವವಾದವು ಅದನ್ನು ಶಾರೀರಿಕ ಹಾಗೂ ಮಾನಸಿಕ ರೋಗವೆಂದು ವಿಂಗಡಿಸಲಾಯಿತು. ಈ ರೋಗಗಳಿಗಾಗಿ ಅನಾದಿಕಾಲದಿಂದ ಆಯುರ್ವೇದ ಶಾಸ್ತ್ರವನ್ನು ಚಿಕಿತ್ಸಾ ರೂಪವಾಗಿ ಉಪಯೋಗಿಸಲು ಶುರುವಾಯಿತು. ಅಂದಿನಿಂದ ಈ ಶಾಸ್ತ್ರದ ಅವಿಭಾಜ್ಯ ಅಂಗವಾದ ಯೋಗವು ನಮ್ಮಲ್ಲಿ ಹಾಸು ಹೊಕ್ಕಾಗಿದೆ.

ಯೋಗಶಾಸ್ತ್ರಕ್ಕೆ ಬುನಾದಿ ಹಾಕಿದವನೂ ಅದರ ಪ್ರವರ್ತಕನೂ ಆದ ಮಹರ್ಷಿ ಪತಂಜಲಿಯು ಕ್ರಿ.ಶ. ಪೂರ್ವ 3ನೆಯ ಶತಮಾನದಲ್ಲಿ ಭಾರತದಲ್ಲಿ ಜೀವಿಸಿದ್ದನೆಂದು ಹೇಳಲಾಗುತ್ತದೆ. ಆತನು ಒಬ್ಬ ಶ್ರೇಷ್ಠ ತತ್ತ್ವಶಾಸ್ತ್ರಜ್ಞನೂ, ವೈಯಾಕರಣಿಯೂ(ವ್ಯಾಕರಣಕಾರ) ಆಗಿದ್ದನಲ್ಲದೆ, ವೈದ್ಯಶಾಸ್ತ್ರಜ್ಞನೂ ಆಗಿದ್ದನೆಂದು ಪ್ರತೀತಿಯಿದೆ. ಆದರೆ ಆತನು ಬರೆದಿದ್ದ ನೆನ್ನಲಾದ ಒಂದು ವೈದ್ಯಕೀಯ ಗ್ರಂಥವು ಮಾತ್ರ ಇಂದಿಗೂ ಉಪಲಬ್ಧವಿಲ್ಲ.

ಇತಿಹಾಸದ ಕಳೆದುಹೋದ ಪುಟಗಳಲ್ಲಿ ಅದೂ ಮರೆಯಾಗಿ ಹೋಗಿದೆ. ಹೀಗಿದ್ದರೂ, ಪತಂಜಲಮುನಿಯ ಪ್ರಸಿದ್ಧಿ ಆತನ ‘ಪಾತಂಜಲ ಯೋಗಸೂತ್ರಗಳು’ ಎಂಬ ಒಂದೇ ಒಂದು ಗ್ರಂಥದಿಂದ ದಿಗ್‍ದಿಗಂತಕ್ಕೆ ಹರಡಿದೆ. ಯೋಗದ ಜಗತ್ಪ್ರಸಿದ್ಧಿಯೊಂದಿಗೆ ಯೋಗಸೂತ್ರಕಾರನಾದ ಪತಂಜಲಮುನಿಯ ಹೆಸರೂ ಅಜರಾಮರವಾಗಿದೆ.

“ಯುಜ್ಯತೇ ಸಮಾಧೀಯತೇsನೇನ ಇತಿ ಯೋಗಃ” ಅಂದರೆ ಸಮಾಧಿಯೊಡನೆ ಜೋಡಿಸುವ ಕ್ರಿಯೆಯೇ ಯೋಗ-ಎಂದು ಸರಳಾರ್ಥದಲ್ಲಿ ಹೇಳುತ್ತಾರೆ. ಸಮಾಧಿಯ ವ್ಯಾಖ್ಯೆಯನ್ನು ‘ಸಮ್ಯಗ್ ಅಧೀತೇ ಮನಃ ಯಂತ್ರ’ ಎಂದರೆ ಮನಸ್ಸಿನ ಅಚಂಚಲವಾದ ಅಥವಾ ಏಕಾಗ್ರವಾದ ಅವಸ್ಥೆಯೆಂದು ಹೇಳುತ್ತಾರೆ. ‘Well fixed position of mind ‘ ಎಂದು ಇಂಗ್ಲೀಷಿನಲ್ಲಿ ಹೇಳುವುದು ಇದರದೇ ಪರ್ಯಾಯ. ಈ ಅವಸ್ಥೆಯನ್ನು ಮುಟ್ಟುವುದೇ ಯೋಗ ಅಥವಾ ಯೋಗಾಸನಗಳ ಧ್ಯೇಯ ಅಂತಿಮ ಗುರಿ.

ಯೋಗವು ಒಂದು ಕಲೆ. ದೈವತ್ವವನ್ನು ತಲುಪುವ ಗುರಿ ಸಾಧನೆಯಲ್ಲಿ ಮನುಷ್ಯನ ದೇಹ ಮನಸ್ಸು ಆತ್ಮಗಳನ್ನು ಒಟ್ಟಾಗಿ ಭಾವಿಸುತ್ತದೆ. ದೇಹವು ಶುದ್ಧವಾಗಿರಬೇಕು, ವಿವಿಧಾಚಾರಗಳಿಂದ ಸಾಮಥ್ರ್ಯ ಪಡೆಯಬೇಕು. ಮನಸ್ಸು ಎಲ್ಲ ಜಡವಾದುದನ್ನೂ ಕಳೆದುಕೊಂಡು ತೊಳೆದಂತಿರಬೇಕು. ಆತ್ಮವು ಅಂತರ್ಮುಖವಾಗಬೇಕು. ಆಗಲೇ ಮನುಷ್ಯ ಯೋಗದಕ್ಷನಾದಾನು. ಅಧ್ಯಯನವು ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ.

ಶರಣಾಗತಿಯು ಆತ್ಮವನ್ನು ದೈವಸಾನ್ನಿಧ್ಯಕ್ಕೆ ಒಯ್ಯುತ್ತದೆ.
ಯೋಗ ಜೀವನ ವಿಧಾನವಷ್ಟೆ. ನಮ್ಮ ದೇಹವು ಆರೋಗ್ಯವಾಗಿರಬೇಕಾದಲ್ಲಿ ಶರೀರದ ಎಲ್ಲ ಅಂಗಗಳ ಕೆಲಸದಲ್ಲೂ ಸಾಮರಸ್ಯವಿರಬೇಕು. ಒಂದು ಊನವಾದರೂ ಕುಂದೇ. ಒಂದೊಂದು ಅಂಗಕ್ಕೂ ಒಂದೊಂದು ಕೆಲಸ ಉಸಿರಾಟದ ಕ್ರಿಯೆಯಲ್ಲಿ ನೆರವಾಗುವ ಶ್ವಾಸಕೋಶಗಳು ಗಾಳಿಯೊಡನೆ ಸಂಪರ್ಕವನ್ನುಂಟು ಮಾಡಿಕೊಳ್ಳಬೇಕು. ಹೃದಯದ ಬಡಿತಕ್ಕೆ ರಕ್ತ ಸಂಚಾರ ಸರಿ ಇರಬೇಕು. ಹೀಗೆ ಒಂದಕ್ಕೊಂದು ಪೂರಕ. ದೇಹದ ಇರುವಿಕೆಗೆ ಉಸಿರಿನ ಅಗತ್ಯವಿದೆ.”

ಅಕ್ಷಯ ಶಕ್ತಿ

ಯೋಗಸಾಧನೆಯಿಂದ ಕ್ರಮೇಣ ಹಂತ-ಹಂತವಾಗಿ ಮನುಷ್ಯನು ಆತ್ಮವಿಕಾಸದ ತುತ್ತತುದಿಯನ್ನು ಮುಟ್ಟಬಲ್ಲ ಈ ಸಾಧನೆಗೆ ಮುಖ್ಯವಾಗಿ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿಗಳೆಂಬ ಎಂಟು ಮೆಟ್ಟಿಲುಗಳುಂಟು. ಇವನ್ನೇ ‘ಅಷ್ಟಾಂಗ ಯೋಗ’ವೆಂದು ಕರೆಯುವರು.

ಆಸನ, ಪ್ರಾಣಾಯಾಮಗಳು ಯೋಗ ಸಾಧನೆಯ ಪ್ರಾಥಮಿಕ ಅವಸ್ಥೆ ಮಾತ್ರ ಆದರೆ ‘ಶರೀರಮಾಧ್ಯಮಂ ಖಲು ಧರ್ಮಸಾಧನಂ’ (Sound mind in sound body) ಎನ್ನುವಂತೆ ಆತ್ಮವಿಕಾಸಕ್ಕೆ ಅಣಿಯಾಗಲು ಆರೋಗ್ಯಯುತವಾದ ದೇಹದಾರ್ಢ್ಯವು ಮುಖ್ಯವಾದುದರಿಂದ, ಈ ಆಸನ ಪ್ರಾಣಾಯಾಮಗಳು ಪ್ರಾಥಮಿಕಾವಸ್ಥೆಯವಾದರೂ ಪ್ರಮುಖವಾದವುಗಳೇ ಆಗಿವೆ.

ಸಾತ್ತ್ವಿಕವಾದ ಸುದೃಢ ದೇಹ ಹೊಂದಲು ಸಕಲರೂ ಈ ಯೋಗಾಭ್ಯಾಸವನ್ನು ಅವಶ್ಯವಾಗಿ ಕೈಕೊಳ್ಳಬೇಕು. ಇದಕ್ಕೆ ವಯಸ್ಸು, ಲಿಂಗಗಳ ಭೇಧವಿಲ್ಲ; ರೋಗ- ದೌರ್ಬಲ್ಯಗಳ ಕಾರಣವನ್ನು ಮುಂದೆ ಮಾಡುವ ಕಾರಣವಿಲ್ಲ. ಅಂತೆಯೇ ಯೋಗದ ಯೋಗ್ಯ ತಿಳಿವಳಿಕೆಯನ್ನು ಯೋಗಸೂತ್ರಕಾರರು ಹೀಗೆ ಕೊಡುತ್ತಾರೆ;

“ಯುವಾ ವೃದ್ಧೋsತಿ ವೃದ್ಧೋ ವಾ
ವ್ಯಾಧಿತೋ ದುರ್ಬಲೋsಪಿ ವಾ
ಆಭ್ಯಾಸಾತ್ ಸಿದ್ಧಿ ಮಾಪ್ನೋತಿ
ಸರ್ವಯೋಗೇಷ್ಟತಂದ್ರಿತಃ”

ನಮ್ಮ ದೇಹದ ಅಂಗ-ಸೂಕ್ಷ್ಮಾಂಗಗಳಿಗೂ, ಕಣಕಣಗಳನ್ನೂ ಭೇದಿಸಿ ದೇಹದ ಪೂರ್ಣಾರೋಗ್ಯವನ್ನು ಕಾಪಾಡಿಕೊಳ್ಳುವಂತೆ ಯೋಜಿಸಿದ ಈ ಯೋಗಾಸನಗಳ ಪ್ರಭಾವಯುತ ಶಕ್ತಿಯು, ನಮ್ಮ ಪೂರ್ವಜರ ಶರೀರ ವಿಷಯ ಪರಿಪೂರ್ಣ ಜ್ಞಾನವನ್ನು ಸಾರಿಸಾರಿ ಹೇಳುತ್ತದೆ.

ಈ ಯೋಗಾಸನಗಳಿಂದ ಥೈರಾಡ್ ಗ್ರಂಥಿಗಳು, ಎಂಡೋಕ್ರಾಯಿನ್ ಗ್ರಂಥಿಗಳು, ಪಿಟ್ಯೂಟರಿ ಗ್ರಂಥಿಗಳು, ಆಡ್ರೆನಲ್ಸ್(ಮೂತ್ರಾಶಯದ ಮೇಲಣ ಗ್ರಂಥಿ) ಟೆಸ್ಟೀಸ್ (ವೃಷಣಗಳು), ಮೂತ್ರಪಿಂಡಾದಿ ಗ್ರಂಥಿಗಳು ಸುಸ್ಥಿತಿಯಲ್ಲಿ ಉಳಿಯುತ್ತವೆಯಲ್ಲದೆ, ಅವುಗಳ ವಿಕಾರದಿಂದುಂಟಾಗುವ ರೋಗರುಜಿನಗಳು ಸಂಪೂರ್ಣವಾಗಿ ತಡೆಗಟ್ಟಲ್ಪಡುತ್ತವೆ.

ಈ ರೋಗನಿವಾರಕ ಅದ್ಭುತ ಶಕ್ತಿಯು ಯೋಗಾಸನ, ಪ್ರಾಣಾಯಾಮ, ಬಂಧ, ಕ್ರಿಯೆ, ಮುದ್ರೆಗಳಲ್ಲಿ ಅಡಕವಾಗಿದೆ. ಆದರೆ ಅದೇ ಪಾಶ್ಚಾತ್ಯ ಪದ್ಧತಿಯ ವ್ಯಾಯಾಮಗಳಲ್ಲಿ ಈ ಸೂಕ್ಷ್ಮತಮ ಶಕ್ತಿ ಕಂಡುಬರುವುದಿಲ್ಲ. ಅಂತೆಯೇ ಪಾಶ್ಚಾತ್ಯರು ಕೂಡ ಇತ್ತೀಚಿನ ದಶಕಗಳಲ್ಲಿ ‘ಯೋಗಾಸನ’ಗಳಿಂದ ಆಕರ್ಷಿತರಾಗಿ, ಅವರೂ ಕೂಡ ಅದನ್ನು ಆತ್ಮಸಾಥ್ ಮಾಡಿಕೊಳ್ಳುತ್ತಿರುವುದು ಭಾರತೀಯರಿಗೆ ನಿಜಕ್ಕೂ ಅಭಿಮಾನದ ಸಂಗತಿಯಾಗಿದೆ.


ಯೋಗವೆಂಬುದು ‘ಫ್ಯಾಶನ್’ ಆಗುತ್ತಿರುವ , ಪಾಶ್ಚಿಮಾತ್ಯ ಸಾಧಕರ ಗ್ರಂಥ, ಪ್ರವಚನ, ಪ್ರದರ್ಶನಗಳಿಂದ ತಿಳಿದುಕೊಳ್ಳಬೇಕಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ – ಯೋಗ ಜಗತ್ತಿಗೆ ದಾರಿದೀಪ. ಹೀಗೆ ವಿಜ್ಞಾನದಿಂದ ಬಹಿರಂಗ ಸಂಪನ್ಮೂಲವನ್ನು, ಯೋಗದಿಂದ ಅಂತರಂಗದ ಸಂಪನ್ಮೂಲವನ್ನು, ಅಭಿವ್ಯಕ್ತವಾಗುವಂತೆ ಮಾಡಿ ಬೆಳೆಸಿದರೆ ಹೊಸ ಜೀವನದ ನವ ಆಯಾಮ ನಿರ್ಮಾಣ ಆಗುವುದರಲ್ಲಿ ಸಂಶಯವಿಲ್ಲ. ಇಂತಹ ‘ಯೋಗ ವಿಜ್ಞಾನ’ ಯುಗ ಆರಂಭವಾಗಬೇಕಾಗಿದೆ.

ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು , 9739369621

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group