ಕೆ.ಜೆ.ಯೇಸುದಾಸ್ ಸಂಗೀತ ಸಂಜೆಯಲ್ಲಿ ಯೋಗಾತ್ಮ ಶ್ರೀಹರಿ ಅಭಿಮತ
ಮೈಸೂರು – ನಗರದ ಡಾ.ರಾಜ್‌ಕುಮಾರ್ ಮ್ಯೂಸಿಕಲ್ ಗ್ರೂಪ್ ವತಿಯಿಂದ ಇದೇ ಪ್ರಥಮ ಬಾರಿಗೆ ಮೈಸೂರು ಜಯರಾಂ ಸಾರಥ್ಯದಲ್ಲಿ ದಕ್ಷಿಣ ಭಾರತದ ಹೆಸರಾಂತ ಹಿನ್ನೆಲೆ ಗಾಯಕರಾದ ಕೆ.ಜೆ.ಯೇಸುದಾಸ್ ಅವರು ಹಾಡಿರುವ ‘ಅಗೋ ಬಂದನು’ ಶೀರ್ಷಿಕೆಯಡಿಯಲ್ಲಿ ಪ್ರಸಿದ್ಧ ಕನ್ನಡ ಹಾಗೂ ಕೆಲವು ಹಿಂದಿ ಮತ್ತು ತಮಿಳು ಗೀತೆಗಳನ್ನು ತಂಡದ ಕಲಾವಿದರು ಪ್ರಸ್ತುತಪಡಿಸಿದರು.
ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ಕೊಟ್ಟ ಜೆಎಸ್‌ಎಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ಯೋಗಾತ್ಮ ಡಿ.ಶ್ರೀಹರಿ ಅವರು ಮಾತನಾಡಿ, ಮೈಸೂರು ಜಯರಾಂ ಸ್ವತಃ ಕೆ.ಜೆ.ಯೇಸುದಾಸ್ ಅವರನ್ನು ಕರೆದುಕೊಂಡು ಬಂದಿದ್ದಾರೇನೋ ಎನ್ನುವಷ್ಟರಮಟ್ಟಿಗೆ ಕಾರ್ಯಕ್ರಮವನ್ನು ಆಯೋಜಿಸಿರುವುದು ಸ್ವಾಗತಾರ್ಹ ಸಂಗತಿ. ಇಡೀ ನಮ್ಮ ಭಾರತ ದೇಶ ಎಲ್ಲೋ ಒಂದು ಜಾತಿ, ಧರ್ಮಗಳ ಕಡೆ ಒಡೆದು ಹೋಗುತ್ತಿದ್ದರೆ ಅವೆಲ್ಲವನ್ನೂ ಒಂದು ಮಾಡಿದ ಮಹಾನ್ ಗಾಯಕ ಯೇಸುದಾಸ್. ಕಳೆದ ೩೦ ವರ್ಷಗಳಿಂದ ಶಬರಿ ಮಲೈನಲ್ಲಿ ರಾತ್ರಿ ದೇವರನ್ನು ಮಲಗಿಸಬೇಕಾದರೆ ಇವರು ಹಾಡಿರುವ ‘ಹರಿವಾಸನಂ’ ಹಾಡು ಹಾಕುವುದು ವಾಡಿಕೆ. ಯಾವುದೇ ಗರ್ವ ಇಲ್ಲದೇ, ಕಪಟ ಇಲ್ಲದೇ ಮಹಾನ್ ತಪಸ್ವಿ, ಯೋಗಿ ಯೇಸುದಾಸ್ ಎಂದು ತಿಳಿಸಿದರು.
ವೇದಿಕೆಯಲ್ಲಿ ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಯೇಸುದಾಸ್‌ಗೆ ಈಗ ೮೪ ವರ್ಷ ಅವರನ್ನು ಮೈಸೂರಿಗೆ ಮೈಸೂರು ಜಯರಾಂ ಕರೆದಿದ್ದಾರೆ. ಯೇಸುದಾಸ್ ಅವರು ಪ್ರತಿಯೊಂದು ಹಾಡುಗಳು ಎಂದೆಂದಿಗೂ ಅಚ್ಚ ಹಸಿರಾಗಿವೆ. ಒಂದೊಂದು ಹಾಡುಗಳೂ ಮನುಷ್ಯನ ಮೇಲೆ ಎಷ್ಟೊಂದು ಪ್ರಭಾವ ಬೀರುತ್ತದೆ ಎನ್ನುವುದು ವರ್ಣಸಲಿಕ್ಕಸಾಧ್ಯ. ನಮ್ಮ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ಕೊಟ್ಟಿರುವ ಸ್ಥಳ ಎಂದರೆ ಸಾಂಸ್ಕೃತಿಕ ನಗರಿ ಮೈಸೂರು ಎಂದು ಅವರು ಅಭಿಪ್ರಾಯಿಸಿದರು. ನಾನು ಯೇಸುದಾಸ್ ಗೀತೆಗಳನ್ನು ಕೇಳುತ್ತಿರುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಮತ್ತೊಬ್ಬ ಅತಿಥಿಯಾಗಿ ಕಲಾಪೋಷಕ ಮೋಹನ್‌ಲಾಲ್ ಜೈನ್ ಅವರು ಆಗಮಿಸಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ನಡೆದ ಕೆ.ಜೆ.ಯೇಸುದಾಸ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಗೋಪಿ ಕೃಷ್ಣ ಚಿತ್ರದ ‘ಓಹೋ ವಸಂತ’ ಗೀತೆಯನ್ನು ಮೈಸೂರು ಜಯರಾಂ ಹಾಗೂ ತೇಜಸ್ವಿನಿ ಸುಮಧುರವಾಗಿ ಹಾಡಿದರೆ, ಮಲಯ ಮಾರುತ ಚಿತ್ರದ ‘ಎಲ್ಲಲ್ಲೂ ಸಂಗೀತವೇ’ ಹಾಡನ್ನು ಮಹೇಂದ್ರ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ನಂತರ ಮನೆಯೇ ಮಂತ್ರಾಲಯ ಚಿತ್ರದ ಶೀರ್ಷಿಕೆ ಗೀತೆಯನ್ನು ಚಂದ್ರಶೇಖರ್ ಹಾಗೂ ಶಶಿಕಲಾ ಭಕ್ತಿಪೂರ್ವಕವಾಗಿ ಹಾಡಿದರು. ಇದಾದ ನಂತರ ಗುರುಬ್ರಹ್ಮ ಚಿತ್ರದ ‘ದೀಪ ದೀಪ ದೀಪ’ ಗೀತೆಯನ್ನು ಮೈಸೂರು ಜಯರಾಂ ಜೊತೆಗೂಡಿ ಜೆನಿಫರ್ ಧ್ವನಿಯಿಂದ ಮೂಡಿಬಂತು. ಸುಮಾರು ೩೫ಕ್ಕೂ ಅಧಿಕ ಕೆ.ಜೆ.ಯೇಸುದಾಸ್ ಅವರು ಹಾಡಿದ ಗೀತೆಗಳನ್ನು ಮೂರು ಗಂಟೆಗೂ ಹೆಚ್ಚು ಕಾಲ ಮಳೆಯ ಸಿಂಚನದ ನಡುವೆಯೂ ಪ್ರಸ್ತುತಪಡಿಸಲಾಯಿತು.