ಅಂತಾರಾಷ್ಟ್ರೀಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಬಳಗದ ಸoಯುಕ್ತ ಆಶ್ರಯದಲ್ಲಿ ಕಡಕೋಳ ಮಡಿವಾಳಪ್ಪನವರ ತತ್ವ ಪದಗಳು ವಿಷಯದ ಮೇಲೆ ಮಲ್ಲಿಕಾರ್ಜುನ ಕಡಕೋಳ ಅವರು 260 ವರ್ಷಗಳ ಹಿಂದಿನಿಂದಲೂ ಕಡಕೋಳದ ಪ್ರತಿ ಓಣಿಯಲ್ಲಿ ಪ್ರತಿಯೊಬ್ಬರೂ ಮಡಿವಾಳಪ್ಪನವರ ತತ್ವಪದಗಳನ್ನು ಹಾಡುತ್ತಾರೆ ಎಂದು ಹೇಳುತ್ತಾ ಮಡಿವಾಳಪ್ಪನವರ ತತ್ವಪದದೊಂದಿಗೆ ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.
ಮಡಿವಾಳಪ್ಪನವರು ಅಜಮಾಸು 260 ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಯಾವ ಮುಲಾಜು, ಭಿಡೆ ಇಲ್ಲದೆ, ಪ್ರತಿಭಟನೆಯ ಪ್ರಗತಿಪರ ಕಾವ್ಯ ರಚಿಸಿದರು. ಜೀವಪರ ಚಿಂತನೆಗಳ ಇಂತಹ ನೂರಾರು ತತ್ವ ಪದಗಳನ್ನು ಸೃಷ್ಟಿಸಿದ ಅವರನ್ನು ಕನ್ನಡ ಕಾವ್ಯ ಮೀಮಾಂಸೆ ಲೋಕ ಗುರುತಿಸಲಿಲ್ಲ. ಇವತ್ತಿಗೂ ಭಜನೆಗಳ ಮೂಲಕ ನಮ್ಮ ಜನಪದ ಲೋಕದ ಸಿರಿಕಂಠಗಳು ಈ ಪದಗಳನ್ನು ಜತನವಾಗಿಟ್ಟುಕೊಂಡಿವೆ ಎಂದು ಹೇಳುತ್ತಾ, 1955-56 ರಲ್ಲಿ ಗೌಡಪ್ಪ ಸಾಧು ಎನ್ನುವವರು ಅನಕ್ಷರಸ್ತರಾಗಿದ್ದರೂ ಕೂಡ 216 ಪದಗಳನ್ನು ಅದರ ಅಂಕಿತ ನೋಡಿ ತತ್ವಪದಗಳನ್ನು ಕಲಿತದ್ದು, ಮುಂದೆ ಎ. ಕೆ. ರಾಮೇಶ್ವರ ಸರ್ ಅವರು ಅವರು ಯಾದಗಿರಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರಕಟಿಸಿದ್ದು, ಮಡಿವಾಳಪ್ಪನವರ ತಾಯಿಯವರು ಚೌಪದಿ ರಚಿಸಿದ್ದರು
ಎನ್ನುವುದನ್ನು ಸ್ಮರಿಸಿದರು.
ಸಾಮಾಜಿಕ ಕ್ರಾಂತಿಯ ವಚನಕಾರರ ಶರಸ್ವಾಸ್ಥ್ಯ ಮತ್ತು ಭಕ್ತಿ ಮಾರ್ಗದ ಬಹುದೊಡ್ಡ ಆಂದೋಲನವೆಂದರೆ ತತ್ವಪದಗಳದ್ದು. ವಚನಗಳಿಗಿಂತಲೂ ತತ್ವಪದಗಳ ಸ್ವರೂಪ ಅತ್ಯಂತ ಸರಳ ಲೋಕದ ಬದುಕಿನ ನಿತ್ಯ ಸಂಗತಿಗಳು.ತತ್ವಪದಗಳ ತಾತ್ವಿಕ ಭೂಮಿಕೆಯ ಉಪಮೆ, ರೂಪಕಗಳಾಗಿ ಅನೇಕ ಪದಗಳ ಗರ್ಭಗಳಲ್ಲಿ ರೂಪುಗೊoಡಿವೆ.ಆದರೆ ಗುರು ಮಾರ್ಗ ಪರಂಪರೆ ತತ್ವಪದಗಳ ಬಹುಳ ಪ್ರಜ್ಞೆಯ ಮೂಲ ಧಾತು.ಅಂತೆಯೇ ತತ್ವಪದಗಳ ಜಗತ್ತು ಎನ್ನುವುದನ್ನು ಅರುಹಿದರು.
ಮಾಹಿತಿ ಒಂದರ ಪ್ರಕಾರ ಕರ್ನಾಟಕದಲ್ಲಿ ಎಲ್ಲಾ ಜಾತಿ ಮತ ಧರ್ಮಗಳ ಅಜಮಾಸು 500 ಮಂದಿ ತತ್ವಪದಕಾರರ ಐತಿಹಾಸಿಕ ಪರಂಪರೆ ಇದೆ. ಅವರನ್ನು ಅವಧೂತ ಆರೂಢ ಅಚಲ ಮುಂತಾದ ಪ್ರಾದೇಶಿಕ ಸಂವೇದನೆ ಮತ್ತು ಸಂಪ್ರದಾಯಗಳಿಂದಲೂ ಗುರುತಿಸಲಾಗಿದೆ. ಇವರು ಬೆವರು ಮತ್ತು ಭಕ್ತಿ ಸoಸ್ಕೃತಿ ಮೂಲಕ ನಿಜದ ನೆಲೆಯ ಸಾಕ್ಷಾತ್ಕಾರ ಮಾಡಿ ತೋರಿದವರು. ಅನೇಕರು ತತ್ವಪದಗಳನ್ನು ಬರೆಯದೆಯೂ ಬಹುತ್ವದ ಬಹುದೊಡ್ಡ ಅನುಭವದ ಬದುಕನ್ನು ಬಾಳಿ ಬದುಕಿ ಜೀವನದ ಸಮರ್ಥ ಸ್ವಾಸ್ಥ್ಯ ಕಾಪಾಡಿದ್ದಾರೆ ಜೊತೆಗೆ ಪರತತ್ವದ ಮಾರ್ಗ ಕಂಡುಕೊಂಡಿದ್ದಾರೆ ಎನ್ನುವುದನ್ನು ಹಂಚಿಕೊಂಡರು.
ತತ್ವ ಪದಕಾರರಲ್ಲಿ ಕಡಕೋಳ ಮಡಿವಾಳಪ್ಪನವರಿಗೆ ಅಗ್ರಮಾನ್ಯ ಸ್ಥಾನ. ಅವರನ್ನು ತತ್ವಪದಗಳ ಅಲ್ಲಮರೆಂದೇ ಗುರುತಿಸಲಾಗಿದೆ. ಮಡಿವಾಳಪ್ಪನವರ ಬದುಕು ಮತ್ತು ಸಾಧನೆ ಹಲವು ಅನನ್ಯತೆಗಳನ್ನು ಹೊಂದಿದೆ. ವಿಧವೆ ಕರಿ ಕುಲದ ಗಾಣಿಗರ ಗಂಗಮ್ಮಳ ಮಗನಾಗಿ ಹುಟ್ಟಿದ ಮಡಿವಾಳಪ್ಪನವರ ಹುಟ್ಟೇ ಬಹುದೊಡ್ಡ ಬಂಡಾಯ. ಕಡಕೋಳ ಮಡಿವಾಳಪ್ಪನವರು ಶಿಶುನಾಳ ಶರೀಫರಗಿಂತ ಅರ್ಧ ಶತಮಾನ ಮೊದಲೇ ಬಾಳಿ ಬದುಕಿದವರು. 1770 ರಿಂದ 1860 ಅವರ ಜೀವಿತಾವಧಿ ಹುಟ್ಟೂರು ಕಲ್ಬುರ್ಗಿ ಜಿಲ್ಲೆಯ ಬಿದನೂರು ಅದೇ ಕಲ್ಬುರ್ಗಿ ಜಿಲ್ಲೆಯ ಇಂದಿನ ತಾಲೂಕಿನ ಕಡಕೋಳ ಅವರ ಕಾಯಕ ಭೂಮಿ. ಅಂತೆಯೇ ಅವರು ಕಡಕೋಳ ಮಡಿವಾಳಪ್ಪನೆಂದೇ ಲೋಕಕ್ಕೆ ಬೆಳಕಾದವರು. ಶಿಶುನಾಳ ಶರೀಫ ಮತ್ತು ಕಡಕೋಳ ಮಡಿ ಮಡಿವಾಳಪ್ಪನವರಲ್ಲಿ ಮಹತ್ತರ ಸಾಮ್ಯತೆಗಳಿವೆ . ಇಬ್ಬರ ಪರಂಪರೆ ಪ್ರಜ್ಞೆಗಳು ಕನ್ನಡ ಸಾಹಿತ್ಯ ಚರಿತ್ರೆಯ ಮೈಲುಗಲ್ಲುಗಳು ಎನ್ನುವುದನ್ನು ಹಂಚಿಕೊಂಡರು.
ಕಡಕೋಳ ಮತ್ತು ಮಡಿವಾಳಪ್ಪ ಇವೆರಡು ಬೇರ್ಪಡಿಸಲಾಗದ ಗಂಡ ಭೇರುಂಡ ಸಂಬಂಧಗಳು. ಮಡಿವಾಳಪ್ಪ ಮತ್ತು ಮಡಿವಾಳೋತ್ತರ “ಕಡಕೋಳ ನೆಲದ ನೆನಪುಗಳು” ಅಲ್ಲಿನ ಹಿರೇಹಳ್ಳದ ನೀರ ನೆರಳಿನಂತೆ ಹರಿದ ದಾರಿಗಳವು. ಮಡಿವಾ ಳಪ್ಪನವರ ಪದಗಳನ್ನು ಬೇರೆಯವರು ಎಷ್ಟೇ ಚೆಂದ ಹಾಡಿರಬಹುದು ಆದರೆ ಕಡಕೋಳ ನೆಲದವರ ಕಂಠದಲ್ಲಿ ಕೇಳಿದಾಗ ಹಂಡೆ ಹಾಲು ಕುಡಿದ ಖುಷಿ. ಖರೇ ನೆನಪಿನ ಬೆವರು ಮತ್ತು ಭಕ್ತಿಯ ಅನುಸಂಧಾನಗಳು ನೆನಪುಗಳ ಸಿರಿಗೆ ಗರಿ ಮೂಡಿಸಬಲ್ಲವು ಎಂದು ನೆನಪಿಸಿದರು.
ಕಲ್ಯಾಣದ ಅಲ್ಲಮರ ವಚನ ಕಾಲದ ಮಾದರಿಯ ಅನುಭವ ಮಂಟಪ ಕಡಕೋಳದಲ್ಲಿ ಜರುಗುತ್ತಿದ್ದವು ಅಂದು ಅಲ್ಲಿ ಅಲ್ಲಮರು ಇದ್ದರೆ ಇಲ್ಲಿ ಮಡಿವಾಳಪ್ಪನವರು ಇದ್ದಾರೆ.ಇಲ್ಲಿ ತತ್ವಪದಕಾರರಿದ್ದಾರೆ ಅಲ್ಲಿ ಎಲ್ಲ ಜಾತಿಯವರಿದ್ದರು. ಇಲ್ಲಿಯೂ ಹಾಗೆಯೇ. ಬ್ರಾಹ್ಮಣರ ಕೃಷ್ಣಪ್ಪ ಮುಸ್ಲಿಮರ ಜಲಾಲ್ ಸಾಹೇಬ ಕಬ್ಬಿಗರ ಸಿದ್ದಪ್ಪ ಲಿಂಗವಂತರ ಭಾಗಮ್ಮ ಹೂಗಾರ ಕುಲದ ರಾಮಪ್ಪ ಪಾಲ್ಗೊಳ್ಳುತ್ತಾರೆ. ಹೀಗೆ ಅನುಭವ ಮಂಟಪ ಮಾದರಿಯ ಅನೇಕ ದೃಷ್ಟಾಂತಗಳನ್ನು ಮಡಿವಾಳಪ್ಪನವರ ಸಂದರ್ಭದಲ್ಲಿ ಕಾಣಬಹುದು ಎನ್ನುವುದನ್ನು ನೆನೆಸಿದರು.
ಅರಳಗುoಡಿಗಿಯಲ್ಲಿ ಶರಣಬಸಪ್ಪ ಮತ್ತು ಮಡಿವಾಳಪ್ಪ ನವರ ಸುಮಧುರ ಬಾಂಧವ್ಯದ ಶರಣತ್ವದ ಸಂಬಂಧಗಳು ಸನಾತನವಾದಿಗಳಿಗೆ ಮುಳುವಾಗುತ್ತವೆ.ಮಗ ಮಡಿವಾಳಪ್ಪನವರ ಲಿಂಗ ದೀಕ್ಷೆ ಮತ್ತು ಅಯ್ಯಾಚಾರ ಪ್ರಸಂಗಗಳಿಗೆ ಎದುರಾಗುವುದು ಮಡಿವಾಳಪ್ಪನವರ ಹುಟ್ಟಿನ ಕಾರಣಗಳು ಕರ್ಮಠ ಪ್ರಜ್ಞೆಯ ವೈದಿಕದ ಮನಸ್ಸುಗಳು ಕಠೋರವಾಗಿ ಕಾಡುತ್ತವೆ. ತನ್ಮೂಲಕ ಕಲ್ಯಾಣ ಕ್ರಾಂತಿಯ ನೆನಪುಗಳು ಅರಳ ಗುಂಡಿಗೆಯಲ್ಲಿ ಉತ್ಪಾತಗೊಳ್ಳುತ್ತವೆ. ಪರಿಣಾಮ ಸುಶೀಲ ಮನದ ಕರುಣಾಗುರು ಶರಣಬಸಪ್ಪ ಮತ್ತು ಮಡಿವಾಳಪ್ಪ ಇಬ್ಬರೂ ಅರಳಗುಂಡಗಿ ತ್ಯಜಿಸಬೇಕಾಗಿ ಬರುತ್ತದೆ ಎನ್ನುವ ಕಹಿಸತ್ಯವನ್ನು ಹೇಳಿದರು.
ಲೋಕ ಸಂಚಾರಿ ಮಡಿವಾಳಪ್ಪ ಶ್ರೇಷ್ಠ ಕೃಷಿಕರಾಗಿದ್ದರು.ಅವರು ಮಾಡಿದ ತೋಟಪಟ್ಟಿ ಕೃಷಿಯೇ ಇವತ್ತಿಗೂ ಕಡಕೋಳ ಮಠದ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಮನುಷ್ಯನ ಶರೀರಕ್ಕೆ ಬರುವ ರೋಗಗಳಿಗೆ ನೀಡುವ ಸೂಕ್ತ ಚಿಕಿತ್ಸೆ ಸೇರಿದಂತೆ ಭವರೋಗಗಳಿಗೂ ನೀಡುವ ಸೂಕ್ಷ್ಮ ಚಿಕಿತ್ಸೆ ಬಲ್ಲವರಾಗಿದ್ದರು.ಆದರೆ ಮಡಿವಾಳಪ್ಪನವರಿಗೆ
ಯಥೇಚ್ಛವಾಗಿ ಬೇಕಾಗಿದ್ದುದು ತತ್ವಪದದ ಹೋರಾಟ. ಅವರ ತತ್ವಪದಗಳು ಹೋರಾಟದ ಪ್ರತ್ಯುತ್ಪನ್ನಗಳಂತಿವೆ.
ಅಂತೆಯೇ ಇoದಿಗೂ ಅವರು ನಮ್ಮೆಲ್ಲರ ಬದುಕಿನ ಪ್ರತಿನಿಧಿ. ಎಂದು ತಮ್ಮ ಮಾತುಗಳನ್ನು ಮುಗಿಸಿದರು.
ಡಾ. ಶಶಿಕಾಂತ ಪಟ್ಟಣ ಅವರು ಗುರು -ಶಿಷ್ಯ ಪರಂಪರೆಯ ಮಹಾಂತ ಮಡಿವಾಳಪ್ಪನವರ ಮಾನಸಿಕ ಗುರುಗಳು ಕಲ್ಬುರ್ಗಿ ಶರಣ ಬಸಪ್ಪ ಅಪ್ಪನವರು ಎನ್ನುವುದನ್ನು ಹೇಳುತ್ತಾ, ಅರಳುಗುಂಡಿಗೆಯಲ್ಲಿ ಕಲ್ಯಾಣಕ್ರಾಂತಿಯ ರೀತಿಯಲ್ಲಿ ಆದ ಸಂಘರ್ಷ, ಅಲ್ಲಿ ಅವರಿಗೆ ಕಷ್ಟ ಕೊಟ್ಟದ್ದು, ಅಂಬಿಗರ ಚೌಡಯ್ಯನವರ ಹಾಗೆ ಗಣಾಚಾರಿ ವ್ಯಕ್ತಿತ್ವವನ್ನು ಹೊಂದಿದ್ದರು, ಅವರ ತತ್ವಪದಗಳು ಅತ್ಯಂತ ತೀಕ್ಷ್ಣ ವಾಗಿರುತ್ತಿದ್ದವು, ತಾವು ನಂಬಿಕೊಂಡ ತತ್ವವನ್ನು ಅವರು ಬಿಡಲಿಲ್ಲ, ಎನ್ನುವ ಅವರ ವ್ಯಕ್ತಿತ್ವ ವಿಶೇಷತೆಗಳನ್ನು ನಮ್ಮೊಂದಿಗೆ ಹಂಚಿಕೊಂಡರು.
ಶರಣೆ ನೈನಾ ಗಿರಿಗೌಡರ ಅವರ ವಚನ ಪ್ರಾರ್ಥನೆ, ಡಾ. ದಾನಮ್ಮ ಝಳಕಿ ಅವರ ಉಪನ್ಯಾಸಕರ ಪರಿಚಯ ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ, ಶರಣ ರುದ್ರಮೂರ್ತಿ ಸರ್ ಅವರ ನಿರೂಪಣೆ ಮತ್ತು ಸಂವಾದದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ