ತುಕ್ಕಾನಟ್ಟಿ: ಎನ್‌ಎಸ್‌ಎಸ್ ಶಿಬಿರಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದ ರಿಂದ ಆ ಗ್ರಾಮಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ ಎಂದು ಮೂಡಲಗಿಯ ಎಮ್.ಇ.ಎಸ್. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಸಂಗಮೇಶ ಗುಜಗೊಂಡ ನುಡಿದರು.
ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ತಮ್ಮದೇ ಆದ ಮಹತ್ವ ಪಡೆದು ಕೊಂಡಿದ್ದು, ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಜನರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಮಾಹಿತಿ ಕೊಡುವ ಕಾರ್ಯವನ್ನೂ ಈ ಶಿಬಿರಗಳು ಮಾಡುತ್ತವೆ. ವಿದ್ಯಾರ್ಥಿಗಳು ಎನ್.ಎಸ್.ಎಸ್. ನಲ್ಲಿ ತೊಡಿಗಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವ ಮೈಗೂಡಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಇನ್ನೋರ್ವ ಅತಿಥಿ ಸಾಹಿತಿ ಪತ್ರಕರ್ತ ಬಿ.ಪಿ.ಬಂದಿ ಮಾತನಾಡಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯು ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿದೆ. ಅಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಅದೃಷ್ಟಶಾಲಿಗಳು. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸರ್ವಾಂಗೀಣ ಪ್ರಗತಿ ಹೊಂದಬೇಕು ಎಂದರು.
ಶಿಬಿರಾಧಿಕಾರಿ ಎಂ.ಬಿ.ಕುಲಮೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಕುಮಾರ ಮರ್ದಿ, ಮಂಜು ಗದಾಡಿ, ಗಂಗಾರಾಮ ಗುಡಗುಡಿ, ಗುರುನಾಥ ಹುಕ್ಕೇರಿ, ಆರ್ಶಿವಾದ ಹುಲಕುಂದ, ಸಿದ್ದಪ್ಪ ಗದಾಡಿ, ಗೋಕಾಕ ತಾಲೂಕಾ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಪ್ರಕಾಶ ಕುರುಪಿ ಮುಂತಾದವರು ಉಪಸ್ಥಿತರಿದ್ದರು.
ಶಿಬಿರಾರ್ಥಿ ಅನಿತಾ ದಾಸನಾಳ ನಿರೂಪಿಸಿದರು. ಶಿಬಿರಾಧಿಕಾರಿ ಪ್ರೊ. ಶಂಕರ ನಿಂಗನೂರ ಸ್ವಾಗತಿಸಿದರು. ಸಹ ಶಿಬಿರಾಧಿಕಾರಿ ಪ್ರೊ. ಡಿ.ಎಸ್.ಹುಗ್ಗಿ ವಂದಿಸಿದರು.