
ಮೂಡಲಗಿ – ತಾಲೂಕಿನ ಕಲ್ಲೋಳಿ ಗ್ರಾಮದ ತುಕ್ಕಾನಟ್ಟಿ ರಸ್ತೆಯಲ್ಲಿ ಒಂದು ಸಾರ್ವಜನಿಕ ಮೂತ್ರಾಲಯವಿದ್ದು ಅತ್ಯಂತ ಗಬ್ಬು ನಾತ ಬೀರುತ್ತಿದ್ದರೂ ಇದರ ವಾಸನೆ ಇಲ್ಲಿನ ಪಟ್ಟಣ ಪಂಚಾಯಿತಿಯವರ ಮೂಗಿಗೆ ಬಡಿಯದೇ ಇರುವುದು ವಿಚಿತ್ರವಾಗಿದೆ.
ಸುಮಾರು ಐದಾರು ವರ್ಷಗಳ ಹಿಂದೆಯೇ ಈ ಮೂತ್ರಾಲಯದ ಬಗ್ಗೆ ಪತ್ರಿಕೆಯಲ್ಲಿ ಬರೆದು ಪಂಚಾಯಿತಿಯ ಮುಖ್ಯಾಧಿಕಾರಿಗಳನ್ನು ಎಚ್ಚರಿಸಲಾಗಿತ್ತು. ಅವರೊಡನೆ ಮಾತನಾಡಿ ಗಮನ ಸೆಳೆದಾಗ ಅವರು ಅವರು ಸ್ವಚ್ಛ ಮಾಡಿಸುವುದಾಗಿ ಹೇಳಿ ನಾಲ್ಕು ಬಕೆಟ್ ನೀರು ಸುರಿದಂತೆ ಮಾಡಿ ಕೈತೊಳೆದುಕೊಂಡಿದ್ದರು. ಈಗ ಇನ್ನೂ ಆ ಮೂತ್ರಾಲಯದ ಪರಿಸ್ಥಿತಿ ಹಾಗೆಯೇ ಇದೆ.
ಮೂತ್ರಾಲಯ ಸಾಕಷ್ಟು ದೊಡ್ಡದಿದ್ದು ಮಧ್ಯದ ಜಾಗದಲ್ಲಿ ಮೂತ್ರ ಹರಿದು ಬರುತ್ತದೆ. ಮಧ್ಯದ ಟೈಲ್ಸ್ ಗಳು ಕಿತ್ತು ಹೋಗಿವೆ. ಸಿಕ್ಕಾಪಟ್ಟೆ ಕಸ ಕಡ್ಡಿ ಬಿದ್ದು ಮೂತ್ರ ಹರಿದು ಹೋಗದೆ ಗಬ್ಬು ನಾತ ಅಲ್ಲಿನ ಸುತ್ತಮುತ್ತಲಿನ ವಾತವರಣ ಸೇರಿಕೊಂಡು ಅನಾರೋಗ್ಯ ಸೃಷ್ಟಿಸುತ್ತಿದೆ. ಇದರ ಪಕ್ಕದಲ್ಲಿಯೇ ಪ್ರಸಿದ್ಧ ಹನುಮಂತನ ದೇವಾಲಯವಿರುವುದರಿಂದ ಮಹಾರಾಷ್ಟ್ರದಿಂದಲೂ ಜನರು ಈ ದೇವಸ್ಥಾನಕ್ಕೆ ಬರುತ್ತಾರೆ. ಮೊನ್ನೆ ಹಾಗೆ ಬಂದ ಯಾತ್ರಿಕರು ಶೌಚಾಲಯದ ಪರಿಸ್ಥಿತಿ ನೋಡಿ ಮೂತ್ರ ಮಾಡದೇ ವಾಪಸ್ ಹೋಗಿದ್ದನ್ನು ನೋಡಬೇಕಾಯಿತು. ಇದು ಬೆಳೆಯುತ್ತಿರುವ ಕಲ್ಲೋಳಿಯಂಥ ನಗರಕ್ಕೂ ಶೋಭೆ ತರುವುದಿಲ್ಲ.
ಕಲ್ಲೋಳಿ ನಗರಕ್ಕೆ ನಗರೋತ್ಥಾನದಂಥ ಯೋಜನೆಗಳ ಅಡಿಯಲ್ಲಿ ಸರ್ಕಾರದ ಅನುದಾನ ಬರುತ್ತಿರಬಹುದು. ಅದರ ಸದುಪಯೋಗವಾಗಬೇಕಿದೆ. ಮಾರುತಿ ದೇವಸ್ಥಾನದ ದೆಸೆಯಿಂದಾಗಿ ಯಾತ್ರಾ ಸ್ಥಳದ ಘನತೆಯನ್ನು ಹೊಂದಿರುವ ಕಲ್ಲೋಳಿ ನಗರದ ಸ್ವಚ್ಛವಾಗಿರಬೇಕಿದ್ದು ಪಟ್ಟಣ ಪಂಚಾಯಿತಿ ಈ ಬಗ್ಗೆ ಗಮನಹರಿಸಬೇಕು. ನಗರದಲ್ಲಿ ಮೂಲಭೂತ ಸೌಲಭ್ಯಗಳು ಹೆಚ್ಚಬೇಕು. ಯಾತ್ರಾರ್ಥಿಗಳಿಗೂ ಶೌಚಾಲಯ, ವಸತಿಯಂಥ ಸೌಲಭ್ಯಗಳು ಹೆಚ್ಚಬೇಕು, ಸುತ್ತಮುತ್ತ ಇರುವ ವಿಠ್ಠಲ ದೇವಸ್ಥಾನ, ಐತಿಹಾಸಿಕ ಮಲ್ಲಿಕಾರ್ಜುನ ದೇವಸ್ಥಾನ, ಶ್ರೀ ಲಕ್ಷ್ಮೀ ದೇವಸ್ಥಾನಗಳು, ಮಧ್ಯದ ಬಸವೇಶ್ವರ ವೃತ್ತದ ಸುತ್ತಮುತ್ತಲಿನ ಪರಿಸರ ಹಾಗೂ ಪಟ್ಟಣದಲ್ಲಿ ಇರುವ ಐತಿಹಾಸಿಕ ಸ್ಥಳಗಳು ಕೂಡ ಅಭಿವೃದ್ಧಿ ಯಾಗಬೇಕಾಗಿದೆ.
ಪಟ್ಟಣ ಪಂಚಾಯಿತಿಯವರು ಸ್ವಚ್ಚತಾ ಕಾರ್ಯವನ್ನು ಈ ಮೂತ್ರಾಲಯದಿಂದಲೇ ಆರಂಭಿಸಬೇಕಾಗಿದೆ.
ಉಮೇಶ ಬೆಳಕೂಡ
ಮೂಡಲಗಿ