ಶ್ರೀ ಕನಕ ದಾಸರ ಜಯಂತಿ ನಿಮಿತ್ತ ಪದಪುಷ್ಪಗಳು
ಶ್ರೀ ಕನಕ ದಾಸರು ಮತ್ತು ಶ್ರೀ ಪುರಂದರ ದಾಸರು ಸಮಕಾಲೀನರು. ದಾಸ ಸಾಹಿತ್ಯ ವೃಕ್ಷವನ್ನು ಹೆಮ್ಮರವಾಗಿ
ಮಾಡಿದವರು. ಇವರ ಸಾಹಿತ್ಯಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ. ಹಾಗೇ ಇಬ್ಬರು ದಾಸವರೇಣ್ಯರು ಮೂಢನಂಬಿಕೆ.. ಭೇಧಭಾವ ತೊಡೆದು ಹಾಕಲು , ಸಮಭಾವತ್ವ ಬೀರುವ ಸಾಹಿತ್ಯಗಳನ್ನು
ರಚಿಸಿದ್ದಾರೆ..
ಶ್ರೀ ಕನಕದಾಸರು ಸಾಹಿತ್ಯಗಳಲ್ಲಿ ಹೆಚ್ಚಾಗಿ ವೈರಾಗ್ಯ ಪದಗಳು, ಗೂಡಾರ್ಥ ಹೊಂದಿದ ಸಾಹಿತ್ಯ ಕೃತಿಗಳು ಇವೆ.
ಮುಂಡಿಗೆಗಳು ಇವೆ. “ಕನಕನ ಕೆಣಕಬೇಡ, ಕೆಣಕಿ ತಿಣಕ ಬೇಡ “ಎಂಬ ಪ್ರಸಿದ್ಧ ಉಕ್ತಿ ಇದೆ.
ಇವರ ಮೊದಲ ಹೆಸರು ತಿಮ್ಮಪ್ಪ ನಾಯಕ. ಇವರಿಗೆ ಒಮ್ಮೆ ಭೂಮಿ ಅಗೆಯುತ್ತಿರುವಾಗ ಅಪಾರ ಧನಕನಕ ರಾಶಿಗಳ ದೊರೆಯಿತು. ಅಂದಿನಿಂದ ಜನರು ಇವರಿಗೆ ಕನಕಪ್ಪ ನಾಯಕ ಎಂದು ಕರೆಯುತ್ತಿದ್ದರು.
ಒಳ್ಳೆಯ ಸುಜೀವಿಯು ಹೌದು. ಆದರೆ ಜೀವನದ ವ್ಯಾಮೋಹ ಅಂಟಿಕೊಂಡಿತ್ತು. ಅನೇಕ ಸಲ ತಿರುಪತಿ ವೆಂಕಪ್ಪನು ಕನಸಿನಲ್ಲಿ ಬಂದು ನನ್ನ ದಾಸನಾಗುತ್ತೀಯಾ, ಎಂದು ಕೇಳಿದಾಗ,.. ನಾನೇಕೆ ನಿನ್ನ ದಾಸನಾಗಲಿ ನಾನು ಪಾಳೇಗಾರನಿರುವೆ ಎಂದು ಹೇಳುತ್ತಿದ್ದರು. ಕಾಲಾಂತಾರದಲ್ಲಿ ತಂದೆತಾಯಿ, ಸತಿ ತೀರಿಕೊಂಡರು. ಆಗ ಆಗ ಜೀವನದಲ್ಲಿ ನಿರ್ಲಿಪ್ತತೆ ಬಂದಿತ್ತು.
ಭಗವಂತ ತನ್ನ ಭಕ್ತರಿಗೆ ಮೊದಲು ನೋವನ್ನು ಕೊಟ್ಟು ಪರಿಪಕ್ವನ್ನಾಗಿ ಮಾಡಿ ಒಲಿವನು ಎಂದು ಇದರಿಂದ ತಿಳಿದು ಬರುತ್ತದೆ. ಒಮ್ಮೆ ಯುದ್ಧ ಪ್ರಸಂಗ ಒದಗಿ ಬಂದಾಗ ಶತ್ರು ಪಾಳೆಗಾರರು ಗೆದ್ದರು. ಇವರ ಶರೀರ ಬಾಣಗಳಿಂದ ಜರ್ಜರಿತವಾದಾಗ ತಮ್ಮ ಆರಾಧ್ಯ ದೇವನಾದ ಕೇಶವ ದೇವರನ್ನು ಕರೆದು ಮೂರ್ಛೆ ಹೋದಾಗ, ತಿರುಪತಿ ತಿಮ್ಮಪ್ಪನೆ ಕೇಶವನ ರೂಪದಲ್ಲಿ ಬಂದು ಉಪಚರಿಸಿದನು. ನೀನ್ಯಾರು ಎಂದಾಗ, ನೀನು ನನ್ನ ದಾಸನಾಗುವೆಯಾ ಎ೦ದು ಕೇಳಿದಾಗ ವೆಂಕಪ್ಪನು ತನ್ನ ನಿಜ ದರ್ಶನ ತೋರಿಸಿ ಮಾಯವಾದನು.
ಒಂದು ಸ್ವಪ್ನದಲ್ಲಿ ಶ್ರೀ ವ್ಯಾಸರಾಯರ ಶಿಷ್ಯತ್ವ ಪಡೆದುಕೊಳ್ಳಲು ಭಗವಂತನ ಅಜ್ಞೆ ಆಯಿತು. ಆಗ ವ್ಯಾಸರಾಯರು ಮದನಪಲ್ಲಿ ಪ್ರಾಂತದಲ್ಲಿದ್ದರು. ಅಲ್ಲಿ ವ್ಯಾಸರಾಯರು ಒಂದು ಸೇತುವೆಯನ್ನು ಕಟ್ಟಿಸುತ್ತಿದ್ದರು, ಅದಕ್ಕೆ ಒಂದು ದೊಡ್ಡ ಬಂಡೆಗಲ್ಲು ಅಡ್ಡ ಬಂದಿತ್ತು, ಯಾರಿಂದಲೂ ತೆಗೆಯಲು ಆಗುತ್ತಿರಲಿಲ್ಲ, ಅದೇ ವೇಳೆಗೆ ಕನಕರು ಬಂದರು, ಶ್ರೀ ವ್ಯಾಸರಾಯರನ್ನು ಕಂಡು ಕೂಡಲೇ ನಿಮ್ಮ ಮಂತ್ರೋಪದೇಶಕ್ಕೆ ಬಂದಿರುವೆ ಎಂದು ಕನಕರು ಹೇಳಿದರು. ” ಕುರುಬನಿಗೆ ಮಂತ್ರವೋ ಕೋಣ ಮಂತ್ರವೋ ” ಎಂದು ಪರೀಕ್ಷಿಸಲು ಕೇಳಿದಾಗ
ಸ್ವಾಮಿ ನನಗೆ ಅಷ್ಟೇ ಸಾಕು ನಿಮ್ಮ ಮಂತ್ರ ಎಂದು ಕನಕರು “ಕೋಣ” ಎಂದು ಜಪಿಸುತ್ತಾ ಕುಳಿತರು.
ಜಪಿಸುತ್ತಿರಲು ಯಮದೇವರ ಕೋಣ ಎದುದುರಿಗೆ ಬಂದು ನಿಂತಿತ್ತು. ಶ್ರೀ ವ್ಯಾಸರಾಯರ ಮುಂದೆ ಆ ಕೋಣವನ್ನು ನನ್ನ ತಂದು ನಿಲ್ಲಿಸಿ ಇದರಿಂದ ಏನು ಕೆಲಸ ಮಾಡಿಸಲಿ ಎಂದು ಕೇಳಿದರು. ಶ್ರೀ ವ್ಯಾಸರಾಯರು
ಈ ಬಂಡೆಯನ್ನು ಕಿತ್ತು ಒಗೆಸು ಎಂದರು. ಕೊಡಲೇ ಆ ಕೋಣ ಆ ಬಂಡೆಯನ್ನು ತನ್ನ ಕೋಡಿನಿಂದ ಪುಡಿಪುಡಿ ಮಾಡಿತು. ಶ್ರೀ ವ್ಯಾಸರಾಯರು ಶ್ರೀ ಕನಕರಿಗೆ ಉಪದೇಶ ಕೊಟ್ಟು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡರು. ನಿತ್ಯದಲ್ಲಿಯೂ ಅವರಲ್ಲಿ ಪಾಠ, ಚಿಂತನ ಮಂಥನ ನಡೆಯುತ್ತಿತ್ತು. ಈ ವೇಳೆಯಲ್ಲಿ ಪ್ರಾಸಂಗಿಕವಾಗಿ ತಮ್ಮ ಗುರುಗಳ ಆದೇಶದಂತೆ ತಮ್ಮ ತಪೋಶಕ್ತಿಯಿಂದ ಅನೇಕ ಅಘಟಿತ ಘಟನೆಗಳನ್ನು ತೋರಿಸಿದ್ದಾರೆ.
ಶ್ರೀ ಪುರಂದಾಸರು ಮತ್ತು ಶ್ರೀ ಕನಕದಾಸರು ನಿತ್ಯವು ಶ್ರೀವ್ಯಾಸರಾಯರ ಬಳಿಯಲ್ಲಿ ಚಿಂತನೆ ವಿಮರ್ಶೆ ಮಾಡುತ್ತಿದ್ದರು. ತದನಂತರ ಶ್ರೀ ಕನಕದಾಸರು
ತೀರ್ಥ ಯಾತ್ರೆಗಳನ್ನು ಮಾಡುತ್ತಾ ಸಂಚರಿಸುತ್ತಿದ್ದರು.
ಉಡುಪಿಗೆ ಬಂದಾಗ ಅದೇ ವೇಳೆಗೆ ಶ್ರೀ ವಾದಿರಾಜರು ಸಂಚಾರ ಮುಗಿಸಿ ಬಂದರು. ಕನಕದಾಸರನ ತಮ್ಮ ಜೊತೆಯಲ್ಲಿ ಇರಿಸಿಕೊಂಡು ಪ್ರತಿನಿತ್ಯ ರಾತ್ರಿ
ಶ್ರೀ ವಾದಿರಾಜರು ಮತ್ತು ಶ್ರೀ ಕನಕದಾಸರು ಶ್ರೀ ಕೃಷ್ಣನ ಭಜನೆ ಮಾಡುತ್ತಿದ್ದರು.
ಮುಂದೆ ಯಾತ್ರೆ ಏನು ಮಾಡುತ್ತಾ ಬೇಲೂರಿಗೆ ಬಂದಾಗ
ಶ್ರೀ ವೈಕುಂಠ ದಾಸರ ಮನೆಯ ಮುಂದೆ ಕಂಬಳಿಯನ್ನು ಹೊದ್ದು ಕೊಂಡು ಕೋಲನ್ನು ಹಿಡಿದ ವ್ಯಕ್ತಿಯನ್ನು ಗುರುತಿಸಲಿಲ್ಲ. “ಆದಿ ಕೇಶವ” ಎಂಬ ಅಂಕಿತದಿಂದ ಹಾಡಿದಾಗ ಇವರು ಕನಕದಾಸರೆಂದು ಗುರುತಿಸಿದರು.
ದ್ವಯ ದಾಸರು ಅಪರೋಕ್ಷ ಜ್ಞಾನಿಗಳು. ಶ್ರೀ ಕನಕದಾಸರು ಕೇಶವನ ಉಪಾಸಕರವಾದರೆ, ಶ್ರೀ ವೈಕುಂಠ ದಾಸರು ಕೀರ್ತನ ಗಾಯನ ನರ್ತನ ಮಾಡುವರು. ಉಭಯತರು ಭಗವಂತನ ಉಪಾಸಕರು.
ಶ್ರೀ ಕನಕದಾಸರ ಒಗಟನ್ನು ಹಾಡಿದರೆ ಶ್ರೀ ವೈಕುಂಠ ದಾಸರ ಅರ್ಥವನ್ನು ಹೇಳುತ್ತಿದ್ದರು.
ಶ್ರೀ ಕನಕದಾಸರು ಸಾಮಾಜಿಕವಾಗಿ ಸಾಹಿತ್ಯ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವರು. ಅವರ ಕುಲದವರು ಕುಲ ದೇವಿ ಜಾತ್ರೆಗೆ ನೀವು ಕುಲಸ್ಥರು ಹಿರಿಯರು ಬರಬೇಕೆಂದು ಕೇಳಿದಾಗ ನೀವು ಪ್ರಾಣಿ ಬಲಿಯನ್ನು ಕೊಡುವುದ ನಿಲ್ಲಿಸಿದರೆ ಮಾತ್ರ ಬರುವೆನೆಂದು ಹೇಳಿದರು. ಆಗ ಅಲ್ಲಿಯ ಜನರು ಒಪ್ಪಿ ಪ್ರಾಣಿ ಬಲಿಯನ್ನು ಕೊಡುವುದನ್ನು ನಿಲ್ಲಿಸಿದರು.
ಆ ವೇಳೆಯಲ್ಲಿ ಒಂದು ಕೀರ್ತನೆಯನ್ನು ರಚಿಸಿದರು.
“ಕಣಿಯ ಹೇಳ ಬಂದೆ ನಾರಾಯಣನಲ್ಲದಿಲ್ಲವೆಂದು
ಬಿನುಗು ದೈವದಗೊಡವೆ ಬೇಡಿ ನರಕ ತಪ್ಪದೊ /ಪತೂಳದವರ ಮಾತು ಕೇಳಿ ಖೂಳರೆಲ್ಲರು ಕೂಡಿಕೊಂಡು
ಹಾಳು ಮಾಡಿ ಕೈಯಲ್ಲಿದ್ದ ಹೊನ್ನು ಹಣಗಳ
ಬಾಳುತಿಪ್ಪ ಕೋಣ ಕುರಿಯ ಏಳಬೀಳ ಕೊರಳ ಕೊಯ್ದು
ಬೀಳಬೇಡಿ ನರಕಕೆಂದು ಹೇಳ ಬಂದನೋ
_____ ______ ______
ಪೊಡವಿಗಧಿಕ ವಿಜಯನಗರದೊಡೆಯ ಕಟ್ಟೆ ವೆಂಕಟೇಶ
ಕಡಚೆಲ್ಲ ಸತ್ವದದಿರ ಕನಕನೊಡೆಯನ
ಬಾಡದಾದಿ ಕೇಶವನ ಪಾದ ಬಿಡದೆ ಭಕ್ತಿಯಿಂದ ಭಜಿಸಿ
ಇಂಥ ಜಡದೈವದ ಗೊಡವೆ ಬೇಡ ನರಕತಪ್ಪದು
ಈ ಕೀರ್ತನೆಯ ಐದು ನುಡಿಗಳದ್ದಾಗಿದೆ. ಈ ಕೀರ್ತನೆಯಲ್ಲಿ ಸಮಾಜದಲ್ಲಿ ಬರುವ ಮೂಢನಂಬಿಕೆ ಆಚಾರಗಳ ಕೆಲವೊಂದು ಉದಾಹರಣೆಗಳನ್ನು ಕೊಡುತ್ತಾ
ನೀತಿಯನ್ನು ಸಾರಿದ್ದಾರೆ.
ಪ್ರಸಿದ್ಧ “ಕುಲ ಕುಲ ಕುಲವೆಂದು ಹೊಡೆದಾಡಿರಬೇಡ” ಎಂಬ ಕೀರ್ತನೆಯಲ್ಲಿ ಜಾತಿ ಮತ ಪಂಥ ಎಂಬ ಶ್ರೇಷ್ಠತೆಯಲ್ಲಿ ಎಂದು ಹೊಡೆದಾಡ ಬೇಡಿರರೆಂದು ಹೇಳಿದ್ದಾರೆ.
ಇವರು ರಚಿಸಿದ್ದ ಕೇಶವನಾಮವನ್ನು ಎಲ್ಲ ಜನರು ನಿತ್ಯ ಜೀವನದಲ್ಲಿ ಸ್ತೋತ್ರವನ್ನು ಮಾಡುತ್ತಾರೆ.
ಭಾಮಿನಿ ಷಟ್ಪದಿಯಲ್ಲಿ ಹರಿಭಕ್ತಸಾರವನ್ನು ರಚಿಸಿದರು.
ಮೋಹನ ತರಂಗಿಣಿ ಇನ್ನು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕೊನೆಯ ಕಾಲದಲ್ಲಿ ಕಾಗಿನೆಲೆಯಲ್ಲಿ ತಾವೇ ಕಟ್ಟಿಸಿದ ಕೇಶವನ ಸನ್ನಿಧಾನದಲ್ಲಿ ದಿನ ಕಳೆದರು.
ಒಟ್ಟಾರೆ ಹೇಳುವದೆಂದರೆ ಭಗವಂತ ಒಲಿಯಬೇಕಾದರೆ
ಯಾವ ಜಾತಿ ಮತ ಪಂಥ ನೋಡುವುದಿಲ್ಲ. ಹಾಗೆ ಇಲ್ಲಿ ಕಾಣುವುದಾದರೆ ಯಾವ ಪಂಕ್ತಿಯ ತಾರತಮ್ಯವಿಲ್ಲದೆ
ಸಮಾನ ಜ್ಞಾನ ಚಿಂತನ ಮಂಥನ ನಡೆಯುವ ಕಾಲವಿತ್ತು ಎಂದು ತಿಳಿಯಬಹುದು. ಹೀಗಾಗಿ ಸಮಾಜಕ್ಕೆ ಜ್ಞಾನಿಗಳು ಹಿರಿಯರು ದಾಸರು, ಶರಣರು, ಸಂತರು ಒಳ್ಳೆಯ ಮಾರ್ಗದರ್ಶನವನ್ನೇ ಮಾಡಿದ್ದಾರೆ ಎಂದು ತಿಳಿಯಬೇಕಲ್ಲವೇ..?
ಪ್ರಿಯಾ ಪ್ರಾಣೇಶ ಹರಿದಾಸ