ಸಿಂದಗಿ- ಕನಕದಾಸರ ಸಾಹಿತ್ಯ ಶ್ರೇಷ್ಠವಾದುದ್ದು ಮತ್ತು ಅದರಲ್ಲಿ ಅತ್ಯಂತ ಮಹತ್ತರವಾದ ಸೃಜನಶೀಲತೆ ಇದೆ ಆದರೆ ಇಂದಿನ ಸಮಾಜ ಅದರ ಬಗ್ಗೆ ಅಧ್ಯಯನವಾಗಲಿ, ಚರ್ಚೆಯಾಗಲಿ, ಚಿಂತನೆಯಾಗಲಿ ಮಾಡುತ್ತಿಲ್ಲ ಇದರಿಂದ ಆ ಸಾಹಿತ್ಯ ಸೊರಗುತ್ತಿದೆ ಎಂದು ಯಕ್ಕುಂಡಿ ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಡಾ.ವೈ.ಎಂ.ಯಾಕೊಳ್ಳಿ ವಿಷಾದ ವ್ಯಕ್ತ ಪಡಿಸಿದರು.
ಪಟ್ಟಣದ ಬಂದಾಳ ರಸ್ತೆಯಲ್ಲಿನ ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ರವಿವಾರ ಶ್ರೀ ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿ ಬೆಂಗಳೂರು ಮತ್ತು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಕನಕ ಸಾಹಿತ್ಯ ಸಂವತ್ಸರ ರಜತ ಉಪನ್ಯಾಸ ಹಾಗೂ ರಕ್ಷಿಸು ನಮ್ಮನ್ನು ಅನವರತ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಸಮಾಜದಲ್ಲಿ ನಾನು, ನನ್ನಿಂದಲೇ ಎಂಬ ಭಾವನೆ ಮೇಳೈಸುತ್ತಿದ್ದು, ನಾನು ಎಂಬ ಅಹಂ ತೊಲಗಿ ಆ ಜಾಗದಲ್ಲಿ ನಾವು ಎಂಬ ಭಾವನೆ ಬೆಳೆದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಆ ಆದರ್ಶ ಅನುಷ್ಠಾನವಾಗಬೇಕಾದರೆ ಕನಕದಾಸರ ಸಾಹಿತ್ಯ ಅತ್ಯಂತ ಪ್ರಸ್ತುತ ಎಂದರು.
ಕಾರ್ಯಕ್ರಮವನ್ನು ಪುರಸಭೆಯ ಮಾಜಿ ಅಧ್ಯಕ್ಷ ಬಸಲಿಂಗಪ್ಪ ಗೊಬ್ಬೂರ ಉದ್ಘಾಟಿಸಿ ಮಾತನಾಡಿ, ಕನಕದಾಸರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅಂಧಕಾರದಲ್ಲಿ ಸಿಲುಕಿದ ಸಮಾಜವನ್ನು ತಮ್ಮ ಸಂದೇಶಗಳ ಮೂಲಕ ಸ್ವಾಸ್ಥ ಸಮಾಜ ಮಾಡುವಲ್ಲಿ ನಿರಂತರ ಹೋರಾಟ ಮಾಡಿದಂತವರು. ಇಂದಿನ ಯುವ ಜನಾಂಗ ಕನಕದಾಸರ ಸಾಹಿತ್ಯವನ್ನು ಹೆಚ್ಚು ತಿಳಿದುಕೊಂಡು ಪ್ರಜ್ಞಾವಂತರಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.
ಈ ವೇಳೆ ‘ರಕ್ಷಿಸು ನಮ್ಮನ್ನು ಅನವರತ’ ಕೃತಿ ಬಿಡುಗಡೆಗೊಳಿಸಿದ ತಾಳಿಕೋಟೆಯ ಮುಖ್ಯಶಿಕ್ಷಕ ದೇವರಾಜ ಬಾಗೇವಾಡಿ, ಅಧ್ಯಕ್ಷತೆ ವಹಿಸಿದ ಸಿಂದಗಿ ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ದಾಸ ಪರಂಪರೆಗೆ ಅನೇಕ ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರವಿದೆ ಎಂದರು.
ವೇದಿಕೆ ಮೇಲೆ ಶಿವರಾಯ ನಾಗೂರ, ವಿವೇಕ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶಾಹಿಮೋಲ್ ಆರ್, ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗನದೊಡ್ಡಿ, ಪಾಂಡುರಂಗ ಜಟಗನ್ನವರ, ಕನಕದಾಸರ ಸಾಹಿತ್ಯ ಪ್ರಚಾರ ಸಮಿತಿಯ ರಾಜ್ಯ ನಿರ್ವಹಣಾಧಿಕಾರಿ, ಕೃಷ್ಣಾ ಖಾನಾಪೂರ, ಮಾರುತಿ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮದ ನಂತರ ನಡೆದ ಶ್ರೀ ಕನಕ ಕವಿಗೋಷ್ಠಿ ಸಮಾರಂಭದಲ್ಲಿ ನಾಡಿನ ಸುಮಾರು ೨೫ ಕ್ಕೂ ಹೆಚ್ಚು ಯುವ ಕವಿಗಳು ಕನಕದಾಸರ ಕುರಿತು ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ರಾಯಪ್ಪ ಇವಣಗಿ, ಆರ್.ಕೆ.ಪಾಟೀಲ, ಎಮ್.ಜಿ.ಯಂಕಂಚಿ, ಮಾಂತೇಶ ಯಡಗಿ, ಜಿ.ಎಸ್.ತಾವರಕೇಡ, ಎ.ವಾಯ್.ತಳಗೇರಿ, ಎಸ್.ಎಸ್.ಕುರನಳ್ಳಿ, ಎಲ್.ಎಸ್.ಪರಮಾನಂದ, ಆರ್.ಆಯ್.ಹೂಗಾರ, ಎಮ್.ಬಿ.ಮಾಕೊಂಡ, ಎಮ್.ಎಸ್.ಗುಂದಗಿ, ಹಿರಗಪ್ಪ ಪೂಜಾರಿ, ಪಿ.ಎಸ್.ಹಚ್ಯಾಳ ಸೇರಿದಂತೆ ಅನೇಕರು ಇದ್ದರು.