ಮುಸ್ಸಂಜೆ ಸಮಯ.. ನದಿ ತೀರದಿ ರಾಧೆ ಎಂಬ ಹುಡುಗಿ.. ಕೃಷ್ಣಾ ಎಂಬ ತನ್ನೊಲವಿನ ಹುಡುಗನಿಗಾಗಿ ಕುಳಿತ ಸನ್ನಿವೇಶವನ್ನು ಕಲ್ಪಿಸಿಕೊಳ್ಳುತ್ತಾ.. ಈ ಕವಿತೆಯನ್ನು ಓದುತ್ತಾ ಹೋಗಿ.. ಕಡೆಗೊಮ್ಮೆ ರಾಧೆಯಲ್ಲಿ ಪರಕಾಯ ಪ್ರವೇಶ ಮಾಡಿಬಿಡಿ. ಕವಿತೆಯ ಪದ ಪದವೂ ಹೃದ್ಯವಾದೀತು. ರಾಧೆಯ ತಲ್ಲಣ, ರಿಂಗಣ ನಿಮ್ಮೊಳಗೇ ಸಾಧ್ಯವಾದೀತು..”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ಶ್ಯಾಮನಿಲ್ಲದ ಶ್ಯಾಮಲ.!
ಶ್ಯಾಮನಿಲ್ಲದ ಸಂಜೆಯಾ ಹೊತ್ತು
ಯಮುನೆದಡ ಬಿಕೋ ಎನ್ನುತಿತ್ತು
ಮರಗಿಡಗಳಿಗೆ ಮಂಕು ಕವಿದಿತ್ತು
ರಾಧೆಯ ಕೊರಳುಬ್ಬಿ ಬಿಕ್ಕುತ್ತಿತ್ತು.!
ಪಡುವಣದಂಬರ ಬರಿದಾಗುತ್ತಿತ್ತು
ಹಕ್ಕಿ ಗೂಡಬಾಗಿಲನು ಕುಕ್ಕುತ್ತಿತ್ತು
ಸುಳಿವ ತಂಗಾಳಿಗೂ ಗರ ಬಡಿದಿತ್ತು
ರಾಧೆಯ ಕಣ್ಣಾಲಿ ಭಾರವಾಗುತ್ತಿತ್ತು.!
ಚಂದಿರನಿಗೂ ಮನಸಿಲ್ಲದ ಹೊತ್ತು
ಗಾಢಾಂಧಕಾರ ಮುಗಿಲ ರಾಚುತ್ತಿತ್ತು
ಗೋವುಗಳ ಹೆಜ್ಜೆ ದಿಗ್ಭ್ರಾಂತವಾಗಿತ್ತು.!
ರಾಧೆಯ ಕಣ್ಣಂಚು ಹನಿಗೂಡಿತ್ತು.!
ದಿಗ್ದಿಗಂತಕು ಬಾಸುರಿ ನೆನಪಾಗುತ್ತಿತ್ತು
ನೀರವ ನಿಶ್ಶಬ್ಧ ಮನೆಮಾಡುತ್ತಿತ್ತು
ನಿಸರ್ಗದ ಕಣಕಣ ನಿಟ್ಟುಸಿರಿಡುತ್ತಿತ್ತು
ರಾಧೆಯ ಕಂಬನಿ ಉಕ್ಕುಕ್ಕಿ ಹರಿದಿತ್ತು.!
ಹಿಡಿದ ನವಿಲಿನ ಗರಿ ಬಾಡುತ್ತಿತ್ತು
ಆ ಕೊಳಲಿನ ದನಿ ಕಾಡುತ್ತಿತ್ತು
ತನುಮನ ನಿತ್ರಾಣದಿ ಕುಸಿಯುತ್ತಿತ್ತು
ರಾಧೆಯ ಕೆನ್ನೆ ಒದ್ದೆಯಾಗುತ್ತಿತ್ತು.!
ಚಲಿಸುವ ಕಾಲ ಯಾರ ಸ್ವತ್ತು..?
ತನ್ನ ಪಾಡಿಗೆ ತಾನು ಜಾರುತ್ತಿತ್ತು.
ಎದೆಗಾಯದ ಮೇಲೆ ಗೀರುತ್ತಿತ್ತು
ನೆನಪಿನ ನೆತ್ತರು ಸೋರುತ್ತಿತ್ತು.!
ರಾಧೆಯ ಹೃದಯ ಚೀರುತ್ತಿತ್ತು..!!
ಎ.ಎನ್.ರಮೇಶ್. ಗುಬ್ಬಿ.