ಕನ್ನಡ ನಾಡು, ನುಡಿ, ನೆಲ,ಜಲ ಸಂರಕ್ಷಣೆಯ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ರೂಪುಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ನಾಡು-ನುಡಿಯ ಅಭ್ಯುದಯ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ದಿವಾನರಾದ ಸರ್ ಎಂ.ವಿಶ್ವೇಶ್ವರಯ್ಯ ಅವರ ಕನಸಾಗಿತ್ತು.1915 ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉದ್ಘಾಟಿಸಿದ ಕರ್ನಾಟಕ ಸಾಹಿತ್ಯ ಪರಿಷತ್ತು ನಂತರದ ವರ್ಷಗಳ ಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಗಿ ಬದಲಾವಣೆ ಆಯ್ತು. ಇಂತಹ ಮಹದುದ್ದೇಶದ ಹಿನ್ನೆಲೆ ಇರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ಮನೆಗೊಬ್ಬರು ಸದಸ್ಯರಾಗಬೇಕು. ಆ ಮೂಲಕ ಕನ್ನಡ ನಾಡು-ನುಡಿಯ ಅಭ್ಯುದಯಕ್ಕೆ ಕಾರಣರಾಗಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಕರೆ ನೀಡಿದರು.
ಸಾಲಿಗ್ರಾಮದಲ್ಲಿ ನಡೆದ ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ೧೦೮ ನೇ ಸಂಸ್ಮರಣಾ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್, ಜಿ.ನಾರಾಯಣ, ಡಾ.ಹಂಪನಾ, ಡಾ.ಚಂಪಾ ಸೇರಿದಂತೆ ಸುಮಾರು ಇಪ್ಪತೈದು ಮಂದಿ ಗಣ್ಯರು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇದೀಗ ಕ.ಸಾ.ಪ.ದ ಇಪ್ಪತ್ತಾರನೇ ಅಧ್ಯಕ್ಷರಾಗಿ ಡಾ.ಮಹೇಶ್ ಜೋಷಿ ಅವರು ಪರಿಷತ್ತಿಗೆ ಹೊಸಹೊಳಪು ನೀಡಲಾರಂಬಿಸಿದ್ದಾರೆ. ಕ.ಸಾ.ಪ. ಸದಸ್ಯತ್ವ ಶುಲ್ಕವನ್ನು 250 ರೂ.ಗಳಿಗೆ ಇಳಿಸುವ ಮೂಲಕ ಸಾಹಿತ್ಯ ಪರಿಷತ್ತು ಜನಸಾಮಾನ್ಯರ ಪರಿಷತ್ತಾಗಲು ಕಾರಣರಾಗಿದ್ದಾರೆ. ಶಿಕ್ಷಕರು, ಜನಪ್ರತಿನಿಧಿಗಳು, ಪದವೀಧರರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರಾಗುವ ಮೂಲಕ ನಾಡು-ನುಡಿಯ ಅಭ್ಯುದಯಕ್ಕೆ ಕಾರಣರಾಗಬೇಕೆಂದು ಅವರು ಕರೆ ನೀಡಿದರು.
ಕನ್ನಡ ಭಾಷೆ ವಿಶ್ವದಲ್ಲಿಯೇ ಅತ್ಯಂತ ಅದ್ವಿತೀಯ ಭಾಷೆ. ಕನ್ನಡ ಭಾಷೆಯ ಎಂಟು ಮಂದಿ ಹಿರಿಯ ಸಾಹಿತಿಗಳಿಗೆ ಜ್ಞಾನ ಪೀಠ ಪ್ರಶಸ್ತಿ ದೊರೆತಿದೆ. ಕನ್ನಡದ ಅರವತೈದು ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಇಂತಹ ಕನ್ನಡ ನಾಡು-ನುಡಿಯ ಪ್ರಗತಿಗೆ ಎಲ್ಲರೂ ಶ್ರಮಿಸಬೇಕೆಂದವರು ನುಡಿದರು.
ಸಾಲಿಗ್ರಾಮ ದ ಸಾರಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸಾರಾ ರವೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಲಿಗ್ರಾಮ ನೂತನ ತಾಲ್ಲೂಕು ರಚನೆಯಾಗಿದೆ.ಇದೀಗ ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ತಾಲ್ಲೂಕು ಘಟಕವೂ ಆರಂಭಗೊಂಡಿದೆ . ಇದು ಸಂತಸದ ವಿಚಾರ ಎಂದು ನುಡಿದರು. ಶ್ರೀ ಯೋಗಾನರಸಿಂಹ ವಿದ್ಯಾಸಂಸ್ಥೆ ಯ ಕಾರ್ಯನಿರ್ವಾಹಕ ಅಧ್ಯಕ್ಷ ರಾದ ಪ್ರೇಮಕುಮಾರ್ ಜೈನ್ ಪ್ರಸ್ತಾವಿಕ ಭಾಷಣ ಮಾಡಿ ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಎಸ್.ಕೆ.ಮಧುಚಂದ್ರ ಅವರು ಸರಳ, ಸಜ್ಜನ ವ್ಯಕ್ತಿ. ಅಂತಹವರ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಹೆಚ್ಚೆಚ್ಚು ಕಾರ್ಯಕ್ರಮ ಗಳು ನಡೆಯಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಸಾಲಿಗ್ರಾಮ ಟೌನ್ ಪಂಚಾಯತಿಯ ಅಧ್ಯಕ್ಷರಾದ ದೇವಿಕಾ ,ಉಪಾಧ್ಯಕ್ಷ ರಾದ ಸುಧಾ ರೇವಣ್ಣ,ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಶ್ರೀಮತಿ ಕುಸುಮ ರೇವಣ್ಣ, ಡಾ.ರಾಜ್ ಅಭಿಮಾನಿಗಳ ಬಳಗದ ಗುಣಚಂದ್ರ ಕುಮಾರ್ ಜೈನ್, ಜನತಾದಳದ ಮುಖಂಡ ಹಾಗೂ ಪಿ.ಎಲ್ಡಿ.ಬ್ಯಾಂಕ್ ಮಾಜಿ ಅಧ್ಯಕ್ಷರಾದ ಎಸ್.ಎಂ.ಸೋಮಣ್ಣ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಾಲಿಗ್ರಾಮ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷರಾದ ಎಸ್.ಕೆ.ಮಧುಚಂದ್ರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಲಿಗ್ರಾಮ ತಾಲೂಕಿನ ಪ್ರತಿ ಗ್ರಾಮಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ನೋದಣಿ ಕಾರ್ಯಕ್ರಮ ನಡೆಸುವುದಾಗಿ ಪ್ರಕಟಿಸಿದರು. ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಮಾಡಿಕೊಳ್ಳಲು ಸದ್ಯದಲ್ಲೆ ಕಾರ್ಯಾರಂಭಗೊಳಿಸುವುದಾಗಿ ನುಡಿದರು.
ಕಾರ್ಯಕ್ರಮ ದಲ್ಲಿ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಹಾಗೂ ಸಾರಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಸಾರಾ ರವೀಶ್ ಅವರನ್ನು ಸನ್ಮಾನಿಸಲಾಯಿತು.