ಮೂಡಲಗಿಯಲ್ಲಿ ಬೆಳಗಾವಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆ
ಮೂಡಲಗಿ – ತಾಲೂಕಾಗಿ ಹೊರಹೊಮ್ಮಿದ ಕೆಲವೇ ವರ್ಷಗಳಲ್ಲಿ ಎರಡು ತಾಲೂಕಾ ಸಾಹಿತ್ಯ ಸಮ್ಮೇಳನ ಹಾಗೂ ಮೂರನೇಯದಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಕಾಣುತ್ತಿರುವ ಮೂಡಲಗಿ ತಾಲೂಕಿನ ಕನ್ನಡಿಗರು, ಜನಸಾಮಾನ್ಯರು ನಿಜವಾಗಲೂ ಭಾಗ್ಯವಂತರು ಎಂದು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಳಾ ಮೆಟಗುಡ್ಡ ಹೇಳಿದರು.
ಸಾಹಿತಿಗಳ ಜೊತೆಗೆ ಜನಸಾಮಾನ್ಯರಿಗಾಗಿ ಕನ್ನಡ ಪ್ರಜ್ಞೆಯನ್ನು ಬೆಳೆಸುವಂಥ ಸಮ್ಮೇಳನ ಇದು ಕೇವಲ ಸಾಹಿತಿಗಳಿಗಾಗಿ ಅಷ್ಟೇ ಇರುವುದಲ್ಲ ಎಲ್ಲರೂ ಇದಕ್ಕೆ ಬಾಧ್ಯಸ್ಥರು ಎಂದು ನುಡಿದರು.
ನಗರದಲ್ಲಿ ನ.೨೩, ೨೪ ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯು ಸೋಮವಾರದಂದು ಸ್ಥಳೀಯ ಸಿದ್ಧಸಂಸ್ಥಾನ ಮಠದ ಶ್ರೀ ಶಿವಬೋಧರಂಗ ಮಠದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಮಾತನಾಡಿದರು.
ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಭಾಗವಹಿಸಬೇಕು. ಇದು ಸಾಹಿತ್ಯಕ ಕಾರ್ಯಕ್ರಮ ಜನಪ್ರತಿನಿಧಿಗಳ ಸಹಕಾರವೂ ಸಮ್ಮೇಳನಕ್ಕೆ ಇರಬೇಕು. ಅದರಲ್ಲೂ ತಾಲೂಕಾದ ಕೆಲವೇ ವರ್ಷಗಳಲ್ಲಿ ಎರಡು ತಾಲೂಕಾ ಸಾಹಿತ್ಯ ಸಮ್ಮೇಳನಗಳು ಹಾಗೂ ಮೂರನೇಯದಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಮೂಡಲಗಿಯ ಕನ್ನಡಿಗರು, ಜನಸಾಮಾನ್ಯರು ನಿಜವಾಗಲೂ ಭಾಗ್ಯವಂತರು ಎಲ್ಲರೂ ಸೇರಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯನ್ನಾಗಿಸಬೇಕು ಎಂದರು.
ಸಭೆಯಲ್ಲಿ ಸಾನ್ನಿಧ್ಯವನ್ನು ಸಂಸ್ಥಾನ ಪೀಠದ ಶ್ರೀ ದತ್ತಾತ್ರಯ ಬೋಧ ಸ್ವಾಮೀಜಿ ಹಾಗೂ ಶ್ರೀ ಶ್ರೀಧರ ಬೋಧ ಸ್ವಾಮೀಜಿ ವಹಿಸಿದ್ದರು.
ಮೂಡಲಗಿ ತಾಲೂಕಾ ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದಸರಾ ನೆನಪಿಸುವ ನವರಾತ್ರಿ ಉತ್ಸವ, ಮುಂಬೈ ನೆನಪಿಸುವ ಗಣೇಶ ಉತ್ಸವ ಹಾಗೂ ಧಾರವಾಡ ನೆನಪಿಸುವ ಕೃಷಿ ಮೇಳವನ್ನು ನಡೆಸಿದಂಥ ಮೂಡಲಗಿ ನಗರದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಬೇಕು ಎಂಬ ಉತ್ಸಾಹದಿಂದ ಎಲ್ಲರೂ ಕೈಗೂಡಿಸಬೇಕು. ಎಲ್ಲರೂ ಕೂಡಿದಾಗ ಅದು ಅತ್ಯಂತ ಯಶಸ್ವಿಯಾಗುತ್ತದೆ. ನ. ೧೯ ರಂದು ಸಮ್ಮೇಳನದ ಪ್ರಚಾರಾರ್ಥ ಬೈಕ್ ರ್ಯಾಲಿ, ನ. ೨೧ ರಂದು ಮಹಿಳೆಯರಿಂದ ಕನ್ನಡ ಬುತ್ತಿ ಜಾತ್ರೆ ನಡೆಯಲಿವೆ. ಇದರಿಂದ ತಾಲೂಕಿನಲ್ಲಿ ಕನ್ನಡಮಯ ವಾತಾವರಣ ಸೃಷ್ಟಿಯಾಗಲಿದೆ. ಆದ್ದರಿಂದ ಸಕಲ ಕನ್ನಡ ಪ್ರೇಮಿಗಳು ತಮ್ಮ ತನುಮನ ಧನದಿಂದ ಸಾಹಿತ್ಯ ಸಮ್ಮೇಳನ ನಡೆಸಿಕೊಡಬೇಕು ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಸರ್ವೋತ್ತಮ ಜಾರಕಿಹೊಳಿ, ರಾಮದುರ್ಗ ತಾಲೂಕಾ ಕಸಾಪ ಅಧ್ಯಕ್ಷ ಜಟಗನ್ನವರ, ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಇನ್ನಿತರರು ಮಾತನಾಡಿದರು.
ಬಿ ಆರ್ ತರಕಾರ ಅವರು ಕಾರ್ಯಕ್ರಮ ನಿರೂಪಿಸಿದರು. ಎ ಎಚ್ ವಂಟಗೋಡಿ ಸ್ವಾಗತಿಸಿ ವಂದಿಸಿದರು.
ವೇದಿಕೆಯ ಮೇಲೆ ಪಿಎಸ್ಐ ರಾಜು ಪೂಜೇರಿ, ನಿವೃತ್ತ ಪ್ರೊ. ಎಸ್ ಎಮ್ ಕಮದಾಳ, ಅನ್ವರ ನದಾಫ, ನೇತ್ರ ತಜ್ಞ ಟಿ ಸಚಿನ್, ಪ್ರೊ. ಹನಗಂಡಿ ಉಪಸ್ಥಿತರಿದ್ದರು.