ಗದಗ – ಪ್ರತಿ ತಿಂಗಳ ಎರಡನೇ ರವಿವಾರದಂದು ನಿರಂತರವಾಗಿ ನಂದಿವೇರಿ ಸಂಸ್ಥಾನಮಠ ಡೋಣಿ-ಗದಗ ದಿಂದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ‘ಸಸ್ಯಾನುಭಾವ’ ಹಾಗೂ ಕಪ್ಪತಗುಡ್ಡ ಚಾರಣವು ಯಶಸ್ವಿಯಾಗಿ ಜರುಗಿತು.
ಜಲ ಸಂರಕ್ಷಣೆಗಾಗಿ ಕೈಗೊಂಡ ಚಟುವಟಿಕೆಗಳ ಅಧ್ಯಯನದೊಂದಿಗೆ ಪ್ರಾರಂಭಗೊಂಡ ಚಾರಣವು ಬಂಗಾರದ ಹಳ್ಳ, ಬಂಗಾರದ ಕೊಳ್ಳ ಮಾರ್ಗವಾಗಿ ಐದಾರು ಕಿಲೋಮೀಟರಗಳವರೆಗೆ ಸಾಗಿತು. ಸುಂಯ್ಯ ನೇ ಬೀಸುತ್ತಿದ್ದ ಸುಳಿರ್ಗಾಳಿಯಿಂದ ದೊರೆಯುತ್ತಿದ್ದ ಶುದ್ಧ ಆಮ್ಲಜನಕದ ಸೇವನೆಯಿಂದ ಚಾರಣಿಗರ ಉತ್ಸಾಹ ಮೇರೆ ಮೀರಿತ್ತು. ಜೊತೆಗೆ ಅಪರೂಪದ ಜಾಗೂ ಔಷಧೀಯ ಗುಣಗಳುಳ್ಳ ಸಸ್ಯಗಳ ಕುರಿತು ಪೂಜ್ಯರು ನೀಡುತ್ತಿದ್ದ ಪ್ರತ್ಯಕ್ಷ ವಿವರಣೆ ಜ್ಞಾನವೃದ್ಧಿಗಾಗಿ ಪೂರಕ ವಾತಾವರಣ ನಿರ್ಮಿಸಿತ್ತು.
ಹುಬ್ಬಳ್ಳಿಯ ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ವೃಂದ, ಸಾವಯವ ರೈತರು, ಅಧಿಕಾರಿಗಳು, ಅಭಿಯಂತರುಗಳು, ಸಾರ್ವಜನಿಕರು, ಹಾಗೂ ಯುವಕರು ಈ ಚಾರಣದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.
ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದೀವೇರಿ ಸಂಸ್ಥಾನ ಮಠವು ಪ್ರತಿ ತಿಂಗಳ ಎರಡನೇ ರವಿವಾರದಂದು ಆಯೋಜಿಸುತ್ತಿರುವ ಈ ಚಾರಣವು ತುಂಬಾ ಜನಪ್ರಿಯವಾಗಿದ್ದು, ಇಲ್ಲಿ ಕಳೆಯುವ ಪ್ರತಿ ಕ್ಷಣವು ಅವಿಸ್ಮರಣೀಯವಾಗಿದೆ, ಬೆಳಗಿನ ಉಪಾಹಾರ, ಕಷಾಯ ಮಧ್ಯಾಹ್ನದ ಮಹಾಪ್ರಸಾದ ತುಂಬಾ ರುಚಿಯಾಗಿತ್ತೆಂಬುದು ಬಹುತೇಕ ಚಾರಣಿಗರ ಅನಿಸಿಕೆಯಾಗಿತ್ತು.
ದಿನಾಂಕ 29 ನೇ ಅಗಷ್ಟ 2024 ರಂದು ಜರುಗುವ ನಂದಿವೇರಿ ಮಠದ ಜಾತ್ರೆ ಹಾಗೂ ಪರಿಸರೋತ್ಸವದಲ್ಲಿ ಭಾಗವಹಿಸಲು ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಆಮಂತ್ರಣ ನೀಡಿದರು
ಬಾಲಚಂದ್ರ ಜಾಬಶೆಟ್ಟಿ
9741888365