ಬೆಳಗಾವಿ: ಇತ್ತೀಚೆಗೆ ಸಾಹಿತಿಗಳ ಬದುಕು-ಬರಹಗಳ ಮಧ್ಯೆ ಸಂಬಂಧವೇ ಇಲ್ಲದಂತಾಗಿದೆ. ‘ನಾನು ಬರೆದುದನ್ನು ಮಾತ್ರ ಓದಿ, ನನ್ನ ವೈಯಕ್ತಿಕ ಬದುಕು ನೋಡಬೇಡಿ’ ಎಂಬ ಧೋರಣೆಯ ಸಾಹಿತಿಗಳಿಗೆ ಕರ್ಕಿಯವರು ತದ್ವಿರುದ್ಧವಾಗಿದ್ದರು. ಅವರು ಬದುಕು-ಬರಹ ಸಮನ್ವಯಗೊಳಿಸಿದ ಅಪರೂಪದ ಕವಿಯಾಗಿದ್ದರು ಎಂದು ಯರಗಟ್ಟಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಬಿರಾದಾರ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಬೆಳಗಾವಿ ಮತ್ತು ಕನ್ನಡ ಸಾಂಸ್ಕೃತಿಕ ಭವನದ ಕ್ಷೇಮಾವೃದ್ಧಿ ಸಂಘದ ಸಹಯೋಗದಲ್ಲಿ ಆಯೋಜಿಸಿದ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು – ತಿಂಗಳ ಕಾರ್ಯಕ್ರಮ-೫ರ ಸಂಪನ್ಮೂಲ ವ್ಯಕ್ತಿಯಾಗಿ ‘ಡಾ. ಡಿ.ಎಸ್. ಕರ್ಕಿಯವರ ಬದುಕು ಬರಹ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ಪ್ರಕೃತಿ ಪ್ರೇಮ, ನಾಡು-ನುಡಿಯ ಬಗೆಗೆ ಅಭಿಮಾನ, ಸೌಂದರ್ಯಾಸ್ವಾದನೆ, ಆಶಾವಾದ, ಮಾನವೀಯತೆ, ಸಹಬಾಳ್ವೆಯಂತಹ ಉದಾತ್ತ ಮೌಲ್ಯಗಳನ್ನು ತಮ್ಮ ಸರಳ-ಸುಂದರ-ಸುಲಲಿತ ಭಾಷೆಯ ಕಾವ್ಯದ ಮೂಲಕ ಅಭಿವ್ಯಕ್ತಿಸಿದ ಕರ್ಕಿಯವರು ಗದ್ಯ ಪ್ರಕಾರದಲ್ಲೂ ಉಪಯುಕ್ತ ಕೃಷಿ ಮಾಡಿದ್ದಾರೆ. ಲಲಿತ ಪ್ರಬಂಧ, ವ್ಯಕ್ತಿಚಿತ್ರ, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ ಬರೆದು ಗದ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಅವರೊಬ್ಬ ದಕ್ಷ-ಪ್ರಾಮಾಣಿಕ ಆಡಳಿತಗಾರರೂ ಆಗಿದ್ದರು. ಇಂತಹ ಕನ್ನಡದ ಅಪರೂಪದ ಕವಿ ಕರ್ಕಿಯವರ ಅನಧಿಕೃತ ನಾಡಗೀತೆಯೆನಿಸಿಕೊಂಡಿರುವ ‘ಹಚ್ಚೇವು ಕನ್ನಡದ ದೀಪ’ ಕವಿತೆಯು ಸರಕಾರ ಪ್ರಕಟಿಸಿದ ಐದು ಕನ್ನಡದ ಗೀತೆಗಳಲ್ಲಿ ಇಲ್ಲದಿರುವುದು ವಿಷಾದನೀಯ. ಬೆಳಗಾವಿ ಅಧಿವೇಶನ ಸಮಯದಲ್ಲಿ ಸಂಬಂಧಪಟ್ಟವರ ಕಣ್ಣು ತೆರೆಸಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು, ಕರ್ಕಿಯವರ ಅಪ್ರಕಟಿತ ಸಾಹಿತ್ಯವನ್ನು ಗುರುತಿಸಿ ಪ್ರಕಟಿಸುವ ಕೆಲಸಕ್ಕೆ ತಾವು ಸದಾ ಬೆಂಬಲ ನೀಡುವುದಾಗಿ ಹೇಳಿದರು.
ಯರಗಟ್ಟಿ ತಾಲೂಕು ಕ.ಸಾ.ಪ. ಅಧ್ಯಕ್ಷ ತಮ್ಮಣ್ಣ ಕಾಮಣ್ಣವರ, ರಾಮದುರ್ಗ ತಾಲೂಕು ಕ.ಸಾ.ಪ. ಅಧ್ಯಕ್ಷ ಪಾಂಡುರಂಗ ಜಟಗನ್ನವರ, ಮೂಡಲಗಿ ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಸಂಜಯ ಶಿಂದಿಹಟ್ಟಿ, ಎಸ್.ಎಂ. ಹಜ್ಜೆ, ಎಂ.ಎಸ್. ಮಾಗಣಗೇರಿ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿಯವರು ಕಾರ್ಯಕ್ರಮ ನಿರೂಪಿಸಿದರು, ವೀರಭದ್ರಪ್ಪ ಅಂಗಡಿಯವರು ಪ್ರಾಸ್ತಾವಿಕ ಮಾತನಾಡಿದರು, ಶಿವಾನಂದ ತಲ್ಲೂರ ಅವರು ವಂದಿಸಿದರು.