ಬಾಬಾಜಾನ ಮುಲ್ಲಾ ನಿರ್ದೇಶನದ “ದೀಪಾ” ಕಿರುಚಿತ್ರಕ್ಕೆ ಕರ್ನಾಟಕ ಸರಕಾರ ಮಕ್ಕಳ ರಕ್ಷಣಾ ನಿರ್ದೇಶನಾಲಯದ ರಾಜ್ಯ ಪ್ರಶಸ್ತಿ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಕರ್ನಾಟಕ ಸರಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು ರವರು ಅಂತಾರಾಷ್ಟ್ರೀಯ ದತ್ತು ಮಾಸಾಚರಣೆ ನವೆಂಬರ್-೨೦೨೦ ರ ಅಂಗವಾಗಿ ದತ್ತು ವಿಷಯಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ ಕಿರುಚಿತ್ರಗಳ ಸ್ಪರ್ಧೆಯಲ್ಲಿ ನವದೆಹಲಿಯಾದಿಯಾಗಿ ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ ಕಿರುಚಿತ್ರಗಳಲ್ಲಿ ಧಾರವಾಡದ ನವರಸ ಸ್ನೇಹಿತರ ವೇದಿಕೆ ನಿರ್ಮಿಸಿದ ಬಾಬಾಜಾನ ಮುಲ್ಲಾ ರವರ ಕತೆ-ಚಿತ್ರಕತೆ-ಸಂಭಾಷಣೆ-ಸಂಕಲನ-ನಿರ್ದೇಶನದಲ್ಲಿ ಮೂಡಿಬಂದ “ದೀಪಾ”ಕಿರುಚಿತ್ರ ಆಯ್ಕೆಯಾಗಿ ಪ್ರಶಸ್ತಿ ಗಿಟ್ಟಿಸಿದೆ.

ದತ್ತು ವಿಷಯಗಳಾದ,

  1. ದತ್ತು ಪಡೆದ ಮಗುವಿನ ಸುರಕ್ಷಿತ ಆರೈಕೆ
  2. ಮಕ್ಕಳನ್ನು ದತ್ತು ಪಡೆಯುವುದು ಹೇಗೆ ಪೋಷಕರಿಗೆ ಹಾಗೂ ಮಕ್ಕಳಿಗೆ ಸಂತೋಷದಾಯಕವಾಗಿರುತ್ತದೆ
  3. ಪೋಷಕತ್ವ

ಈ ವಿಷಯಗಳನ್ನು ಕೇವಲ ಎರಡು ನಿಮಿಷಗಳಲ್ಲಿ ತೋರಿಸುವ ಕಷ್ಟಕರ ಪ್ರಯತ್ನಕ್ಕಾಗಿ ಈ ಪ್ರಶಸ್ತಿ ಲಭಿಸಿದೆ.

- Advertisement -

ಧಾರವಾಡ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಶ್ರೀಮತಿ ಡಿ.ಹೆಚ್.ಲಲಿತಾ ಹಾಗೂ ಪ್ರಕಾಶ ಕೊಡ್ಲಿವಾಡ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿ ಸಹಕರಿಸಿದರು.

ದವಾಖಾನೆಯ ಸನ್ನಿವೇಶಕ್ಕೆ ಡಾ.ಉಮೇಶ ತುರಮುರಿಯವರು ತಮ್ಮ ಕ್ಲಿನಿಕ್ ಕೊಟ್ಟು ಸಹಕರಿಸಿದರು, ತಪೋವನದ ಮುಖ್ಯಸ್ಥರು ಹಾಗೂ ಮಂಜುಳಾ ಜ್ಯೋತಿ ಮತ್ತು ಮಹಾಂತೇಶ ಹುಬ್ಬಳ್ಳಿ ಕುಟುಂಬದವರು ತಮ್ಮ ಮನೆಯಲ್ಲಿ ಚಿತ್ರೀಕರಣ ಮಾಡುವುದಕ್ಕೆ ಸ್ಥಳಾವಕಾಶ ನೀಡಿ ಸಹಕರಿಸಿದರು.

ಈ ಚಿತ್ರದಲ್ಲಿ ಮಕ್ಕಳ ರಕ್ಷಣಾಧಿಕಾರಿಯಾಗಿ ಮಹಾಂತೇಶ ಹುಬ್ಬಳ್ಳಿ, ದತ್ತು ಪಡೆಯುವ ದಂಪತಿಗಳಾಗಿ ನಂದಕುಮಾರ ದ್ಯಾಪೂರ ಮತ್ತು ಮಂಜುಳಾ ಜ್ಯೋತಿ, ದತ್ತು ನೀಡುವ ಸಿಬ್ಬಂದಿಯಾಗಿ ಶಿವಲೀಲಾ ಹುಬ್ಬಳ್ಳಿ,ವೈದ್ಯರಾಗಿ ಬಿ.ಆರ್.ಜಕಾತಿ,ಬಾಲ ಪ್ರತಿಭೆಗಳಾದ ಪ್ರತಿಕ್ಷಾ ಗಾಣಿಗೇರ,ಪ್ರೀತಿ, ಆರಾಧ್ಯ ಸಿದ್ದಾಪೂರ ಮತ್ತಿತರರು ಅಭಿನಯಿಸಿದ್ದಾರೆ.

ಛಾಯಾಗ್ರಾಹಕರಾಗಿ ಶಾರೂಕ್ ಮುಲ್ಲಾ , ಸಹಾಯಕರಾಗಿ ಅಮನ್ ಮುಲ್ಲಾ,ಮಹ್ಮದ್ ಯೂಸೂಫ್ ಮುಲ್ಲಾ ಮತ್ತಿತರರು ಕಾರ್ಯನಿರ್ವಹಿಸಿದ್ದಾರೆ.

ಬಾಬಾಜಾನ್ ಅವರ ಕಿರು ಪರಿಚಯ

ಜೀವನದಲ್ಲಿ ಹಲವು ಹವ್ಯಾಸಗಳು ಮನುಷ್ಯನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಬದುಕಿನಲ್ಲಿ ಸದಭಿರುಚಿಯ ಆಲೋಚನೆಗಳನ್ನಿಟ್ಟುಕೊಂಡು ಯಾವುದೇ ಕಾರ್ಯ ಮಾಡಿದರೂ ಅದಕ್ಕೆ ಒಂದು ನೆಲೆ ಇದ್ದೇ ಇದೆ ಎಂಬುದಕ್ಕೆ ಬಾಬಾಜಾನ್ ಮುಲ್ಲಾ ಸಾಕ್ಷಿ. ಮೂಲತಃ ಬಾಗಲಕೋಟೆ ತಾಲೂಕಿನ ಹೊಳೆಯಂಕಂಚಿ ಗ್ರಾಮದವರಾದ ಬಾಬಾಜಾನ್ ಮುಲ್ಲಾ ಪ್ರಸ್ತುತ ಅಳ್ನಾವರ ತಾಲೂಕಿನ ಹೊನ್ನಾಪುರ ಗ್ರಾಮದ ಪ್ರಭುದೇವ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಹಿಂದಿ ಮತ್ತು ಚಿತ್ರಕಲಾ ವಿಷಯದಲ್ಲಿ ಬೋಧಕರು ಮತ್ತು ಸಂಪನ್ಮೂಲ ವ್ಯಕ್ತಿಗಳು.ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಇವರ ಆಲೋಚನೆಗೆ ಮುಖ್ಯ ಕಾರಣ ಇವರದು ಅವಿಭಕ್ತ ಕುಟುಂಬ. ಅಲ್ಲಿ ಎಲ್ಲರೂ ಒಟ್ಟಿಗೆ ಬಾಳಬೇಕೆಂಬ ಸಂದೇಶ ಸಂಸ್ಕಾರ ಬಾಲ್ಯದಿಂದಲೂ ರೂಢಿಗತವಾಗಿರುತ್ತದೆ. ಅದನ್ನೇ ಅವರು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿರುವುದಲ್ಲದೇ ಮಕ್ಕಳಲ್ಲಿಯೂ ಕೂಡ ನೈತಿಕತೆ ಇರಲಿ ಎಂಬ ಸದುದ್ದೇಶ ಹೊಂದಿ ಆ ನಿಟ್ಟಿನಲ್ಲಿ ತಮ್ಮ ಕತೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು.

ಇವರ ತಂದೆ ಹುಸೇನಸಾಬ ತಾಯಿ ಸಾದಿರಾ.ಇವರ ಎಂಟು ಜನ ಮಕ್ಕಳಲ್ಲಿ ಬಾಬಾಜಾನ್ ಒಬ್ಬರು. ಇವರ ಬಾಲ್ಯದ ಶಿಕ್ಷಣ ಹಾನಗಲ್ ತಾಲೂಕಿನ ಬೊಮ್ಮನಹಳ್ಳಿಯಲ್ಲಿ ಜರುಗಿತು. ಕಾರಣ ತಂದೆ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರಿರುವ ಸ್ಥಳದಲ್ಲಿ ಶಿಕ್ಷಣ ಮಕ್ಕಳಿಗೆ ಕೊಡಿಸಿದರು. ನಂತರ ಹಾನಗಲ್ ದಲ್ಲಿ ಪ್ರೌಢಶಾಲಾ ಶಿಕ್ಷಣ ಮುಗಿಸಿ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಚಿತ್ರಕಲೆ ಡಿಪ್ಲೋಮಾ ಅಭ್ಯಸಿಸಿದರು.

ಇವರ ಶಿಕ್ಷಣ ಸಂದರ್ಭದಲ್ಲಿ ಕುಲಕರ್ಣಿ ಎಂಬ ಗುರುಗಳು ಮಕ್ಕಳನ್ನು ಬಳಸಿಕೊಂಡು ನಾಟಕ ಮಾಡಿಸುತ್ತಿದ್ದರಂತೆ ಅದರಲ್ಲಿ ಬಾಬಾಜಾನ್ ಕೂಡ ಭಾಗವಹಿಸುತ್ತಿದ್ದರು. ಅವರ ಗುರುಗಳಿಗೆ ಇವರು ಮೆಚ್ಚಿನ ಕಲಾವಿದರಾಗಿದ್ದರು. ಹೀಗೆ ಪ್ರಾಥಮಿಕ ಶಾಲಾ ಹಂತದಲ್ಲಿ 46 ನಾಟಕಗಳಲ್ಲಿ (ಶಾಲಾ ಪಠ್ಯಾಧಾರಿತ) ಅಭಿನಯಿಸುವ ಮೂಲಕ ಇವರಲ್ಲಿನ ಕಲಾವಿದ ಬೆಳಕಿಗೆ ಬರತೊಡಗಿದ. ಗುರುಗಳ ನಿರ್ದೇಶನದ ಪ್ರಭಾವ ಕೂಡ ಇವರಲ್ಲಿ ನಿರ್ದೇಶಕನು ಮೊಳಕೆಯೊಡೆದಿದ್ದ.

ಇವರ ಪತ್ನಿ ಮನೆಗೆಲಸದೊಡನೆ ಪತಿಯ ಕಲೆಗೆ ಸ್ಪೂರ್ತಿದಾತೆ. ಹೀಗಾಗಿ ಇವರ 6 ಜನ ಮಕ್ಕಳೂ ಕೂಡ ಸಂಗೀತ,ಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿರುವರು. ಅವರ ಮಕ್ಕಳನ್ನು ಕೂಡ ಅಲ್ಲಲ್ಲಿ ಪಾತ್ರ ನೀಡುವ ಮೂಲಕ ಅವರ ಕಲೆಯನ್ನು ಬಾಬಾಜಾನ್ ಪ್ರೋತ್ಸಾಹಿಸುತ್ತಿರುವರು.

”ಕೋರೋನಾ ಜಾಗೃತಿಯತ್ತ ನಮ್ಮ ಚಿತ್ತ ” ಇವರ ಮಗಳು ರಾಹೀಲಾ ಮುಲ್ಲಾ ನಿರೂಪಣೆ ಅಕ್ಸಾ ಮುಲ್ಲಾ ಳ ಗಾಯನದಲ್ಲಿ ತಮ್ಮದೇ ಗೀತೆಯನ್ನು ಬಾಬಾಜಾನ್ ಮುಲ್ಲಾ ಚಿತ್ರೀಕರಿಸಿ ಯ್ಯೂಟ್ಯೂಬ್ ಚಾನೆಲ್‍ದಲ್ಲಿ ಹಾಕಿದಾಗ ಅಪಾರ ಸಂಖ್ಯೆಯ ಸಂಗೀತ ಪ್ರೇಮಿಗಳ ಮನಸೆಳೆದಿರುವುದನ್ನು ಗಮನಿಸಿದರೆ ಮಕ್ಕಳು ತಂದೆಯ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ಸಂಗತಿ.

ಇನ್ನು ಇವರ ಸಹೋದರನ ಅಕಾಲ ಮರಣ ಇವರನ್ನು ಕಂಗೆಡಿಸಿದ್ದನ್ನು ಆಗಾಗ ನೆನಪಿಸಿಕೊಳ್ಳುವ ಇವರು ತಮ್ಮ ಸಹೋದರ ಕೂಡ ಒಳ್ಳೆಯ ಶಿಕ್ಷಣ ಪ್ರೇಮಿಯಾಗಿದ್ದ ಹಾಗೂ ಆತನೂ ಕೂಡ ಚಿತ್ರಕಲಾವಿದನಾಗಿದ್ದ ಎಂದು ಹೆಮ್ಮೆಯಿಂದ ಹೇಳುವರು. ಅವನಿಗೆ ಅರ್ಪಣೆ ಮಾಡಿ “ಬಾಗಿನ” ಎಂಬ ಟೆಲಿಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದು. ಬಡತನದ ಬೇಗೆಯ ಸನ್ನಿವೇಶದಲ್ಲಿ ಶಿಕ್ಷಣ ಪಡೆಯುವ ಮಕ್ಕಳ ಬದುಕನ್ನು ಚಿತ್ರಿಸಿರುವುದನ್ನು ಬಾಗಿನದಲ್ಲಿ ಗಮನಿಸಬಹುದು.

ಅಕ್ಸಾ ಮುಲ್ಲಾ ಅಭಿನಯ ಮತ್ತು ಗಾಯನದಲ್ಲಿ ಸೋಜಿಗದ ಸೂಜು ಮಲ್ಲಿಗೆ ಗೀತೆಯ ವಿಡಿಯೋ ನೋಡಿದರೆ ಅಕ್ಸಾಳ ಧ್ವನಿ ಮತ್ತು ಅಭಿನಯ ಗಮನ ಸೆಳೆಯುತ್ತವೆ. ಹಾಗೆಯೇ ಮುಗಳಖೋಡ ಸ್ಥಳ ಚಿತ್ರಣವನ್ನು ಕೂಡ ಇವರು ಮಾಡಿದ್ದು ಹಿನ್ನಲೆ ಸಂಗೀತದೊಂದಿಗೆ ಸ್ಥಳ ಪುರಾಣ ತಿಳಿಸುವ ರೀತಿ ಮನಮೋಹಕ. ಇವರ ಈ ಎಲ್ಲ ಚಟುವಟಿಕೆಗಳಿಗೆ ತಂದೆ ತಾಯಿಯ ಪ್ರೋತ್ಸಾಹದ ಜೊತೆಗೆ ನವರಸ ಸ್ನೇಹಿತರ ವೇದಿಕೆಯೂ ಕಾರಣ ಎಂದು ಅಭಿಮಾನ ಮತ್ತು ಹೆಮ್ಮೆಯಿಂದ ಹೇಳುತ್ತಾರೆ.ಇವರು ನವರಸ ಸ್ನೇಹಿತರ ವೇದಿಕೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವುದಲ್ಲದೇ. ತಮ್ಮ ಮಗನನ್ನು “ಬದುಕು ಬಂಡಿ”ಯಲ್ಲಿ ಕಲಾವಿದನನ್ನಾಗಿ ಮಾಡಿದ್ದು ಇಷ್ಟರಲ್ಲೇ ಬದುಕು ಬಂಡಿ ತೆರೆ ಕಾಣಲಿದೆ.

ತಮ್ಮ ಈ 55 ನೆಯ ವಯಸ್ಸಿನಲ್ಲಿಯೂ ಕೂಡ ಉತ್ಸಾಹದ ಚಿಲುಮೆಯಂತೆ ಓಡಾಡುವ ಬಾಬಾಜಾನ್ ಕನಸುಗಳು ಹತ್ತು ಹಲವು. ಇವರ ನಿರ್ದೇಶನದ “ ಬೆಳಕು.ಒಟ್ಟಿಗೆ ಬಾಳುವ ಆನಂದ,ಬಾಗಿನ ಕಿರು ಚಿತ್ರಗಳು ಸಾವಿರಾರು ಸಹೃದಯ ಪ್ರೇಕ್ಷಕರ ಮನಗೆದ್ದಿವೆ. ಈಗಲೂ ಕೂಡ ಇವುಗಳನ್ನು ವೀಕ್ಷಿಸಿ ಮೆಚ್ಚುಗೆ ಮಾತುಗಳನ್ನಾಡುವ ಸಹೃದಯರು ಯ್ಯೂಟ್ಯೂಬ್ ಚಾನೆಲ್‍ದಲ್ಲಿ ವೀಕ್ಷಿಸಬಹುದು.ನವರಸ ಸ್ನೇಹಿತರ ವೇದಿಕೆ ಎಂದು ಇಂಗ್ಲೀಷಿನಲ್ಲಿ ಗೂಗಲ್ ಪುಟಕ್ಕೆ ಹೋಗಿ ಟೈಪಿಸಿದರೆ “ಬದುಕು ಬಂಡಿ” ಪ್ರೋಮೋ. ಚಿತ್ರಕಲಾ ಪಾಠಗಳು,ಸ.ಜ.ನಾಗಲೋಟಿಮಠರ ಸಂದರ್ಶನ ಸರದೇಶಪಾಂಡೆಯವರದು.

ಭೀತಿ ತೊರೆಯುವಾ ಎಸ್,ಎಸ್,ಎಲ್ಸಿ ಪರೀಕ್ಷಾ ಸಿದ್ದತೆ ಕುರಿತಾದ ಸಾಕ್ಷಚಿತ್ರ.ನಾಶಿಪುಡಿ ನಿಂಗ್ಯಾ ಹಾಸ್ಯ ರೂಪಕ.ಮೊದಲಾದ ವಿಡಿಯೋಗಳನ್ನು ತಾವೂ ಕೂಡ ನೋಡಬಹುದು.ಇಂತಹ ಒಬ್ಬ ಅಪರೂಪದ ಶಿಕ್ಷಕರ ಪ್ರತಿಭೆಗೆ ಪ್ರೋತ್ಸಾಹ ಕೂಡ ಅಗತ್ಯ.ಇವರಿಂದ ಇನ್ನೂ ಅನೇಕ ಚಲನಚಿತ್ರಗಳು ಮೂಡಿ ಬರಲಿ ಎಂದು ಆಶಿಸುವೆ.ಇವರ ಸಂಪರ್ಕ ಸಂಖ್ಯೆ.9008203006


ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ 591117

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!