ಬೈಲಹೊಂಗಲ: 1915 ರಲ್ಲಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಸಮಸ್ತ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂದು ಬೈಲಹೊಂಗಲ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ ಹೇಳಿದರು.
ಕರ್ನಾಟಕ ಸಂಭ್ರಮ 50 ಹಾಗೂ 69ನೇ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಸ್ವತಃ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರಾಗುವುದರ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಷತ್ತಿನ ಆಜೀವ ಸದಸ್ಯತ್ವ ಪಡೆದಿದ್ದು ಮನಸ್ಸಿಗೆ ಬಹಳ ಖುಷಿ ನೀಡಿದೆ. ಎಲ್ಲರೂ ಅತ್ಯಂತ ಗೌರವದಿಂದ ಪರಿಷತ್ತಿನ ಸದಸ್ಯರಾಗುವುದರ ಮೂಲಕ ಕನ್ನಡಾಭಿಮಾನ ಮೆರೆಯಬೇಕು ಎಂದು ಅವರು ಕರೆ ನೀಡಿದರು. ಪರಿಷತ್ತಿನ ಚಟುವಟಿಕೆಗಳಿಗೆ ಪುರಸಭೆಯ ಸಹಕಾರ ಸದಾ ಇರುತ್ತದೆ ಎಂದರು.
ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಮಾತನಾಡಿ ಕರ್ನಾಟಕದ ಏಕೀಕರಣಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆಯೂ ಅಪಾರವಾದದ್ದು ಎಂದು ಹೇಳಿದರು. ಕನ್ನಡ ನಾಡು, ನುಡಿಯ ಸಂರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ತಾಲೂಕಿನ ಎಲ್ಲ ಕನ್ನಡ ಮನಸ್ಸುಗಳು ಸದಸ್ಯತ್ವ ಪಡೆಯುವುದರ ಮೂಲಕ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು. ಸದಸ್ಯತ್ವ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9844491490 ಗೆ ಸಂಪರ್ಕಿಸುವಂತೆ ತಿಳಿಸಿದರು.
ಪುರಸಭೆಯ ವ್ಯವಸ್ಥಾಪಕರಾದ ಮಹಾದೇವಪ್ಪ ಕುಟ್ರಿ ಸದಸ್ಯತ್ವ ಪಡೆದು ಮಾತನಾಡಿ, ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಸಿ.ವೈ.ಮೆಣಸಿನಕಾಯಿ, ನಿವೃತ್ತ ಯೋಧರಾದ ಸಿದ್ದಪ್ಪ ಗೊಡಚಿ, ಶಿಕ್ಷಕರಾದ ಶಿವಾನಂದ ಪಟ್ಟಿಹಾಳ, ಸೋಮನಿಂಗಪ್ಪ ದೊಡವಾಡ ಹಾಗೂ ಪುರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.