ಕನ್ನಡ ರಾಜ್ಯೋತ್ಸವ ದಿನ
ನಮ್ಮ ಭಾಷೆ ಕನ್ನಡ ನಮ್ಮ ನಾಡು ಕನ್ನಡ
ಪ್ರಾಚೀನ ಭಾಷೆ ಶಾಸ್ತ್ರೀಯ ಭಾಷೆ ಕನ್ನಡ
ಹಲ್ಮಿಡಿ ಶಾಸನ ಹೇಳಿದೆ ಪ್ರಾಚೀನ ಕನ್ನಡ
ಕುರಿತೋದದೆ ಕಾವ್ಯ ರಚಿಸಿದರ ನಾಡಿದು
ಪಂಪ ರನ್ನ ಜನ್ನ ಪೊನ್ನ ಕವಿಗಳ ನಾಡಿದು
ಕುವೆಂಪು ಬಿಎಂಶ್ರೀ ಮಾಸ್ತಿ ಬೇಂದ್ರೆ ಇದು
ಸಕಲ ಕವಿ ಪುಂಗವರು ಬೆಳೆಸಿದ ನಾಡಿದು
ಕಿತ್ತೂರು ಚೆನ್ನಮ್ಮ ಬೆಳವಡಿಯ ಮಲ್ಲಮ್ಮ
ಶೂರ ಸಂಗೊಳ್ಳಿ ರಾಯಣ್ಣ ಅನೇಕರಮ್ಮ
ಕನ್ನಡ ನೆಲಜಲ ಭಾಷೆಯ ಪೊರೆದರಮ್ಮ
ವೀರ ವನಿತೆಯರು ಶೂರ ಪುತ್ರರು ಹೆಮ್ಮೆ
ಚೆಲುವ ಕನ್ನಡ ಸುಂದರ ಅಕ್ಕರದ ಭಾಷೆ
ಕಹಳೆಯ ಪಾಂಗಿನವೋಲ್ ಅಕ್ಕರೆ ಭಾಷೆ
ಹೊಕ್ಕುಳ ತೆರ ದುಂಡಕ್ಷರದ ನಮ್ಮ ಭಾಷೆ
ಉಳಿಸೋಣ ಬೆಳೆಸೋಣ ಬಳಸಿ ಭಾಷೆ
ಕನ್ನಡ ಅಂಕಿಗಳನು ಮರೆತೆವು ನಾವಿಂದು
ಪರಭಾಷೆಯ ಮೋಡಿಗೆ ಮೋಹಿತರಿಂದು
ನಿರ್ಧರಿಸು ನಮ್ಮ ಅಂಕಿಗಳ ಬರೆವೆನೆಂದು
ಸಂಗೀತ ಕಲೆಗಳ ಉಳಿಸಿ ಬೆಳೆಸುತಲಿಂದು
ನವೆಂಬರ ಒಂದು ಮಾತ್ರ ಎಚ್ಚರಗೊಳ್ಳದೆ
ಪ್ರತಿನಿತ್ಯ ಕನ್ನಡದ ಧ್ಯಾನವೇ ಮಾಡೋಣ
ಕನ್ನಡದ ಭಾಷೆಯಲ್ಲಿಯೇ ಮಾತಾಡೋಣ
ನಮ್ಮತನದಿ ಅನ್ಯಭಾಷೆಗಳ ಪ್ರೀತಿಸೋಣ
ಹಳದಿ ಕೆಂಪು ಬಣ್ಣದ ಹೆಮ್ಮೆಯ ಬಾವುಟ
ಇದು ನಮ್ಮಯ ಸ್ವಾಭಿಮಾನದ ಬಾವುಟ
ಇಂದು ಗರ್ವದಲಿ ಹಾರಿಸೋಣ ಬಾವುಟ
ದಶದಿಕ್ಕಿನಲಿ ಕನ್ನಡ ಹಬ್ಬಿಸಲಿ ಈ ಬಾವುಟ
ಸಿರಿಗನ್ನಡಂ ಬಾಳ್ಗೆ ಸವಿಗನ್ನಡಂ ಒಲವಿಗೆ…
ಈಶ್ವರ ಜಿ.ಸಂಪಗಾವಿ.ಕಕ್ಕೇರಿ.