ರಾಮದುರ್ಗ – ಮಲೇರಿಯಾ ರೋಗವು ಸಾಮಾನ್ಯವಾಗಿ ಕಂಡುಬರುವ ಪ್ರದೇಶದಲ್ಲಿ ಸೊಳ್ಳೆ ಪರದೆ, ಕೀಟನಾಶಕ ಟಾಪ್ ಬಳಸುವುದರ ಜೊತೆಗೆ ನಮ್ಮ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಮಲೇರಿಯಾ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದೆಂದು ಕಟಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಣ್ಣ ಯರಗುದ್ರಿ ತಿಳಿಸಿದರು.
ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕಟಕೋಳದ ಸಹಯೋಗದಲ್ಲಿ ಹಣಮಸಾಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಮಲೇರಿಯಾ ದಿನ ಹಾಗೂ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಮಲೇರಿಯಾ ರೋಗವು ಉಂಟಾಗುತ್ತಿದ್ದು ಜ್ವರ, ವಾಂತಿ, ತಲೆನೋವು ಇವು ರೋಗದ ಲಕ್ಷಣಗಳಾಗಿವೆ ಎಂದು ತಿಳಿಸಿದರು.
ಸೊಳ್ಳೆಗಳು ವ್ಯಕ್ತಿಗೆ ಕಡಿದು ಲಾಲಾರಸದಿಂದ ಪರಾವಲಂಬಿಗಳಿಗೆ ಪರಿಚಲಿಸಿ ಯಕೃತ್ತಿಗೆ ಸೇರಿ ಸಂತಾನೋತ್ಪತ್ತಿ ಮಾಡುತ್ತ ಸೋಂಕನ್ನು ಹರಡುತ್ತವೆ. ಮನೆಯ ಸುತ್ತಮುತ್ತ ಸೊಳ್ಳೆಗಳು ನಿರ್ಮಾಣಗೊಳ್ಳದಂತೆ ಹಾಗೂ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕೆಂದು ಹಣಮಸಾಗರ ಸಿ.ಆರ್.ಪಿ ಪಾಂಡುರಂಗ ಜಟಗನ್ನವರ ತಿಳಿಸಿದರು.
ಉಜ್ಜಿನಕೊಪ್ಪ ಶಾಲೆಯ ಪ್ರಧಾನ ಗುರುಗಳಾದ ಎಸ್.ಸಿ. ಪಟ್ಟಣಶೆಟ್ಟಿ ಮಾತನಾಡಿ ಮಕ್ಕಳಲ್ಲಿ ಮಲೇರಿಯಾ ಜಾಗೃತಿಯ ಬಗ್ಗೆ ತಿಳುವಳಿಕೆ ನೀಡುವುದರ ಮೂಲಕ ಪಾಲಕರಿಗೆ ಮನವರಿಕೆ ಮಾಡಿದಂತಾಗುತ್ತದೆ. ಮಲೇರಿಯಾ ರೋಗವನ್ನು ನಿರ್ಮೂಲನೆ ಮಾಡಲು ವಾತಾ ವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ತಮ್ ತಮ್ಮ ಮನೆಯ ನೆರೆಹೊರೆಯವರಿಗೆ ತಿಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಟಕೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಎಚ್.ಓ ಮಂಜು ಅಮಾಸಿ, ಪ್ರಧಾನ ಗುರುಮಾತೆ ಎಂ.ಎಸ್. ಕಲ್ಲಣ್ಣವರ, ಶಿಕ್ಷಕರಾದ ಎನ್.ಎ.ಪಾಟೀಲ, ಎಂ.ಕೆ.ಇದ್ಲಿ, ಎಸ್.ವಿ. ಶಿರೋಳ ಹಾಗೂ ಆಶಾ ಕಾರ್ಯಕತ್ರೆಯರು ಹಾಜರಿದ್ದರು.
ಶಿಕ್ಷಕ ಉಮೇಶ ಭಜಂತ್ರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಲ್. ಭಜಂತ್ರಿ ವಂದಿಸಿದರು.