ಹೊಸದೆಹಲಿ – ಸಾರಾಯಿ ಹಗರಣದಿಂದ ಜೈಲು ಕಂಬಿ ಎಣಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜಾಮೀನು ಸಿಗುತ್ತಲೇ ಹೊರಗೆ ಬಂದು ರವಿವಾರ ತಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಆಪ್ ಪಕ್ಷದ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬರುವ ನವೆಂಬರ್ ನಲ್ಲಿ ಮಹಾರಾಷ್ಟ್ರದ ಜೊತೆ ದೆಹಲಿಗೂ ವಿಧಾನ ಸಭಾ ಚುನಾವಣೆ ನಡೆಯಬೇಕು ಎಂದರಲ್ಲದೆ ಜನತೆ ತಮಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ನೀಡಿದರೆ ಮಾತ್ರ ತಾನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರುವುದಾಗಿ ಹೇಳಿದರು.
ಕೇಜ್ರಿವಾಲರ ಈ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದ್ದು ಇದೊಂದು ಡ್ರಾಮಾ ಎಂದಿದೆ. ಇದೇ ನಿರ್ಧಾರವನ್ನು ಕೇಜ್ರಿವಾಲ್ ಆರು ತಿಂಗಳ ಹಿಂದೆಯೇ ಕೈಗೊಂಡಿದ್ದರೆ ಅವರ ಪ್ರಾಮಾಣಿಕತೆಯ ಸಾಬೀತಾಗುತ್ತಿತ್ತು ಎಂದು ತಿಳಿಸಿದೆ.
ರಾಜೀನಾಮೆಯ ವಿಷಯದ ಬಗ್ಗೆ ಭಾರತೀಯ ಜನತಾ ಪಕ್ಷ ಕೂಡ ವ್ಯಂಗ್ಯಭರಿತ ಪ್ರತಿಕ್ರಿಯೆ ನೀಡಿದೆ. ಇದರ ಹಿಂದೆ ಏನೋ ಪಿತೂರಿ ಇದೆ ಎಂಬ ಸಂದೇಹ ವ್ಯಕ್ತವಾಗಿದೆ.