ಬೀದರ್ – ಕಾಂಗ್ರೆಸ್ ಪಕ್ಷದ ನಲ್ವತ್ತು ಶಾಸಕರು ಬಿಜೆಪಿ ಪಕ್ಷಕ್ಕೆ ಬರಲು ರೆಡಿ ಇದ್ದಾರೆ ಹೈಕಮಾಂಡ ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಬಿ ಎಲ್ ಸಂತೋಷ ಹೇಳಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಬಿ ಎಲ್ ಸಂತೋಷ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕುದುರೆ ವ್ಯಾಪಾರ ನಡೆಯಲು ಸಾಧ್ಯವಿಲ್ಲ. ಬಿಜೆಪಿ ಪಕ್ಷ ಹಿಂದೆಯೂ ವಾಮಮಾರ್ಗದಿಂದ ಅಧಿಕಾರ ನಡೆಸಿದೆ. ಕುದುರೆ ವ್ಯಾಪಾರ ಮಾಡಿ ಅಧಿಕಾರ ನಡೆಸಿದೆ
ಆದರೆ ಈ ಸಲ ರಾಜ್ಯದ ಜನರು ನಿರ್ಧಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಕೊಟ್ಟಿದ್ದಾರೆ. ಬರುವ ಲೋಕಸಭಾ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಪಕ್ಷ ಇಪ್ಪತ್ತೈದು ಕ್ಷೇತ್ರದಲ್ಲಿ ಜಯಭೇರಿ ಬಾರಿಸುವುದು ಖಂಡಿತ ಎಂದರು.
ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಗಟ್ಟಿಯಾಗಿದ್ದಾರೆ. ಒಬ್ಬ ಶಾಸಕನೂ ಬಿಜೆಪಿ ಕಡೆ ಮುಖ ಮಾಡುವುದಿಲ್ಲ. ಬಿಜೆಪಿ ಶಾಸಕರೇ ಕಾಂಗ್ರೆಸ್ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ ಆದರೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ವಿಚಾರ ಮಾಡಿ ಬಿಜೆಪಿ ಶಾಸಕರನ್ನು ಸೇರಿಸಿಕೊಳ್ಳಲು ನಿರ್ಧಾರ ಮಾಡುತ್ತಾರೆ ಎಂದು ಖಂಡ್ರೆ ನುಡಿದರು.
ಇಂಡಿಯಾ ಮಹಾಘಬಂಧನ ವಿಚಾರ ಕುರಿತಂತೆ ಮಾತನಾಡಿದ ಈಶ್ವರ ಖಂಡ್ರೆ, ಇಂಡಿಯಾ ಮಹಾಘಟಬಂಧನ ಎಲ್ಲಾ ಮತಭೇದವನ್ನು ಮರೆತು ರಚನೆಯಾದ ಒಗ್ಗಟ್ಟಿನ ಘಟಬಂಧನ. ದೇಶದಲ್ಲಿ ಕೇಂದ್ರ ಸರಕಾರದ ದುರಾಡಳಿತ ನಡೆಸುತ್ತಿದೆ. ಈ ಸಲ ಬಿಜೆಪಿಯ ಜನ ವಿರೋಧಿ ಸರ್ಕಾರವನ್ನು ಬುಡಸಮೇತ ಕಿತ್ತು ತೆಗೆದುಹಾಕಲು ಮಹಾಘಟಬಂಧನ ರಚಿಸಲಾಗಿದೆ ಎಂದರು.
ದೇಶದಲ್ಲಿ ಸಂವಿಧಾನಕ್ಕೆ ಅಪಾಯವಿದೆ. ಕೇಂದ್ರ ಸರ್ಕಾರ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ ಎಂದು ಖಂಡ್ರೆ ಆರೋಪಿಸಿದರು.