Homeಸುದ್ದಿಗಳುದೊಡ್ಡಪ್ಪ ಎಚ್ಚರಿಸಿದ್ದರೂ ಲಕ್ಷ್ಯಗೊಡದೇ ಹಸುಳೆಯ ಬಲಿ ತೆಗೆದುಕೊಂಡ ಶಾಲೆ !

ದೊಡ್ಡಪ್ಪ ಎಚ್ಚರಿಸಿದ್ದರೂ ಲಕ್ಷ್ಯಗೊಡದೇ ಹಸುಳೆಯ ಬಲಿ ತೆಗೆದುಕೊಂಡ ಶಾಲೆ !

ಮೂಡಲಗಿ – ಸಮೀಪದ ಕಂಕಣವಾಡಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಗನೂರಿನ ಸಮರ್ಥ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷದ ಹಸುಳೆಯೊಂದು ಮೃತಪಟ್ಟಿದ್ದು ಈ ಘಟನೆಯ ಮುಂಚೆಯೇ ಮೃತ ಬಾಲಕನ ದೊಡ್ಡಪ್ಪ ಶಾಲೆಯ ಆಡಳಿತ ಮಂಡಳಿಯವರಿಗೆ ಚಾಲಕನ ನಿರ್ಲಕ್ಷ್ಯದ ಬಗ್ಗೆ ಎಚ್ಚರಿಸುತ್ತ ಬಂದಿದ್ದರೆಂಬ ಆಘಾತಕಾರಿ ಅಂಶ ಬಹಿರಂಗವಾಗಿದ್ದು ಅದು ಯಾವುದೇ ಪ್ರಯೋಜನವಾಗದೇ ಬಾಲಕನ ಬಲಿಯಾಗಿದೆ

ಈ ಸಂಗತಿಯನ್ನು ಪತ್ರಿಕೆಯೊಡನೆ ಹೇಳಿಕೊಂಡ, ಸಂಬಂಧದಲ್ಲಿ ಬಾಲಕನ ದೊಡ್ಡಪ್ಪನಾಗುವ ಈರಪ್ಪ ದುಂಡಪ್ಪ ಮುಗಳಖೋಡ ಅವರು ದುರ್ಘಟನೆ ನಡೆದ ದಿನ ಮಧ್ಯಾಹ್ನವೆ ಶಾಲೆಗೆ ಹೋಗಿ ವಾಹನ ಚಾಲಕನ ನಿರ್ಲಕ್ಷ್ಯದ ಬಗ್ಗೆ ದೂರು ಹೇಳಿದ್ದಲ್ಲದೆ ಮಕ್ಕಳನ್ನು ರಸ್ತೆಯ ಆಚೆ ಬದಿ ಬಿಡಬೇಡಿ ಎಂದೂ ಕೂಡ ಹೇಳಿದ್ದರಂತೆ.

ಸಮರ್ಥ ಶಾಲೆಯಿಂದ ಪ್ರತಿದಿನ ಬೇರೆಯದೇ ವಾಹನ ಬರುತ್ತಿತ್ತು ಎಂದು ಅವರು ದೂರು ನೀಡಿದ್ದು, ಹಲವಾರು ದಿನಗಳಿಂದ ಖುದ್ದು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಬಿಡುವಾಗ ಚಾಲಕನು ಹೆದ್ದಾರಿಯ ಆ ಕಡೆಯೇ ಬಿಡುತ್ತಾನೆ ಕೈಹಿಡಿದು ರಸ್ತೆ ದಾಟಿಸುತ್ತಿಲ್ಲ ಎಂದು ಹಲವು ಸಲ ದೂರು ನೀಡಿದ್ದರೂ ಶಾಲೆಯವರು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಅವರು ಸುಸಜ್ಜಿತ ಶಾಲಾ ವಾಹನ ಹಾಗೂ ದಕ್ಷ ಚಾಲಕನನ್ನು ಹಚ್ಚಿದ್ದರೆ ತಮ್ಮ ಹಸುಳೆ ಇಂದು ಜೀವಂತವಾಗಿರುತ್ತಿತ್ತು ಎಂದು ಕಣ್ಣೀರು ಹಾಕಿದರು.

ಎಚ್ಚರಿಸಿದರೂ ಕ್ಯಾರೆ ಎನ್ನದ ಅಹಂಕಾರಿ ಸಂಸ್ಥೆಯೇ ? ;
ಒಬ್ಬ ಪಾಲಕರು ಶಾಲೆಗೆ ಹೋಗಿ ಎಚ್ಚರಿಕೆ ನೀಡಿದ್ದರೂ ಯಾವುದನ್ನೂ ಪಾಲಿಸದ ಸಮರ್ಥ ಶಾಲಾ ಸಂಸ್ಥೆಯ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹಾಗೆ ನೋಡಿದರೆ ಈ ಸಂಸ್ಥೆಯ ಬಗ್ಗೆ ಹಲವಾರು ಬಾರಿ ನಮ್ಮ ಪತ್ರಿಕೆ ಹಾಗೂ ವೈಯಕ್ತಿಕ ನೆಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿಯವರಿಗೆ ದೂರು ನೀಡಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
ಅಷ್ಟೇ ಯಾಕೆ ಕಳೆದ ಜನವರಿಯಲ್ಲಿ ತಹಶೀಲ್ದಾರರು, ಸಾರಿಗೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಶಿಕ್ಷಣ ಅಧಿಕಾರಿಗಳು ಸಭೆ ಸೇರಿ ಮೂಡಲಗಿ ವಲಯದಲ್ಲಿನ ಎಲ್ಲ ಖಾಸಗಿ ಶಾಲೆಗಳು ವಾಹನಗಳನ್ನು ಶಿಸ್ತಾಗಿ ಇಡಬೇಕು, ಸುಪ್ರೀಮ್ ಕೋರ್ಟ್ ಆದೇಶದಂತೆ ಎಲ್ಲ ನಿಯಮಗಳನ್ನು ಪಾಲನೆ ಮಾಡಬೇಕು ಜ.೨೫ ರೊಳಗೇ ನಿಯಮ ಪಾಲಿಸದಿದ್ದರೆ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರೂ ಕೆಲವು ಶಾಲೆಗಳ ವಾಹನಗಳು ಕೆಟ್ಟ ಮುಖದಿಂದಲೇ ತಿರುಗಾಡುತ್ತಿದ್ದವೆಂದರೆ ಶಿಕ್ಷಣ ಇಲಾಖೆಗೆ ಎಷ್ಟು ಕಿಮ್ಮತ್ತು ಕೊಡುತ್ತಿದ್ದವೆಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಅದರಲ್ಲೂ ಈಗ ಅಪಘಾತ ಮಾಡಿ ಹಸುಳೆಯ ಬಲಿ ಪಡೆದಿರುವ ಈ ಸಮರ್ಥ ಶಾಲೆ ಹಾಗೂ ಅದರ ಸಂಸ್ಥೆಯ ಬಗ್ಗೆ ಎಷ್ಟು ದೂರುಗಳನ್ನು ನೀಡಿದ್ದರೂ ಬಿಇಓ ಅವರು ಕಿವಿಗೊಡಲೇ ಇಲ್ಲ. ಈಗ ಅನಾಹುತವಾಗಿದೆ. ಬಾಳಿ ಬೆಳಗಬೇಕಾದ ಮಗುವಿನ ಜೀವ ಹೋಗಿದೆ ಇದಕ್ಕೆ ಯಾರು ಕಾರಣ ? ಎಲ್ಲ ಅಧಿಕಾರಿಗಳು, ಪಾಲಕರು ಹೇಳಿದರೂ ನಿಯಮ ಪಾಲಿಸದೇ ತನ್ನ ಮನೆಯಲ್ಲಿಯೇ ಸಂವಿಧಾನ ಇದೆ ಎಂಬ ದುರಹಂಕಾರದ ಸಮರ್ಥ ಶಾಲೆಯ ಅಧ್ಯಕ್ಷನೇ, ( ಈತನ ಹಿಂದೆ ಮಾಹಿತಿ ಕಾರ್ಯಕರ್ತ ಭೀಮಪ್ಪ ಗಡಾದ ಅವರ ಕೃಪೆಯಿದೆ. ಈಗಲೂ ಆ ಶಾಲೆ ಗಡಾದ ಅವರ ಶಾಲೆಯೇ ಎಂದು ಕರೆಯುತ್ತಾರೆ ) ಈತ ಪ್ರಭಾವಿ ಎಂದುಕೊಂಡು ನಿಯಮ ಪಾಲನೆಯಿಂದ ರಿಯಾಯಿತಿ ಕೊಟ್ಟ ಅಧಿಕಾರಿಗಳು ಕಾರಣವೆ ? ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಿಯಮ ಪಾಲಿಸದ ಇಂಥ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣಾಧಿಕಾರಿಗಳು ಯಾಕೆ ಹಿಂಜರಿಯುತ್ತಾರೆ ? ಉತ್ತರಿಸುವವರಾರು ?

ಉಮೇಶ ಮ. ಬೆಳಕೂಡ
ಮೂಡಲಗಿ

RELATED ARTICLES

Most Popular

error: Content is protected !!
Join WhatsApp Group