spot_img
spot_img

ಮತ್ತೆ ಬಂದಿದೆ ಕಿತ್ತೂರು ಉತ್ಸವ

Must Read

ಸರಕಾರ ಪ್ರತಿ ವರ್ಷ ಅಕ್ಟೋಬರ್ ೨೩,೨೪,೨೫ ರಂದು ಆಚರಿಸಿಕೊಂಡು ಬರುತ್ತಿರುವ ಬ್ರಿಟಿಷರ ವಿರುದ್ದ ಸ್ವಾತಂತ್ರö್ಯದ ಪ್ರಥಮ ಕಹಳೆಯೂದಿದ ರಾಣಿ ಚೆನ್ನಮ್ಮ ಸ್ಮರಣೆಯ ದಿನವನ್ನ ಆಚರಿಸಿಕೊಳ್ಳುತ್ತಿರುವ ಐತಿಹಾಸಿಕ ತಾಣ ಕಿತ್ತೂರು. ಅಕ್ಟೋಬರ್ ೨೩ ರಂದು ಉತ್ಸವಕ್ಕೆ ಕೋಟೆಯ ಆವರಣದಲ್ಲಿ ಚಾಲನೆ ದೊರೆತು. ಉತ್ಸವ ಆಚರಣೆಯಾಗುತ್ತಿರುವ ಕಿತ್ತೂರು ಈ ಮೂರು ದಿನಗಳೂ ರಾಜ್ಯದಲ್ಲೆಲ್ಲ ಸುದ್ದಿ ಮಾಡುತ್ತದೆ. ಕಿತ್ತೂರಿನ ಭವ್ಯವಾದ ಇತಿಹಾಸ ಸ್ಮರಣೆಯ ಅವಶ್ಯಕತೆ ಸದಾ ಇರುವಂತಾಗಬೇಕಾಗಿದೆ.

ಕಿತ್ತೂರು ಕೊನೆಯ ಕಾಳಗ ಘಟಿಸಿ (೧೮೨೪) ೧೯೮ ವರ್ಷಗಳು ಗತಿಸಿವೆ. ಇಂದಿಗೂ ಕಿತ್ತೂರು ಕೋಟೆ ಅಲ್ಲಿನ ವೀರ ಸಮಾಧಿಗಳು ಜೊತೆಗೆ ಕಾಕತಿ,ತಲ್ಲೂರು,ಮಾಸ್ತಮರಡಿ ದೇಸಾಯಿ ಮನೆತನಗಳು ಜತೆಗೆ ರಾಣಿ ಚೆನ್ನಮ್ಮಾಜಿಯ ಬೆನ್ನಿಗೆ ನಿಂತ ವೀರ ಕಲಿಗಳಾದ ಸಂಗೊಳ್ಳಿ ರಾಯಣ್ಣನಂಥಹ ವೀರರ ಸ್ಮರಣೆ ಸಾರುವ ಸ್ಮಾರಕಗಳಿನ್ನೂ ಬೆಳಗಾವಿ ಜಿಲ್ಲೆಯಾದ್ಯಂತ ಉಳಿದಿವೆ.

“ನಾವೇಕೆ ನಿಮಗೆ ಕಪ್ಪ ಕಾಣಿಕೆ ಕೊಡಬೇಕು,ನೀವೇನು ನಮ್ಮ ನೆಂಟರೇ, ಸೋದರರೇ, ನಮ್ಮ ಜೊತೆಗೆ ಉತ್ತು ಬಿತ್ತಿದವರೇನು.?ಎಂಬ ಸಿಂಹನಾದದಿಂದ ಬ್ರಿಟಿಷರ ವಿರುದ್ದ ಸ್ವಾತಂತ್ರö್ಯದ ಕಿಡಿಕಾರಿದ ಮೊತ್ತಮೊದಲ ಮಹಿಳೆಯಾದ ಕಿತ್ತೂರು ಚೆನ್ನಮ್ಮ ಇಂದಿಗೂ ಸ್ವಾತಂತ್ರ್ಯ ದ ಸಂಗ್ರಾಮದ ನೆನಪು ಮೂಡುವ ಪ್ರತಿಯೊಬ್ಬ ಭಾರತೀಯರಿಗೂ ಅಜರಾಮರ.

“ಗೀಜಗನ ಹಳ್ಳಿ”ಎಂಬ ಮೂಲ ಹೆಸರು ಹೊಂದಿದ್ದ ಈ ಕಿತ್ತೂರು ೧೬೬೦ ರಲ್ಲಿ ಐದನೆಯ ದೇಸಾಯಿ ಅಲ್ಲಪ್ಪಗೌಡನ ಆಳ್ವಿಕೆಗೆ ಒಳಪಟ್ಟಿತ್ತು ಈತ ತನ್ನ ರಾಜಧಾನಿ ಸಂಪಗಾವಿಯಿಂದ ಗೀಜಗನಹಳ್ಳಿಗೆ ವರ್ಗಾಯಿಸಿದಾಗ ಸಂಪಗಾವಿಯಿಂದ ಕಿತ್ತ ಊರು “ಕಿತ್ತೂರು”ಆಗಿ ಇತಿಹಾಸದಲ್ಲಿ ಉಳಿಯಿತು.

ಅಕ್ಟೋಬರ್ ೨೩ ರಾಣಿ ಚೆನ್ನಮ್ಮಾಜಿ ಬ್ರಿಟಿಷರ ವಿರುದ್ದ ಜಯ ಸಾಧಿಸಿದ ದಿನ. ಈ ವಿಜಯೋತ್ಸವ ಆಚರಿಸುವ ನಾವೆಲ್ಲ ಕಿತ್ತೂರಿನ ಪ್ರವಾಸ ಕೈಗೊಳ್ಳುವ ಮೂಲಕ ಇತಿಹಾಸದ ದರ್ಶನ ಪಡೆಯುವುದು ಅತ್ಯವಶ್ಯ.

ಕಿತ್ತೂರು ಧಾರವಾಡದಿಂದ ೩೧ ಕಿ.ಮೀ.ಬೆಳಗಾವಿಯಿಂದ ೪೫ ಕಿ,ಮೀ,ಬೈಲಹೊಂಗಲದಿಂದ ೩೫ ಕಿ.ಮೀ ಖಾನಾಪೂರದಿಂದ ೩೫ ಕಿ.ಮೀ ಅಂತರವಿದ್ದು ಯಾವುದೇ ಮಾರ್ಗವಾಗಿ ಬಂದರೂ ರಾಷ್ಟ್ರೀಯ ಹೆದ್ದಾರಿ ನಂ ೪ ರಲ್ಲಿರುವ ಕಾರಣ ಸಾಕಷ್ಟು ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ.

ರಾಣಿ ಚೆನ್ನಮ್ಮಾಜಿ ಸಂಕ್ಷಿಪ್ತ ಇತಿಹಾಸ:

೧೫೮೫ ರಿಂದ ೧೮೨೪ ರ ವರೆಗೆ ಒಟ್ಟು ಇಬ್ಬರು ದೇಸಾಯಿಗಳು ಕಿತ್ತೂರು ಸಂಸ್ಥಾನವನ್ನು ಆಳಿದವರಲ್ಲಿ ಪ್ರಮುಖರು.ಇಂಥ ದೇಸಾಯಿಗಳಲ್ಲಿ ಕಾಕತಿಯ ದೇಸಾಯಿಯಾದ ಧೂಳಪ್ಪಗೌಡ-ಪದ್ಮಾವತಿಯವರ ಏಕಮಾತ್ರ ಪುತ್ರಿ ರಾಣಿ ಚನ್ನಮ್ಮ ಜನಿಸಿದ್ದು ೧೭೭೮ ರಲಿ.್ಲಕಿತ್ತೂರಿನ ೧೧ ನೇ ಅರಸ ಮಲ್ಲಸರ್ಜನ ದ್ವಿತೀಯ ಮಡದಿಯಾಗಿ ಕಿತ್ತೂರು ಪ್ರವೇಶಿಸಿದಳು. ಕನ್ನಡ ಭಾಷೆಯೊಂದಿಗೆ ಮರಾಠಿ,ಉರ್ದು,ಇಂಗ್ಲೀಷ್ ಭಾಷೆಗಳ ಜ್ಞಾನ ಪಡೆದಿದ್ದಳು.

ಮಲ್ಲಸರ್ಜನ ನಿಧನದ(೧೮೧೬) ನಂತರ ರಾಣಿ ರುದ್ರಮ್ಮಳ ಮಗ ಶಿವಲಿಂಗಸರ್ಜನಿಗೆ ಪಟ್ಟ ಕಟ್ಟಬೇಕಾಯಿತು.ಆದರೆ ಆತನೂ ನಿಧನ ಹೊಂದಿದಾಗ ಸಂತಾನ ಭಾಗ್ಯವಿಲ್ಲದ ಕಿತ್ತೂರು ಸಂಸ್ಥಾನಕ್ಕೆ ದತ್ತಕ ಪುತನ್ರನ್ನು ಪಡೆದದ್ದನ್ನು ಬ್ರಿಟಿಷ್ ಸರ್ಕಾರ ಒಪ್ಪಲಿಲ್ಲ. ಕಿತ್ತೂರು ಸಂಸ್ಥಾನವನ್ನು ದತ್ತಕ ವಿರೋಧಿ ಕಾಯಿದೆ ಅನ್ವಯ ಬ್ರಿಟಿಷರು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾದಾಗ ರಾಣಿ ಚೆನ್ನಮ್ಮ ಪ್ರತಿಭಟಿಸಿದಳು.

ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬಿಚ್ಚುಗತ್ತಿ ಚನ್ನಬಸಪ್ಪ, ಗಜವೀರ, ವೀರಭದ್ರರಂತಹ ವೀರರನ್ನು ಹೊಂದಿದ್ದ ಕಿತ್ತೂರು ಸೈನ್ಯ ಥ್ಯಾಕರೆಯ ಹೆಣ ಉರುಳಿಸಿತು.ನಂತರ ಕಮೀಷನರ ಚಾಪ್ಲೀನ್ ನ ಕಪಟನೀತಿ. ಕಿತ್ತೂರಿನ ಸಂಸ್ಥಾನದಲ್ಲಿದ್ದ ಕುತಂತ್ರಿಗಳ ಮೋಸದ ಮೂಲಕ ಅಂದರೆ ಮಲ್ಲಪ್ಪಶೆಟ್ಟಿ. ವೆಂಕಟರಾಯರ ಕುತಂತ್ರದಿಂದ ಕಿತ್ತೂರಿಗೆ ಸೋಲಾಯಿತು.

ವೀರಾವೇಷದಿಂದ”ಸತ್ತರೆ ವೀರಮರಣ ಬದುಕಿದರೆ ಕಿತ್ತೂರಿನ ನೆಲೆ. ಹರಹರ ಮಹಾದೇವ”ಎಂದು ಹೋರಾಡಿದ ರಾಣಿ ಚೆನ್ನಮ್ಮಳನ್ನು ಬೈಲಹೊಂಗಲದ ಸೆರಮನೆಯಲ್ಲಿಡಲಾಯಿತು. ಸ್ವಾತಂತ್ರ್ಯದ ಕನಸು ಕಂಡ ರಾಣಿ ಚೆನ್ನಮ್ಮ ೧೮೨೯ ರಲ್ಲಿ ವಿಧಿವಶಳಾದಳು.

ಒಟ್ಟಾರೆ ಕಿತ್ತೂರು ಆಡಳಿತ ಸಂಸ್ಥಾನವು ೨೮೬ ನಗರಗಳನ್ನು ಹಾಗೂ ೭೨ ಗ್ರಾಮಗಳನ್ನು ಹೊಂದಿದ್ದ ರಾಜ್ಯವಾಗಿತ್ತು.ಇಲ್ಲಿಯ ಜನಪದ ಕಲೆ ಕರ್ಬಲ್ ಹಂತಿ ಪದಗಳು, ಲಾವಣಿ, ಸೋಬಾನ ಹಾಡುಗಳ ಮೂಲಕ ಇಂದಿಗೂ ಜನರ ಬಾಯಲ್ಲಿವೆ.ರಾಣಿ ಚೆನ್ನಮ್ಮಳ ಕೆಚ್ಚೆದೆಯ ಹೋರಾಟದ ಕಥೆಯು ಸಾವಿರಾರು ಹಳ್ಳಿಗರ ನಾಲಿಗೆಯ ಮೇಲೆ ನಲಿದಾಡುತ್ತಿದೆ.

ಕನ್ನಡ ಚಲನಚಿತ್ರ “ಕಿತ್ತೂರು ಚೆನ್ನಮ್ಮ” ಬಿ.ಸರೋಜಾದೇವಿ ಅಭಿನಯದ ಮೂಲಕವಂತೂ ನಾಡಿನಾದ್ಯಂತ ಅವಳ ಇತಿಹಾಸ ಬಿಂಬಿಸಿದೆ. ಕಿತ್ತೂರು ಇಂದಿಗೂ ಇತಿಹಾಸದಲ್ಲಿ ಅಮರವಾಗಿ ಉಳಿದಿದೆ. ಕಾರಣ ರಾಣಿ ಚೆನ್ನಮ್ಮಾಜಿಯ ಹೋರಾಟದ ಫಲ. ಆಕೆ ಜನತೆಗೆ ನೀಡಿದ ದೇಶಭಕ್ತಿಯ ಹುಮ್ಮಸ್ಸು ಸ್ವಾತಂತ್ರ್ಯಕ್ಕೆ ಪೂರಕ.

ಇಂತಹ ಸ್ಥಳದಲ್ಲಿ ಕಿತ್ತೂರು ಉತ್ಸವ ಮೂರು ದಿನಗಳ ಕಾಲ ನಡೆಯುವದನ್ನು ವೀಕ್ಷಿಸಲು ಬರುವವರಿಗೆ ಕಿತ್ತೂರಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅನೇಕ ಸಂಗತಿಗಳು ಸ್ಥಳಗಳು ಪರಿಚಯವಿರಬೇಕು. ಅಂತೆಯೇ ಕಿತ್ತೂರಿಗೆ ಆಗಮಿಸಿದ ಕೂಡಲೇ ಚೆನ್ನಮ್ಮಾಜಿಯ ಪ್ರತಿಮೆ ಅಲ್ಲಿಯ ಕೋಟೆಗೆ ಹೋಗುವ ಮಾರ್ಗದ ವೃತ್ತದಲ್ಲಿ ಕಾಣುವ ಮೂಲಕ ಅಲ್ಲಿಂದ ಮುಂದೆ ಬಂದರೆ ಪೂರ್ವ ದಿಕ್ಕಿಗೆ ಮಹಾದ್ವಾರ ಹೊಂದಿರುವ ಕೋಟೆ ಕಾಣುವುದು. ಎರಡೂ ಕಡೆಗೆ ವಿಶಿಷ್ಟ ರಸ್ತೆ ನಿರ್ಮಿತವಾದ ಕೋಟೆಯ ಸುತ್ತಲೂ ಕಂದಕವಿದ್ದು ಕಪ್ಪು ಕಲ್ಲುಗಳಿಂದ ಕೂಡಿದೆ.

ಕೋಟೆಯ ಒಳಗೆ ಪ್ರವೇಶಿಸಿದೊಡನೆ ಮ್ಯೂಜಿಯಂ ಕಾಣುತ್ತದೆ. ಅಲ್ಲಿ ಕಿತ್ತೂರಿನ ಅರಮನೆಯ ಅವಶೇಷಗಳು. ಕಿತ್ತೂರಿನ ಇತಿಹಾಸ ಸಾರುವ ತೈಲವರ್ಣ ಚಿತ್ರಗಳು.ಅಂದಿನ ಕಾಲದಲ್ಲಿ ಬಳಸಲ್ಪಟ್ಟ ವಸ್ತುಗಳು, ಕತ್ತಿ, ಗುರಾಣಿಗಳು, ಪೋಷಾಕುಗಳು, ನಾಣ್ಯಗಳು, ಸುತ್ತಮುತ್ತಲೂ ಲಭ್ಯವಾದ ಶಿಲಾಲೇಖಗಳು, ಬೀಸುವ ಕಲ್ಲುಗಳು, ಕಿತ್ತೂರಿನ ವಂಶಾವಳಿ. ಮೊದಲಾದವುಗಳನ್ನು ಕಾಣಬಹುದು. ಬೆರೆಳೆಣಿಕೆಯ ಕತ್ತಿ ಗುರಾಣಿ ಹತಿಯಾರ ಕೊಡಲಿ ಡಾಲ್ ಡ್ರೆಸ್ ಗಳಿವೆ. ಇನ್ನೂ ಕಿತ್ತೂರಿನ ಸಂಗ್ರಹಾಲಯಕ್ಕೆ ಸೇರಬೇಕಾದ ವಸ್ತುಗಳು ಬಹಳ ಇರಬಹುದು.

ಅವುಗಳ ಶೋಧ ಅಥವ ಅವುಗಳನ್ನು ತಂದು ಕೊಡಲು ಪ್ರಕಟಣೆ ನೀಡಿ ಇಲ್ಲಿ ಸಂಗ್ರಹಿಸಿಡಬಹುದಾಗಿದೆ. ಈ ವಸ್ತುಸಂಗ್ರಹಾಲಯ ೧೦ ಜನೇವರಿ ೧೯೬೭ ರಲ್ಲಿ ಸ್ಥಾಪಿತವಾಗಿದ್ದು ಬೆಳಿಗ್ಗೆ ೯ ರಿಂದ ಸಂಜೆ ೫ ರ ವರೆಗೂ ತೆರೆದಿದ್ದು ಉಚಿತವಾಗಿ ದರ್ಶನ ಒದಗಿಸುತ್ತದೆ. ಇದಕ್ಕೆ ಸರಕಾರಿ ರಜೆಗಳನ್ನು ಹೊರತುಪಡಿಸಿದರೆ ವಾರದ ರಜೆ ಸೋಮವಾರ(ಉತ್ಸವ ಹೊರತು ಪಡಿಸಿ) ಮಾತ್ರ. ಸರ್ಕಾರದವರು ಕಿತ್ತೂರಿನ ಕುರಿತ ಸಮಗ್ರ ಅಧ್ಯಯನಕ್ಕೆ ಇಂತಹ ವಸ್ತುಸಂಗ್ರಹಾಲಯವನ್ನು ನಿರ್ಮಿಸಿದ್ದು ಶ್ಲಾಘನೀಯ.

ಈ ಮ್ಯೂಜಿಯಂ ವೀಕ್ಷಿಸಿ ಹೊರಬಂದರೆ ಮದ್ದುಗುಂಡುಗಳ ಸಂಗ್ರಹಿಸಿಡುತ್ತಿದ್ದ ಭತ್ತೇರಿ ಕಾಣುವುದು ಅದನ್ನು ನೋಡಿ ಮುಂದೆ ಬಂದರೆ ಒಂದು ಕಾಲದಲ್ಲಿ ಬಲಾಡ್ಯವೆಂದು ಹೆಸರಾದ ದೊಡ್ಡ ಕೋಟೆಯ ಭಗ್ನಾವಶೇಷಗಳು ಕಾಣುತ್ತವೆ. ಸರ್ಕಾರದವರು ಈ ಅಳಿದುಳಿದ ಭಗ್ನಾವಶೇಷಗಳನ್ನು ರಕ್ಷಿಸಿದ್ದು ಸುತ್ತಲೂ ಹಸಿರು ಹುಲ್ಲುಹಾಸು ಬೆಳೆಸುವ ಮೂಲಕ ಸೌಂದರ್ಯವನ್ನು ಉಳಿಸಿದ್ದಾರೆ.ಅರಮನೆಯ ಮುಖ್ಯದ್ವಾರವು ಹಾಳಾಗಿದ್ದು ೧೦೦ ಅಡಿ ವಿಸ್ತಾರವೂ ೩೦೦ ಅಡಿ ಉದ್ದವಾದ ದ್ವಾರ ಮಂಟಪ, ಕೂಡುವ ಹಾಗೂ ಅತಿಥಿಗಳ ಕೋಣೆಗಳು, ಸಭಾಗೃಹ, ಭೋಜನಾಲಯ,‌‌ ಪೂಜಾಕೊಠಡಿ, ಸ್ನಾನದ ಮನೆ,  ಅತ್ಯಂತ ವ್ಯವಸ್ಥಿತವಾಗಿ ನಿರ್ಮಾಣವಾಗಿದ್ದು ಈ ಕೋಟೆಯ ಗೋಡೆಗಳ ಮಧ್ಯದಲ್ಲಿ ಸುಮಾರು ೧.೫ ಅಡಿ ವ್ಯಾಸದ ಓರೆಯಾಗಿ ಕೂಡಿಸಿದ ಕಬ್ಬಿಣದ ಕೊಳವೆಯಿದ್ದು ಅದು ಆಕಾಶದ ಕಡೆಗೆ ಮುಖ ಮಾಡಿದ್ದು ಇದು ನಕ್ಷತ್ರಗಳ ವೀಕ್ಷಣೆಗೆ ಮಾಡಿದ್ದಾಗಿದೆ.‌ ಇವೆಲ್ಲಕ್ಕಿಂತ ಹೆಚ್ಚಾಗಿ ನೀರಿನ ವ್ಯವಸ್ಥೆ ಅಚ್ಚರಿ ಉಂಟು ಮಾಡುತ್ತದೆ. ಒಂದು ಕಡೆ ಸಂಗ್ರಹಿಸಿದ ನೀರು ಇಡೀ ಅರಮನೆಗೆ ಪೂರೈಕೆಯಾಗುವಂತೆ ವ್ಯವಸ್ಥೆ ಇದ್ದು ಹಿಂಬದಿಯ ವರಾಂಡದ ಬದಿಯಲ್ಲಿ ನೀರಿನ ಬಾವಿಯಿದೆ. ನೀರು ತುಂಬಿಡಲು ಪಾತ್ರೆಗಳನ್ನಿಡಲು ಕೂಡ ಉತ್ಕ್ರಷ್ಟವಾದ ಕಲ್ಲಿನಿಂದ ಮಾಡಿದ ಸ್ಥಳ ಗಮನಿಸಿದರೆ ಅಚ್ಚರಿಯೆನಿಸುತ್ತದೆ. ಒಟ್ಟಾರೆ ಈ ಅರಮನೆಗೆ ಬಳಕೆಯಾದ ಕಲ್ಲು ಕಂದು ಬಣ್ಣದ ಹೈಟೆಕ್ ಕ್ವಾರ್ಟಜೆಟ್ ಕಲ್ಲು.ನೆಲಗಟ್ಟಿಗೆ ಉಪಯೋಗಿಸಿದ ಇಟ್ಟಿಗೆಗಳು ಅತ್ಯುತ್ತಮ ಗುಣಮಟ್ಟದವು,ಇಡೀ ಅರಮನೆಯು ಸ್ಪಟಿಕ ಶಿಲೆ,ಸುಣ್ಣದ ಕಲ್ಲು, ಗಟ್ಟಿಮುಟ್ಟಾದ ಹಳದಿ ಗಾರೆಯಿಂದ ನಿರ್ಮಾಣಗೊಂಡಿದೆ.

ಕಿತ್ತೂರು ಹಾಗೂ ಸಂಬಂಧಿಸಿದ ಪ್ರವಾಸೀ ತಾಣಗಳು:

ಕಿತ್ತೂರು ಸಮಾಧಿಗಳು:

ಕಿತ್ತೂರು ಕೋಟೆ ಮ್ಯುಜಿಯಂ ಕೋಟೆಯೊಳಗಿನ ಉದ್ಯಾನ ಎಲ್ಲವನ್ನೂ ವೀಕ್ಷಿಸಿ ಸಮೀಪದಲ್ಲಿರುವ ಕಲ್ಮಠಕ್ಕೆ ಬಂದರೆ ಇದು ರಾಜಗುರು ಸಂಸ್ಥಾನಮಠ. ಈ ಮಠದಲ್ಲಿ ಮುದಿ ಮಲ್ಲಪ್ಪ ಸರದೇಸಾಯಿ, ರುದ್ರಸರ್ಜ, ವೀರಪ್ಪಗೌಡ ಸರದೇಸಾಯಿ, ಮಲ್ಲಸರ್ಜ,ರಾಣಿ ಚೆನ್ನಮ್ಮಳ ಮಗ ಬಾಳಾಸಾಹೇಬ,ಸಿವಲಿಂಗ ರುದ್ರಸರ್ಜನ ಸಮಾಧಿಗಳಿವೆ. ಸೇವೂಣ ನಾಡಿನ ೧೩ ನೇ ಶತಮಾನದ ಶಿಲ್ಪಕಲೆಗೆ ಹೋಲಿಸಬಹುದಾದ ವಾಸ್ತುಶೈಲಿ ಹೊಂದಿರುವ ಸಮಾಧಿಗಳಿವೆ.

ಕಿತ್ತೂರು ಸೈನಿಕ ಶಾಲೆ:

ಕಿತ್ತೂರಿನಿಂದ ೬ ಕಿ,ಮೀ ದೂರದಲ್ಲಿ ರಾಣಿ ಚೆನ್ನಮ್ಮಳ ಹೆಸರಕಲ್ಲಿ ಸರ್ಕಾರ ಸ್ಥಾಪಿಸಿರುವ ವಿದ್ಯಾರ್ಥಿನಿಯರಿಗಾಗಿಯೇ ರಾಣಿ ಚೆನ್ನಮ್ಮ ಸೈನಿಕ ಕನ್ಯಾ ವಸತಿ ಶಾಲೆಯಿದೆ. ಕರ್ನಾಟಕದಾದ್ಯಂತ ಹೆಸರುವಾಸಿಯಾದ ಈ ಶಾಲೆ ದೈರ್ಯ ಸಾಹಸಕ್ಕೆ ಸ್ಪೂರ್ತಿ ನೀಡುವ ಚಟುವಟಿಕೆಗಳು ಅಧ್ಯಯನದ ಜೊತೆಗೆ ಕಲ್ಪಿಸುವ ಮೂಲಕ ಹೆಸರುವಾಸಿ.

ನಂದಿಹಳ್ಳಿ ಬಸವಣ್ಣ:

ವಿಶೇಷವಾಗಿ ಯಾವುದೇ ಊರುಗಳ ಹೆಸರನ್ನು ತಗೆದುಕೊಂಡರೂ ಅಲ್ಲಿ ಒಂದು ಐತಿಹ್ಯವಿದ್ದೇ ಇರುತ್ತದೆ.ಅದರ ಹೆಸರಿನ ಹಿಂದೆ ಇತಿಹಾಸದ ಗತನೆನಪು ಹೊಂದಿದ ನಂಟನ್ನು ಉಳಿಸಿಕೊಂಡ ಊರುಗಳು ಇಂದಿಗೂ ಉಳಿದು ಬಂದಿವೆ. ಕಿತ್ತೂರು ತಾಲೂಕಿನ ನಂದಿಹಳ್ಳಿ ಎಂಬ ಗ್ರಾಮವೂ ಕೂಡ ಇದಕ್ಕೆ ಹೊರತಾಗಿಲ್ಲ. ಕಿತ್ತೂರಿನಿಂದ ೮ ಕಿ.ಮೀ ಅಂತರದ ಊರು ನಂದಿಹಳ್ಳಿ.ಹಳ್ಳಿ ಎಂಬುದು ಚಿಕ್ಕ ಊರನ್ನು ಸೂಚಿಸಿದರೆ.ನಂದಿ ಎಂಬುದು ಈಶ್ವರನ ವಾಹನ ಎಂಬುದರ ಸಂಕೇತ.

ಪೌರಾಣಿಕವಾಗಿ ಶಿಲದ ಎಂಬ ಮುನಿಯು ಸಾವಿರಾರು ವರ್ಷಗಳ ತಪಸ್ಸು ಮಾಡಿ ತನಗೆ ಎಂದಿಗೂ ನಶಿಸದ ಪುತ್ರನಿರಬೇಕೆಂದು ಬಯಕೆಯನ್ನು ಶಿವನ ಮೂಲಕ ಗಳಿಸಿಕೊಳ್ಳುತ್ತಾನೆ.‌ ಹಾಗೆ ಶಿವನ ವರಪ್ರಸಾದದಿಂದಲೇ ಹುಟ್ಟಿದ ನಂದಿ ಶಿವನಿಗೆ ಬಲು ಪ್ರಿಯ.ಅದರಂತೆ ನಂದಿಗೂ ಸಹ ಶಿವನ ಮೇಲೆ ಎಲ್ಲಿಲ್ಲದ ಪ್ರೀತಿ ಗೌರವ ಹಾಗೂ ಆದರ.

ದೇಹದಿಂದ ಪ್ರತ್ಯೇಕವಿದ್ದರೂ ಮನಸ್ಸು ಸದಾ ಶಿವನಲ್ಲಿ ಕೇಂದ್ರೀಕೃತವಾಗಿರುತ್ತದೆ ಎನ್ನುವುದರ ಸೂಚಕವಾಗಿ ಶಿವನ ಮುಂದೆ ಸಾಮಾನ್ಯವಾಗಿ ನಂದಿ ವಿಗ್ರಹವಿರುತ್ತದೆ.ಕಿತ್ತೂರಿನ ಸಮೀಪದಲ್ಲಿ ಮೂರು ನಂದಿಹಳ್ಳಿ ಗ್ರಾಮಗಳಿವೆ.

ಚಿಕ್ಕನಂದಿಹಳ್ಳಿ, ಹಿರೇನಂದಿಹಳ್ಳಿ, ನಂದಿಹಳ್ಳಿ, ಇವೆಲ್ಲವೂ ಒಂದರ ಪಕ್ಕ ಮತ್ತೊಂದರಂತೆ ಇರುವುದು ಕೂಡ ವಿಶೇಷ.  ಹಾಗಾದರೆ ನಾವು ಭೇಟಿ ಮಾಡಬೇಕಾದ ನಂದಿಹಳ್ಳಿಯು ಕಿತ್ತೂರಿನಿಂದ ೮ ಕಿ.ಮೀ ಅಂತರದಲ್ಲಿದ್ದು ಬೈಲಹೊಂಗಲ ಮಾರ್ಗವಾಗಿ ಹೊರಡುವ ರಸ್ತೆಯಲ್ಲಿ ಕಿತ್ತೂರಿನಿಂದ ಅತೀ ಸಮೀಪದಲ್ಲಿರುವ ಮೊದಲಿಗೆ ಬರುವ ಹಳ್ಳಿಯಾಗಿದೆ. ಇನ್ನುಳಿದ ನಂದಿಹಳ್ಳಿ ಹೆಸರಿನ ಗ್ರಾಮಗಳು ನಂತರ ಬರುತ್ತವೆ.

ಕಿತ್ತೂರಿನಿಂದ ಪಟ್ಟಿಹಾಳ ಮಾರ್ಗವಾಗಿ ಚಲಿಸುವ ಬಸ್ ನಂದಿಹಳ್ಳಿ ಗ್ರಾಮದ ಮೂಲಕ ಬಂದು ಹೋಗುತ್ತದೆ. ದೇವಾಲಯದ ಮುಂದೆಯೇ ನಿಂತು ಹೋಗುವುದರಿಂದ ಕಿತ್ತೂರಿನಿಂದ ಇಲ್ಲಿಗೆ ಬಂದು ಹೋಗುವವರಿಗೆ ಅನುಕೂಲ ಇಲ್ಲವಾದಲ್ಲಿ ಸ್ವಂತ ವಾಹನವಿದ್ದಲ್ಲಿ ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ.

ಬೈಲಹೊಂಗಲದಿಂದ ೨೬ ಕಿ.ಮೀ ಮತ್ತು ಸವದತ್ತಿಯಿಂದ ಬೆಳವಡಿ ಮೂಲಕ ೩೨ ಕಿ.ಮೀ ಅಂತರದಲ್ಲಿ ನಂದಿಹಳ್ಳಿಯನ್ನು ತಲುಪಬಹುದಾಗಿದೆ.‌ ಕಿತ್ತೂರಿಗೆ ಬಂದರೂ ಕೂಡ ನಂದಿಹಳ್ಳಿಯನ್ನು ಸುಲಭವಾಗಿ ತಲುಪಬಹುದು. ಅಟೋ ರಿಕ್ಷಾ.ಇತರೆ ಬಾಡಿಗೆ ವಾಹನಗಳು ಕೂಡ ಕಿತ್ತೂರಿನಿಂದ ಲಭ್ಯವಿದ್ದು ಅವರವರ ಅನುಕೂಲಕ್ಕೆ ತಕ್ಕಂತೆ ಇಲ್ಲಿಗೆ ಬಂದು ಹೋಗಬಹುದು.

ಇಲ್ಲಿ ಬಂದಿಳಿದ ತಕ್ಷಣ ಗೋಚರಿಸುವುದೇ ಎರಡು ಗೋಪುರವನ್ನುಳ್ಳ ವಿಶಾಲವಾದ ಪ್ರಾಂಗಣವುಳ್ಳ ನಂದಿಹಳ್ಳಿ ಬಸವಣ್ಣನ ದೇವಸ್ಥಾನ. ಅದನ್ನು ಬಿಟ್ಟರೆ ದೇವಸ್ಥಾನಕ್ಕೆ ಹಣ್ಣು ಕರ್ಪೂರ ಎಣ್ಣೆ ಇತ್ಯಾದಿ ತಗೆದುಕೊಂಡು ಹೋಗಬೇಕಲ್ಲವೇ ಅವುಗಳನ್ನು ಹೊಂದಿದ ಪುಟ್ಟ ಪುಟ್ಟ ಅಂಗಡಿಗಳು ಇಲ್ಲಿವೆ. ಮಕ್ಕಳೊಂದಿಗೆ ಬಂದಿದ್ದಲ್ಲಿ ಮಕ್ಕಳು ತಿನ್ನಲು ಬೇಕಾದ ಸಣ್ಣಪುಟ್ಟ ತಿಂಡಿ ತಿನಿಸು ಕೂಡ ಇಲ್ಲಿ ಲಭ್ಯವಿದೆ. ಆದರೆ ನಿಮ್ಮ ಜೊತೆಗೆ ನೀವು ಊಟಕ್ಕೆ ಬೇಕಾಗುವಷ್ಟು ಆಹಾರ ತಂದಿದ್ದರೆ ಅನುಕೂಲ. ದೇವಸ್ಥಾನದ ಪಕ್ಕದಲ್ಲಿ ಒಂದು ಕಲ್ಯಾಣ ಮಂಟಪವಿದೆ. ಇಲ್ಲಿ ವಿವಾಹ ಇತರೆ ಕಾರ್ಯ ಚಟುವಟಿಕೆಗಳು ಕೂಡ ಮುಹೂರ್ತಕ್ಕೆ ತಕ್ಕಂತೆ ಜರಗುತ್ತಿರುತ್ತವೆ.

ಪುಟ್ಟದಾದ ಬಾಗಿಲನ್ನು ಮೆಟ್ಟಿಲುಗಳ ಮೂಲಕ ಪ್ರವೇಶ ಮಾಡಿದರೆ ಸಿಗುವುದೇ ದೇವಾಲಯ.ವಿಶಾಲವಾದ ಪ್ರಾಂಗಣದಲ್ಲಿ ಸುತ್ತಲೂ ಅಲ್ಲಲ್ಲಿ ಕೊಠಡಿಗಳು ವಿವಿಧ ಧಾರ್ಮಿಕ ಕಾರ್ಯ ಮುಗಿಸಿದರೆ ಪ್ರಸಾದ ಸೇವನೆಗೆ ಕುಳಿತುಕೊಳ್ಳಲು ಅನುಕೂಲವಿರುವ ಛತ್ರಗಳ ಆಕಾರದ ಕೊಠಡಿಗಳು.ಕುಡಿಯುವ ನೀರಿನ ವ್ಯವಸ್ಥೆ ಹೊಂದಿದ ನಲ್ಲಿಗಳು ಇತ್ಯಾದಿಯನ್ನು ಪ್ರಾಂಗಣದಲ್ಲಿ ಕಾಣಬಹುದು. ಅಲ್ಲಿ ದೇವಾಲಯಕ್ಕೆ ಪ್ರದಕ್ಷಿಣೆಯನ್ನು ಕೂಡ ಹಾಕಬಹುದಾಗಿದೆ.ವಿವಾಹಗಳು ಕೂಡ ಇಲ್ಲಿ ಜರುಗುತ್ತಿರುವ ಕಾರಣ ವಿವಾಹ ಮೂಹೂರ್ತಗಳ ಸಂದರ್ಭ ಇಲ್ಲಿ ಜನದಟ್ಟಣೆ ಹೆಚ್ಚಿರುತ್ತದೆ.

ದೇವರಿಗೆ ಹರಕೆ ಹೊತ್ತವರು ತಮ್ಮ ಅಭೀಷ್ಟಾರ್ಥ ನೆರವೇರಿದಾಗ ಇಲ್ಲಿ ವಿವಿಧ ರೀತಿಯ ಪ್ರದಕ್ಷಿಣೆಗಳನ್ನು ಹಾಕುವುದುಂಟು.ಇನ್ನು ಒಳಗೆ ಪ್ರವೇಶಿಸಿದರೆ ವಿಶಾಲವಾದ ಅಜಾನುಬಾಹು ನಂದಿ ವಿಗ್ರಹವನ್ನು ನೀವು ಕಾಣಬಲ್ಲಿರಿ.ಏಕಶಿಲಾ ವಿಗ್ರಹ ಇದಾಗಿದ್ದು.ಈ ಭಾಗದಲ್ಲಿಯೇ ವಿಶಿಷ್ಟವಾಗಿ ಬೆಳೆದು ನಿಂತ ನಂದಿ ವಿಗ್ರಹ ಇದು.ಕಿತ್ತೂರಿನ ಸಂಸ್ಥಾನಕ್ಕೂ ಈ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆ.

ಕಿತ್ತೂರಿನ ದೊರೆ ಮಲ್ಲಸರ್ಜ ಪ್ರತಿದಿನ ಈ ದೇವಾಲಯಕ್ಕೆ ಭೇಟಿ ನೀಡಿ ನಂದಿಯ ಅನುಗ್ರಹ ಪಡೆಯುವ ಮೂಲಕ ತನ್ನ ನಿತ್ಯದ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದರೆಂದು ಹಿರಿಯರು ಹೇಳುವರು. ಕಿತ್ತೂರು ರಾಣಿ ಚನ್ನಮ್ಮಳಿಗೂ ಕೂಡ ಈ ನಂದಿ ಅಚ್ಚುಮೆಚ್ಚು. ಕಲ್ಯಣದ ಶರಣರು ಉಳವಿಯತ್ತ ಸಾಗಿದಾಗ ಈ ಮಾರ್ಗವಾಗಿ ಸಂಚರಿಸಿರುವುದು ಕೂಡ ನಂದಿಹಳ್ಳಿ ಉಲ್ಲೇಖವಾಗುತ್ತದೆ.

ಇಲ್ಲಿನ ನಂದಿ ಮಾತ್ರ ಭಕ್ತರ ಅಭೀಷ್ಟ ಪೂರೈಸಿದ ನಂದಿಯಾದ ಕಾರಣ ಇಲ್ಲಿನ ಸುತ್ತಮುತ್ತಲಿನ ಜನರೂ ಈ ಬಸವಣ್ಣನಿಗೆ ಬಂದು ತಮ್ಮ ಭಕ್ತಿ ಸಮರ್ಪಿಸುವುದನ್ನು ಕಾಣಬಹುದು.ಇಲ್ಲಿ ನಂದಿ ಎದುರಿಗೆ ಈಶ್ವರನ ಮೂರ್ತಿ ಇದೆ. ನಂದಿ ತದೇಕ ಚಿತ್ತದಿಂದ ಈಶ್ವರನ ನೋಡುತ್ತಿರುವಂತೆ ಭಾಸವಾಗುತ್ತದೆ.ಒಂದು ಬದಿಗೆ ಅರ್ಚಕರ ಕೊಠಡಿಯಿದ್ದು ಅವರು ಸದಾ ಅಲ್ಲಿರುವುದರಿಂದ ಅರ್ಚನೆಗೆ ಅನುಕೂಲ. ಒಟ್ಟು ಮೂರು ಮನೆತನಗಳು ತಮ್ಮ ತಮ್ಮ ಸರತಿಯಂತೆ ಇಲ್ಲಿ ಅರ್ಚನೆ ಕೈಗೊಳ್ಳುತ್ತ ಬಂದಿದ್ದು. ನಿತ್ಯವೂ ನಂದಿಗೆ ಪೂಜೆ ಸಲ್ಲುತ್ತಿರುವುದು.

ನಂದಿ ಬಸವಣ್ಣನ ವಾರ ಸೋಮವಾರವೆಂತಲೂ ಆ ದಿನ ವಿಶೇಷವಾದ ಜನಸಂದಣಿ ಇಲ್ಲಿರುವುದು. ಅಷ್ಟೇ ಅಲ್ಲ ಶ್ರಾವಣ ಮಾಸದಲ್ಲಿ ಇಲ್ಲಿ ವಿಶಿಷ್ಟ ಪೂಜೆಗಳು ಜರುಗುತ್ತವೆ.ಪ್ರತಿ ಶ್ರಾವಣ ಸೋಮವಾರವಂತೂ ಹಬ್ಬದ ವಾತಾವರಣ ಈ ದೇವಾಲಯದಲ್ಲಿ ಏರ್ಪಟ್ಟಿರುತ್ತದೆ. ಇನ್ನು ಶಿವರಾತ್ರಿಯ ಸಂದರ್ಭ ಇಲ್ಲಿ ರಥೋತ್ಸವ ಜರಗುತ್ತದೆ.‌ ವರ್ಷವಿಡೀ ಯಾವುದೇ ಸಂದರ್ಭದಲ್ಲೂ ಇಲ್ಲಿಗೆ ಭೇಟಿ ನೀಡಬಹುದು. ಸದಾ ಇಲ್ಲಿ ಅರ್ಚಕರಿರುವ ಕಾರಣ ನಂದಿಯ ದರ್ಶನವನ್ನು ಪಡೆಯಬಹುದಾಗಿದೆ.

ಇದೊಂದು ಚಿಕ್ಕ ಗ್ರಾಮವಾಗಿರುವ ಕಾರಣ ಸಾಧ್ಯವಾದಷ್ಟು ತಮ್ಮ ತಮ್ಮ ಅನುಕೂಲಗಳನ್ನು ಆಧರಿಸಿ ತಮ್ಮೊಂದಿಗೆ ಪರಿಕರ ಆಹಾರದ ವ್ಯವಸ್ಥೆಯೊಂದಿಗೆ ಇಲ್ಲಿಗೆ ಬಂದರೆ ಅನುಕೂಲ. ದೇವರ ದರ್ಶನಗೈದು ಇಲ್ಲಿಯೇ ಸ್ವಲ್ಪಕಾಲ ವಿಶ್ರಮಿಸಿ ಹೋಗಲು ಹೇಳಿ ಮಾಡಿಸಿದ ತಾಣವಿದು.

ಹಾಗಾದರೆ ಇನ್ನೇಕೆ ತಡ ನಿಮಗೆ ಅನುಕೂಲವಿದ್ದರೆ ವರ್ಷದ ಯಾವುದೇ ದಿನ ಯಾವುದೇ ಸಂದರ್ಭ ಕಿತ್ತೂರಿನ ಮೂಲಕ ನಂದಿಹಳ್ಳಿಗೆ ಬನ್ನಿ. ಕಿತ್ತೂರು ಪುಣೆ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಕಾರಣ ಬೆಳಗಾವಿ ಧಾರವಾಡ ಮೂಲಕ ಸಾಕಷ್ಟು ವಾಹನಗಳ ಸಂಚಾರವಿದ್ದು.‌ ಕಿತ್ತೂರಿನ ಬಸ್ ನಿಲ್ದಾಣದ ಮೂಲಕ ಹಾದು ಹೋಗುವ ಕಾರಣ ಕಿತ್ತೂರಿಗೆ ಬಂದು ಅಲ್ಲಿನ ಬಸ್ ನಿಲ್ದಾಣದಲ್ಲಿ ನಂದಿಹಳ್ಳಿ ಬಸವಣ್ಣನಿಗೆ ಹೋಗುವ ಬಸ್ ಎಷ್ಟು ಗಂಟೆಗೆ ಬರುತ್ತದೆ ಎಂದು ವಿಚಾರಿಸಿ ಸರಕಾರಿ ಬಸ್ ಮೂಲಕ ಇಲ್ಲಿಗೆ ನೇರವಾಗಿ ತಲುಪಬಹುದು.

ಇಲ್ಲವೇ ಅಟೋ ರಿಕ್ಷಾ ಅಥವ ವಿವಿಧ ರೀತಿಯ ಬಾಡಿಗೆ ವಾಹನಗಳ ಮೂಲಕವೂ ಬರಬಹುದು. ನಿಮ್ಮದೇ ಆದ ವಾಹನದ ವ್ಯವಸ್ಥೆಯೊಂದಿಗೆ ಬಂದಿದ್ದರಂತೂ ಎಲ್ಲಕ್ಕಿಂತಲೂ ಅನುಕೂಲ.ಯಾವುದೇ ರೀತಿಯಿಂದಲಾದರೂ ಬನ್ನಿ ನಿಮಗೆ ನಂದಿ ದರ್ಶನ ಕಟ್ಟಿಟ್ಟ ಬುತ್ತಿ.ಇಂದೇ ಭೇಟಿ ಕೊಟ್ಟು ನಂದಿಯ ದರ್ಶನ ಪಡೆದು ಕೃತಾರ್ಥರಾಗಿ.

ಸಂಗೊಳ್ಳಿ:

ದೇಶಪ್ರೇಮಿ ವೀರಯೋಧ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ. ಇದು ಕಿತ್ತೂರಿನಿಂದ ಹದಿನೈದು ಕಿ.ಮೀ ಅಂತರದಲ್ಲಿದೆ. ಬ್ರಿಟಿಷ್ ಸರ್ಕಾರಕ್ಕೆ ಸಿಂಹಸಪ್ನವಾಗಿದ್ದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣನ ದೇಶಪ್ರೇಮ. ಶೌರ್ಯವನ್ನು ಯುವ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಸಂಗೊಳ್ಳಿಯಲ್ಲಿ ರಾಕ್ ಗಾರ್ಡನ್ ನಿರ್ಮಾಣದ ಪ್ರಗತಿಯಲ್ಲಿದೆ. ಇಲ್ಲಿ ಚನ್ನಮ್ಮಳ ಆಡಳಿತದ ವೈಖರಿ, ಯುದ್ದ ಸಂದರ್ಭ, ರಾಜರ ದರ್ಬಾರ.ಅಂದಿನ ನಾಡಿನ ವೈಭವ, ಜನ ಜೀವನ ಪದ್ದತಿ, ದೇಶಭಕ್ತಿಯ ಕಿಚ್ಚು, ರಾಯಣ್ಣನ ದೇಶಾಭಿಮಾನ ಬಿಂಬಿಸುವ ಸನ್ನಿವೇಶಗಳು ಒಂದೇ ಎರಡೇ ಸಮಗ್ರ ಚಿತ್ರಣವನ್ನು ಇಲ್ಲಿ ರೂಪಿಸುತ್ತಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

ಬೈಲಹೊಂಗಲ ರಾಣಿ ಸಮಾಧಿ:

ಕಿತ್ತೂರಿನಿಂದ ಬೈಲಹೊಂಗಲ ೩೩ ಕಿ.ಮೀ ಅಂತರದಲ್ಲಿದ್ದು ರಾಣಿ ಚೆನ್ನಮ್ಮಳ ಸಮಾಧಿ ಇಲ್ಲಿದ್ದು. ರಾಣಿ ಸೆರಮನೆಯಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದಿದ್ದು ಕಪ್ಪು ಶಿಲೆಯಿಂದ ರಾಣಿಯ ಮೂರ್ತಿಯನ್ನು ನಿರ್ಮಿಸಿದ್ದು ಪಕ್ಕದಲ್ಲಿ ಉದ್ಯಾನವನವಿದೆ.ಪ್ರತಿ ವರ್ಷ ನಡೆಯುತ್ತಿರುವ ಕಿತ್ತೂರು ಉತ್ಸವದಂದು ರಾಣಿ ಚೆನ್ನಮ್ಮಾಜಿ ಸಮಾಧಿ ಸ್ಥಳದಿಂದ ಜ್ಯೋತಿಯನ್ನು ತರುವ ಮೂಲಕ ಉತ್ಸವ ನಡೆಸುತ್ತಿರುವುದು ಶ್ಲಾಘನೀಯ.

ನಂದಗಡ:

ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ. ಕೆಚ್ಚೆದೆಯ ಹೋರಾಟಗಾರ ರಾಯಣ್ಣನನು ಕುರಿತು ದರ್ಶನ್ ಅಭಿನಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಲನಚಿತ್ರವನ್ನು ಆನಂದ ಅಪ್ಪುಗೋಳ್ ನಿರ್ಮಿಸಿದ್ದು ಈಗ ಈ ಚಲನಚಿತ್ರದ ಮೂಲಕ ಸಂಗೊಳ್ಳಿ ರಾಯಣ್ಣನ ಇತಿಹಾಸ ಎಲ್ಲೆಡೆ ಪಸರಿಸಿದೆ. ಈಗ ಇದು ಪ್ರವಾಸೀ ತಾಣವಾಗುತ್ತಿದೆ. ಇಲ್ಲಿನ ಎಲ್ಲ ಸ್ಥಳಗಳಲ್ಲಿಯೂ ರಾಯಣ್ಣನ ಬದುಕಿಗೆ ಸಂಬಂಧಿಸಿದ ಚಿತ್ರಣಗಳನ್ನು ಮಾಡುತ್ತಿರುವರು. ಬಾಲ್ಯದಿಂದ ಹಿಡಿದು ಅವನನ್ನು ಗಲ್ಲಿಗೇರಿಸುವವರೆಗಿನ ಎಲ್ಲ ಚಿತ್ರಣಗಳನ್ನು ದೃಶ್ಯರೂಪಕ ಮತ್ತು ಮೂರ್ತಿಗಳ ರೂಪದಲ್ಲಿ ಮಾಡುತ್ತಿರುವರು. ಈ ಕಾರ್ಯ ಈಗ ಅಂತಿಮ ಹಂತದಲ್ಲಿದೆ.

ಕಾಕತಿ:

ಬೆಳಗಾವಿಗೆ ೧೦ ಕಿ.ಮೀ ಹತ್ತಿರವಿರುವ ಕಾಕತಿ ರಾಣಿ ಚೆನ್ನಮ್ಮಾಜಿಯ ಜನ್ಮಸ್ಥಳ ಹಾಗೂ ತವರುಮನೆ.ಇಲ್ಲಿ ಕೋಟೆ ವಾಡೆಗಳಿವೆ. ಕಾಕತಿ ಊರಿನ ಪೂರ್ವ ದಿಕ್ಕಿನ ಗುಡ್ಡದ ಮೇಲೆ ಕೋಟೆಯನ್ನು ನಿರ್ಮಿಸಿದ್ದು ಎತ್ತರದ ಪ್ರದೇಶದಿಂದ ವಿಹಂಗಮ ದರ್ಶನ. ಆಯಕಟ್ಟಿನಲ್ಲಿ ಎತ್ತರದ ಮೂರು ಬುರುಜುಗಳು ಇವುಗಳಿಗೆ ಒಳಗಿನಿಂದ ಮೇಲೆ ಹತ್ತಲು ಮೆಟ್ಟಿಲುಗಳಿದ್ದು.‌‌ ಇಲ್ಲಿ ಸುರಂಗಮಾರ್ಗ ಕೂಡ ಇದೆ.ಕೋಟೆಯ ಬಹುತೇಕ ಭಾಗಗಳು ಹಾಳಾಗಿವೆ.

ಇನ್ನುಳಿದಂತೆ ಚನ್ನಮ್ಮನ ಅಂಗರಕ್ಷಕ ಅಮಟೂರು ಬಾಳಪ್ಪ (ಬಾಳಾಸಾಹೇಬ)ನ ಸಮಾಧಿ ಅಮಟೂರಿನಲ್ಲಿದೆ. ಅಮಟೂರು ಬೈಲಹೊಂಗಲದಿಂದ ೬ ಕಿ.ಮೀ ಅಂತರದಲ್ಲಿದೆ. ಬಾಳಾಸಾಹೇಬನ ಮೂರ್ತಿಯೊಂದಿನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವರ ಸೀಗೀಹಳ್ಳಿಯಲ್ಲಿ ಮಲ್ಲಸರ್ಜನ ಸುಂದರ ವಿನ್ಯಾಸದ ಬಾವಿಯೊಂದಿದೆ.

ದೇಶನೂರಿನ ನಿರಂಜನಿ ಮಹಲ್, ತಲ್ಲೂರು ಮತ್ತು ಚಚಡಿ ದೇಸಾಯಿ ವಾಡೆ.ಇನ್ನು ಧಾರವಾಡದಲ್ಲಿ ಥ್ಯಾಕರೆಯ ಸಮಾಧಿ ಇದೆ.ಈ ಸಮಾಧಿಯಲ್ಲಿ ಕಂದು ಬಣ್ಣದ ಅಮೃತಶಿಲೆಯ ಫಲಕ ಇದೆ.ಸ್ವಲ್ಪ ದೂರದಲ್ಲಿ ಕ್ಯಾಪ್ಟನ್ ಬ್ಲಾಕ್. ಲೆಪ್ಟನೆಂಟ್ ಸಿವಿಲ್.ಲೆಪ್ಟನಂಟ್ ಡಯಟನ್ ಅವರ ಸಮಾಧಿಗಳಿವೆ.

ಧಾರವಾಡದ ಕಿತ್ತೂರು ಚನ್ನಮ್ಮ ಪಾರ್ಕ ನಲ್ಲಿ ಥ್ಯಾಕರೆಯ ನೆನಪಿನಲ್ಲಿ ಸ್ಮಾರಕ ಸ್ಥಂಭ ನಿರ್ಮಿಸಲಾಗಿದೆ.ಹೇಳುತ್ತಾ ಹೊರಟರೆ ಕಿತ್ತೂರು ಇತಿಹಾಸಕ್ಕೆ ಸಂಬಂಧಿಸಿದಂತೆ ಹಲವಾರು ಸ್ಥಳಗಳು ಅವುಗಳ ಮಹತ್ವವನ್ನು ಹೇಳಬಹುದು. ಪ್ರಮುಖವಾದವುಗಳನ್ನು ಇಲ್ಲಿ ಹೆಸರಿಸಿರುವೆನು

ಒಟ್ಟಾರೆ ಕಿತ್ತೂರು ಉತ್ಸವ ಅಥವ ಕಿತ್ತೂರು ಪ್ರವಾಸಕ್ಕೆಂದು ಬರುವವರು ಈ ಮೇಲ್ಕಂಡ ಎಲ್ಲ ಸ್ಥಳಗಳನ್ನು ಸಂದರ್ಶಿಸಿದರೆ ಕಿತ್ತೂರು ಇತಿಹಾಸದ ಪುಟಗಳನ್ನು ಖುದ್ದಾಗಿ ಅವಲೋಕಿಸಿದಂತಾಗುವುದರಲ್ಲಿ ಯಾವ ಸಂಶಯವೂ ಇಲ್ಲ.
ಸ್ವಾತಂತ್ರ್ಯ ದ ಪ್ರೇರಣೆ. ಅಂದಿನ ಸಾಹಸಗಾಥೆ ವಿವರಿಸುವ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಹುಟ್ಟಿಸಲು ಕೂಡ ಇದು ಸಹಾಯಕಾರಿ.


ವೈ.ಬಿ.ಕಡಕೋಳ
ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ,ಶಿಂದೋಗಿ ಕ್ರಾಸ
ಮುನವಳ್ಳಿ-೫೯೧೧೧೭
ತಾಲೂಕ: ಸವದತ್ತಿ ಜಿಲ್ಲೆ: ಬೆಳಗಾವಿ
೮೯೭೧೧೧೭೪೪೨ ೭೯೭೫೫೪೭೨೯೮

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!