ಹುಬ್ಬಳ್ಳಿ: ನಾನು ಇಂಜಿನಿಯರಿಂಗ್ ನಲ್ಲಿ ಜಾಸ್ತಿ ಮಾರ್ಕ್ಸ ತೆಗೆದುಕೊಂಡಿದ್ದರೆ ಪ್ರೊಫೆಸರ್ ಅಥವಾ ಎಇಇ ಆಗ್ತಿದ್ದೆ. ಆದ್ರೆ ನಾನು ೩೫ ಮಾರ್ಕ್ಸ ಕೆಟಗೆರಿಯವರು. ಅದಕ್ಕೆ ಇಂಡಸ್ಟ್ರಿಯಲ್ ಮಿನಿಸ್ಟರ್ ಆದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.
ಅವರು ಹುಬ್ಬಳ್ಳಿಯ ಬಿವ್ಹಿಬಿ ಕ್ಯಾಂಪಸ್‌ನಲ್ಲಿ ಇರುವ ಟೆಕ್ ಅಮೃತ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮ ಮತ್ತು ಕೆಎಲ್‌ಇ ೭೨ ನೇ ವರ್ಷದ ಸಂಸ್ಥಾಪನ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದ ಕೆಲ ಗಳಿಗೆಗಳನ್ನು ನೆನಪಿಸಿಕೊಂಡರು. ಸಚಿವರು ಈ ರೀತಿ ಹೇಳುತ್ತಿದ್ದಂತೆ ಸಭಿಕರಿಂದ ಜೋರಾದ ಚಪ್ಪಾಳೆಯ ಸುರಿಮಳೆಯೇ ಸುರಿಯಿತು. ಚಪ್ಪಾಳೆ ನೋಡಿ ನನ್ನ ಕೆಟಗರಿಯವರು ಬಹಳ ಜನ ಇದ್ದಾರೆಂದು ತಿಳಿಯುತ್ತದೆ ಎಂದರು.
ನಾನು ಈ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಬಹಳ ಖುಷಿಯಾಗುತ್ತೆ. ಪ್ರಧಾನಿ, ಅಮಿತ್ ಶಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದೇನೆ. ಅದಕ್ಕಿಂದ ಖುಷಿ ಈ ಕಾರ್ಯಕ್ರಮ ನೀಡುತ್ತಿದೆ. ಬಿವ್ಹಿಬಿ ಕಾಲೇಜು ಸಾಕಷ್ಟು ಜನ ಮೇಧಾವಿಗಳನ್ನ ನೀಡುತ್ತಿದೆ. ಸುಧಾಮೂರ್ತಿ, ಅನಂತಕುಮಾರ ಅವರಂತವರೂ ಈ ಕಾಲೇಜಿನ ವಿದ್ಯಾರ್ಥಿಗಳು. ಇದು ನನಗೆ ಬಹಳ ಹೆಮ್ಮೆಯ ವಿಷಯ. ಕೆಎಲ್‌ಇಯು ದೇಶದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಒಂದಾಗಿದೆ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಇವರು ಕೂಡಾ ಇದೇ ಕೆಎಲ್‌ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದ ಕೆಲ ನೆನಪುಗಳನ್ನು ಸ್ಮರಿಸಿದರು. ಇದೇ ಸಂಧರ್ಭದಲ್ಲಿ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವ ಮುರುಗೇಶ ನಿರಾಣಿಯವರನ್ನು ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಪ್ರಭಾಕರ ಕೋರೆ ಕಾಲೇಜಿನ ವತಿಯಿಂದ ಗೌರವ ಪೂರ್ವಕವಾಗಿ ಸನ್ಮಾನಿಸಿದರು.