ಸಿಂದಗಿ: ಮಕ್ಕಳು ತಮ್ಮ ಮನೆಯಲ್ಲಿ ಸ್ವತಃ ತಾವೇ ವಿವಿಧ ರೀತಿಯ ಪದಾರ್ಥಗಳನ್ನು ತಯಾರಿಸಿ ಆಹಾರ ಉತ್ಸವದಲ್ಲಿ ಪ್ರದರ್ಶನ ಮಾಡುವ ಮೂಲಕ ತಮ್ಮಲ್ಲಿನ ಸೃಜನಶೀಲತೆಯನ್ನು ಇನ್ನಷ್ಟು ವಿಕಾಸಗೊಳಿಸಿದ್ದಾರೆ ಎಂದು ಪತ್ರಕರ್ತ ಮಹಾಂತೇಶ ನೂಲನವರ ಹೇಳಿದರು.
ಪಟ್ಟಣದ ಲಿಟಲ್ ವಿಂಗ್ಸ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳು ಆಯೋಜಿಸಿರುವ ಆಹಾರ ಉತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಅಲ್ಲದೆ ಪ್ರಥಮ ಬಾರಿಗೆ ಶಾಲೆಯಲ್ಲಿ ಆಹಾರ ಮೇಳ ಆಯೋಜಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ, ಮನೆಯಲ್ಲಿ ತಯಾರಿಸಿದ ಆಹಾರದ ಅವಶ್ಯಕತೆ ಹಾಗೂ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಒಂದಲ್ಲಾ ಒಂದು ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡುತ್ತ ಬರುತ್ತಿರುವ ಲಿಟಲ್ ವಿಂಗ್ಸ್ ಶಾಲೆಯ ಶಿಕ್ಷಕರಿಗೆ ಅಭಿನಂದಿಸಿದರು.
ಇನ್ನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆರಕ್ಷಕ ಮೌಲಾಲಿ ಆಲಗೂರ ಮಾತನಾಡಿ, ಇಂದು ನಾವು ವಿದೇಶಿ ಆಹಾರಗಳಾದ ಫಿಜಾ, ಬರ್ಗರ್, ಫ್ರೆಂಚ್ ಫ್ರೈಸ್, ಮೊಮೊಸ್, ನೂಡಲ್ಸ್, ಸೇರಿದಂತೆ ಫಾಸ್ಟ್ ಫುಡ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದೆವೆ. ಅಲ್ಲದೇ ಮಕ್ಕಳಿಗೂ ಕೂಡಾ ಇಂತಹ ಆಹಾರವನ್ನೆ ತಿನ್ನಿಸುತ್ತಿರುವುದರಿಂದ ಮಕ್ಕಳ ಬೆಳವಣಿಗೆಯಲ್ಲಿ ಋಣಾತ್ಮಕ ಪರಿಣಾಮ ಬೀರುತ್ತಿದೆ. ವಿಷಪೂರಿತ ಜಂಕ್ ಫುಡ್ ತಿನ್ನುವುದರಿಂದ ಹೊಸ ಹೊಸ ರೋಗಗಳು ಉತ್ಪತ್ತಿಯಾಗುತ್ತಿವೆ. ಆದ್ದರಿಂದ ಪಾಲಕರಾದ ನಾವುಗಳು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಆಟ-ಪಾಠದ ಜೊತೆಗೆ ದೇಶಿಯ ಮತ್ತು ಆರೋಗ್ಯಕ್ಕೆ ಉತ್ತಮವಾಗಿರುವ ಆಹಾರ ಪದಾರ್ಥಗಳ ಕುರಿತು ಪರಿಚಯಿಸಬೇಕು. ಶಾಲಾ-ಕಾಲೇಜುಗಳಲ್ಲಿ ಆಹಾರ ಮೇಳ ಅಥವಾ ಆಹಾರ ಉತ್ಸವಗಳಂತ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಗ ಮಕ್ಕಳಿಗೆ ಗುಣಮಟ್ಟದ ಆಹಾರ ಸೇವನೆಯ ಅರಿವು ಮೂಡುತ್ತದೆ. ಜೊತೆಗೆ ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಮೂಡುತ್ತದೆ. ಅಲ್ಲದೆ ಮಕ್ಕಳು ಅಡುಗೆ ಮಾಡುವ ಬಗ್ಗೆಯೂ ಮನವರಿಕೆ ಮಾಡಿಕೊಳ್ಳುತ್ತಾರೆ. ಶಾಲಾ ಬಿಡುವಿನ ವೇಳೆಯಲ್ಲಿ ಪೋಷಕರು ಅಡುಗೆ ಮಾಡುವುದಕ್ಕೆ ಮಕ್ಕಳು ಸಹಾಯಕಾರಿಯಾಗುತ್ತರೆ. ಆದ್ದರಿಂದ ಮಕ್ಕಳಿಗೆ ಇಂದಿನಿಂದಲೇ ನಮ್ಮ ಸ್ವ-ದೇಶಿಯ ಆರೋಗ್ಯಕರ ಆಹಾರ ಪದಾರ್ಥಗಳ ಕುರಿತು ಜಾಗೃತಿ ಮೂಡಿಸಬೇಕು ಎಂದರು.
ಶಾಲೆಯ ಸಂಚಾಲಕರಾದ ಭಾರತಿ ಚೌಧರಿ, ಅಭಿಷೇಕ ಚೌಧರಿ ಪ್ರಸಾವಿಕ ಮಾತನಾಡಿದರು. ಗಣಿಯಾರ ಫ್ರೌಡ ಶಾಲೆಯ ಮುಖ್ಯೋಪಾಧ್ಯಾಯ ಸಿದ್ಧಲಿಂಗ ಚೌಧರಿ ಮುಖ್ಯ ಅತಿಥಿಗಳಾಗಿದ್ದರು.
ಆಹಾರ ಉತ್ಸವದಲ್ಲಿ ಮಕ್ಕಳ ಕುರುಕಲು ತಿನಿಸುಗಳಾದ ಪಾನಿಪುರಿ, ಸೇವ್ ಪುರಿ, ಗೋಬಿ ಮಂಚೂರಿ, ಪಾವ ಭಾಜಿ, ಉದ್ದಿನ ವಡೆ, ಮಸಾಲೆ ದೋಸೆ, ಅವಲಕ್ಕಿ, ಚುರುಮುರಿ ಚೂಡಾ, ಬೇಲ್ ಪೂರಿ, ಸಮೋಸ, ಬಾಸುಂದಿ, ಸೇಂಗಾ ಚಕಲಿ, ಚಾಕೊಲೇಟ್, ಸೂರಕುಂಬಾ, ಜಾಮೂನು ಸೇರಿದಂತೆ ಬಗೆ ಬಗೆಯ ತಿಂಡಿಗಳು ಗಮನ ಸೆಳೆದವು.
ಆಹಾರ ಉತ್ಸವದಲ್ಲಿ ಮಂದಾರ ಶಾಲೆಯ ಶಿಕ್ಷಕರು ಮತ್ತು ವಿಧ್ಯಾರ್ಥಿಗಳು ಭಾಗವಹಿಸಿ ಹಣ ನೀಡಿ ಮಕ್ಕಳು ಆಹಾರ ಪದಾರ್ಥಗಳನ್ನು ಖರೀದಿಸಿದರು.