ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ವತಿಯಿಂದ ಶತಮಾನ ಕಂಡ ಸಾಹಿತಿಗಳು ತಿಂಗಳ ಕಾರ್ಯಕ್ರಮ
ಮರಾಠಿ ನೆಲ ಕೊಲ್ಲಾಪುರದಲ್ಲಿ ಕನ್ನಡ ಸಂಘ ಕಟ್ಟಿ ಗೆಳೆಯರ ಬಳಗದ ಮೂಲಕ ಕನ್ನಡ ಬೆಳೆಸುವ ಕಾಯಕ ಮಾಡಿದ ಸಾಹಿತಿ ಕೆ. ಜಿ ಕುಂದಣಗಾರರು 21 ವರ್ಷಗಳ ಕಾಲ ಕನ್ನಡ ಸೇವೆ ಮಾಡಿ ಮರಾಠಿಗರಿಂದ ಪ್ರೋತ್ಸಾಹ ಪಡೆದು ಅವರಿಂದಲೇ ಅಣ್ಣ ಎಂದು ಸಂಬೋಧಿಸಿಕೊಂಡು ಗೌರವದಿಂದ ನಿರಂತರವಾಗಿ ಕನ್ನಡ ಕಟ್ಟುವ ಕೆಲಸ ಮಾಡಿದ್ದು ನಿಜಕ್ಕೂ ಕನ್ನಡ ಬೆಳೆಯಲು ಕಾರಣವಾಯಿತು ಎಂದು ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ ಹೇಳಿದರು.
ದಿ. ೧೫ ರಂದು ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಹಮ್ಮಿಕೊಂಡ ಬೆಳಗಾವಿ ಜಿಲ್ಲೆಯ ಶತಮಾನ ಕಂಡ ಸಾಹಿತಿಗಳು ತಿಂಗಳ ಉಪನ್ಯಾಸ ಮಾಲಿಕೆಯ 14 ನೇ ಕಾರ್ಯಕ್ರಮದಲ್ಲಿ’ ದಿ. ಕಲ್ಲಪ್ಪ ಜಿ ಕುಂದಣಗಾರ ಅವರ ಬದುಕು ಬರಹ’ ಕುರಿತು ಉಪನ್ಯಾಸ ನೀಡುತ್ತಾ ಹಿರಿಯ ಸಾಹಿತಿ ಪ್ರಕಾಶ ಕೋಟಿನತೋಟ ಮಾತನಾಡಿದರು.
ಬಡತನವಿದ್ದರೂ ಸಹ ಕನ್ನಡದ ಶ್ರೀಮಂತಿಕೆಯನ್ನು ಹೆಚ್ಚಿಸಿದ ಅವರು ಜೈನ ಧರ್ಮದ ಕುರಿತು ವಿಶೇಷ ಆಸಕ್ತಿ ವಹಿಸಿ ಅನೇಕ ಸಂಶೋಧನೆ ಮಾಡಿದರು ಎಂದು ಕುಂದಣಗಾರ ರವರ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ. ಸಾ. ಪ. ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ಹಿರಿಯ ಸಾಹಿತಿಗಳ ಸಾಧನೆ ಮತ್ತು ಅವರನ್ನು ನೆನೆಯುವುದು ನಮ್ಮ ಧರ್ಮ. ಈಗಿನ ಪೀಳಿಗೆಗೆ ಅವರ ಮೌಲ್ಯ ತಿಳಿಸಬೇಕಾದದ್ದು ನಮ್ಮ ಕರ್ತವ್ಯವಾಗಿದೆ ಆ ನಿಟ್ಟಿನಲ್ಲಿ ತಿಂಗಳ ಕಾರ್ಯಕ್ರಮಗಳು ವಿಶೇಷ ಬೆಳಕು ಚೆಲ್ಲುತ್ತಿವೆ ಎಂದರು.
ನ್ಯಾಯವಾದಿ ಬಿ.ಪಿ ಜೇವಣಿ ವಿಶೇಷ ಕಾವ್ಯ ಗಾಯನ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ದಿ. ನೇಮಿನಾಥ ಇಂಚಲರವರ ದತ್ತಿ ಕಾರ್ಯಕ್ರಮ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ಭಾವಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಶಾಲಾ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಸಮಾಜಸೇವೆ ಕ್ಷೇತ್ರದಲ್ಲಿ ವಿಶೇಷ ಸಾಧನೆ ಸಲ್ಲಿಸಿದ ಗೋಕಾಕದ ವಿಠ್ಠಲ ಸಾ. ಸಾತಪುಡೆ ಮತ್ತು ಉಪನ್ಯಾಸಕರಾದ ಶಶಿಕಾಂತ ತಾರದಾಳೆ ರವರನ್ನು ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರತ್ನಾಪ್ರಭಾ ಬೆಲ್ಲದ, ವೀರಭದ್ರ ಅಂಗಡಿ, ಬಿ.ಬಿ ಮಠಪತಿ,ಬಾಳಗೌಡ ದೊಡ್ಡಭಂಗಿ, ಶಿವಾನಂದ ತಲ್ಲೂರ,ಎಂ. ಎಸ್. ವಾಲಿ, ಜಿ . ಎಸ್. ಜಗಜಂಪಿ ಸೇರಿದಂತೆ ಸಾಹಿತ್ಯಾಸಕ್ತರು, ಕನ್ನಡ ಪ್ರೇಮಿಗಳು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಜ್ಯೋತಿ ಬದಾಮಿ ಸ್ವಾಗತಿಸಿದರು. ಎಂ. ವೈ. ಮೆಣಸಿನಕಾಯಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಹೇಮಾ ಸೋನೋಳ್ಳಿ ನಿರೂಪಿಸಿದರು ಕೊನೆಯಲ್ಲಿ ಭಾರತಿ ಮದಬಾವಿ ವಂದಿಸಿದರು.