spot_img
spot_img

ಭಗವಂತನನ್ನು ನಿರ್ಲಕ್ಷಿಸಿದರೆ ಲಕ್ಚ್ಮಿಯೂ ಆತನ ಹಿಂದೆ ಹೋಗುತ್ತಾಳೆ

Must Read

- Advertisement -

ಒಮ್ಮೆ ನಾರದ ಮಹರ್ಷಿ ವೈಕುಂಠಕ್ಕೆ ಹೋಗಿ ಲಕ್ಷ್ಮೀದೇವಿಯನ್ನು ಸ್ತುತಿಸಿದನು. ಆಕೆ ತನ್ನ ಪತಿಯಾದ ವಿಷ್ಣುವನ್ನು ಅನುಕ್ಷಣವೂ ಬಿಡದೇ ಸೇವಿಸುವ ಸತಿಯೆಂದೂ, ಇಂತಹ ಭಾಗ್ಯವನ್ನು ಪಡೆದ ಶ್ರೀ ವಿಷ್ಣು ಅದೆಷ್ಟು ಪುಣ್ಯವಂತನೋ ಎಂದು ಕೀರ್ತಿಸಿದನು. ಆಮೇಲೆ ನಾರದನು ವಿಷ್ಣುವಿನೆಡೆಗೆ ಮುಖಮಾಡಿ, “ಇಂತಹ ಪತಿವ್ರತಾ ಶಿರೋಮಣಿಯನ್ನು ಹೆಂಡತಿಯಾಗಿ ಪಡೆದರೂ ಸಹ ತಾವೇಕೆ ಸದಾಕಾಲ ಚಿಂತಾಕ್ರಾಂತರಾಗಿ ಇರುತ್ತೀರಿ?” ಎಂದು ಅವನನ್ನು ಪ್ರಶ್ನಿಸಿದನು.

ಅದಕ್ಕೆ ವಿಷ್ಣು “ನೀನು ಯಾರನ್ನಾದರೆ ಇಷ್ಟೊಂದು ಹೊಗಳುತ್ತಿದ್ದೀಯೋ ಆಕೆಯೇ ನನ್ನ ಚಿಂತೆಗೆ ಕಾರಣ” ಎಂದು ಹೇಳಿದ. “ಅದು ಹೇಗೆ? ಇಷ್ಟೊಂದು ಸೇವೆಯನ್ನು ಮಾಡುವ ಸತಿ ನಿನಗೆ ಸದಾ ಕಾಲ ನೆರಳಿನಂತೆ ಜೊತೆಯಿರುವಾಗ, ಈಕೆಯೇ ನಿನ್ನ ದುಃಖಕ್ಕೆ ಕಾರಣವೆಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಕೇಳಿದ ನಾರದ. “ತೋರಿಸುತ್ತೇನೆ ನೋಡು” ಎಂದು ವಿಷ್ಣು ಹೇಳಿದ.

ಭೂಮಂಡಲದ ಒಂದು ದೇಶದಲ್ಲಿ ಒಂದು ಚಿಕ್ಕ ಗ್ರಾಮ. ಅಲ್ಲಿ ಭಗವಂತನನ್ನು ಯಾರೂ ಪೂಜಿಸುತ್ತಿರಲಿಲ್ಲ…. ಸತ್ಸಂಗವೆನ್ನುವುದನ್ನು ಅವರಿಗೆ ಗೊತ್ತೇ ಇರಲಿಲ್ಲ. ಎಲ್ಲರೂ ಯಾವಾಗಲೂ ಯಾವುದೋ ಒಂದು ಕೆಟ್ಟ ಕಾರ್ಯದಲ್ಲಿ ಮುಳುಗಿ ಹೋಗಿರುತ್ತಿದ್ದರು. ಭಗವಂತನು ಒಬ್ಬ ಹರಿಕಥಾ ಭಾಗವತನ ರೂಪದಲ್ಲಿ ಅಲ್ಲಿಗೆ ಹೋದನು. ಕೈಯ್ಯಲ್ಲಿ ತಂಬೂರಿ ಹಿಡಿದು ಆ ಊರಿನಲ್ಲಿ ಹರಿಕಥಾ ಕಾಲಕ್ಷೇಪವನ್ನು ಪ್ರಾರಂಭಿಸಿದ. ಆರಂಭದಲ್ಲಿ ಕೆಲವರು ಬಂದು ಹರಿಕಥೆಯನ್ನು ಕೇಳಲಾರಂಭಿಸಿದರು. ಬರ ಬರುತ್ತಾ ಊರಿನವರೆಲ್ಲಾ ಬಂದು ಹರಿಕಥೆಯನ್ನು ಕೇಳತೊಡಗಿದರು.

- Advertisement -

ಹರಿದಾಸನು ಮೂರು ಗಂಟೆಗೆ ಹರಿಕಥೆಯನ್ನು ಆರಂಭಿಸುತ್ತಿದ್ದಂತೆಯೇ, ಊರಿನಲ್ಲಿ ಇದ್ದವರೆಲ್ಲರೂ ಮನೆಗೆ ಬೀಗ ಹಾಕಿಕೊಂಡು ಬಂದು ಪ್ರವಚನ ನಡೆಯುತ್ತಿದ್ದ ಸ್ಥಳದಲ್ಲಿ ಕುಳಿತುಕೊಂಡು ಶ್ರದ್ಧಾ ಭಕ್ತಿಗಳಿಂದ ಕೇಳುತ್ತಿದ್ದರು. ಆರು ಗಂಟೆಯ ಸುಮಾರಿಗೆ ಅದು ಮುಗಿಯುತ್ತಿದ್ದಂತೆಯೇ ಪುನಃ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಹರಿದಾಸರು ಕಥೆ ಹೇಳುತ್ತಿದ್ದುದು ಕೇವಲ ಒಂದು ಗಂಟೆಯೇ ಆದರೂ ಸುಮಾರು ಎರಡು ಗಂಟೆ ಮುಂಚಿತವಾಗಿ ಹೋಗಿ ಕುಳಿತುಕೊಳ್ಳದೇ ಇದ್ದರೆ ಒಳ್ಳೆಯ ಜಾಗ ಸಿಗುವುದಿಲ್ಲವೆಂದು
ಎಲ್ಲರೂ ಮುಂಚಿತವಾಗಿಯೇ ಮನೆಯಿಂದ ಹೊರಟು ಬಿಡುತ್ತಿದ್ದರು.

ಒಂದು ಮನೆಯಲ್ಲಿ ಅತ್ತೆ, ಆ ಮನೆಯ ಹೆಣ್ಣು ಮಕ್ಕಳು ತಮ್ಮ ಪಾಲಿನ ಕೆಲಸಗಳನ್ನು ಬೇಗ ಬೇಗನೆ ಮುಗಿಸಿಕೊಂಡು ತಯಾರಾಗಿ ಹರಿಕಥೆಯನ್ನು ಕೇಳಲು ಹೊರಟರು.

ಅತ್ತೆಯಾದವಳು ಸೊಸೆಯನ್ನು ಕರೆದು ಉಳಿದ ಕೆಲಸಗಳನ್ನು ಬೇಗನೇ ಮುಗಿಸಿ ಮನೆಗೆ ಬೀಗ ಹಾಕಿಕೊಂಡು ಬಾ ಎಂದು ಹೇಳಿ ಎಲ್ಲರೂ ಹೊರಟು ಹೋದರು. ಸೊಸೆ ಬಾಕಿ ಉಳಿದಿದ್ದ ಕೆಲಸಗಳನ್ನೆಲ್ಲಾ ಮುಗಿಸಿ ಇನ್ನೇನು ಮನೆಗೆ ಬೀಗ ಹಾಕಬೇಕು ಎಂದು ಕೊಳ್ಳುತ್ತಿರುವಾಗ, ಒಬ್ಬ ಹಣ್ಣು ಹಣ್ಣು ಮುದುಕಿ ಕೋಲೂರುತ್ತಾ ಅತ್ತ ಕಡೆ ಬಂದಳು. ಆಕೆ ತೊಟ್ಟುಕೊಂಡಿದ್ದ ಮಾಸಿದ ಬಟ್ಟೆಗಳು ಆಕೆಯ ಬಡತನವನ್ನು ಎತ್ತಿ ತೋರುತ್ತಿತ್ತು. ಆಕೆ “ಅಮ್ಮಾ ತಾಯಿ ಸ್ವಲ್ಪ ಕುಡಿಯಲು ನೀರು ಕೊಡು” ಎಂದು ಆ ಮನೆಯ ಸೊಸೆಯನ್ನು ಕೇಳಿದಳು.

- Advertisement -

ತಾನು ಅತ್ತಕಡೆ ಹರಿಕಥೆಯನ್ನು ಕೇಳಲು ಹೋಗುವ ಗಡಿಬಿಡಿಯಲ್ಲಿರುವಾಗ ಈಕೆ ಅದೆಲ್ಲಿಂದ ವಕ್ಕರಿಸಿದಳು ಎಂದು ಮನಸ್ಸಿನಲ್ಲೇ ಗೊಣಗಿಕೊಂಡಳು ಆ ಸೊಸೆ. ಆದರೆ ಹರಿದಾಸರು ಕಥೆಯೊಂದರಲ್ಲಿ ದಾಹವಾದವರಿಗೆ ನೀರನ್ನು ಕೊಡುವುದು ಮತ್ತು ಹಸಿದವರಿಗೆ ಅನ್ನವಿಕ್ಕುವುದು ಪರಮ ಧರ್ಮವೆಂದು ಹೇಳಿದ್ದು ನೆನಪಾಯಿತು. ಒಂದು ವೇಳೆ ನಾನು ಈಕೆಗೆ ನೀರು ಕೊಡದಿದ್ದರೆ ನನಗೆ ಪಾಪ ಬರುತ್ತದೆ ಎಂದು ಆಲೋಚಿಸಿದಳು.

ಆಕೆ “ಅಜ್ಜಿ ನಾನು ಹರಿಕಥೆಯನ್ನು ಕೇಳಲು ಹೋಗುತ್ತಿದ್ದೇನೆ, ಬೇಗನೇ ಹೋಗದಿದ್ದರೆ ಅಲ್ಲಿ ಕುಳಿತುಕೊಳ್ಳಲು ಸರಿಯಾದ ಸ್ಥಳ ಸಿಗುವುದಿಲ್ಲ. ಕುಡಿಯಲು ನೀರನ್ನು ತಂದು ಕೊಡುತ್ತೇನೆ ಆದರೆ ನೀನು ಅದನ್ನು ಬೇಗನೇ ಕುಡಿದು ಮುಗಿಸಬೇಕು” ಎಂದು ಹೇಳಿದಳು. “ಗಟಗಟನೇ ಕುಡಿಯುತ್ತೀನಮ್ಮ ನನಗೂ ದಾಹ ವಿಪರೀತವಾಗಿದೆ” ಎಂದು ಆ ಮುದುಕಿ ಹೇಳಿದಳು.

ಸೊಸೆ ಮನೆಯೊಳಗೆ ಹೋಗಿ ಒಂದು ದೊಡ್ಡ ಲೋಟದಲ್ಲಿ ಕುಡಿಯಲು ನೀರು ತಂದು ಕೊಟ್ಟಳು. ಆ ಮುದುಕಿ ನೀರು ಕುಡಿದು ಆ ಲೋಟವನ್ನು ಹಿಂದಿರುಗಿ ಕೊಟ್ಟಳು. ಅದು ಮಿರಮಿರನೆ ಮಿಂಚುತ್ತಿದ್ದ ಬಂಗಾರದ ಲೋಟವಾಗಿತ್ತು!” “ಅಜ್ಜಿ ನಾನು ನಿನಗೆ ಕೊಟ್ಟದ್ದು ಈ ಲೋಟದಲ್ಲಿ ಅಲ್ಲ. ನಾನು ನಿನಗೆ ಕೊಟ್ಟ ಲೋಟವನ್ನು ಹಿಂದಿರುಗಿ ಕೊಡುವ ಬದಲು ನಿನ್ನ ಬಳಿ ಇದ್ದ ಲೋಟವನ್ನು ನನಗೆ ಕೊಟ್ಟಂತಿದೆ” ಎಂದು ಸೊಸೆ ಹೇಳಿದಳು. “ನೀನು ನನಗೆ ಕೊಟ್ಟದ್ದು ಇದೇ ಲೋಟವನ್ನು. ನನ್ನ ಬಳಿ ಬೇರೆ ಲೋಟವಿಲ್ಲ ನೋಡು” ಎಂದು ಆ ಮುದುಕಿ ಹೇಳಿದಳು. “ನಾನು ತಾಮ್ರದ ಲೋಟವನ್ನು ಕೊಟ್ಟಿದ್ದು ಅಜ್ಜಿ

ನನ್ನ ಬಳಿ ಬಂಗಾರದ ಲೋಟವಾದರೂ ಎಲ್ಲಿಯದು ತಾಯಿ. ಹೇಳಿ ಕೇಳಿ ನಾನು ಭಿಕ್ಷೆ ಬೇಡುವವಳು, ಧರಿಸಲೂ ಸಹ ನನ್ನ ಬಳಿ ಸರಿಯಾದ ಬಟ್ಟೆಗಳಿಲ್ಲ. ನನ್ನ ಚೀಲವನ್ನು ನೋಡು. ಇದರಲ್ಲಿ ಏನೂ ಇಲ್ಲ. ನೀನು ಕೊಟ್ಟ ಪಾತ್ರೆಯನ್ನೇ ನಿನಗೆ ಹಿಂದಿರುಗಿ ಕೊಟ್ಟಿದ್ದೇನೆ”. ನಮ್ಮ ಮನೆಯಲ್ಲಿ ಗುಲಗಂಜಿಯಷ್ಟು ಬಂಗಾರವೂ ಇಲ್ಲ ಅಜ್ಜಿ. ಆದರೂ ಸಹ ನಾವು ಸಂತೋಷವಾಗಿ ಜೀವನ ಮಾಡುತ್ತಿದ್ದೇವೆ ಎನ್ನುವುದು ಬೇರೆ ವಿಷಯ. ನಾನು ಖಂಡಿತವಾಗಿಯೂ ನಿನಗೆ ಕೊಟ್ಟದ್ದು ಮಾತ್ರ ತಾಮ್ರದ ಲೋಟವೇ, ನನಗೀಗಾಲೇ ಸಮಯವಾಗುತ್ತಿದೆ. ನನ್ನ ತಾಮ್ರದ ಲೋಟವನ್ನು ನನಗೆ ಕೊಟ್ಟರೆ ಮನೆಗೆ ಬೀಗ ಹಾಕಿಕೊಂಡು ಹರಿಕಥೆ ನಡೆಯುವಲ್ಲಿಗೆ ಹೋಗುತ್ತೇನೆ” ಎಂದಳು ಆ ಮನೆಯ ಸೊಸೆ. “ನಾನೇನು ಮಾಡಲಿ ತಾಯಿ, ನಾನು ಏನು ಮುಟ್ಟಿದರೂ ಅದು ಬಂಗಾರವಾಗಿ ಹೋಗುತ್ತದೆ. ಬಹುಶಃ ಅದರಿಂದಾಗಿಯೇ ನೀನು ತಾಮ್ರದ ಲೋಟದಲ್ಲಿ ನೀರು ಕೊಟ್ಟರೂ ಸಹ ಅದು ನನ್ನ ಕೈ ತಾಕುತ್ತಿದ್ದಂತೆ ಬಂಗಾರವಾಗಿರಬಹುದು” ಎಂದು ಹೇಳಿತು ಅಜ್ಜಿ.

“ಹಾಗಾದರೆ ಹೀಗೆ ಒಳಗೆ ಬಾ” ಎಂದು ಸೊಸೆ ಆ ಅಜ್ಜಿಯನ್ನು ಮನೆಯೊಳಕ್ಕೆ ಕರೆದುಕೊಂಡು ಹೋದಳು. “ಮೊದಲು ಇಲ್ಲಿರುವ ಬೀಗದ ಕೈಯ್ಯನ್ನು ಮುಟ್ಟು ನೋಡೋಣ” ಎಂದು ಮೆಲುದನಿಯಲ್ಲಿ ಹೇಳಿದಳು ಸೊಸೆ. ಆ ಅಜ್ಜಿ ಬೀಗವನ್ನು ಮುಟ್ಟುತ್ತಿದ್ದಂತೆಯೇ ಅದು ಬಂಗಾರವಾಯಿತು. “ಈ ಬಾಗಿಲ ಹಿಡಿಯನ್ನು ಮುಟ್ಟು ಎಂದ ಸೊಸೆ ಹೇಳಿದ ಕೂಡಲೇ ಅಜ್ಜಿ ಅದನ್ನೂ ಸಹ ಮುಟ್ಟಿದಳು, ಅದೂ ಸಹ ಬಂಗಾರವಾಯಿತು. ಹೀಗೆ ಸೊಸೆ ತನ್ನ ಮನೆಯಲ್ಲಿದ್ದ ಒಂದೊಂದೇ ಸಾಮಾನನ್ನು ಮುಟ್ಟುವಂತೆ ಹೇಳಿದ ಕೂಡಲೇ ಆ ಅಜ್ಜಿ ಅವನ್ನು ಮುಟ್ಟುವುದೇ ತಡ ಅವು ಬಂಗಾರದ್ದಾಗಿ ಮಾರ್ಪಡುವುದೂ ನಡೆಯಿತು. ಈ ಸುವರ್ಣ ಕ್ರಿಯೆಯಲ್ಲಿ ಮುಳುಗಿ ಆ ಸೊಸೆ ತಾನು ಹರಿಕಥೆ ಕೇಳಲು ಹೋಗಬೇಕಾಗಿದ್ದ ವಿಷಯವನ್ನೇ ಮರೆತು ಹೋದಳು. ಮರುದಿನ ಬೆಳಿಗ್ಗೆ ಆ ಸೊಸೆಯ ನೆರೆಹೊರೆಯವರು, “ನಿನ್ನೆ ಹರಿಕಥೆ ಕೇಳಲಿಕ್ಕೆ ಏಕೆ ಬರಲಿಲ್ಲ? ಹರಿದಾಸರು ನಿನ್ನೆ ಕಥೆಯನ್ನು ಬಹಳ ಸೊಗಸಾಗಿ ಹೇಳಿದರು!” ಎಂದರು.

ಕಥೆ ಕೇಳಿದರೆ ಏನು ಹೊಟ್ಟೆ ತುಂಬುತ್ತದೆಯೇ? ನಿನ್ನೆ ನಮ್ಮ ಮನೆಗೆ ಒಬ್ಬ ಹಣ್ಣು ಹಣ್ಣು ಮುದುಕಿ ಬಂದಿದ್ದಳು. ಆಕೆ ಮುಟ್ಟಿದ್ದೆಲ್ಲಾ ಬಂಗಾರವಾಯಿತು” ಎಂದು ಆ ಸೊಸೆ ಹೇಳಿದಳು.”ಹೌದಾ?” ಎಂದು ಅಲ್ಲಿ ನೆರೆದಿದ್ದವರೆಲ್ಲರೂ ಒಂದೇ ಉಸಿರಿನಲ್ಲಿ ಕೇಳಿದರು. ಅವರೆಲ್ಲರೂ ಸೇರಿಕೊಂಡು ಆ ಮುದುಕಿಯ ಬಳಿಗೆ ಹೋದರು. ನಮ್ಮ ಮನೆಗೆ ಬಾ ತಮ್ಮ ಮನೆಗೆ ಬಾ ಎಂದು ಬೇಡಿಕೊಂಡರು. ಎಲ್ಲರೂ ಸರತಿಯ ಸಾಲಿನಲ್ಲಿ ನಿಂತರು. ಮುದುಕಿ ಒಬ್ಬರ ನಂತರ ಒಬ್ಬರ ಮನೆಗೆ ಬರುವುದಾಗಿ ಹೇಳಿ ಅದರಂತೆ ಒಬ್ಬೊಬ್ಬರ ಮನೆಗೆ ಹೋಗಲಾರಂಭಿಸಿದಳು. ಆಗ ಆ ಊರಿನಲ್ಲಿ ಹರಿಕಥೆ ನಡೆಯುವಲ್ಲಿಗೆ ಹೋಗಿ ಕುಳಿತುಕೊಳ್ಳುವವರೇ ಇಲ್ಲವಾದರು. ಮಾರುವೇಷದಲ್ಲಿದ್ದ ವಿಷ್ಣುವು ತನ್ನ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕೈಯ್ಯಲ್ಲಿ ತಂಬೂರಿಯನ್ನು ಹಿಡಿದುಕೊಂಡು ಎಷ್ಟು ಕುಣಿದರೂ ಸಹ ಒಬ್ಬರೇ ಒಬ್ಬರು ಹರಿಕಥೆ ಕೇಳಲು ಬರಲಿಲ್ಲ.

ಆಗ ಅಲ್ಲಿಗೆ ನಾರದನು ಬಂದನು. ವಿಷ್ಣು ನಾರದನೊಂದಿಗೆ “ನೋಡಿದೆಯಾ, ನನ್ನ ಅವಶ್ಯಕತೆ ಎಲ್ಲಿದೆಯೋ ನಾನು ಅಲ್ಲಿಗೆ ಹೋಗುತ್ತೇನೆ. ಅಲ್ಲಿಯವರಿಗೆ ಒಳಿತಾಗುತ್ತದೆ. ಅವರು ತೃಪ್ತಿಯಾಗಿ ಬದುಕ ತೊಡಗುತ್ತಾರೆ. ಆದರೆ ನಾನು ಹೋದ ಕಡೆಯೆಲ್ಲೆಲ್ಲಾ ನನ್ನ ಸತೀಮಣಿ ನನ್ನನ್ನು ಹುಡುಕಿಕೊಂಡು ಬರುತ್ತಾಳೆ. ಆಕೆ ಬಂದ ನಂತರ ಇನ್ನೇನಿದೆ ನನ್ನ ಮುಸುಡಿಯನ್ನು ಮೂಸಿ ನೋಡುವವರೂ ಇಲ್ಲವಾಗುತ್ತಾರೆ. ಆಗ ನಾನು ಸಹಜವಾಗಿಯೇ ಮತ್ತೊಂದು ಊರಿಗೆ ಹೋಗಬೇಕಾಗುತ್ತದೆ” ಎಂದು ಹೇಳಿದ. ಭಗವಂತನ ಹಿಂದೆ ಲಕ್ಷ್ಮಿ ಬಂದಮೇಲೂ ಸಹ ನಮ್ಮ ಶ್ರದ್ಧೆಯನ್ನು ನಾವು ಭಗವಂತನ ಮೇಲೆಯೇ ಇರಿಸಿಕೊಂಡರೆ ಭಗವಂತನೊಂದಿಗೆ ಅವನೊಂದಿಗೆ ಲಕ್ಷ್ಮಿಯೂ ಅಲ್ಲಿಯೇ ಇರುತ್ತಾಳೆ. ಮನುಷ್ಯರು ದೇವರನ್ನು ನಿರ್ಲಕ್ಷಿಸಿದರೆ ಅವನೊಂದಿಗೆ ಲಕ್ಷ್ಮಿ ಸಹ ಅಲ್ಲಿಂದ ಹೊರಟು ಹೋಗುತ್ತಾಳೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group