ಸರ್ವರು ನಾಗರಪಂಚಮಿಯ ವಿಶೇಷತೆ ತಿಳಿದುಕೊಳ್ಳಿ

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ. ಧ್ಯಾನಸ್ಥನಾದ ಮುನಿಗಳಲ್ಲಿ ಪರೀಕ್ಷಿತನು ನೀರು ಕೇಳುತ್ತಾನೆ. ತನ್ನಷ್ಟಕ್ಕೇ ತಾನು ಧ್ಯಾನದಲ್ಲಿ ಮಗ್ನನಾಗಿರುವ ಮುನಿಯು ಕುಳಿತಲ್ಲಿಂದ ಏಳದೇ ಇದ್ದಾಗ, ಕಲಿಯ ಪ್ರೇರಣೆಯಿಂದಾಗಿ ಅರಸನಿಗೆ ಮುನಿಯ ಮೇಲೆ ಕ್ರೋಧ ಉಕ್ಕೇರುತ್ತದೆ. ಕುಪಿತನಾದ ಪರೀಕ್ಷಿತನು ಸಮೀಪದಲ್ಲೇ ಇದ್ದ ಸತ್ತ ನಾಗರ ಹಾವೊಂದನ್ನು ಮುನಿಯ ಕೊರಳಿಗೆ ಸುತ್ತಿ ಅರಮನೆಗೆ ತೆರಳುತ್ತಾನೆ.

ಕುಶ,ಸಮಿಧೆಗಳನ್ನು ತರಲೆಂದು ಹೊರಗಡೆ ಹೋಗಿದ್ದ ಶಮೀಕ ಮುನಿಯ ಪುತ್ರ ಶೃಂಗಿ ಮುನಿಯು ಸ್ವಲ್ಪ ಸಮಯದ ನಂತರ ಆಶ್ರಮಕ್ಕೆ ಮರಳುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ನಾಗರ ಹಾವನ್ನು ನೋಡಿ ಆತನಿಗೆ ವಿಪರೀತ ಕೋಪ ಬರುತ್ತದೆ. ಕುಪಿತನಾದ ಶೃಂಗಿಯು “ಯಾರು ಈ ಕೃತ್ಯವನ್ನು ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದಲಿ” ಎಂದು ಶಪಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಧ್ಯಾನವನ್ನು ಮುಗಿಸಿ ಎಚ್ಚೆತ್ತ ಶಮೀಕ ಮುನಿಯು ತನ್ನ ಮಗನು ಧರ್ಮಿಷ್ಠನಾದ ಭರತಖಂಡದ ಚಕ್ರವರ್ತಿಯನ್ನು ಶಪಿಸಿದ್ದನ್ನು ತಿಳಿದು ಪಶ್ಚಾತ್ತಾಪ ಪಡುತ್ತಾನೆ. ತನ್ನ ಶಿಷ್ಯಂದಿರಲ್ಲಿಯೇ ಓರ್ವನನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ ಆತನಿಗೆ ತನ್ನ ಮಗನ ಶಾಪದ ವೃತ್ತಾಂತವನ್ನು ತಿಳಿಸಿ , ಸೂಕ್ತ ಪರಿಹಾರಗಳನ್ನು ಮಾಡಿಕೊಳ್ಳುವಂತೆ ಸಲಹೆಗಳನ್ನು ನೀಡುತ್ತಾನೆ.

ಮುನಿಯ ಶಾಪದ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಅಪಾರ ದುಃಖವಾಗುತ್ತದೆ. ಸಿಟ್ಟಿನ ಭರದಲ್ಲಿ ತಾನು ಶಮೀಕ ಮುನಿಗಳಿಗೆ ಮಾಡಿದ ಅಪಚಾರದ ವಿಷಯವನ್ನು ನೆನಪಿಸಿಕೊಂಡು ವ್ಯಥೆ ಪಡುತ್ತಾನೆ. ತಾನು ಮಾಡಿದ ಅಂತಹ ಘೋರವಾದ ತಪ್ಪಿಗೆ ಶೃಂಗಿ ಮುನಿಯು ಶಪಿಸಿದ್ದು ಸರಿಯಾಗಿಯೇ ಇದೆ. ತಪ್ಪು ಮಾಡಿದ ತಾನು ಶಿಕ್ಷೆಯನ್ನು ಅನುಭವಿಸುತ್ತೇನೆ, ತಕ್ಷಕ ಬರಲಿ, ತನ್ನನ್ನು ಕಚ್ಚಿ ಸಾಯಿಸಲಿ ಎಂದುಕೊಂಡು ಸಾಯಲು ಸಿದ್ಧನಾಗುತ್ತಾನೆ. ಆದರೆ ಅರಸನ ಮಂತ್ರಿಗಳು , ಕುಲಪುರೋಹಿತರು , ಪರಿವಾರದವರೆಲ್ಲ ಸೇರಿ ಪರೀಕ್ಷಿತನನ್ನು ತಕ್ಷಕನಿಂದ ರಕ್ಷಿಸಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅರಸನನ್ನು ಒಂದು ರಕ್ಷಿತ ಗೃಹದಲ್ಲಿ ಇರಿಸಿ ಒಂದು ಹುಳುವೂ ಕೂಡಾ ಒಳಗೆ ಪ್ರವೇಶಿಸದಂತೆ ಭದ್ರವಾದ ಕಾವಲನ್ನು ಇರಿಸುತ್ತಾರೆ.

- Advertisement -

ಆದರೆ ಇಂತಹ ಯಾವುದೇ ಭದ್ರತೆಯು ಮುನಿಯ ಶಾಪದಿಂದ ಉಂಟಾಗಬಹುದಾದ ತನ್ನ ಮರಣವನ್ನು ತಪ್ಪಿಸಲಾರದು, ತನ್ನ ಮರಣವು ನಿಶ್ಚಿತ ಎಂಬುದನ್ನು ಅರಿತಿದ್ದ ಪ್ರಾಜ್ಞನಾದ ಪರೀಕ್ಷಿತನು ತನ್ನ ಜೀವನದ ಕೊನೆಯ ಆ ಏಳು ದಿನಗಳನ್ನು ಪುಣ್ಯ ಕಥಾ ಶ್ರವಣ ಮಾಡುತ್ತಾ ಸಂತೋಷದಿಂದ ಕಳೆಯಲು ಬಯಸುತ್ತಾನೆ. ಅವನ ಇಚ್ಛೆಯಂತೆ ಶುಕ ಮುನಿಗಳು ಆತನಿಗೆ ಭಾಗವತ ಪುರಾಣಗಳ ಕಥೆಗಳನ್ನು ಹೇಳುತ್ತಾರೆ. ಅರಸನು ತನ್ನ ರಾಣಿ ಇರಾವತಿಯೊಡಗೂಡಿ ದೇವರ ಭಜನೆಯಲ್ಲಿಯೇ ಆ ಏಳು ದಿನಗಳನ್ನು ಕಳೆಯುತ್ತಾನೆ.

ಶೃಂಗಿ ಮುನಿಯ ಶಾಪದಿಂದ ತಕ್ಷಕನು ಪೇಚಿಗೆ ಸಿಲುಕುತ್ತಾನೆ. ತನಗೂ ಪರೀಕ್ಷಿತನಿಗೂ ನೇರವಾಗಿ ಯಾವುದೇ ದ್ವೇಷ ಇಲ್ಲದಿದ್ದರೂ ವಿನಾಕಾರಣ ಧರ್ಮಿಷ್ಠನಾದ ಆ ಚಕ್ರವರ್ತಿ ಪರೀಕ್ಷಿತನನ್ನು ಕಚ್ಚಿ ಕೊಲ್ಲಬೇಕು. ಇಲ್ಲದಿದ್ದಲ್ಲಿ ಶೃಂಗಿ ಮುನಿಯ ಶಾಪ ಹುಸಿಯಾಗಿ ಆತನ ಕೋಪಕ್ಕೆ ತಾನು ಕಾರಣನಾಗಬೇಕಾಗುತ್ತದೆ ಎಂದು ಚಿಂತಿಸುತ್ತಾನೆ. ಏನು ಮಾಡಲಿ ಎಂಬುದಾಗಿ ಚಿಂತಿಸುತ್ತಾನೆ. ಆಗ ಅವನಿಗೆ ಈ ಹಿಂದೆ ಅರ್ಜುನನು ಖಾಂಡವ ವನವನ್ನು ದಹಿಸುವ ಸಂದರ್ಭದಲ್ಲಿ ಅನೇಕ ನಾಗಗಳ ಜೊತೆಯಲ್ಲಿ ತನ್ನ ಹೆಂಡತಿಯನ್ನು ಕೂಡಾ ಕೊಂದು ತನ್ನ ಮಗ ಅಶ್ವಸೇನನನ್ನು ಅರೆಗಡಿದುದು ನೆನಪಾಗುತ್ತದೆ. ಆ ದ್ವೇಷವನ್ನೇ ನೆಪವಾಗಿ ಇಟ್ಟುಕೊಂಡು ತಾನು ಇಂದು ಆ ಅರ್ಜುನನ ಮೊಮ್ಮಗನಾದ ಈ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತೇನೆ ಎಂಬುದಾಗಿ ಹೊರಡುತ್ತಾನೆ.

ಆದರೆ ಪರೀಕ್ಷಿತನು ಇರುವ ಆ ರಕ್ಷಿತ ಗೃಹಕ್ಕೆ ಬಿಗಿಯಾದ ಭದ್ರತೆ ಇದೆ. ತನಗೆ ಒಳಗಡೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂಬುದು ತಕ್ಷಕನಿಗೆ ಅರಿವಾಗುತ್ತದೆ. ಅಷ್ಟರಲ್ಲಿ ಪರಿಚಾರಕರು ಅರಸನಿಗೆ ಹಣ್ಣುಗಳನ್ನು ಕೊಂಡೊಯ್ದು ಕೊಡುತ್ತಿರುವುದು ಆತನ ಗಮನಕ್ಕೆ ಬರುತ್ತದೆ. ತಕ್ಷಣ ಆತನು ಒಂದು ಉಪಾಯವನ್ನು ಮಾಡುತ್ತಾನೆ. ತಾನು ಒಂದು ಚಿಕ್ಕ ಹುಳುವಿನ ರೂಪ ಧರಿಸಿ ಆ ಹಣ್ಣಿನೊಳಗೆ ಸೇರಿಕೊಳ್ಳುತ್ತಾನೆ. ಅರಸನು ಆ ಹಣ್ಣನ್ನು ಕತ್ತರಿಸಿದಾಗ ಅದರಲ್ಲಿ ಹುಳ ಇರುವುದನ್ನು ನೋಡುತ್ತಾನೆ. ಪ್ರಾಜ್ಞನಾದ ಪರೀಕ್ಷಿತನಿಗೆ ಆ ಹುಳವೇ ತಕ್ಷಕ ಎಂಬುದು ವಿಧಿತವಾಗುತ್ತದೆ. ಹುಳದ ರೂಪದಲ್ಲಿದ್ದ ತಕ್ಷಕನು ಬೆಳೆ ಬೆಳೆದು ದೊಡ್ಡದಾಗಿ ನಿಜರೂಪ ಧರಿಸಿ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತಾನೆ.

ಸಾಯುವ ಸಂದರ್ಭದಲ್ಲಿ ಅರಸನು ದುಃಖಿಸುತ್ತಿರುವ ತನ್ನ ರಾಣಿಯಾದ ಇರಾವತಿಯನ್ನು ಕರೆದು “ನನ್ನೊಡನೆ ನೀನೂ ಕೂಡಾ ಸಹಗಮನ ಮಾಡಿಕೊಳ್ಳಬೇಡ , ನೀನು ಕ್ಷತ್ರಿಯ ರಾಣಿಯಾಗಿ ನಿನ್ನ ಕರ್ತವ್ಯವನ್ನು ಮಾಡು , ಮಗನಾದ ಜನಮೇಜಯನು ಇನ್ನೂ ತುಂಬಾ ಚಿಕ್ಕವನು , ಏನೂ ಅರಿಯದವನು , ಆತನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡು , ನಂತರ ಅವನಿಗೆ ಪಟ್ಟವನ್ನು ಕಟ್ಟು , ನನ್ನ ಮರಣದ ಗುಟ್ಟನ್ನು ಅವನಿಗೆ ತಿಳಿಸಬೇಡ , ಸರ್ಪ ದಂಶನದಿಂದ ನಾನು ತೀರಿಕೊಂಡೆ ಎಂಬ ಸತ್ಯವನ್ನು ಯಾವುದೇ ಕಾರಣಕ್ಕೂ ಆತನಿಗೆ ತಿಳಿಸಬೇಡ , ತಿಳಿದರೆ ಸಹಜವಾಗಿಯೇ ಅವನಲ್ಲಿಯೂ ನಾಗಕುಲದ ಮೇಲೆ ವೈರತ್ವ ಬೆಳೆಯುತ್ತದೆ , ನಾಗದ್ವೇಷ ಒಳ್ಳೆಯದಲ್ಲ” ಎಂದು ಹೇಳಿ ಆತ ಪ್ರಾಣ ಬಿಡುತ್ತಾನೆ.

ಪರೀಕ್ಷಿತನ ಮರಣಾ ನಂತರ ಆತನ ಮಗ ಜನಮೇಜಯನು ಪಟ್ಟವೇರುತ್ತಾನೆ. ಜನಮೇಜಯನು ಭರತ ಖಂಡವನ್ನು ಆಳಿದ ದ್ವಾಪರ ಯುಗದ ಕೊನೆಯ ಚಕ್ರವರ್ತಿಯಾಗಿದ್ದಾನೆ. ದ್ವಾಪರಾ ಯುಗವು ಮುಗಿದು ಕಲಿಯುಗವು ಪ್ರಾರಂಭವಾಗುವ ಆ ಯುಗಸಂಧಿ ಕಾಲದಲ್ಲಿ ಆಳಿಕೊಂಡಿದ್ದವನು ಜನಮೇಜಯ. ಹೀಗಾಗಿ ಕಲಿಯುಗದ ಪ್ರಥಮ ಚಕ್ರವರ್ತಿಯೂ ಅವನೇ ಆಗಿದ್ದಾನೆ. ಒಂದು ರೀತಿಯಲ್ಲಿ ಆತನೊಬ್ಬ ಯುಗ ಪ್ರವರ್ತಕ. ಚಿಕ್ಕಂದಿನಲ್ಲಿಯೇ ಚಕ್ರವರ್ತಿ ಪಟ್ಟವನ್ನು ಸ್ವೀಕರಿಸಿ ಹಲವು ವರ್ಷಗಳವರೆಗೆ ಭರತ ಖಂಡವನ್ನು ಆಳಿ ಬೆಳೆದು ದೊಡ್ಡವನಾಗಿದ್ದರೂ ಆತನಿಗೆ ತನ್ನ ತಂದೆಯ ಸಾವಿನ ರಹಸ್ಯವು ತಿಳಿದಿರಲಿಲ್ಲ. ಏಕೆಂದರೆ ಆತನ ತಾಯಿ ಇರಾವತಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಯಾರೂ ಕೂಡಾ ಆತನಿಗೆ ಆ ವಿಷಯವನ್ನು ತಿಳಿಸಿರಲಿಲ್ಲ.

ಹೀಗಿರುವಾಗ ವೇದ ಮುನಿಗಳ ಆಶ್ರಮದಲ್ಲಿ ಆತನ ಶಿಷ್ಯನಾದ ಉತ್ತಂಕ ಎಂಬ ವಟುವೊಬ್ಬನು ವಿದ್ಯಾಭ್ಯಾಸವನ್ನು ಪೂರೈಸಿದ ಬಳಿಕ ತನ್ನ ಗುರುಗಳಿಗೆ ಗುರುಕಾಣಿಕೆಯನ್ನು ಕೊಡಬೇಕೆಂದು ತೀರ್ಮಾನಿಸಿದನು. ಆದರೆ ವೇದ ಮುನಿಗಳು ಶಿಷ್ಯರಿಂದ ಕಾಣಿಕೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಆದರೂ ಉತ್ತಂಕನು ಬಂದು ಗುರುಗಳಿಗೆ ವಂದಿಸಿ “ಗುರುಗಳೇ ನಿಮ್ಮ ದಯೆಯಿಂದಲೇ ನಾನು ವಿದ್ಯೆಯನ್ನು ಕಲಿತೆ , ನಾನು ನಿಮಗೆ ಗುರುದಕ್ಷಿಣೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕೆಂಬುದನ್ನು ಹೇಳಿ , ತಂದು ಕೊಡುವೆ , ಅದನ್ನು ದಯವಿಟ್ಟು ಸ್ವೀಕರಿಸಬೇಕು” ಎನ್ನುತ್ತಾನೆ. ಆಗ ವೇದಮುನಿಗಳು “ನೀನು ಉತ್ತಮ ಪ್ರಜೆಯಾದರೆ ಅದೇ ನನಗೆ ಗುರುಕಾಣಿಕೆ , ನಾನು ಕಾಣಿಕೆಗಳನ್ನು ಸ್ವೀಕರಿಸುವುದಿಲ್ಲ , ಬೇಕಿದ್ದರೆ ನೀನು ಗುರುಪತ್ನಿಯನ್ನು ಕೇಳಿ ನೋಡು” ಎಂದು ಉತ್ತಂಕನನ್ನು ತನ್ನ ಹೆಂಡತಿಯೆಡೆಗೆ ಕಳುಹಿಸುತ್ತಾನೆ.

ಉತ್ತಂಕನು ಗುರುಪತ್ನಿ ಇದ್ದೆಡೆಗೆ ಹೋಗಿ ವಂದಿಸಿ “ತಾಯಿ ನನ್ನ ವಿದ್ಯಾಭ್ಯಾಸ ಮುಗಿದಿದೆ , ನೀವು ನನ್ನನ್ನು ಮಗನಂತೆ ಸಾಕಿ ಸಲಹಿದ್ದೀರಿ , ನಾನು ಗುರುಕಾಣಿಕೆಯನ್ನು ಕೊಡಲು ಬಯಸಿದ್ದೇನೆ , ನಿಮಗೆ ಏನು ಬೇಕು ಹೇಳಿ” ಎನ್ನುತ್ತಾನೆ. ಆಗ ಆಕೆಯು “ನಾನು ಪೂಜೆಗೆಂದು ಸುಮಂಗಲಿಯರನ್ನು ಆಹ್ವಾನಿಸಿದ್ದೇನೆ , ಅವರೆಲ್ಲ ಬರುವಾಗ ನಾನು ಬರಿ ಕಿವಿಯಲ್ಲಿ ಇರುವುದು ಸರಿಯಲ್ಲ , ಹೀಗಾಗಿ ಆ ಒಂದು ದಿನದ ಮಟ್ಟಿಗೆ ಪೌಷ್ಯ ರಾಜನ ಹೆಂಡತಿಯ ಕಿವಿಯ ಓಲೆಗಳನ್ನು ತಂದು ಕೊಡುವೆಯಾ” ಎಂದು ಕೇಳುತ್ತಾಳೆ. ಉತ್ತಂಕನು ಆದೀತು ಎಂದು ಹೇಳಿ ಅವಳಿಗೆ ವಂದಿಸಿ ಪೌಷ್ಯ ರಾಣಿಯಲ್ಲಿಗೆ ಹೋಗುತ್ತಾನೆ. ರಾಣಿಯು ಬಂದಿರುವ ವಟುವಿಗೆ ವಂದಿಸಿ ಉಪಚರಿಸಿ ಬಂದಿರುವ ಕಾರಣವನ್ನು ಕೇಳುತ್ತಾಳೆ. ಉತ್ತಂಕನು ವಿಷಯವನ್ನು ತಿಳಿಸಿದಾಗ , ರಾಣಿಗೆ ತುಂಬಾ ಸಂತೋಷವಾಗುತ್ತದೆ. “ಋಷಿ ಪತ್ನಿಯೋರ್ವಳು ನನ್ನ ಆಭರಣಗಳನ್ನು ಬಯಸಿದ್ದಾಳೆ ಎಂದರೆ ಅದು ನನ್ನ ಭಾಗ್ಯವೆಂದೇ ತಿಳಿಯುತ್ತೇನೆ , ಕೇವಲ ಒಂದು ದಿನದ ಮಟ್ಟಿಗಲ್ಲ ಶಾಶ್ವತವಾಗಿ ಅವುಗಳನ್ನು ಆ ಮುನಿ ಪತ್ನಿಗೆ ನೀಡುತ್ತೇನೆ , ಆದರೆ ಕೊಂಡು ಹೋಗುವಾಗ ಜಾಗ್ರತೆ , ಇವು ಮೂರು ಲೋಕಗಳಲ್ಲಿಯೂ ಪ್ರಸಿದ್ಧವಾದ ಆಭರಣಗಳಾಗಿವೆ , ಈ ಹಿಂದೆ ತಕ್ಷಕನು ಅವುಗಳನ್ನು ಅಪಹರಿಸಲು ಪ್ರಯತ್ನಿಸಿದ್ದಾನೆ , ಹೀಗಾಗಿ ವಿಶೇಷವಾಗಿ ಎಚ್ಚರವಹಿಸಿ” ಎಂದು ಹೇಳಿ ಉತ್ತಂಕನಿಗೆ ನವರತ್ನ ಖಚಿತವಾದ ಆ ಆಭರಣಗಳನ್ನು ನೀಡುತ್ತಾಳೆ.

ಉತ್ತಂಕನು ಆಭರಣಗಳನ್ನು ಗಂಟು ಕಟ್ಟಿಕೊಂಡು ಬರುವಾಗ ಪೌಷ್ಯ ರಾಣಿಯು ಹೇಳಿದಂತೆಯೇ ದಾರಿಯಲ್ಲಿ ತಕ್ಷಕನು ಅವನನ್ನು ಅಡ್ಡಯಿಸುತ್ತಾನೆ. ಫಣಿಗಳಿಗೆ ಮಣಿ ರತ್ನಗಳ ಮೇಲೆ ವ್ಯಾಮೋಹ ಜಾಸ್ತಿ ತಾನೇ ? ಹೀಗಾಗಿ ಅವನು ಉತ್ತಂಕನನ್ನು ವಂಚಿಸಿ ಅವನ ಬಳಿಯಿದ್ದ ಆಭರಣಗಳನ್ನು ಬಲಾತ್ಕಾರವಾಗಿ ಕೊಂಡೊಯ್ದು ಪಾತಾಳದಲ್ಲಿ ಬಚ್ಚಿಡುತ್ತಾನೆ. ಅಸಹಾಯಕನಾದ ಉತ್ತಂಕನು ಅಳುತ್ತಾನೆ , ಹೇಗಾದರೂ ಮಾಡಿ ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಂಡು ನೇರವಾಗಿ ಹಸ್ತಿನಾವತಿಗೆ ಹೋಗುತ್ತಾನೆ. ಅಲ್ಲಿ ಅರಸನಾದ ಜನಮೇಜಯನನ್ನು ಗುಪ್ತವಾಗಿ ಭೇಟಿಮಾಡಿ ಆತನಿಗೆ ಆತನ ತಂದೆ ಪರೀಕ್ಷಿತನ ಮರಣ ರಹಸ್ಯವನ್ನು ತಿಳಿಸುತ್ತಾನೆ. ತನ್ನ ತಂದೆಯ ಮರಣಕ್ಕೆ ತಕ್ಷಕನೇ ಕಾರಣ ಎಂಬ ವಿಷಯವನ್ನು ತಿಳಿದ ಜನಮೇಜಯನು ಸಿಟ್ಟಿನಿಂದ ಹಾರಾಡುತ್ತಾನೆ. ಆಗ ಉತ್ತಂಕನು “ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳುವ ಇಚ್ಛೆ ನಿನಗಿದ್ದರೆ ಈ ಕೂಡಲೇ ಸರ್ಪಯಾಗವನ್ನು ಮಾಡು , ನಾಗಕುಲವನ್ನೇ ನಾಶ ಮಾಡು” ಎಂದು ಹೇಳಿ ಆತನಲ್ಲಿ ನಾಗದ್ವೇಷದ ಬೀಜವನ್ನು ಬಿತ್ತಿ ಹೊರಟುಹೋಗುತ್ತಾನೆ.

ತಾಯಿಯಾಗಲೀ , ಮಂತ್ರಿಗಳಾಗಲೀ , ಕುಲಪುರೋಹಿತರಾಗಲೀ ಎಷ್ಟೇ ಹೇಳಿದರೂ ಕೇಳದ ಜನಮೇಜಯನು ತಕ್ಷಕನ ಮೇಲೆ ಕುಪಿತನಾಗಿ ಸಂಪೂರ್ಣ ನಾಗಕುಲವನ್ನೇ ನಾಶಪಡಿಸುತ್ತೇನೆ ಎಂಬುದಾಗಿ ಸರ್ಪಯಾಗವನ್ನು ಮಾಡಲು ಸಂಕಲ್ಪಿಸುತ್ತಾನೆ. ಜಗತ್ತಿನಲ್ಲಿ ಈ ಹಿಂದೆ ಯಾರೂ ಮಾಡದೇ ಇದ್ದ , ಮುಂದೆ ಕೂಡಾ ಯಾರೂ ಮಾಡದಂತಹ ಸರ್ಪಯಾಗವನ್ನು ಮಾಡಲು ಉದ್ಯುಕ್ತನಾಗುತ್ತಾನೆ. ಅದಕ್ಕಾಗಿ ಬೃಹತ್ ಯಾಗ ಶಾಲೆಯನ್ನು ನಿರ್ಮಿಸಿ , ಋಷಿ ಮುನಿಗಳನ್ನು ಬ್ರಾಹ್ಮಣರನ್ನೆಲ್ಲ ಆಮಂತ್ರಿಸಿ , ಬೇಡಿದ ವಿಪ್ರರಿಗೆ ಅವರಿಗೆ ಬೇಕಾದುದನ್ನು ದಾನ ಮಾಡುತ್ತಾ ವಿಜೃಂಭಣೆಯಿಂದ ಯಾಗವನ್ನು ನಡೆಸುತ್ತಾನೆ. ಅಧ್ವರ್ಯುವಾಗಿ ತಾನೇ ಕುಳಿತುಕೊಳ್ಳುತ್ತಾನೆ. ಪುರೋಹಿತರು ಮಂತ್ರೋಚ್ಛಾರಣೆ ಮಾಡಿ ಆಹ್ವಾನಿಸಿದಂತೆ ಮಂತ್ರದ ವಶೀಕರಣಕ್ಕೆ ಸಿಲುಕಿದ ನಾಗಗಳು ಒಂದೊಂದಾಗಿ ಬಂದು ಯಜ್ಞಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ.

ಹಲವು ನಾಗ ಸಂತತಿಗಳು ಅಳಿದು ಹೋಗುತ್ತವೆ. ಎಲ್ಲಾ ನಾಗಗಳು ಸುಟ್ಟು ಹೋದರೂ ತಕ್ಷಕನ ಸುಳಿವೇ ಇರಲಿಲ್ಲ. ಆತನನ್ನು ಸ್ವರ್ಗದಲ್ಲಿ ದೇವೇಂದ್ರನು ರಕ್ಷಿಸಿ ಹಿಡಿದಿಟ್ಟುಕೊಂಡಿದ್ದ. ಇದನ್ನು ಅರಿತ ಪುರೋಹಿತರು “ದೇವೇಂದ್ರ ಸಹಿತನಾಗಿ ತಕ್ಷಕನು ಬರಲಿ” ಎಂಬುದಾಗಿ ಮಂತ್ರ ಉಚ್ಛರಿಸುತ್ತಾರೆ. ಹೆದರಿದ ದೇವೇಂದ್ರ ತಾನು ತಪ್ಪಿಸಿಕೊಳ್ಳುತ್ತಾನೆ. ಇನ್ನೇನು ತಕ್ಷಕ ಬಂದು ಬೆಂಕಿಯಲ್ಲಿ ಬೀಳುತ್ತಾನೆ ಎಂಬಾಗ , ಆಸ್ತೀಕನೆಂಬ ವಟುವು ಬಂದು ತಡೆಯುತ್ತಾನೆ. ಜನಮೇಜಯನಿಗೆ ಕೋಪ ಬರುತ್ತದೆ. “ಎಲೈ ವಟುವೇ , ನಿನಗೇನು ಬೇಕೋ ಕೇಳು , ಕೊಡುವೆ , ಯಾಗವನ್ನು ನಿಲ್ಲಿಸಬೇಡ” ಎನ್ನುತ್ತಾನೆ. ಆಗ ಆಸ್ತೀಕನು ಜನಮೇಜಯನನ್ನು ಸಂತೈಸಿ , ಆತನ ತಂದೆಯ ಮರಣದ ನಿಜ ವೃತ್ತಾಂತವನ್ನು ತಿಳಿಸುತ್ತಾನೆ.

“ತಕ್ಷಕನದ್ದೇನೂ ತಪ್ಪಿರಲಿಲ್ಲ , ಅವನು ಕಚ್ಚುವುದಕ್ಕೆ ಮುನಿಯ ಶಾಪವೇ ಕಾರಣ. ಹಾಗಂತ ಮುನಿಯದ್ದೂ ತಪ್ಪಿರಲಿಲ್ಲ. ಅವನು ಶಪಿಸಲು ನಿನ್ನ ತಂದೆ ಆತನ ತಂದೆಗೆ ಮಾಡಿದ ಅಪಚಾರವೇ ಕಾರಣ. ಮತ್ತೆ ನಿನ್ನ ತಂದೆಯದ್ದೂ ತಪ್ಪಿರಲಿಲ್ಲ. ಆತ ಹಾಗೆ ತಪ್ಪಿ ನಡೆಯಲು ಕಲಿಯ ಪ್ರೇರಣೆಯೇ ಕಾರಣ. ಇದೆಲ್ಲವೂ ಕಲಿ ಕಾಲದ ಮಹಿಮೆ. ಆದ್ದರಿಂದ ನೀನು ಯಜ್ಞವನ್ನು ನಿಲ್ಲಿಸು. ಸುಮ್ಮನೇ ನಾಗ ಶಾಪಕ್ಕೆ ಒಳಗಾಗಬೇಡ” ಎನ್ನುತ್ತಾನೆ.

ಅಂತೆಯೇ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸುತ್ತಾನೆ. ಸರ್ಪಗಳಲ್ಲಿ ತಕ್ಷಕನ ಕುಲವೊಂದು ಉಳಿಯುತ್ತದೆ. ಸರ್ಪಯಾಗವನ್ನು ನಿಲ್ಲಿಸಿದ ತರುವಾಯ ಜನಮೇಜಯನು ತಕ್ಷಕನ ಕ್ಷಮೆ ಯಾಚಿಸುತ್ತಾನೆ. ತಕ್ಷಕನು ಆತನನ್ನು ಕ್ಷಮಿಸಿದರೂ ಅಷ್ಟರಲ್ಲಾಗಲೇ ಹಲವು ನಾಗ ಕುಲಗಳು ದಹಿಸಿ ಹೋಗಿದ್ದರಿಂದ ಜನಮೇಜಯನಿಗೆ ನಾಗದೋಷ ಬರುತ್ತದೆ. ಪರಿಣಾಮವಾಗಿ ಆತನನ್ನು ಕುಷ್ಟರೋಗವು ಬಾಧಿಸುತ್ತದೆ. ಮುಂದೆ ಗುರುವಾಯೂರು ಕ್ಷೇತ್ರದಲ್ಲಿ ಹರಿದರ್ಶನವಾದೊಡನೆ ಆತನ ದೋಷಗಳೆಲ್ಲವೂ ಪರಿಹಾರವಾಗುತ್ತವೆ. ಮುಂದೆ ಹಲವು ಕಾಲಗಳವರೆಗೆ ಜನಮೇಜಯನು ಈ ಕಲಿಯುಗದಲ್ಲಿಯೂ ಚಕ್ರವರ್ತಿಯಾಗಿ ಮೆರೆಯುತ್ತಾನೆ. ಆಸ್ತೀಕನು ತನ್ನನ್ನು ಹಾಗೂ ತನ್ನ ಕುಲದವರನ್ನು ಉಳಿಸಿದ್ದರಿಂದಾಗಿ ಹರುಷಗೊಂಡು “ಯಾರು ಆಸ್ತೀಕ, ಆಸ್ತೀಕ, ಆಸ್ತೀಕ ಎಂಬುದಾಗಿ ಮೂರು ಬಾರಿ ಉಚ್ಛರಿಸುತ್ತಾರೋ ಅವರಿಗೆ ನಾಗದೋಷ ತಟ್ಟದೇ ಇರಲಿ” ಎಂಬ ವರವೊಂದನ್ನು ತಕ್ಷಕನು ಕರುಣಿಸುತ್ತಾನೆ.

( ಜನಮೇಜಯನಿಂದ ನಾಗ ಕುಲವನ್ನು ರಕ್ಷಿಸಿದ ಬ್ರಹ್ಮಚಾರಿ ರೂಪದಲ್ಲಿದ್ದಂತಹ ಆಸ್ತೀಕನ ನೆನಪಿನಲ್ಲಿ, ಆಗತಾನೇ ಉಪನಯನವಾದ ಬ್ರಹ್ಮಚಾರಿಗೆ ,ನಾಗನ ಸಂಪ್ರೀತಿಗಾಗಿ ವಟು ಆರಾಧನೆ ಮಾಡುವ ಕ್ರಮ )

ಹೀಗೆ ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ. ಅದನ್ನೇ ನಾವು ನಾಗರ ಪಂಚಮಿ ಎಂಬುದಾಗಿ ಆಚರಿಸುತ್ತೇವೆ. ಅಷ್ಟಕುಲ ನಾಗಗಳಾದ ಅನಂತ(ಶೇಷ) , ವಾಸುಕಿ , ಪದ್ಮ , ಮಹಾಪದ್ಮ , ತಕ್ಷಕ , ಕುಲೀಕ , ಕಾರ್ಕೋಟಕ ಮತ್ತು ಶಂಖಪಾಲ ಇವುಗಳನ್ನು ನಾವು ಆ ದಿನ ಪೂಜಿಸುತ್ತೇವೆ. ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ನಾಗದೇವರಿಗೆ ಅರ್ಪಿಸುತ್ತೇವೆ. ಹಸಿಹಾಲು , ತುಪ್ಪ , ಸಕ್ಕರೆಯನ್ನು ನಾಗದೇವರ ಮೂರ್ತಿಗೆ ಅರ್ಪಿಸುತ್ತೇವೆ. ಪೂಜೆ ಪೂರ್ಣಗೊಂಡ ಬಳಿಕ ನಾಗದೇವರಿಗೆ ಆರತಿ ಬೆಳಗುತ್ತೇವೆ. ಹಾವಾಡಿಗರಿಗೆ ದಾನ ಮಾಡುವ ಕ್ರಮವೂ ಕೆಲವು ಕಡೆ ಇದೆ. ಪೂಜೆಯ ಅಂತ್ಯದಲ್ಲಿ ನಾಗ ಪಂಚಮಿಯ ಕಥೆಯನ್ನು ಕೇಳುವುದು ಒಳ್ಳೆಯದು.


ಹೇಮಂತ್ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!