ಬೆಳಗಾವಿ: ಗ್ರಾಮೀಣ ವಿದ್ಯಾರ್ಥಿಗಳಿಗೆ ಉಳಿದೆಲ್ಲ ವಿಷಯಗಳಿಗಿಂತ ಇಂಗ್ಲೀಷ್ ಕಲಿಕೆ ಕಬ್ಬಿಣದ ಕಡಲೆ. ಆದರೆ ಇಂಗ್ಲೀಷ ಕಲಿಕೆ ಅನಿವಾರ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ವಿ. ನಾಗರಾಜ ಹೇಳಿದರು.
ಅವರು ಶ್ರೀ ಸಿದ್ದರಾಮೇಶ್ವರ ಪಿ ಯು ಕಾಲೇಜಿನ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಇಂಗ್ಲೀಷ್ ಸಂಘಟನೆಯ ಆಶ್ರಯದಲ್ಲಿ ಇಂಗ್ಲೀಷ್ ಪ್ರಾಚಾರ್ಯರಿಗೆ ಹಾಗೂ ಉಪನ್ಯಾಸಕರಿಗೆ ಏರ್ಪಡಿಸಿದ್ದ ಒಂದು ದಿನದ ಪುನರ್ಮನನ ಕಾರ್ಯಕ್ರಮದಲ್ಲಿ ಉಪನ್ಯಾಸಕರನ್ನು ಉದ್ದೇಶಿಸಿ ಮಾತನಾಡಿದರು.
ಇಂಗ್ಲೀಷ್ ಫಲಿತಾಂಶವೇ ಕಾಲೇಜಿನ ಫಲಿತಾಂಶವಾಗಿರುತ್ತದೆ. ಮಕ್ಕಳು ಇಂಗ್ಲೀಷ್ ಕಲಿಯಲು ಹಿಂಜರಿದರೆ ಅವರ ಭವಿಷ್ಯ ಮೊಟಕೊಗೊಳ್ಳುತ್ತದೆ. ಹೀಗಾಗಿ ಇಂಗ್ಲೀಷ್ ಉಪನ್ಯಾಸಕರ ಜವಾಬ್ದಾರಿ ಗುರುತರವಾಗಿದೆ ಎಂದರು.
ಉದ್ಘಾಟನೆ ನೆರವೇರಿಸಿದ ಸಿದ್ಧರಾಮೇಶ್ವರ ಸಂಸ್ಥೆಯ ಸೆಕ್ರೆಟರಿ ಕೆ.ಬಿ. ಹಿರೇಮಠ, ಮಕ್ಕಳು ಇಂಗ್ಲೀಷ್ ಭಾಷೆಯಲ್ಲಿ ಪ್ರಾವೀಣ್ಯತೆಯನ್ನು ಪಡೆಯುವುದು ಇಂದಿನ ಅಗತ್ಯವಾಗಿದೆ ಎಂದರು.
ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಬಿ ವೈ ಹನ್ನೂರ ಅವರು ಮಾತನಾಡಿ, ಶೇಕಡಾ ನೂರರಷ್ಟು ಫಲಿತಾಂಶ ಗಳಿಸಿದ ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ, ನೂರರಷ್ಟು ಫಲಿತಾಂಶ ಗಳಿಸಿದ ಉಪನ್ಯಾಸಕರಿಗೆ ಸನ್ಮಾನ ಮಾಡಲಾಯಿತು. ನಿವೃತ್ತಿ ಹೊಂದಿದ ಆದರ್ಶ ಪಿ ಯು ಕಾಲೇಜಿನ ಇಂಗ್ಲೀಷ್ ಉಪನ್ಯಾಸಕರಾದ ಕೆ ಬಿ. ಸೂರಣ್ಣವರ ಅವರನ್ನು ಸತ್ಕರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿ.ಎಸ್ ಬೆಟಗೇರಿಯವರು ಇಂಗ್ಲೀಷ್ ಭಾಷೆಯ ಮಹತ್ವದ ಬಗ್ಗೆ ಬೆಳಕು ಚೆಲ್ಲಿದರು. ಪ್ರಾಚಾರ್ಯ ಸಿದ್ರಾಮ ರೆಡ್ಡಿ, ಸೆಕ್ರೆಟರಿ ರವಿ ಮಠ ಅವರು ಉಪಸ್ಥಿತರಿದ್ದರು. ಉಪನ್ಯಾಸಕಿ ಅನುಪಮಾ ಎನ್ ವ್ಹಿ ಸ್ವಾಗತಿಸಿದರು. ಜಯಶ್ರೀ. ಅಬ್ಬಿಗೇರಿ ಸನ್ಮಾನ ಕಾರ್ಯಕ್ರಮ ನಡೆಸಿದರು. ರೆಬೆಕಾ ಸಾಲ್ವಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಶ್ರದ್ಧಾ ಪಾಟೀಲ ವಂದಿಸಿದರು. ಪುನರ್ಮನನ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.