ಬೆಳಗಾವಿ ಜಿಲ್ಲೆಯ ಕ.ಸಾ.ಪ ಘಟಕದ ವತಿಯಿಂದ ವೆಬಿನಾರ್ ಮೂಲಕ ಮಾಲಿಕೆಯ ನಾಲ್ಕನೇ ಕಾರ್ಯಕ್ರಮ ರವಿವಾರ ಜರುಗಿತು.
ಕಾರ್ಯಕ್ರಮದಲ್ಲಿ ನಿಪ್ಪಾಣಿ ತಾಲೂಕು ಘಟಕದ ಅಧ್ಯಕ್ಷರಾದ ವಿದ್ಯಾವತಿ ಜನವಾಡೆ ಅವರಿಂದ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಲಾಯಿತು.
ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕ.ಸಾ. ಪ. ಜಿಲ್ಲಾಧ್ಯಕ್ಷರಾದ ಮಂಗಲಾ ಮೆಟಗುಡ್ ರವರು, ಕೋಟೆಗಳು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಜೀವನಾಡಿಗಳು ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ ಹಿರಿಯ ಕಾದಂಬರಿಕಾರರು ಕ.ಸಾ.ಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷರು, ನಿವೃತ್ತ ತಹಸೀಲ್ದಾರರು ಆದ ಶ್ರೀ ಯ.ರು. ಪಾಟೀಲ ರವರು ‘ಅಧಿಕಾರದಿಂದ ವೈರಾಗ್ಯದತ್ತ ಕೋಟೆಗಳು’ ಎಂಬ ವಿಷಯದ ಕುರಿತು ಮಾತನಾಡಿದರು.
‘ಕೋಟೆ’ ಇದು ಕಿಲ್ಲಾ, ದುರ್ಗ, ಗಡ್ ಎಂಬ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಕೋಟೆಗಳು ತ್ಯಾಗ-ಬಲಿದಾನದ ಪ್ರತೀಕಗಳಾಗಿವೆ. ನಾವು ಏಳು ಪ್ರಕಾರದ ಕೋಟೆಗಳನ್ನು ಕಾಣುತ್ತೇವೆ. ಮೊದಲಿಗೆ ಜನರಿಗೆ ಕೆಲಸ ಕೊಡಬೇಕು ಎಂಬ ಭಾವನೆಯಿಂದ ಕಟ್ಟಲು ಆರಂಭವಾದ ಕೋಟೆಗಳು ನಂತರ ರಾಜ್ಯ ಮತ್ತು ರಾಜ್ಯದ ಜನರ ಮತ್ತು ರಾಜನ ರಕ್ಷಣೆಗಾಗಿ ಬೆಳೆದು ನಿಂತವು. ಕರ್ನಾಟಕದ ಇತಿಹಾಸದಲ್ಲಿಯೇ ಬೆಳಗಾವಿ ಜಿಲ್ಲೆ ಅಧಿಕ ಅಂದರೆ ಸುಮಾರು 50 ಕೋಟೆಗಳನ್ನು ಹೊಂದಿದೆ.
ಬೆಳಗಾವಿ ಜಿಲ್ಲೆಯನ್ನು “ಕೋಟೆಕೊತ್ತಲಗಳ ತೊಟ್ಟಿಲು” ಎಂದು ಕರೆಯಲಾಗಿದೆ. ಬೆಳವಡಿ ಯಲ್ಲಿರುವ ಮಲ್ಲಮ್ಮನ ಕೋಟೆ ಶತ್ರುಗಳಿಂದ ಹದಿನೇಳು ಟದಿನ ಮುತ್ತಿಗೆ ಹಾಕಿದರೂ ಸಹ ಭೇದಿಸಲು ಅಸಾಧ್ಯವಾಗಿತ್ತು. ಬೆಳವಡಿಯ ಮಲ್ಲಮ್ಮನ ಕೋಟೆ ಒಂದು ಮಾದರಿ ಕೋಟೆ ಎಂದು ಹೇಳಬಹುದು. ಅದೇರೀತಿ ಕೋಟೆಯ ಕಲ್ಪನೆ ನಮ್ಮಲ್ಲಿ ಮೂಡಬೇಕಾದರೆ ನಾವು ಸವದತ್ತಿಯ ಕೋಟೆ ಯನ್ನು ನೋಡಬೇಕು. ಬೆಳಗಾವಿ ಜಿಲ್ಲೆಯಲ್ಲಿರುವ ಅನೇಕ ಕೋಟೆಗಳಲ್ಲಿ ಇಡಿಯಾಗಿ ಮತ್ತು ನೋಡಲಿಕ್ಕೆ ಹೆಚ್ಚಿನ ಕುರುಹುಗಳನ್ನು ಹೊಂದಿರುವ ಕೋಟೆಗಳೆಂದರೆ ಸವದತ್ತಿ ಕೋಟೆ. ಇದನ್ನು ರಟ್ಟರು ಎಂಟು ವರ್ಷಗಳ ಕಾಲ ಕಟ್ಟಿದ್ದರು.
ಆದರೆ ಈಚೆಗೆ ಜನರ ಮತ್ತು ಸರಕಾರದ ನಿರ್ಲಕ್ಷದಿಂದ ನಮ್ಮ ಕೋಟೆಗಳು ಹಾಳಾಗುತ್ತಿದೆ. ರಕ್ಷಣೆಗೋಸ್ಕರ ಕಟ್ಟಿದ ಕೋಟೆಗಳು ರಕ್ಷಕ ರಿಂದಲೇ ಅತಿಕ್ರಮಣ ವಾಗುತ್ತಿದೆ ಎಂಬುದು ವಿಷಾದನೀಯ. ಆದರೂ ಸಹ ಬೆಳಗಾವಿ ಜಿಲ್ಲೆಯಲ್ಲಿ ರಾಮದುರ್ಗದ ತೋರಗಲ್, ಬೆಳಗಾವಿಯ ಕಿಲ್ಲಾ ಕೋಟೆ, ರಾಜಹಂಸಗಡ ಕೋಟೆ, ಪರಸಗಡ ಕೋಟೆ, ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೋಡಲು ಯೋಗ್ಯವಾಗಿವೆ ಎಂದು ಹೇಳಬಹುದು. ಇತ್ತೀಚೆಗೆ ಸರ್ಕಾರ ಸಹ ಕೆಲವೆಡೆ ಕೋಟೆ ಕೊತ್ತಲಗಳನ್ನು ಐತಿಹಾಸಿಕ ಮತ್ತು ಸಂರಕ್ಷಿತ ಆಸ್ತಿ ಎಂದು ರಕ್ಷಣೆ ಮಾಡುವ ಜವಾಬ್ದಾರಿ ಹೊತ್ತಿದೆ . ಆದರೂ ಸಹ ವಿಶೇಷವಾಗಿ ನಮ್ಮ ಸುತ್ತಮುತ್ತ ಇರುವ ಕೋಟೆಗಳನ್ನು ಸಂಶೋಧಿಸಿ ಅವುಗಳ ಮಾಹಿತಿ ಪಡೆದು ಅವುಗಳನ್ನು ಇರುವ ಸ್ಥಿತಿಯಲ್ಲಿ ಆದರೂ ಸಂರಕ್ಷಿಸುವ ಜವಾಬ್ದಾರಿಯನ್ನು ಜನಸಾಮಾನ್ಯರು ಮತ್ತು ಸರ್ಕಾರ ಹೊರಬೇಕಾಗಿದೆ. ಇದರಿಂದ ನಮ್ಮ ಇತಿಹಾಸ ಮುಂದಿನ ಪೀಳಿಗೆಗೆ ತಿಳಿದಂತಾಗುತ್ತದೆ ಎಂದು ಸವಿವರವಾಗಿ ಕೋಟೆಗಳ ಕುರಿತು ವಿಶೇಷ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಂಜುಮನ್ ಕಾಲೇಜ್ ಪ್ರಾಚಾರ್ಯರಾದ ಎಚ್.ಆಯ್. ತಿಮ್ಮಾಪುರ್ ರವರು ಮಾತನಾಡಿ ಕೋಟೆಗಳು ಆಳ್ವಿಕೆಯ ಪ್ರತೀಕವಾಗಿವೆ. ಕ.ಸಾ.ಪ ಮತ್ತು ಹಿರಿಯ ಸಂಶೋಧಕರು ಮತ್ತು ಸಾಹಿತಿಗಳು ಸೇರಿ ಯ.ರು. ಪಾಟೀಲ್ ರವರ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ವಿವಿಧ ಕೋಟೆಗಳ ಬಗ್ಗೆ ಅಭ್ಯಸಿಸಿ, ಸಮೀಕ್ಷೆ ಮಾಡಿ, ಅವುಗಳ ಸ್ಥಿತಿಗತಿಗಳನ್ನು ಮತ್ತು ಅವುಗಳನ್ನು ಸಂರಕ್ಷಿಸುವ ಕುರಿತಾಗಿ ಸರ್ಕಾರದ ಗಮನಸೆಳೆಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮೈತ್ರೇಯಿನಿ ಗದಿಗೆಪ್ಪ ಗೌಡರ್, ನಿರ್ಮಲ ಬಟ್ಟಲ, ಹೇಮಾವತಿ ಸೊನೊಳ್ಳಿ, , ಪ್ರೇಮ ಅಂಗಡಿ,, ಶಬಾನಾ ಅಣ್ಣಿಗೇರಿ, ಮೋಹನ್ ಪಾಟೀಲ್, ಬಸವರಾಜ್ ಗಾರ್ಗಿ, .ಬಿ. ಎನ್. ಹೊಸೂರ್, ರಜನಿ ಜೀರಗ್ಯಾಳ, ಜಯಶ್ರೀ ಅಬ್ಬಿಗೇರಿ, ಹಿರಿಯ ಸಾಹಿತಿ ಎಲ್ ವಿ. ಪಾಟೀಲ್, ಪತ್ರಕರ್ತ ಬಿ.ಹೆಚ್ ಹೊಂಗಲ್ ಸೇರಿದಂತೆ ಕ.ಸಾ.ಪ. ವಿವಿಧ ತಾಲೂಕುಗಳ ಅಧ್ಯಕ್ಷರಾದ , ವಿದ್ಯಾವತಿ ಜನವಡೆ, ಶ್ರೀಪಾದ ಕುಂಬಾರ, ಮಹಾಂತೇಶ ಉಕ್ಕಲಿ, ಶೇಖರ ಹಲಸಗಿ, ಸಿದ್ದರಾಮ ದ್ಯಾಗ್ಯಾನಟ್ಟಿ, ಜಿಲ್ಲಾ ಕಾರ್ಯದರ್ಶಿ ಮಹಾಂತೇಶ್ ಮೆಣಸಿನಕಾಯಿ, ಜ್ಯೋತಿ ಬದಾಮಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಪಾಂಡುರಂಗ ಜಟಗನ್ನವರ್ ಸಂಯೋಜಿಸಿ, ನಿರ್ವಹಿಸಿದರು. ಸುರೇಶ ಮರಲಿಂಗಣ್ಣವರ ವಂದನಾರ್ಪಣೆ ಸಲ್ಲಿಸಿದರು.