ಸಿಂದಗಿ: ಸಂವಿಧಾನ ರಷನೆಯಲ್ಲಿ ರಚನಾ ಸಭೆಯ ಹಲವಾರು ಜನರ ಪರಿಶ್ರಮ ಹಾಗೂ 22 ಸಮಿತಿಗಳ ಕರಡು ಸಮಿತಿ ಅತ್ಯಂತ ಪ್ರಮುಖವಾದ ಪಾತ್ರವನ್ನು ವಹಿಸಿವೆ ಎಂದು ಶಿಕ್ಷಕ ಶ್ರೀಮಂತ ಪಾಟೀಲ್ ಹೇಳಿದರು.
ತಾಲೂಕಿನ ಖೈನೂರ ಗ್ರಾಮದ ಡಾ. ಪ್ರಶಾಂತ ಚಿನ್ನಪ್ಪ ಸಜ್ಜನ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಈ ಕರಡು ಸಮಿತಿಯ ಅಧ್ಯಕ್ಷರಾಗಿರುವ ಡಾ. ಬಿ.ಆರ್ ಅಂಬೇಡ್ಕರ್ ಅವರ ಅತಿಯಾದ ಪರಿಶ್ರಮದಿಂದ ಅಂದಿನ ಸಂಸತ್ತಿನಲ್ಲಿ ಅನುಮೋದನೆಗೊಂಡು ನಮ್ಮೆಲ್ಲರ ಬದುಕಿನ ದಾರಿದೀಪವಾಗಿದೆ ಹಾಗೂ ಈ ದಿನವನ್ನು ಕಾನೂನು ದಿನವೆಂದು ಕರೆಯಲಾಗಿದೆ ಎಂದು ತಿಳಿಸಿದರು.
ಶಿಕ್ಷಕ ಶಿವಕುಮಾರ ಹುಡೇದ ಮಾತನಾಡಿ, ನಮ್ಮ ಸಂವಿಧಾನವನ್ನು ರಚಿಸುವಾಗ ಡಾ. ಬಿ ಆರ್ ಅಂಬೇಡ್ಕರ್ ಅವರು ಹಲವಾರು ರಾಷ್ಟ್ರಗಳಲ್ಲಿ ತಿರುಗಾಡಿ ನಮ್ಮ ರಾಷ್ಟ್ರಕ್ಕೆ ಉಪಯುಕ್ತವಾದ ಅಂಶಗಳನ್ನು ಅರಿತುಕೊಂಡು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಪ್ರಮುಖ ಪಾತ್ರ ವಹಿಸಿದರು ಹಾಗಾಗಿ ನಾವೆಲ್ಲರೂ ಸಂವಿಧಾನದ ನೀತಿ-ನಿಯಮಗಳನ್ನು ಪಾಲಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಅನಿಲ್ ಕುಮಾರ್ ರಾಥೋಡ್ ಮಾತನಾಡಿ, ದೇಶದ ಕಾನೂನು ಬಲಿಷ್ಠವಾಗಿರುವ ಭಾರತದ ಸಂವಿಧಾನ ಶ್ರೇಷ್ಠವಾಗಿದೆ ಹಾಗಾಗಿ ಇಂದಿನ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂಥ ದಿನವಾಗಿದೆ, ನಮ್ಮ ನಮ್ಮ ಕರ್ತವ್ಯಗಳನ್ನು ತಪ್ಪದೇ ಪಾಲಿಸೋಣ ಹಾಗೂ ಹಕ್ಕುಗಳನ್ನು ಪಡೆಯೋಣ ಹಾಗೂ ಸಂವಿಧಾನವನ್ನು ನಾವು-ನೀವೆಲ್ಲರೂ ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರೊಂದಿಗೆ ಅರಿತುಕೊಳ್ಳೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಎಂ ಎಸ್ ಪಾಟೀಲ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆಯನ್ನು ಬೋಧಿಸಿದರು. ರಾಘವೇಂದ್ರ ಬಸನಾಯಕ ಗುರುಗಳು ನಿರೂಪಿಸಿದರು. ಗುರುಮಾತೆ ಭುವನೇಶ್ವರಿ ಹಿರೊಳ್ಳಿ ವಂದಿಸಿದರು.
ಈ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಅಶೋಕ ಭೋವಿ ಹಾಗೂ ವಿದ್ಯಾರ್ಥಿಗಳು ಮತ್ತು ಪಾಲಕರು ಪಾಲ್ಗೊಂಡಿದ್ದರು.