ಶ್ರುತಿಗೊಳಿಸೋಣ ಜೀವನ ವೀಣೆ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಒಮ್ಮೆ ನೂರರ ಅಂಕಿ ‘ತಾನೇ ಶ್ರೇಷ್ಠ’ ಎಂದುಕೊಂಡಿತು. ಅದರ ಪಕ್ಕದಲ್ಲಿ ಒಂದು ಎರಡು ಮೊದಲಾದ ಸಣ್ಣ ಸಣ್ಣ ಅಂಕಿಗಳು ಸುಳಿದಾಡಿದರೆ ಅವುಗಳನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ ನೋಡಿದರೂ ತುಂಬಾ ಕೀಳಾಗಿ ಕಾಣುತ್ತಿತ್ತು. ‘ನೀವೆಲ್ಲ ಚಿಲ್ಲರೆ ನನಗಿಂತ ತುಂಬಾ ಚಿಕ್ಕವರು.’ ಎಂದು ಅವಮಾನಿಸಿತು.

ನೂರಂಕಿಯ ಅಹಂಕಾರದ ವರ್ತನೆ ಕಂಡು ಅದರಲ್ಲಿದ್ದ ಒಂದಂಕಿಗೆ ಬೇಸರವಾಯಿತು..ಇದಕ್ಕೆ ಸರಿಯಾಗಿ ಪಾಠ ಕಲಿಸಬೇಕೆಂದು ನೂರರಲ್ಲಿದ್ದ ಒಂದಂಕಿ ಪಕ್ಕಕ್ಕೆ ಸರಿಯಿತು. ತಕ್ಷಣ ತಾನೇ ಶ್ರೇಷ್ಠ ಎಂದುಕೊಂಡಿದ್ದ ನೂರಂಕಿ ಬೆಲೆ ಕಳೆದುಕೊಂಡಿತ್ತು. ಸರಿದಿದ್ದುದು ಒಂದು ಮಾತ್ರ ಬಿದ್ದದ್ದು ನೂರು!
ಮೇಲಿನ ದೃಷ್ಟಾಂತದಂತೆ ನಾವೆಲ್ಲ ನನ್ನ ಮನೆ ಬಂಗಲೆಯಂತಿದೆ ನಾನೇ ಶ್ರೀಮಂತ. ನನ್ನ ಮನೆ ಅರಮನೆಯಂತಿದೆ ನಾನೇ ಶ್ರೇಷ್ಠ ನನ್ನ ಅಂದ ಚಂದ ಬಲು ಚಂದ ನಾನೇ ಶ್ರೇಷ್ಠ ಎನ್ನುತ್ತೇವೆ. ನಾವು ಸತಿ-ಸುತರ ಧನ ಕನಕಗಳ ವ್ಯಾಮೋಹದಲ್ಲಿ ಬಿದ್ದಿದ್ದೇವೆ.

ಹೊಟ್ಟೆಗೆ ಚೂರು ಅನ್ನ, ಕುಡಿಯಲು ನೀರು, ತಲೆ ಮೇಲೆ ಸೂರು ಇಲ್ಲದವರನ್ನು ಕನಿಷ್ಠವೆಂದು ಹಳಿಯುತ್ತ ತಮ್ಮ ಸಿರಿವಂತಿಕೆಗೆ ಅವರ ಬೆವರು ಬಳಸಿಕೊಳ್ಳುವ ಸಿರಿವಂತಿಕೆಯ ಅಮಲಿನಲ್ಲಿಲ್ಲಿರುವವರು ನೂರಂಕಿಯಂತೆ ಬೀಗುತ್ತಿರುತ್ತಾರೆ. ಪಕ್ಕದಲ್ಲಿರುವ ಹುಲ್ಲು ಜೋಪಡಿಯಲ್ಲಿರುವ ದೀನರು ತುಸು ಪಕ್ಕಕ್ಕೆ ಸರಿದರೂ ಸಾಕು ಮುಗಿಲಿಗಿಂತ ಮಿಗಿಲಾದ ಮಹಲು ಮಣ್ಣುಪಾಲು ಎಂಬುದನ್ನು ಅರಿಯಬೇಕು. ಸುಖದ ಜೀವನಕ್ಕೆ ಬೇಕಾದುದೇನೆಂದು ಯೋಚಿಸಿದರೆ ಈ ಕೆಳಗಿನ ವಿಚಾರಗಳು ಸರಿ ಅನಿಸುತ್ತವೆ.

ಅನ್ನವೇ ದೇವರು:

- Advertisement -

ಸುಭಾಷಿತವೊಂದು ಹೀಗೆ ಹೇಳುತ್ತದೆ. ‘ಜಗತ್ತಿನಲ್ಲಿ ಮೂರೇ ಮೂರು ಶ್ರೇಷ್ಠ ರತ್ನಗಳಿವೆ. ಒಂದು ನೀರು ಮತ್ತೊಂದು ಅನ್ನ ಇನ್ನೊಂದು ಸುಭಾಷಿತ.’ ನೀರು ಮತ್ತು ಅನ್ನ ಜೀವಂತವಿರಲು ಅವಶ್ಯಕವಾಗಿ ಬೇಕೇಬೇಕು. ಹೊಟ್ಟೆ ತುಂಬಿದ ಬಳಿಕ ಸುಭಾಷಿತದ ಜ್ಞಾನವಿದ್ದರೆ ಸಾಕು. ಹೀಗೆ ಜ್ಞಾನವುಳ್ಳವನು ಮಾನವೀಯತೆಯನ್ನು ಮೆರೆಯುತ್ತಾನೆ.

ಮಾನವೀಯತೆಯನ್ನು ಮೆರೆದವನು ಮಹಾತ್ಮನೆನಿಸಿಕೊಳ್ಳುತ್ತಾನೆ. ನೀರು ಜೀವಜಲ. ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಅನ್ನವಿಲ್ಲದಿದ್ದರೆ ಬದುಕಬಹುದು.ಆದರೆ ಬಹುಕಾಲ ಬದುಕಲಾಗುವುದಿಲ್ಲ. ‘ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ.’ ಎಂದು ದಾಸರು ಸರಿಯಾಗಿಯೇ ಹೇಳಿದ್ದಾರೆ. ಇರುವ ಗೇಣು ಹೊಟ್ಟೆಯನ್ನು ತುಂಬಿಸಲು ಜಗದ ಜೀವಿಗಳೆಲ್ಲ ಬಳಲಿ ಬೆಂಡಾಗುತ್ತವೆ. ಹೊಟ್ಟೆಯೆಂಬುದು ಸೋರುವ ಮಡಿಕೆಯಿದ್ದಂತೆ. ಇದನ್ನು ತುಂಬಿದವರಿಲ್ಲ.

ಅನ್ನದ ಮಹತ್ವ ತಿಳಿದವರು ಅನ್ನವೇ ದೇವರೆಂದರು. ಅನ್ನ ದೇವರ ಮುಂದೆ ಮತ್ತಾವ ದೇವರಿಲ್ಲವೆಂದು ಎಚ್ಚರಿಸಿದರು. ಅನ್ನದಿಂದಲೇ ಜೀವಿಗಳ ಜೀವನ. ಅನ್ನವಿಲ್ಲದೇ ಜೀವನವಿಲ್ಲ. ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲವೆಂಬ ಮಾತುಸೂರ್ಯನಷ್ಟೇ ಸ್ಪಷ್ಟ. ಭಗವಂತನು ಎಲ್ಲ ಜೀವಿಗಳ ಬದುಕಿಗೆ ಬೇಕಾದ ಅನ್ನವನ್ನು ಸೃಜಿಸಿದ್ದಾನೆ.

ಅನ್ನದ ಮಹತ್ವ ಅಷ್ಟಿಷ್ಟಲ್ಲ. ಅನ್ನವೇ ಜೀವಿಗಳ ಸರ್ವಸ್ವ..ಸಿರಿವಂತರ ಮನೆ ತುಂಬ ಹಣ್ಣುಗಳು ತುಂಬಿದ್ದರೂ ಹಾಲಿನ ಹೊಳೆ ಹರಿಯುತ್ತಿದ್ದರೂ ತಿನ್ನಲು ಸಾಕಷ್ಟು ಅವಕಾಶಗಳಿದ್ದರೂ ಬಾಯಿ ಇಲ್ಲ. ಬಡವರಿಗೆ ಏನೆಲ್ಲ ಎಷ್ಟೆಲ್ಲ ತಿನ್ನಬೇಕೆಂಬ ಹಂಬಲವಿದ್ದರೂ ಅನ್ನ ಸಿಗುವುದಿಲ್ಲ.

ಸರ್ವಜೀವಿಗಳಿಗೂ ಬೇಕಾದ ಅನ್ನ ಸೃಷ್ಟಿಸಿದ ಭಗವಂತ ಅದನ್ನು ಹುಡುಕಿ ಗಳಿಸಿ ತಿನ್ನಲು ಹೇಳಿದ್ದಾನೆ ಹೊರತು ಅನ್ನ ತಾನೇ ಬಂದು ಗೂಡಿನಲ್ಲಿ ಗುಡಿಸಲಿನಲ್ಲಿ ಮನೆಗಳಲ್ಲಿ ಅರಮನೆಯಲ್ಲಿ ಬೀಳುವಂತೆ ಮಾಡಿಲ್ಲ. ಹೀಗಾಗಿ ದುಡಿಯಲೇಬೇಕು. ಬೆವರು ಸುರಿಸಿ ತಿಂದ ಅನ್ನ ಹೊಟ್ಟೆಗೆ ಹಿತ. ಕಿತ್ತುಕೊಂಡು ತಿಂದ ಅನ್ನ ವಿಷವಾಗಿ ಪರಿಣಮಿಸುವುದು.

ಸುಖ ನಿದ್ರೆ:

ಕವಿ ಬೇಂದ್ರೆ ಹೇಳಿದಂತೆ ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ.’ ಎಂಬ ಸಾಲನ್ನು ನೆಮ್ಮದಿಯ ನಿದ್ದೆ ಕಳೆದುಕೊಂಡ ನಾವು ದಿನವೂ ನೆನೆಯುವಂತಾಗಿದೆ. ಮೊದಲೆಲ್ಲ ದಿಂಬಿಗೆ ತಲೆಯಿಡುವುದೊಂದೇ ತಡ ಸಹಜ ಸುಂದರ ಸ್ವಾಭಾವಿಕ ನಿದ್ರೆ ತಬ್ಬಿಕೊಳ್ಳುತ್ತಿತ್ತು. ಅದಕ್ಕೆ ಕಾರಣ ಶಿಸ್ತುಬದ್ಧವಾದ ಶಾರೀರಿಕ ವ್ಯಾಯಾಮ, ಶ್ರಮ, ಆಟೋಟಗಳು ಒತ್ತಡ ರಹಿತ ಆದರ್ಶ ಜೀವನ ಶೈಲಿ ಕಾರಣವಾಗಿತ್ತು.

ವೈಜ್ಞಾನಿಕ ಅನ್ವೇಷಣೆಗಳು ಬದುಕನ್ನು ಎಷ್ಟೆಲ್ಲ ಸರಳ ಮಾಡಿವೆಯಾದರೂ ಸುಖನಿದ್ರೆ ಸರಳವೆನಿಸುತ್ತಿಲ್ಲ. ನಿದ್ರಾಹೀನತೆಗೆ ನೈತಿಕ ಅದಃಪತನ ಮುಖ್ಯವಾಗಿ ಕಾರಣವಾಗಿದೆ. ಸುಖನಿದ್ರೆಗೆ ನೂರಾರು ಸೋಪಾನಗಳನ್ನು ಹುಡುಕುವ ದುಸ್ಥಿತಿ ಬಂದಿದ್ದು ಅಚ್ಚರಿಯೆನಿಸಿದರೂ ಸತ್ಯ. ದಾವಂತದ ದುನಿಯಾದಲ್ಲಿ ಸುಖನಿದ್ರೆ ತುಟ್ಟಿಯಾಗಿದೆ ಹಾಗೆ ನೋಡಿದರೆ ಮನುಷ್ಯನ ಆಯುಷ್ಯದ ಮೂರನೇ ಒಂದು ಭಾಗ ನಿದ್ದೆಯಲ್ಲಿಯೇ ಕಳೆದುಹೋಗುತ್ತದೆ.

ನಿದ್ರೆ ಬರುತ್ತಿಲ್ಲವೆಂದು ಚಡಪಡಿಸುತ್ತೇವೆ. ನಿದ್ದೆಗೆ ಕಷ್ಟಪಡಬಾರದು. ಅದು ತಾನಾಗಿಯೇ ಆವರಿಸಿಕೊಳ್ಳಬೇಕು. ಬೆವರಿನ ಸಾಲಿನ ಹನಿಗಳೆಲ್ಲ ದಿನವೆಲ್ಲ ಹರಿದಿದ್ದರೆ ನಿದ್ರಾರಾಣಿ ತಾನಾಗಿಯೇ ಪಕ್ಕಕ್ಕೆ ಬರುತ್ತಾಳೆ. ಕಂಪ್ಯೂಟರ್ ಮೊಬೈಲ್ ಯುಗದಲ್ಲಿ ಶಾರೀರಿಕ ಚಟವಟಿಕೆಗಳನ್ನು ಹತ್ತಿಕ್ಕಿದ್ದೇವೆ. ಅನಿವಾರ್ಯವಾಗಿ ಸುಖನಿದ್ರೆಗೆ ಮಾತ್ರೆ ನುಂಗುವ ಸ್ಥಿತಿ ಬಂದೊದಗಿದೆ. ನೆಮ್ಮದಿ ಶಾಂತಿಯಿಲ್ಲದ ಮನಸ್ಸಿಗೆ ನಿದ್ದೆ ಬರುವುದಾದರೂ ಹೇಗೆ ಹೇಳಿ?

ಆದ್ದರಿಂದ ತಾನೇ ಆವರಿಸಿಕೊಳ್ಳಬೇಕಾಗಿದ್ದ ನಿದ್ದೆಯನ್ನು ನಾವೇ ಅರಿಸಿಕೊಂಡು ಹೋಗುವಂತಾಗಿದೆ. ಗಳಿಕೆ ಹಪಹಪಿಯಲ್ಲಿ ನಾಳೆಗೆ ಇನ್ನಷ್ಟು ಮತ್ತಷ್ಟು ಬೇಕೆಂದು ನಿದ್ದೆಗೆಟ್ಟು ದುಡಿಯುವ ಜನರು ಇಲ್ಲದಿಲ್ಲ. ಅತಿಯಾದ ಮೋಹ ಮತ್ಸರಾದಿಗಳನ್ನು ಆಲಸ್ಯ, ದುರ್ನಡತೆ, ದುರಿತಗಳನ್ನು ತ್ಯಜಿಸಿದರೆ ಸುಖದನಿದ್ರೆಗೆ ಜಾರಬಹುದು.

ಸಹಜ ನಗು:

ಎಂದೋ ಮೂಲೆ ಸೇರಿದ ನೋವುಗಳ ಹೆಕ್ಕಿ ತೆಗೆದು ನೆನೆದು ಅಳುವುದು ಅದರಲ್ಲೇ ದಿನಗಳೆಯುವುದು ಬದುಕೆಂದುಕೊಳ್ಳುವವರು ಇಲ್ಲದೇನಿಲ್ಲ. ಒಂದು ವೇಳೆ ನಕ್ಕರೂ ತೋರಿಕೆಯ ನಗು ಮೊಗದಲ್ಲಿ ವಿಷಪೂರಿತ ಮನಸ್ಸು..ನಗು ಹೆಸರಿಗಷ್ಟೇ ಸೀಮಿತ. ಒಳಿತು ನಮ್ಮೆಲ್ಲರ ಉಸಿರಿಗೆ ಕಾರಣ. ಒಳ್ಳೆಯದರಲ್ಲಿಯ ಆಪ್ತತೆ ಸಂಭ್ರಮ ತೃಪ್ತಿ ಅನುಭವಿಸಿಯೇ ತಿಳಿದುಕೊಳ್ಳಬೇಕು. ಊರವರೆಲ್ಲ ತನ್ನವರೆನ್ನುವಗುಣ ಸಜ್ಜನರದು. ತಪ್ಪುಗಳು ತಮ್ಮವೇ ಆದರೂ ದೂಷಿಸಿ ನರಳಿಸುವವರಿಗೇನು ಕಮ್ಮಿ ಇಲ್ಲ.

ಮಳೆ ಹನಿಗಳು ಪಟ ಪಟ ಬೀಳತೊಡಗಿ ದೋದೋ ಎಂದು ಹೊಯ್ಯುತ್ತಿರುವಂತೆ ಮನಸ್ಸು ಬಾಲ್ಯದೆಡೆಗೆ ಸಾಗುತ್ತದೆ. ಮಾಡಿದ ಕಸರತ್ತುಗಳೆಲ್ಲ ನೆನಪಾಗಿ ಮುಖ ಫಳ ಫಳ ಹೊಳೆಯುತ್ತದೆ. ನೋವಿನ ಕಲೆಗಳನ್ನೆಲ್ಲ ಕೊಚ್ಚಿಕೊಂಡು ಹೋಗಿ ಮನವನ್ನೆಲ್ಲ ಶುಚಿಗೊಳಿಸಿ ಹೊಸದಾದ ಆಸೆಗಳು ಚಿಗುರಿ ಹೃದಯದ ಬಯಲೆಲ್ಲ ಹಸಿರಾಗಿ ಖುಷಿಯಿಂದ ಕಂಗೊಳಿಸುತ್ತದೆ.

ಹಸುಗೂಸಿನ ಮುಕ್ತವಾದ ನಗು ಹೊರಹೊಮ್ಮುತ್ತದೆ. ಆರ್ಥಿಕ ಇತಿಮಿತಿಗಳ ನಡುವೆಯೂ ಒಬ್ಬರಿಗೊಬ್ಬರು ಸಹಬಾಳ್ವೆಯಿಂದ ಬದುಕಲು ಸಾಧ್ಯವಾಗುತ್ತದೆಂಬುದು ಸಜ್ಜನರ ಅಂಬೋಣ ಮತ್ತು ಅನುಭವದ ಮಾತು.’ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.’ ಎಂದಿದ್ದಾರೆ ಪ್ರಾಜ್ಞರು.

ಕೊನೆ ಹನಿ:

ಆರೋಗ್ಯಕರ ಜೀವನಕ್ಕೆ ಅನ್ನ ನೀರು ಜ್ಞಾನ ಸುಖನಿದ್ರೆ ಸಹಜ ನಗುವಿನ ಸಿರಿ ಬೇಕು. ಅವೇ ಬದುಕಿನ ಶ್ರೇಷ್ಠ ರತ್ನಗಳು ಇವೆಲ್ಲ ಜೊತೆಗಿದ್ದರೆ ಸಂತಸ ಹೊತ್ತು ಬರುವ ವಸಂತ ಸದಾ ಜತೆಗಿದ್ದಂತೆ. ಆರೋಗ್ಯ ಸರಿ ಇರದಿದ್ದರೆ ಬಂಡಿ ಬಂಡಿ ಆಸ್ತಿ ಅಂತಸ್ತು ಬಂಜೆ ಹೂವಂತೆ ಕಾಣುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ಬದುಕು ಶ್ರುತಿ ಮಾಡದೇ ಹಾಗೆ ಬಿಟ್ಟ ವೀಣೆಯಂತಾಗಿದೆ..ಬದುಕಿನ ಶ್ರೇಷ್ಠ ರತ್ನಗಳ ಬಗ್ಗೆ ಅರಿತು ಜೀವನದ ವೀಣೆ ಶ್ರುತಿಗೊಳಿಸೋಣ. ಸುಖದ ನಗೆಯ ಬಂಡಿಯನ್ನು ಎದುರುಗೊಳ್ಳೋಣವಲ್ಲವೇ?


ಜಯಶ್ರೀ.ಜೆ.ಅಬ್ಬಿಗೇರ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ

- Advertisement -

2 COMMENTS

LEAVE A REPLY

Please enter your comment!
Please enter your name here

- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!