ರಾಜಾಪೂರ ಗ್ರಾಮದಲ್ಲಿ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಚಾಲನೆ
ಮೂಡಲಗಿ: ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರಯೋಧರನ್ನು ಗೌರವಿಸಲು ಇಡೀ ರಾಷ್ಟ್ರಾಧ್ಯಂತ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬ ಭಾರತೀಯನು ನಮ್ಮ ಯೋಧರ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ತಾಲೂಕಿನ ರಾಜಾಪೂರ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಜರುಗಿದ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರದ ಸುರಕ್ಷತೆಗಾಗಿ ಹಗಲಿರಳು ಹೋರಾಡಿ ಹುತಾತ್ಮರಾದ ವೀರಯೋಧರ ಗೌರವಾರ್ಥ ಈ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
75ನೇ ಅಮೃತಮಹೋತ್ಸವದ ವರ್ಷಾಚರಣೆಯ ಮುಂದುವರೆದ ಭಾಗವಾಗಿರುವ ಈ ಅಭಿಯಾನದಲ್ಲಿ ಯೋಧರನ್ನು ಸ್ಮರಿಸುವ ಕರ್ತವ್ಯ ನಮ್ಮದಾಗಲಿದೆ , ತಮ್ಮ ಜೀವದ ಹಂಗು ತೊರೆದು ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರ ಕುರಿತು ನಾವೆಲ್ಲರೂ ಪ್ರೀತಿ ಮತ್ತು ಆದರವನ್ನು ಇಟ್ಟುಕೊಳ್ಳಬೇಕು ಎಂದು ಹೇಳಿದರು.
Mದೇಶದ ಅಖಂಡತೆ, ಏಳಿಗೆಗಾಗಿ ನಾವೆಲ್ಲರೂ ಶ್ರಮಿಸಬೇಕು, ದೇಶ ನಮಗೇನೂ ಮಾಡಿತು ಅನ್ನುವುದುಕಿಂತ ದೇಶಕ್ಕೆ ನಮ್ಮ ಕೊಡುಗೆ ಏನೂ ? ಎಂಬುದನ್ನು ನಮ್ಮನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಜೊತೆಗೆ ಗಿಡ ಮರಗಳನ್ನು ಬೆಳೆಸಿ ಪರಿಸರ ಸಮತೋಲನ ಕಾಯ್ದುಕೊಳ್ಳಲು ಅಗತ್ಯವಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ನಾಗವ್ವ ಕಟಿಕಾರ, ಗೋಕಾಕ ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ ಪಾಟೀಲ, ಬೆಂಗಳೂರು ಎಸ್‍ಎಲ್‍ಡಿಪಿ ನಿರ್ದೇಶಕ ರಾಜು ಬೈರುಗೋಳ, ರಾಮಚಂದ್ರ ಪಾಟೀಲ, ಶಿವು ಕಮತಿ, ಬಸವರಾಜ ಪಂಡ್ರೊಳ್ಳಿ, ಭೈರಪ್ಪ ಯಕ್ಕುಂಡಿ, ರಾಜು ಪವಾರ, ವಾಶಪ್ಪ ಪಂಡ್ರೊಳ್ಳಿ, ತಾ.ಪಂ ಇಒ ಎಫ್.ಜಿ.ಚಿನ್ನನವರ, ಬಿಇಓ ಅಜೀತ ಮನ್ನಿಕೇರಿ, ಸಿಡಿಪಿಓ ಯಲ್ಲಪ್ಪ ಗದಾಡಿ, ಶಾಲೆಯ ಮುಖ್ಯ ಶಿಕ್ಷಕ ಜಿ.ಬಿ.ಹಿರೇಮಠ, ಪಿಡಿಒ ಉದಯಕುಮಾರ ಬೆಳುಡಗಿ ಮುಂತಾದವರು ಉಪಸ್ಥಿತರಿದ್ದರು.
ಇದೇ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸಸಿಗೆ ನೀರುಣಿಸುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ನಂತರ ನಿವೃತ್ತ ಸೈನಿಕರನ್ನು ಸತ್ಕರಿಸಿದರು.