ಸಾಲು ಸಾಲು ದೀಪಗಳ ಬೆಳಕಿನ ಹಬ್ಬ ದೀಪಾವಳಿ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ನಮ್ಮಲ್ಲಿರುವಷ್ಟು ಹಬ್ಬದ ಆಚರಣೆಗಳು ಜಗತ್ತಿನ ಬಹುತೇಕ ಯಾವ ದೇಶದಲ್ಲೂ ಇಲ್ಲ. ಹದಿನೈದು ದಿನಕ್ಕೊಂದು ಅಮವಾಸ್ಯೆ ಹುಣ್ಣಿಮೆಯನ್ನೂ ಉಲ್ಲಾಸದಿಂದ ಆಚರಿಸುವಷ್ಟು ಹಬ್ಬ ಪ್ರಿಯರು ನಾವು. ಅದರಲ್ಲೂ ದೀಪಾವಳಿ ಹಬ್ಬ ಅಂದರೆ ಕೇಳಬೇಕೆ? ಇದು ಸಾಲು ಸಾಲು ದೀಪಗಳ ಹಬ್ಬ ಸತ್ಯದತ್ತ ಕರೆದೊಯ್ಯುವ ಬೆಳಕಿನ ಹಬ್ಬ.

ಈ ಹಬ್ಬಕ್ಕೆ ನಮ್ಮ ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವುಂಟು. ದುಷ್ಟರನ್ನು ಸದೆ ಬಡೆದು ಶಿಷ್ಟರಾಗಿ, ಅಜ್ಞಾನವೆಂಬ ಕತ್ತಲನ್ನು ಹೊಡೆದೋಡಿಸಿ, ಜ್ಞಾನದ ಬೆಳಕನ್ನು ಬಾಳಲ್ಲಿ ತಂದುಕೊಳ್ಳುವುದೇ ದೀಪಾವಳಿಯ ಸಂದೇಶ. ಹಳ್ಳಿಗಾಡಿನಲ್ಲಿ ದೀಪ ಬೆಳಗುವ ಹಬ್ಬವೆಂದೇ ಕರೆಸಿಕೊಳ್ಳುವ ಹಬ್ಬವಿದು. ಜಗ ಬೆಳಗುವ ಸೂರ್ಯ ಚಂದ್ರರು, ಮನುಷ್ಯನ ಸಂಶೋಧನೆ ವಿದ್ಯುತ್, ಬೆಂಕಿ ಮತ್ತು ಸ್ನೇಹವನ್ನು ನಿಜವಾದ ಐದು ದೀಪಗಳೆಂದು ಹೇಳುವರು.

ಸಕಲ ಜೀವರಾಶಿಗಳಿಗೆ ಚೈತನ್ಯ ನೀಡುವ ಶಕ್ತಿ ಸೂರ್ಯನಿಗಿದೆ. ಸಸ್ಯ ಸಂಕುಲಗಳಲ್ಲಿ ಆಹಾರ ಮತ್ತು ಔಷಧಿ ಸತ್ವವನ್ನು ಬೆಳೆಸುವ ಶಕ್ತಿ ಚಂದ್ರನಿಗಿದೆಯಂತೆ. ಬೆಂಕಿಯಿಂದ ಹೊಟ್ಟೆಗೆ ಆಹಾರ ವಿದ್ಯುತ್ತಿನಿಂದ ಅಭಿವೃದ್ಧಿಗೆ ಆಹಾರ. ನಿಜವಾದ ಸ್ನೇಹ ಉತ್ಕೃಷ್ಟ ಭಾವನೆಗಳಿಗೆ ತುತ್ತು ನೀಡಿ ಬೆಳೆಸುತ್ತದೆ. ಇಷ್ಟೆಲ್ಲ ರೀತಿಯ ಉನ್ನತಿಗೆ ಕಾರಣವಾಗುವುದೇ ದೀಪಾವಳಿ.

ಧಾವಂತದ ಬದುಕಿನಲ್ಲಿ ಕಷ್ಟ ಕೋಟಲೆಗಳ ಕತ್ತಲೆ ಸರಿದು ಯಾವಾಗ ಬೆಳಕಿನಂಥ ಸುಖ ಮನೆ ಮಾಡುತ್ತದೆಯೋ ಎಂದು ಹಾತೊರೆಯುತ್ತಿರುವ ಸುಖಾಂಕ್ಷಿಗಳಿಗೆಲ್ಲ ಭರವಸೆಯ ಕಾಲವಿದು.ಎನ್ನುವುದು ಹಲವರ ಅಂಬೋಣ. ಭರ್ತೃಹರಿ ಹೇಳುವಂತೆ “ಕಾಲ ಬದಲಾಗುತ್ತಿಲ್ಲ ನಾವೇ ಬದಲಾಗುತ್ತಿದ್ದೇವೆ..” “ಕತ್ತಲೆಯಲ್ಲಿ ಒಳ್ಳೆಯ ಹೃದಯವು ಕೂಡ ತಪ್ಪು ಹಾದಿಯನ್ನು ತುಳಿಯಬಹುದು” ಎಂದು ಗಾರ್ಕಿ ನುಡಿದಿದ್ದು ಸತ್ಯವಾಗಿದೆ. ಸಂಕಟ ದುಃಖಗಳಿಗೆ ನಮ್ಮ ಅಜ್ಞಾನ ಸ್ವಾರ್ಥದ ಮನಸ್ಸೇ ಮುಖ್ಯ ಕಾರಣ.ಎನ್ನುವುದೂ ಅಷ್ಟೇ ಸತ್ಯ.

ದೀಪಾವಳಿಯ ಅರ್ಥ:

ದೀಪಗಳ ಆವಳಿ (ಆವಲೀ ಹಿಂದಿ ಶಬ್ದ,ಅರ್ಥ-ಸಾಲು) ಎಂದರೆ ದೀಪಗಳ ಸಾಲು ಎಂದರ್ಥ. ಸಾಲು ಸಾಲು ದೀಪಗಳನ್ನು ಬೆಳಗುವುದು ದೀಪಾವಳಿ ಎಂದು ಕರೆಸಿಕೊಳ್ಳುತ್ತದೆ. ಕಣ್ಣು ಹರಿದಲೆಲ್ಲ ದೀಪಗಳ ಸಾಲುಗಳು ಕೋರೈಸುತ್ತವೆ. ಮನೆಯ ಅಂಗಳ ದೇವಸ್ಥಾನದ ಪ್ರಾಂಗಣಗಳು ದೀಪಸ್ತಂಭಗಳು ಲಕ್ಷ ಲಕ್ಷ ದೀಪಗಳಿಂದ ತುಂಬಿ ತುಳುಕುತ್ತವೆ. ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಹಣತೆಗಳ ಭರಾಟೆ ನಡೆದಿರುತ್ತದೆ. ಆದರೂ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುವುದು.

ಆಚರಣೆಯ ಹಿನ್ನೆಲೆ:

ಎರಡು ಪೌರಾಣಿಕ ಘಟನೆಗಳು ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ. ಶ್ರೀ ರಾಮ ರಾವಣನನ್ನು ಸೋಲಿಸಿ ಸೀತೆ ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದಾಗ ವಿಜಯೋತ್ಸವದ ಪ್ರತೀಕವಾಗಿ ಅಯೋಧ್ಯೆಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ ಉಲ್ಲೇಖವಿದೆ. ಅಮವಾಸ್ಯೆಯ ಹಿಂದಿನ ದಿನ (ನರಕ ಚರ್ತುದಶಿ) ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿದ ದಿನವೆಂದು ಹೇಳಲಾಗುತ್ತದೆ. ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಆಚರಿಸಲಾಗುವುದು. ಬಲಿ ವಾಮನರ ಕಥೆ- ಬಲಿ ತ್ಯಾಗವನ್ನು ಅಮವಾಸ್ಯೆ ಮರುದಿನ ಬಲಿ ಪಾಡ್ಯಮಿಯಾಗಿ ಆಚರಿಸಲಾಗುತ್ತದೆ.

ಸಿಖ್ ಧರ್ಮದಲ್ಲಿ 1920ರಲ್ಲಿ ಸಿಖ್‍ರ ಆರನೇಯ ಗುರು ಹರಗೋವಿಂದ ಸಿಂಗ್ ಗ್ವಾಲಿಯರ್‍ನ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ಆಚರಿಸಲಾಗುವುದು. ಜೈನ ಧರ್ಮದಲ್ಲಿ ಕೊನೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತುರ್ದಶಿಯಂದು (ಕ್ರಿ ಪೂ 527 ಅಕ್ಟೋಬರ್ 15) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.

ದೀಪಗಳಿಗೆ ಎಳ್ಳೆಣ್ಣೆ:

ದೀಪಾವಳಿ ಹಬ್ಬದ ಹಣತೆಗಳಿಗೆ ವಿಶೇಷವಾಗಿ ಎಳ್ಳೆಣ್ಣೆಯನ್ನು ಬಳಸುತ್ತಾರೆ ಏಕೆಂದರೆ ಎಳ್ಳೆಣ್ಣೆಗೆ ಕ್ರಿಮಿಗಳನ್ನು ನಾಶ ಮಾಡುವ ಗುಣವಿದೆ. ಅಲ್ಲದೇ ದೀಪದ ಕಾಂತಿಯು ಕಣ್ಣಿಗೆ ಹಿತಕರ. ಕಾಂತಿಯಲ್ಲಿನ ವಿಟಮಿನ್ ಕೆ ಕಣ್ಣಿನ ದೃಷ್ಟಿಯನ್ನು ಉತ್ತಮಪಡಿಸುವ ಗುಣ ಹೊಂದಿದೆ. ಇದಲ್ಲದೇ ಚರ್ಮವ್ಯಾಧಿ ನಿವಾರಿಸುವ ಶಕ್ತಿಯೂ ಇದಕ್ಕಿದೆ. ಚರ್ಮಕ್ಕೆ ಕಾಂತಿ ಹೆಚ್ಚಿಸುವ ವಿಟಮಿನ್ ಇ ಸಹ ಎಳ್ಳೆಣ್ಣೆಯಲ್ಲಿ ಸಾಕಷ್ಟಿರುವುದು. ಇಷ್ಟೇ ಅಲ್ಲದೇ ಮಂಡಿನೋವನ್ನು ಕಡಿಮೆಗೊಳಿಸುವ, ಮಾರಣಾಂತಿಕ ಕರುಳಿನ ಕ್ಯಾನ್ಸರ್‍ ನಿಂದ ಪಾರು ಮಾಡುವ, ಜೀವ ತಿನ್ನುವ ಮೈಗ್ರೇನ್, ಶ್ವಾಸಕೋಶಕ್ಕೆ ರಕ್ತಪರಿಚಲನೆಗೆ ಸಂಬಂಧಿಸಿದ ರೋಗಗಳ ನಿವಾರಿಸುವ ಶಕ್ತಿ ಎಳ್ಳೆಣ್ಣೆಗಿದೆ. ಅಬ್ಬಾ! ಇಷ್ಟೆಲ್ಲ ಭಯಾನಕ ರೋಗಗಳಿಗೆ ಔಷಧೀಯ ಗುಣಗಳನ್ನು ಹೊಂದಿರುವುದರಿಂದಲೇ ಹಣತೆಗೆ ಈ ಎಳ್ಳೆಣ್ಣೆಯನ್ನು ಬಳಸಲು ಪ್ರಾಧಾನ್ಯತೆ ನೀಡಲಾಗುವುದು.

ದೀಪಾರಾಧನೆ:

ಮನೆ ದೇವಸ್ಥಾನಗಳಲ್ಲಿ ದೇವರ ಮುಂದೆ ಹಗಲಿರುಳೆನ್ನದೇ ದೀಪ ಬೆಳಗುವುದು ನಮ್ಮ ಸತ್ಸಂಪ್ರದಾಯ. ದೀಪ ರಾಗವನ್ನು ಆಲಾಪಿಸಿದರೆ ದೀಪಗಳೆಲ್ಲವೂ ಬೆಳಗುತ್ತವೆ ಎಂದು ಅಕ್ಬರನ ಆಸ್ಥಾನದಲ್ಲಿದ್ದ ತಾನಸೇನ್ ಕವಿ ಉಲ್ಲೇಖಿಸಿದ್ದನ್ನು ಇತಿಹಾಸದ ಪುಟದಲ್ಲಿ ಓದಿದ್ದೇವೆ. ದೀಪಗಳ ಬಗ್ಗೆ ಅನೇಕ ದಂತಕಥೆಗಳು ಉಂಟು. ಯಾವುದೇ ಕತೆಯಾಗಿರಲಿ ಅದು ದೀಪದ ಅದ್ಭುತ ಶಕ್ತಿಯ ಬಗೆಗೆ ಹೇಳುವಂಥದ್ದೆ ಆಗಿದೆ.

ನಮ್ಮ ಸಂಸ್ಕೃತಿಯಲ್ಲಿ ಬದುಕಿನ ಪ್ರತಿ ಹಂತದಲ್ಲೂ ದೀಪವನ್ನು ಬೆಳಗುವುದಕ್ಕೆ ವಿಶಿಷ್ಟ ಗೌರವವಿದೆ. ಮತ್ತು ಪ್ರತ್ಯೇಕ ಸ್ಥಾನವಿದೆ. ಹುಟ್ಟು ಹಬ್ಬ ವಿವಾಹ ಉಡಿ ತುಂಬುವ ಹೆಸರಿಡುವ ಹೀಗೆ ಯಾವುದೇ ಸಂಭ್ರಮಾಚರಣೆಯಲ್ಲಿ ಸಾಂಸ್ಕೃತಿಕ ಸಾಹಿತ್ಯಿಕ ಸಾಮಾಜಿಕ ಕ್ರೀಡೆಯಂಥ ಉದ್ಘಾಟನೆಯ ಸಮಾರಂಭಗಳಲ್ಲೂ ದೀಪ ಬೆಳಗುವಿಕೆಗೆ ಪ್ರಾಮುಖ್ಯತೆಯಿದೆ.

ದೀಪಾರಾಧನೆ ಇಂದು ನಿನ್ನೆಯದಲ್ಲ. ನಮ್ಮನ್ನು ಆಳಿದ ರಾಜರ ಕಾಲದಿಂದಲೂ ಅನೂಚಾನವಾಗಿ ಬೆಳೆದು ಬಂದಿದೆ. ಪಟ್ಟಾಭಿಷೇಕ, ದುಷ್ಟರ ಸಂಹಾರ ಮಾಡಿದಾಗ ಯುದ್ಧಕ್ಕೆ ಹೊರಡುವಾಗ, ವಿಜಯಿಗಳಾಗಿ ಮರಳಿದಾಗ ಹೀಗೆ ಜೀವನದ ಪ್ರತಿ ಮೈಲಿಗಲ್ಲುಗಳಲ್ಲೂ ಜ್ಯೋತಿಯನ್ನು ಬೆಳಗುವ ಬಗೆಯನ್ನು ಜೀವನ ಜ್ಯೋತಿ ಎಂದು ವರ್ಣಿಸಲಾಗಿದೆ.

ದೀಪ ಬೆಳಗುವುದರ ಹಿನ್ನೆಲೆ:

ಸಡಗರ ಸಂಭ್ರಮದಿಂದ ದೀಪಾವಳಿ ಆಚರಣೆಯ ಹಿಂದೆ ಕೆಲ ಶಾಸ್ತ್ರೀಯ ಕಾರಣಗಳಿವೆ. ದೀಪಾವಳಿ ಹಬ್ಬದ ಆಗಮನಕ್ಕೆ ಸಾಕಷ್ಟು ಮಳೆ ಬಿದ್ದು ಅದರ ಆರ್ಭಟ ಕಡಿಮೆ ಆಗಿರುತ್ತದೆ. ಇಂಥ ಸಮಯದಲ್ಲಿ ಪರಿಸರದಲ್ಲಿ ಅನೇಕ ಕ್ರಿಮಿಗಳು ಮೈದಳೆಯುತ್ತವೆ. ಪಟಾಕಿಗಳ ಹೊಗೆಯಿಂದ ಈ ಕ್ರಿಮಿಗಳನ್ನು ಸಂಹರಿಸಲಾಗುವುದು ಎಂಬುದು ಗಮನಾರ್ಹ ವಿಷಯ. ದೀಪಾವಳಿಯ ಸಮಯದಲ್ಲಿ ಸೂರ್ಯ ಭೂಮಿಯಿಂದ ದೂರವಿರುತ್ತಾನೆ.

ಇದರಿಂದಾಗಿ ಭೂಮಿ ತಣ್ಣಗಾಗುತ್ತದೆ. ತಣ್ಣಗಿನ ವಾತಾವರಣಕ್ಕೆ ವಿವಿಧ ಕ್ರಿಮಿಗಳು ಹುಟ್ಟಿಕೊಳ್ಳುತ್ತವೆ. ಎಳ್ಳೆಣ್ಣೆಯ ದೀಪದ ಹೊಗೆ ಗಾಳಿಯಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅಲ್ಲದೇ ಧೂಳು ಕಲ್ಮಶದಂಥ ಮಾಲಿನ್ಯಗಳನ್ನು ನಿಯಂತ್ರಿಸಿ ಪರಿಸರಕ್ಕೆ ಉಪಯೋಗಕಾರಿಯಾಗುತ್ತದೆ. ಎಳ್ಳೆಣ್ಣೆಯ ದೀಪದ ಗಾಳಿ ಸೋಕುವ ಕಾರಣ ದೇಹದ ಅಂಗಾಂಗಳಲ್ಲಿ ಹೊಸ ಉಲ್ಲಾಸ ಉತ್ತೇಜನವನ್ನುಂಟು ಮಾಡುತ್ತದೆ.

ಲಕ್ಷ್ಮೀ ಪೂಜೆ:

ಇಡೀ ಮನೆಯನ್ನೆಲ್ಲ ಶುಚಿಗೊಳಿಸಿ ಮನೆ ಮಂದಿಗೆಲ್ಲ ಹೊಸ ಬಟ್ಟೆ ಖರೀದಿಸಿ ವಿಜೃಂಭಣೆಯಿಂದ ಧನಲಕ್ಷ್ಮೀ ಪೂಜೆಯನ್ನು ಶ್ರದ್ಧೆ ಭಕ್ತಿಯಿಂದ ಸಲ್ಲಿಸುವುದು ಪ್ರಮುಖ ಧಾರ್ಮಿಕ ಕ್ರಿಯೆಯಾಗಿದೆ. ಪೂಜೆಗೆ ಶ್ರೀಗಂಧ ಕುಂಕುಮ ತಾವರೆ ಹೂವು ಎಲೆ ಅಡಿಕೆ ಬೇಕೇ ಬೇಕು. ತೆಂಗಿನಕಾಯಿ ಹಣ್ಣುಗಳು ಬೆಲ್ಲದಲ್ಲಿ ಮಾಡಿದ ಸಿಹಿ ತಿಂಡಿಗಳನ್ನೇ ನೈವೇದ್ಯ ಹಿಡಿಯಲಾಗುವುದು.

ಧನ ಕನಕಗಳನ್ನು ನೀಡಿ ಆಶೀರ್ವದಿಸು ಎಂದು ಹೆಂಗಳೆಯರು ಬೇಡಿಕೊಳ್ಳುವರು. ಇದರೊಂದಿಗೆ ಕೀರ್ತಿ ಜ್ಞಾನ ಧೈರ್ಯ ಗೆಲವು ಬುದ್ಧಿ ಆರೋಗ್ಯ ಸಂಪತ್ತನ್ನು ತಮ್ಮ ಮನೆ ಮಂದಿಗೆಲ್ಲ ಕರುಣಿಸು ಎಂದು ಪ್ರಾರ್ಥಿಸುವರು. ಪುರಂದರ ದಾಸರು ಬರೆದ ಭಾಗ್ಯದ ಲಕ್ಮೀ ಬಾರಮ್ಮ ಮತ್ತಿತರೆ ಪದಗಳನ್ನು ಹಾಡಿ ಲಕ್ಷ್ಮೀಯನ್ನು ಮನೆಗೆ ಆಹ್ವಾನಿಸುತ್ತಾರೆ. ವ್ಯಾಪಾರಸ್ಥರು ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡಿ ವ್ಯಾಪಾರದಲ್ಲಿ ಧನಾಗಮನ ಮತ್ತು ಏಳ್ಗೆಯನ್ನು ಅಪೇಕ್ಷಿಸುತ್ತಾರೆ. ಇದು ಆರ್ಥಿಕ ವರ್ಷದ ಪ್ರಾರಂಭವಾಗಿರುತ್ತದೆ. ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.

ದೀಪಾವಳಿ ನಮ್ಮಲ್ಲಿ ಅರಿವಿನ ಬೆಳಕನ್ನು ನೀಡಿ ಅಂತರಂಗ ಶಕ್ತಿಯ ದಿವ್ಯ ಜ್ಯೋತಿಯನ್ನು ಬೆಳಗುವಂತೆ ಮಾಡುವ ಸಾಲು ಸಾಲು ದೀಪಗಳ ಬೆಳಕಿನ ಹಬ್ಬ. ಸಾರ್ಥಕ ಬದುಕಿಗೆ ದಾರಿದೀಪವಾಗುವ ಹಬ್ಬವನ್ನಾಚರಿಸಿ ಅರಿವಿನ ದೀಪ ಎಲ್ಲೆಲ್ಲೂ ಬೆಳಗೋಣ.


ಜಯಶ್ರೀ.ಜೆ. ಅಬ್ಬಿಗೇರಿ

- Advertisement -
- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!