spot_img
spot_img

ಕೃಷಿ ಬೆಳೆಗಳಿಗೆ ಪೂರಕವಾದ ಉದ್ಯಮ ಆರಂಭಿಸಲು ಸಾಹಿತಿ ಡಾ.ಭೇರ್ಯ ರಾಮಕುಮಾರ್ ಕರೆ

Must Read

spot_img
- Advertisement -

ಕೃಷಿ ಪ್ರಧಾನವಾದ ಕಾವೇರಿ ನದಿ ತೀರದಲ್ಲಿರುವ ಕೆ.ಆರ್.ನಗರ ಹಾಗೂ  ಸಾಲಿಗ್ರಾಮ ತಾಲ್ಲೂಕುಗಳ  ರೈತಸಮುದಾಯ ಬೆಳೆಯುತ್ತಿರುವ ಬೆಳೆಗಳನ್ನು ಬಳಸಿಕೊಂಡು ಉತ್ಪಾದನಾ  ಉದ್ದಿಮೆಗಳನ್ನು ಆರಂಭಿಬೇಕು. ಆ ಮೂಲಕ ಎರಡೂ ತಾಲ್ಲೂಕುಗಳ ರೈತ ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಬೇಕು ಎಂದು ಹಿರಿಯ ಸಾಹಿತಿ, ಪತ್ರಕರ್ತರಾದ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್‌ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲಾ ಕೆ.ಆರ್.ನಗರದಲ್ಲಿ ನಡೆದ ಆಂದೋಲನ ದಿನಪತ್ರಿಕೆಯ  50 ವರ್ಷ ಸಾರ್ಥಕ ಪಯಣ ಕಾರ್ಯಕ್ರಮದಲ್ಲಿ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕುಗಳ ಮುಂದಿನ ಐವತ್ತು ವರ್ಷಗಳ ಅಭಿವೃದ್ದಿ ಕುರಿತು ಮುನ್ನೋಟ ದಿಕ್ಸೂಚಿ ಭಾಷಣ ಮಾಡಿದ ಅವರು,  ಕೆ.ಆರ್.ನಗರ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಸುತ್ತಮುತ್ತಲೂ ಟಮೊಟೊ ಬೆಳೆ ಬೆಳೆಯುತ್ತಿದ್ದು, ಇದನ್ನು ಕೇರಳ ರಾಜ್ಯಕ್ಕೆ ಪೂರೈಸಲಾಗುತ್ತಿದೆ.

ಆ ಬದಲು ಹೆಬ್ಬಾಳಿನಲ್ಲಿ ಟಮೊಟೊ ಸಾಸ್, ಟಮೊಟೊ ಜ್ಯೂಸ್ ಹಾಗೂ ಟಮೊಟೊ  ಪೇಸ್ಟ್ ಉದ್ದಿಮೆ ಆರಂಭಿಸಬೇಕು. ಅದೇ ರೀತಿ ಸಾಲಿಗ್ರಾಮ ತಾಲ್ಲೂಕಿನ ಹರದನಹಳ್ಳಿ ಯ ಸುತ್ತಮುತ್ತ ಅಡಿಕೆ ಫಸಲನ್ನು ಮಾಡಲಾಗುತ್ತಿದೆ. ಅಡಿಕೆಯನ್ನು ಶಿವಮೊಗ್ಗಕ್ಕೆ ಮಾರಲಾಗುತ್ತಿದೆ. ಅಡಿಕೆಯನ್ನು ಉಪಯೋಗಿಸಿ ಅಡಿಕೆ ಪೊಟ್ಟಣ,ಅಡಿಕೆ ಕಾಫಿಪುಡಿ, ಅಡಿಕೆ ಟೀ ಪುಡಿ,ಗಾಜು ತಯಾರಿಕಾ ಉದ್ಯಮವನ್ನು ಆರಂಭಿಸಬೇಕು. ಎರಡೂ ತಾಲ್ಲೂಕುಗಳ ರೈತರು ಬೆಳೆದ ಭತ್ತವನ್ನು ಇಲ್ಲಿಯೇ ಬಾಯಿಲ್ ರೈಸ್ ಮಾಡಿ  ಮಾರಾಟ ಮಾಡುವಂತಹ ಉದ್ಯಮ ಆರಂಭಿಸಬೇಕು. ಎಳನೀರನ್ನು ಬಳಸಿ ಎಳನೀರು ಹಲ್ವ, ಎಳನೀರು ಜೆಲ್ಲಿ,ಎಳನೀರು ಐಸ್ ಕ್ರೀಂ ತಯಾರಿಕೆ ಘಟಕಗಳನ್ನು ಆರಂಭಿಸಬೇಕು.

- Advertisement -

ಕಾವೇರಿ ನದಿ ತೀರದಲ್ಲಿರುವ ಗ್ರಾಮಗಳಲ್ಲಿ  ನೀರು ಶುದ್ಧೀಕರಿಸಿ ಬಾಟಲ್ ಗಳಿಗೆ ತುಂಬುವ ಉದ್ಯಮಗಳನ್ನು ಆರಂಭಿಸಬೇಕು.ಆ ಮೂಲಕ ಎರಡೂ ತಾಲ್ಲೂಕುಗಳ ರೈತರಿಗೆ ಆರ್ಥಿಕ  ಬಲ ತುಂಬಬೇಕು. ಈ ಬಗ್ಗೆ ಎರಡೂ ತಾಲ್ಲೂಕುಗಳ ಜನಪ್ರತಿನಿಧಿಗಳು  ಗಮನಹರಿಸಬೇಕು. ಈ ಬಗ್ಗೆ ಎರಡೂ ತಾಲ್ಲೂಕಿನಲ್ಲಿ ಚಿಂತನಾ ಸಭೆಗಳು ನಡೆಯಬೇಕು ಎಂದವರು ಅಭಿಪ್ರಾಯಪಟ್ಟರು.

ಎರಡೂ ತಾಲ್ಲೂಕುಗಳಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆ ಕಲ್ಪಿಸುವ ಕೆರೆಗಳಿದ್ದು  ಎಲ್ಲಾ ಕೆರೆಗಳಲ್ಲೂ  ಹೂಳೆತ್ತುವ ಕಾರ್ಯ ಸಮರೋಪಾದಿಯಲ್ಲಿ ನಡೆಯಬೇಕು. ಕಾವೇರಿ ನದಿಗೆ ಮತ್ತಷ್ಟು ಕಿರು ಅಣೆಕಟ್ಟುಗಳನ್ನು  ನಿರ್ಮಿಸಿ, ಕೃಷಿ ನೀರಾವರಿ ಸೌಲಭ್ಯ ಹೆಚ್ಚಿಸಬೇಕು.

ಎರಡೂ ತಾಲ್ಲೂಕುಗಳ ಪ್ರವಾಸೋದ್ಯಮ ಕೇಂದ್ರಗಳಾದ ಡೋರನಹಳ್ಳಿ, ಚುಂಚನಕಟ್ಟೆ, ಸಾಲಿಗ್ರಾಮ,ಹನಸೋಗೆ, ಕಪ್ಪಡಿ, ಭೇರ್ಯ, ಹಳೆಎಡತೊರೆ ಕ್ಷೇತ್ರಗಳನ್ನು ಸಂಪರ್ಕಿಸುವಂತಹ ಪ್ರವಾಸೋದ್ಯಮ ರೂಪಿಸಬೇಕು. ಚುಂಚನಕಟ್ಟೆ ಜಲಪಾತದ ಬಳಿ ಸಂಗೀತ ಕಾರಂಜಿ ನಿರ್ಮಿಸಬೇಕು. ಈ ಎಲ್ಲಾ ಪ್ರವಾಸೋದ್ಯಮ ಕ್ಷೇತ್ರಗಳ ಬಗ್ಗೆಯೂ  ರಾಷ್ಟ್ರದಾದ್ಯಂತ  ವ್ಯಾಪಕ ಪ್ರಚಾರ ಮಾಡಬೇಕು. ಆ ಮೂಲಕ  ಪ್ರವಾಸೀ ಉದ್ಯಮ ಬೆಳೆಸಬೇಕು. ತಾಲ್ಲೂಕಿನ ಆದಾಯ ಹೆಚ್ಚಿಸಬೇಕು ಎಂದವರು ಅಭಿಪ್ರಾಯಪಟ್ಟರು.

- Advertisement -

ಎರಡೂ ತಾಲ್ಲೂಕುಗಳಲ್ಲಿ ರಸ್ತೆ ಹೆದ್ದಾರಿಗಳನ್ನು ನಿರ್ಮಿಸುವಾಗ ಎರಡೂ ಬದಿಯಲ್ಲಿ ಮರಗಳನ್ನು ನಾಶ ಮಾಡಲಾಗಿದೆ. ಇದೀಗ ರಸ್ತೆಗಳ ಎರಡೂ ಬದಿಗಳಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಎಲ್ಲಾ ಕೆರೆಯ ಅಂಗಳದಲ್ಲಿ ಸಸಿ ನೆಟ್ಟು ಪರಿಸರ ಸಂರಕ್ಷಿಸಬೇಕು. ಎರಡೂ ತಾಲ್ಲೂಕಿನ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳು ಕನ್ನಡದಲ್ಲಿರಬೇಕು. ಎರಡೂ ತಾಲ್ಲೂಕುಗಳಲ್ಲಿಯೂ ಎರಡು ಕನ್ನಡ ಭವನ ನಿರ್ಮಾಣವಾಗಬೇಕು. ಎರಡೂ ತಾಲ್ಲೂಕುಗಳ ಕವಿಗಳ , ಕಲಾವಿದರ, ರಂಗಭೂಮಿ ಕಲಾವಿದರ  ವಿವರವಾದ ಕೈಪಿಡಿ ತಯಾರಿಸಬೇಕು.ಆ ಮೂಲಕ ಅವರ ಸೇವೆಯನ್ನು ಚಿರಸ್ಥಾಯಿಯಾಗಿಸಬೇಕು ಎಂದು ಕರೆ ನೀಡಿದರು.

ಆಂದೋಲನ 50 ಸಾರ್ಥಕ ಪಯಣ ಕಾರ್ಯಕ್ರಮವನ್ನು  ಕೆ.ಆರ್.ನಗರ ಪುರಸಭಾಧ್ಯಕ್ಷರಾದ  ಕೋಳಿ ಪ್ರಕಾಶ್, ಹರದನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ನಂದಿನಿ ರಮೇಶ್ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾಜಿ ಸಚಿವ ಹಾಲಿ ವಿಧಾನಪರಿಷತ್ ಸದಸ್ಯರಾದ ಹೆಚ್.ವಿಶ್ವನಾಥ್ ಅವರು ಮಾತನಾಡಿ, ತಮ್ಮ ಹಾಗೂ ಆಂದೋಲನ ದಿನಪತ್ರಿಕೆಯ ಸಂಪಾದಕರಾದ  ರಾಜಶೇಖರ ಕೋಟಿ ಅವರ ನಡುವೆ ಇದ್ದ ಸ್ನೇಹವನ್ನು ವಿವರಿಸಿದರು. ಅವಿಭಜಿತ ಮೈಸೂರು ಜಿಲ್ಲೆಯ ಅಭಿವೃದ್ದಿಯಲ್ಲಿ ಆಂದೋಲನ ಪತ್ರಿಕೆಯ ಪಾತ್ರವನ್ನು ಅವರು ವಿವರಿಸಿದರು.

ಕಾಂಗ್ರೆಸ್ ಮುಖಂಡರಾದ ಡಿ ರವಿಶಂಕರ್, ನವನಗರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ  ಕೆ.ಎನ್.ಬಸಂತ್, ಮೂಳೆ ತಜ್ಞರಾದ  ಡಾ.ಮೆಹಬೂಬ್ ಖಾನ್ , ರಾಜ್ಯ ರೈತ ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜ್ ವೇದಿಕೆಯಲ್ಲಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಕಾಟ್ನಾಳು ಹೇಮಂತಕುಮಾರ್ ಹಾಗೂ ನೈಸರ್ಗಿಕ ಉತ್ಪನ್ನಗಳ ತಯಾರಿಕಾ ಉದ್ಯಮದ ನವೀನ ಕುಮಾರ್ ಅವರುಗಳನ್ನು ಆಂದೋಲನ ಪತ್ರಿಕಾ ಬಳಗದ ಪರವಾಗಿ ಸನ್ಮಾನಿಸಲಾಯಿತು.

ಆಂದೋಲನ ಪತ್ರಿಕೆಯ ಹಿರಿಯ ಗ್ರಾಮೀಣ ಪ್ರತಿನಿಧಿಗಳಾದ ಭೇರ್ಯ ರಂಗನಾಥ ಶೆಟ್ಟಿ, ಡಾ.ಭಾಸ್ಕರ್ ತಿಪಟೂರು, ಹೆಚ್.ಪಿ.ಶಿವಣ್ಣ ಅವರುಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಆಂದೋಲನ ಪತ್ರಿಕೆಯ  ಸಂಪಾದಕರಾದ ರವಿ ಕೋಟಿ, ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಉಪಸ್ಥಿತರಿದ್ದರು. ಪತ್ರಕರ್ತ ಭೇರ್ಯ ಮಹೇಶ್ ಸ್ವಾಗತಿಸಿದರು. ಹಿರಿಯ ಪತ್ರಕರ್ತರಾದ ಕುಂದೂರು ಉಮೇಶ್ ಭಟ್ ಅವರು ವಂದಿಸಿದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group