ಮೊನ್ನೆ ನೈಟ್ ಶಿಫ್ಟ್ ಮುಗಿಸಿ, ಶ್ರೀಗುರುವಿನ ಅನುಗ್ರಹ, ಆಗ್ರಹದಿಂದ ಬೆಳಗ್ಗೆಯೇ ಕೈಗಾದಿಂದ ಹೊರಟು, ನಿನ್ನೆ ಸಂಜೆ ವೇಳೆಗೆ 500 ಕಿ.ಮಿಗೂ ದೂರದ ಕೇರಳ, ಕಾಸರಗೋಡಿನ ಬಳಿಯಿರುವ ಎಡನೀರು ಮಠ ತಲುಪಿ, ರಾತ್ರಿ ಶ್ರೀದೇವರ ಮತ್ತು ಶ್ರೀಗುರುಗಳ ದರ್ಶನವಾಯ್ತು.
ಇಂದು ಬೆಳಿಗ್ಗೆ ಎಡನೀರು ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಜೊತೆ ಉಪ್ಪಿನಂಗಡಿ ಬಳಿಯ ಗ್ರಾಮವೊಂದರಲ್ಲಿ ಶ್ರೀ ವಿಷ್ಣುಮೂರ್ತಿ ದೇವಳದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಈ ಜೀವ ಧನ್ಯವಾಯ್ತು.
ಈಗ ಮಧ್ಯಾಹ್ನ 3 ಗಂಟೆಗೆ ವೀಣಾವಾಧಿನಿಯ ಅಂಗಳದಲ್ಲಿ ಹೃನ್ಮನ ಪಾವನವಾಯ್ತು.
“ವೀಣಾವಾದನಿ” ಇದು ವಿದ್ವಾನ್ ಯೋಗೀಶ್ ಶರ್ಮರ ದಿವ್ಯ ಧ್ಯಾನಮಂದಿರ ಅರ್ಥಾತ್ ಭವ್ಯ ಸಂಗೀತ ಶಾಲೆ. ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಶ್ರೀಪಾದಂಗಳವರ ಅಮೃತ ಹಸ್ತಗಳಿಂದ ಹಲವು ವರ್ಷಗಳ ಹಿಂದೆ ಆರಂಭವಾದ ಸಂಗೀತ ಶಾರದೆಯ ಅನನ್ಯ ಮಂದಿರ.
ಅಪೂರ್ವ ಕಂಠದ, ಅಪ್ರತಿಮ ಸಂಗೀತ ಪ್ರತಿಭೆಯ, ಅದ್ವಿತೀಯ ಸಾಧಕರು ಶ್ರೀ ಯೋಗಿಶ್ ಶರ್ಮ. ಶ್ರೀಮಠದ ಪರಮ ಶಿಷ್ಯರಾಗಿರುವ ಯೋಗಿಶರು ನನ್ನ ಗುರುಗೀತ ಲಹರಿ ಸಿಡಿಯಲ್ಲಿ, ಸಂಗೀತ ದಿಗ್ಗಜರಾದ ಆನೂರು ಅನಂತಕೃಷ್ಣ ಶರ್ಮರ ಸಂಗೀತ ಸಂಯೋಜನೆಯ “ಗುರು ನೀನೆ ಜೀವಬಂಧು” ಗೀತೆಗೆ ಧ್ವನಿ ನೀಡಿದ್ದಾರೆ. ನನ್ನೆದೆಯ ಆರ್ದ್ರ ಭಕ್ತಿಭಾವಗೀತೆಯನ್ನು, ಅವಿಸ್ಮರಣೀಯ ಶಾಸ್ತ್ರೀಯ ಶೈಲಿಯ ಅಪೂರ್ವ ರಾಗಮಾಲಿಕೆಯನ್ನಾಗಿ ಮಾಡಿದ್ದಾರೆ. ಕಣ್ಮುಚ್ಚಿ ಕೇಳುತ್ತಿದ್ದರೆ, ಅವರ ಕಂಠದಲ್ಲಿ ಸಂಗೀತಲೋಕದ ದಂತಕತೆ ಜೇಸುದಾಸ್ ಅವರ ಪರಕಾಯ ಪ್ರವೇಶವಾದಂತಹ ಅನುಭವವಾಗುತ್ತದೆ. ಇಂತಹ ಮಹಾನ್ ಗಾಯಕರನ್ನು ನನಗೆ ಪರಿಚಯಿಸಿದ ಗುರು ಆನೂರರಿಗೆ ನಾನು ಚಿರ ಋಣಿ.
ಇಂತಹ ಸಂಗೀತ ನಿಧಿ ಯೋಗೀಶರು ಇಂದು ನನ್ನನ್ನು ಮತ್ತು ನನ್ನ ಶ್ರೀಮತಿಯನ್ನು ಕರೆದೊಯ್ದು ಅವರ ಬದುಕಿನ ಕನಸುಗಳ ಸಾಕಾರ ರೂಪವಾದ “ವೀಣಾವಾಧಿನಿ” ಯ ದರ್ಶನ ಮಾಡಿಸಿದರು. ಶ್ರೀಚಕ್ರ ಸಮೇತ, ಸಂಗೀತ ಯಂತ್ರ, ನವಾವರ್ಣ ಕೃತಿಗಳ ಚಿತ್ತಾರ ಕಂಡು ಮೈಮನ ರೋಮಾಂಚನವಾಯಿತು.
ಮಂದಿರದಲ್ಲಿನ ಸಂಗೀತ ಸಾಮಗ್ರಿಗಳು, ವಸತಿ ವ್ಯವಸ್ಥೆ, ಪ್ರತಿ ಅಂಶಗಳಿಗೂ ವಿಶೇಷ ಒತ್ತು ಕೊಟ್ಟು, ಸುಂದರ ಹೆಸರುಗಳ ಇಟ್ಟು ನೋಡುಗರ ಎದೆ ಸೂರೆಗೊಳ್ಳುತ್ತಾರೆ ಶರ್ಮ ಅವರು. ಸಂಗೀತ ವಿದ್ಯಾರ್ಥಿಗಳನ್ನು ಪುಳಕಿಸುವ ಕಲಿಕಾ ಶಾಲೆ. ಜೊತೆಗೆ 100 ಕ್ಕೂ ಹೆಚ್ಚು ಗಾನಾಸಕ್ತರು ಕುಳಿತು ಕೇಳುವ ಸುಂದರ ಸಭಾಂಗಣ. ಆನ್ಲೈನ್ ಮತ್ತು ಆಫ್ಲೈನ್ ಮೂಲಕ ದೇಶ-ವಿದೇಶದ ನೂರಾರು ಸಂಗೀತ ಕಲಿಕಾರ್ಥಿಗಳಿಗೆ ಸ್ವರ-ರಾಗ- ಶೃತಿಗಳ ವಿದ್ಯೆ ಧಾರೆಯೆರೆಯುತ್ತಿರುವ ಶ್ರೀ ಯೋಗೇಶ್ ಶರ್ಮರ ಸಂಗೀತ ಸೇವೆ-ಸಾಧನೆ ಅವರ್ಣನೀಯ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅವರ ಮೊಬೈಲ್ 8590556055 ಸಂಪರ್ಕಿಸಬಹುದು.
ವೀಣಾವಾಧಿನಿಯ ದರ್ಶನ, ಯೋಗೇಶರ ಗೆಳೆತನ ಎಲ್ಲಕೂ ಕಾರಣ ಅಕ್ಷರ. ಕಾಲಿಗೆ ಚಕ್ರ ಕಟ್ಟಿಸಿ ಓಡಾಡಿಸುತ್ತಿರುವ, ಈ ಜೀವಕ್ಕೆ ಧನ್ಯತೆಯ ಕ್ಷಣಗಳನ್ನು ನೀಡುತ್ತಿರು ಅಕ್ಷರಕ್ಕೆ ಹಾಗೂ ನಿಮ್ಮಂತಹ ಅಕ್ಷರ ಬಂಧುಗಳಿಗೆ ನಾನು ನಿತ್ಯ ಋಣಿ. ಸದಾ ನನ್ನನ್ನು ಹಾರೈಸಿ ಮನ್ನಡೆಸುತ್ತಿರುವ ನಿಮಗೆ, ನಿಮ್ಮ ಅಕ್ಷರ ಪ್ರೀತಿಗೆ ಅರ್ಪಣೆ ನನ್ನ ಈ ಸಡಗರ, ಸಂಭ್ರಮ.. ” –
ಪ್ರೀತಿಯಿಂದ ಎ.ಎನ್. ರಮೇಶ್. ಗುಬ್ಬಿ.