spot_img
spot_img

ಸರ್ವಜನ ಪ್ರಿಯ ಶ್ರೀ ಕೃಷ್ಣ !

Must Read

- Advertisement -

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಹಿಂದಿನ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ ಬನ್ನಿ.

ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬವೆಂದರೆ ಅದು ಶ್ರೀಕೃಷ್ಣಜನ್ಮಾಷ್ಟಮಿ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

ಜನ್ಮಾಷ್ಟಮಿ ಎಂಬ ಸಂಸ್ಕೃತ ಪದದ ಅರ್ಥವನ್ನು “ಜನ್ಮ” ಮತ್ತು “ಅಷ್ಟಮಿ” ಎಂದು ಎರಡು ಪದಗಳಾಗಿ ವಿಭಜಿಸುವ ಮೂಲಕ ಅರ್ಥಮಾಡಿಕೊಳ್ಳಬಹುದು. “ಜನ್ಮ” ಎಂಬ ಪದವು ಜನ್ಮ ಮತ್ತು “ಅಷ್ಟಮಿ” ಪದವು ಎಂಟು ಎಂದರ್ಥ; ಆದ್ದರಿಂದ, ಕೃಷ್ಣ ಜನ್ಮಾಷ್ಟಮಿಯು ಶ್ರಾವಣ ಮಾಸದಲ್ಲಿ (ಆಗಸ್ಟ್-ಸೆಪ್ಟೆಂಬರ್) ಕರಾಳ ಹದಿನೈದು ದಿನಗಳ ( ಕೃಷ್ಣ ಪಕ್ಷ ) ಎಂಟನೇ ದಿನದಂದು ಕೃಷ್ಣನ ಜನ್ಮದಿನದ ಆಚರಣೆಯಾಗಿದೆ.

- Advertisement -

ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಅಷ್ಟಮಿಯ ಮಧ್ಯರಾತ್ರಿ ಕಾರಾಗೃಹದಲ್ಲಿ ಕೃಷ್ಣನ ಜನನವಾಯಿತೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಮಥುರಾ ಕೃಷ್ಣನ ಜನ್ಮಸ್ಥಳ. ಕೃಷ್ಣನು ಹುಟ್ಟಿದೊಡನೆ ಅವನನ್ನು ಸೋದರ ಮಾವನಾದ ಕಂಸನಿಗೆ ತಿಳಿಯದಂತೆ ಗೋಕುಲಕ್ಕೆ ಕರೆದೊಯ್ಯಲಾಗುತ್ತದೆ. ದೇವಕಿ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾದರೆ ಯಶೋದೆ ಅವನನ್ನು ಸಾಕಿ ಬೆಳೆಸಿದ ತಾಯಿ.

ಹಿಂದೂಗಳ ಹಬ್ಬವಾದ ಜನ್ಮಾಷ್ಟಮಿಯನ್ನು ವಿಷ್ಣುವಿನ ಅವತಾರವಾದ ಭಗವಾನ್ ಕೃಷ್ಣನ ಜನ್ಮ ದಿನವೆಂದು ಆಚರಿಸಲಾಗುವುದು. ಈ ಶುಭ ದಿನದಂದು ಜನರು ಶ್ರೀಕೃಷ್ಣನನ್ನು ಪೂಜಿಸಿ, ಮಂತ್ರ, ಭಜನೆಯನ್ನು ಹಾಡಿ, ಉಪವಾಸ ವ್ರತವನ್ನು ತೆಗೆದುಕೊಳ್ಳುತ್ತಾರೆ. ಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದನೆಂದು ನಂಬಲಾದ ಭಕ್ತರು ಜನ್ಮಾಷ್ಟಮಿಯ ತಡರಾತ್ರಿಯಲ್ಲಿ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ದೇವಾಲಯಗಳನ್ನು ಮತ್ತು ಮನೆಗಳನ್ನು ವಿಶಿಷ್ಟವಾಗಿ ಅಲಕಂರಿಸಲಾಗುತ್ತದೆ ಮತ್ತು ದೇವರ ವಿಗ್ರಹಗಳಿಗೆ ಹೊಸ ಬಟ್ಟೆಗಳನ್ನು ಧರಿಸಿ ಅದನ್ನು ಹೂವುಗಳಿಂದ ಅಲಂಕರಿಸುತ್ತಾರೆ. ಹಿಂದೂಗಳಿಗೆ ಜನ್ಮಾಷ್ಟಮಿ ಬಹಳ ಪ್ರಮುಖವಾದ ದಿನ. ಭಗವಾನ್ ಕೃಷ್ಣನ ಭಕ್ತರು ಈ ಹಬ್ಬವನ್ನು ಪ್ರಪಂಚದಾದ್ಯಂತ ಬಹಳ ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ಈ ಅದೃಷ್ಟದ ದಿನದಂದು ಭಗವಾನ್ ವಿಷ್ಣುವಿನ ಅಭಿವ್ಯಕ್ತಿಯಾದ ಶ್ರೀಕೃಷ್ಣನು ಜನಿಸಿದನು.

ಶ್ರೀಕೃಷ್ಣನು ವಿಷ್ಣುವಿನ ಅವತಾರ. ಶ್ರೀಕೃಷ್ಣನ ತಂದೆ ತಾಯಿ ವಸುದೇವ ಮತ್ತು ದೇವಕಿಯಾದರೂ ಅವನು ಯಶೋದೆ ಮತ್ತು ನಂದರ ಮಗನಾಗಿ ಬೆಳೆದನು. ಈ ದಿನದಂದು ಶ್ರೀಕೃಷ್ಣನಿಗೆ ಪ್ರಿಯವಾದ ಹೂವುಗಳು, ಭೋಗಗಳನ್ನಿಟ್ಟು ಪೂಜೆ ಮಾಡುತ್ತಾರೆ. ಈ ದಿನ ಶ್ರೀಕೃಷ್ಣನ ಮಗುವಿನ ರೂಪಕ್ಕೆ ಪೂಜೆ ಮಾಡುವುದು ಸಂಪ್ರದಾಯ.

- Advertisement -

ಮಹಾಭಾರತ ಪುರಾಣಗಳು ಮತ್ತು ಭಾಗವತ ಪುರಾಣಗಳಲ್ಲಿ ಕೃಷ್ಣನ ಜೀವನದ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಕೃಷ್ಣ ದೇವಕಿ (ತಾಯಿ) ಮತ್ತು ವಸುದೇವ (ತಂದೆ) ಅವರ ಎಂಟನೇ ಮಗ. ಅವನ ಜನನದ ಸಮಯದಲ್ಲಿ ರಾಜ್ಯದಲ್ಲಿ ಕಿರುಕುಳವು ಅತಿರೇಕವಾಗಿತ್ತು, ಜನರಿಗೆ ಸ್ವಾತಂತ್ರ್ಯಗಳನ್ನು ನಿರಾಕರಿಸಲಾಗಿತ್ತು ಮತ್ತು ರಾಜ ಕಂಸನ ಜೀವಕ್ಕೆ ಕೃಷ್ಣನಿಂದ ತೊಂದರೆಯಿತ್ತು. ಆದ್ದರಿಂದ ಮಥುರಾದಲ್ಲಿ ಕೃಷ್ಣನ ಮಾವ ಕಂಸನಿಂದ ಕೃಷ್ಣನ ಹೆತ್ತವರನ್ನು ನಿರ್ಬಂಧಿಸಲಾಯಿತು. ಏಕೆಂದರೆ ದೇವಕಿಯ ವಿವಾಹದ ಸಮಯದಲ್ಲಿ, ದೇವಕಿಯ ಎಂಟನೆಯ ಮಗ ತನ್ನ ಸಾವಿಗೆ ಕಾರಣನಾಗುತ್ತಾನೆ ಎಂದು ಆಕಾಶದ ಧ್ವನಿಯಿಂದ ಕಂಸನಿಗೆ ಎಚ್ಚರಿಕೆಯ ಸಂದೇಶ ಬಂದಿತ್ತು. ಈ ಭವಿಷ್ಯವಾಣಿಯನ್ನು ಸುಳ್ಳಾಗಿಸುವ ಹಾಗೂ ತನ್ನ ಪ್ರಾಣ ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ ಕಂಸನು ತನ್ನ ಸಹೋದರಿ ದೇವಕಿ ಹಾಗೂ ಅವಳ ಪತಿಯನ್ನು ಬಂಧಿಸಿದನು ಮತ್ತು ಅವರಿಗೆ ಜನಸಿದ ಅವಳ ಮೊದಲ ಆರು ನವಜಾತ ಶಿಶುಗಳನ್ನು ತಕ್ಷಣವೇ ಕೊಂದನು. ಈ ಭಯದಿಂದಾಗಿಯೇ ವಸುದೇವನು ಕೃಷ್ಣನನ್ನು ಹುಟ್ಟಿದ ಕೂಡಲೇ ಯಮುನಾ ನದಿಯಲ್ಲಿ ಬಿಟ್ಟನು. ಆನಂತರ ಕೃಷ್ಣನು ಯಶೋದಾ (ಸಾಕುತಾಯಿ) ಮತ್ತು ನಂದ (ಸಾಕುತಂದೆ)ರ ಕೈಸೇರಿ ಅವರ ಮಗನಾಗಿ ಬೆಳೆದನು. ಕೃಷ್ಣನ ಈ ಕಥೆಯನ್ನು ಜನರು ಉಪವಾಸಗಳನ್ನು ಆಚರಿಸುವ ಮೂಲಕ, ಕೃಷ್ಣನ ಮೇಲಿನ ಪ್ರೇಮದ ಭಕ್ತಿಗೀತೆಗಳನ್ನು ಹಾಡುವ ಮತ್ತು ನಡುರಾತ್ರಿಯವರೆಗೂ ಜಾಗರಣೆ ಮಾಡುವ ಮೂಲಕ ಜನ್ಮಾಷ್ಟಮಿಯಂದು ಆಚರಿಸುವರು.

ಕೃಷ್ಣ ಜನ್ಮಾಷ್ಟಮಿಯು ಪ್ರಪಂಚದಾದ್ಯಂತದ ಹಿಂದೂಗಳಿಗೆ ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿರುವ ಮತ್ತು ಅವರ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳ ಆಧಾರದ ಮೇಲೆ ಇದನ್ನು ವಿವಿಧ ರೂಪಗಳಲ್ಲಿ ಆಚರಿಸಲಾಗುವ ಹಬ್ಬವಾಗಿದೆ. ಹಿಂದೂಗಳು ಜನ್ಮಾಷ್ಟಮಿಯನ್ನು ಉಪವಾಸ ಮಾಡುವುದು, ಕೃಷ್ಣಮಂತ್ರಗಳನ್ನು ಹಾಡುವುದು, ಒಟ್ಟಾಗಿ ಪ್ರಾರ್ಥಿಸುವುದು, ವಿಶೇಷ ಆಹಾರ ತಯಾರಿಸುವುದು ಮತ್ತು ಪರಸ್ಪರ ಹಂಚಿಕೊಳ್ಳುವುದು, ರಾತ್ರಿ ಜಾಗರಣೆ ಮಾಡುತ್ತಾ ಕೃಷ್ಣ ಅಥವಾ ವಿಷ್ಣು ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸುತ್ತಾರೆ. ಮಥುರಾ ಮತ್ತು ವೃಂದಾವನ ಸ್ಥಳಗಳಿಗೆ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಕೆಲವು ಮಂದಿರಗಳು ಜನ್ಮಾಷ್ಟಮಿಯ ಹಿಂದಿನ ದಿನಗಳಲ್ಲಿ ಭಗವದ್ಗೀತೆಯ ಪಠಣವನ್ನು ಆಯೋಜಿಸುತ್ತವೆ. ಉತ್ತರ ಭಾರತದ ಅನೇಕ ಸಮುದಾಯಗಳು ರಾಸಲೀಲಾ ಅಥವಾ ಕೃಷ್ಣಲೀಲಾ ಎಂಬ ನೃತ್ಯ – ನಾಟಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ರಾಸಲೀಲೆಯ ಸಂಪ್ರದಾಯವು ಮಥುರಾ ಪ್ರದೇಶದಲ್ಲಿ ವಿಶೇಷವಾಗಿ ಜನಪ್ರಿಯವಾಗಿದೆ. ಭಾರತದ ಈಶಾನ್ಯ ರಾಜ್ಯಗಳಾದ ಮಣಿಪುರ, ಅಸ್ಸಾಂ ಹಾಗೂ ರಾಜಸ್ಥಾನ ಮತ್ತು ಗುಜರಾತ್‌ನ ಭಾಗಗಳಲ್ಲಿ ಇದನ್ನು ಹಲವಾರು ಹವ್ಯಾಸಿ ಕಲಾವಿದರ ತಂಡಗಳು ಅಭಿನಯಿಸುತ್ತವೆ. ಈ ಸಮಯದಲ್ಲಿ ಜನರು ತಮ್ಮ ಮನೆಗಳನ್ನು ಹೂವುಗಳು ಮತ್ತು ಬೆಳಕಿನ ದೀಪಗಳಿಂದ ಅಲಂಕರಿಸುತ್ತಾರೆ. ಈ ದಿನದಂದು ಜನರು “ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ – ಕೃಷ್ಣ ಹರೇ ಹರೇ” ಎಂದು ಜಪಿಸುತ್ತಾರೆ.

ಜನ್ಮಾಷ್ಟಮಿಯು ಉತ್ತರ ಭಾರತದ ಬ್ರಜ್ ಪ್ರದೇಶದಲ್ಲಿ, ಹಿಂದೂ ಸಂಪ್ರದಾಯದ ಮಥುರಾದಂತಹ ನಗರಗಳಲ್ಲಿ, ಕೃಷ್ಣನು ಜನಿಸಿದ ಮತ್ತು ಅವನು ಬೆಳೆದ ವೃಂದಾವನದಲ್ಲಿ ಅತಿ ದೊಡ್ಡ ಹಬ್ಬವಾಗಿದೆ. ಉತ್ತರಪ್ರದೇಶದ ಈ ನಗರಗಳಲ್ಲಿರುವ ವಿಷ್ಣು ಹಾಗೂ ಕೃಷ್ಣ ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ ಮತ್ತು ದೀಪಗಳಿಂದ ಬೆಳಗಿಸಲಾಗುತ್ತದೆ. ಈ ದಿನದಲ್ಲಿ ಆ ದೇವಾಲಯಗಳು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಕೃಷ್ಣ ಭಕ್ತರು ಭಕ್ತಿ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಮತ್ತು ರಾತ್ರಿ ಜಾಗರಣೆ ಮಾಡುತ್ತಾರೆ.

ಉತ್ತರದ ರಾಜ್ಯಗಳಲ್ಲಿ ಜನ್ಮಾಷ್ಟಮಿಯನ್ನು ರಾಸಲೀಲಾ ಸಂಪ್ರದಾಯದೊಂದಿಗೆ ಆಚರಿಸಲಾಗುತ್ತದೆ, ಇದರ ಅರ್ಥ “ಆನಂದದ ಆಟ”. ಜನ್ಮಾಷ್ಟಮಿಯಲ್ಲಿ ಇದನ್ನು ಏಕವ್ಯಕ್ತಿ ಅಥವಾ ಗುಂಪು ನೃತ್ಯ ಮತ್ತು ನಾಟಕದ ಘಟನೆಗಳಾಗಿ ವ್ಯಕ್ತಪಡಿಸಲಾಗುತ್ತದೆ. ಇದರಲ್ಲಿ ಕೃಷ್ಣ ಸಂಬಂಧಿತ ಸಂಯೋಜನೆಗಳನ್ನು ಹಾಡಲಾಗುತ್ತದೆ, ಸಂಗೀತವು ಪ್ರದರ್ಶನದೊಂದಿಗೆ ಇರುತ್ತದೆ. ಕೃಷ್ಣನ ಬಾಲ್ಯದ ಕುಚೇಷ್ಟೆಗಳು ಮತ್ತು ರಾಧಾ-ಕೃಷ್ಣರ ಪ್ರೇಮ ಪ್ರಕರಣಗಳು ವಿಶೇಷವಾಗಿ ಜನಪ್ರಿಯವಾಗಿವೆ. ರಾಯ್ ಮತ್ತು ಇತರ ವಿದ್ವಾಂಸರ ಪ್ರಕಾರ ಈ ರಾಧಾ-ಕೃಷ್ಣ ಪ್ರೇಮ ಕಥೆಗಳು ದೈವಿಕ ಅಥವಾ ಬ್ರಹ್ಮಕ್ಕಾಗಿ ಮಾನವ ಆತ್ಮದ ಹಂಬಲ ಮತ್ತು ಪ್ರೀತಿಗೆ ಸಂಕೇತಗಳಾಗಿವೆ.

ಕೃಷ್ಣನ ಮಧ್ಯರಾತ್ರಿಯ ಜನನದ ಕಾರಣ ಮಗುವಿನ ರೂಪದ ಕೃಷ್ಣನ ಆಕೃತಿಗಳನ್ನು ಸ್ನಾನ ಮಾಡಿಸಿ, ಅವುಗಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ ತೊಟ್ಟಿಲಲ್ಲಿ ಇರಿಸಲಾಗುತ್ತದೆ. ನಂತರ ಭಕ್ತರು ಅನ್ನ ಹಾಗೂ ಸಿಹಿಯನ್ನು ಹಂಚಿ ಉಪವಾಸ ಮುರಿಯುತ್ತಾರೆ. ಮಹಿಳೆಯರು ತಮ್ಮ ಮನೆ ಬಾಗಿಲು ಮತ್ತು ಅಡುಗೆಮನೆಯ ಹೊರಗೆ ಸಣ್ಣ ಹೆಜ್ಜೆಗುರುತುಗಳನ್ನು ಎಳೆಯುತ್ತಾ ಅವರ ಮನೆಯ ಒಳಗೆ ನಡೆಯುತ್ತಾರೆ, ಇದು ಕೃಷ್ಣನು ತಮ್ಮ ಮನೆಗಳಿಗೆ ಪ್ರಯಾಣಿಸುವ ಸಂಕೇತವಾಗಿದೆ.
ಕೃಷ್ಣಾಷ್ಟಮಿಯ ದಿನದಂದು ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ, ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲಕೃಷ್ಣನನ್ನು ಪೂಜಿಸಲಾಗುತ್ತದೆ. ಕೆಲವು ಕಡೆ ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ. ಉಡುಪಿಯಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಡಾ. ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group