ಸಿಂದಗಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯ ಅಡಿಯಲ್ಲಿ ಸಿಂದಗಿ ಮತ್ತು ಆಲಮೇಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜಲ ಜೀವನ ಮಿಷನ್ ಕಾಮಗಾರಿಗಳು ನಡೆಯುತ್ತಿದ್ದು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾರ್ಗ ಸೂಚಿಗಳನ್ನು ಗಾಳಿಗೆ ತೂರಿ ಕಾಮಗಾರಿ ಕೈಕೊಂಡು ಕಳಪೆಮಟ್ಟದ್ದಾಗಿ ನಿರ್ಮಾಣ ನಡೆಯುತ್ತಿದೆ ಎಂದು ಸಮಾಜ ಸೇವಕ ಚಿದಾನಂದ ದೇಸಾಯಿ ಆರೋಪಿಸಿದ್ದಾರೆ.
ಈ ಕುರಿತು ದಿನಾಂಕ ೦೧-೦೩-೨೦೨೪ ರಂದು ಜಿಲ್ಲೆಯ ಉನ್ನತ ಅಧಿಕಾರಿಗಳಿಗೆ ದಾಖಲೆ ಸಮೇತ ಮತ್ತು ಬರವಣಿಗೆಯ ಮೂಲಕ ಮನವಿ ಕೊಟ್ಟಿದ್ದೇನೆ ಮನವಿ ಕೊಟ್ಟು ಆರು ತಿಂಗಳು ಗತಿಸಿವೆ ಇಲ್ಲಿಯ ವರೆಗೆ ಭ್ರಷ್ಟ ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ತಂಡ ರಚನೆ ಮಾಡಿ ಸ್ಥಾನಿಕ ಚೌಕಶಿ ಕೂಡಾ ಮಾಡಿಲ್ಲ ಹೀಗಾಗಿ ಸರಕಾರದ ದುಡ್ಡು ಪೋಲಾಗಿ ಕಾಮಗಾರಿಗಳು ಹಳ್ಳ ಹಿಡಿದಿವೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಹಾಗೂ ಕರ್ತವ್ಯ ದುರುಪಯೋಗ ಆಗಿದೆ. ಹಣದ ದುರಾಸೆಯಿಂದ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಕಳಪೆ ಮಟ್ಟದ ಕಾಮಗಾರಿಗಳು ಮಾಡುತ್ತಿರುವುದು ಕಂಡು ಬರುತ್ತಿದೆ ಕಾರಣ ಮಾನ್ಯ ಜಿಲ್ಲಾ ದಂಡಾಧಿಕಾರಿಗಳು ಮತ್ತು ಮಾನ್ಯ ಜಿಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ದೂರಿನನ್ವಯ ಕಾಮಗಾರಿಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಎಲ್ಲಾ ಕಾಮಗಾರಿಗಳ ಬಿಲ್ಲನ್ನು ತಡೆ ಹಿಡಿದು ಕಾಮಗಾರಿಯನ್ನು ಭೌತಿಕವಾಗಿ ಪರಿಶೀಲನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ದಂಡಾಧಿಕಾರಿಗಳಲ್ಲಿ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ಇದೇ ರೀತಿ ವಿಳಂಬ ನೀತಿ ಅನುಸರಿಸಿದರೆ ಜನಪರ ಸಂಘಟನೆ ಒಳಗೊಂಡು ರೋಡಿಗಿಳಿದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಅವರು ಎಚ್ಚರಿಕೆ ನೀಡಿದ್ದಾರೆ.