ಮಧುರ ಪಿಸುಮಾತಿಗೆ ಸುರಿವ ಸವಿಜೇನಿಗೆ ನನ್ನುಸಿರೆ…

Must Read

ದಿನ ಪ್ರತಿಕ್ಷಣ ಉಸಿರಾಡುವ ನನ್ನುಸಿರೆ, ನಿನ್ನ ನಿಂಬೆ ಚಂದನದ ಮಿಶ್ರಿತದಂಥ ಅಂದ ಕಣ್ಣು ತುಂಬಿಸಿಕೊಂಡು ಅದೆಷ್ಟು ತಿಂಗಳಗಳು ಉರುಳಿದವು. ಕಾಲೇಜು ದಿನಗಳಲೆಲ್ಲ ನಿನ್ನದೇ ಸಡಗರ. ನಿಂತಲ್ಲಿ ನಿಲ್ಲಲಾರದೆ ನಿನ್ನ ಹೆಜ್ಜೆಗಳ ಮೇಲೆ ಹೆಜ್ಜೆ ಇಟ್ಟಿದ್ದೇ ಹೆಚ್ಚು. ಗೆಳೆಯರೆಲ್ಲ ಛೇಡಿಸಿದರೂ ಕ್ಯಾರೆ ಅನ್ನದೆ ನೆರಳಿನಂತೆ ಸದಾ ಹಿಂಬಾಲಿಸುತ್ತಿದ್ದೆ. ಕಾಲೇಜಿನ ಶುರುವಾತಿನಲ್ಲಿ ನಿನ್ನ ದಾಳಿಂಬೆಯಂತ ಹಲ್ಲುಗಳನ್ನು ಕಡಿಯುತ್ತ ಹಾಲುಗೆನ್ನೆಯನ್ನು ಊದಿಸಿಕೊಂಡು, ಬಟ್ಟಲುಗಣ್ಣುಗಳನ್ನು ಕೆಂಪು ಮಾಡಿ ನನ್ನೆಡೆ ನೋಡುತ್ತಿದ್ದ ರೀತಿಯನ್ನು ನೆನೆದರೆ ಈಗಲೂ ನಗು ಬರುತ್ತೆ.

ದೇವರು ಪುರುಸೊತ್ತು ಮಾಡಿಕೊಂಡು ತಯಾರಿಸಿರುವ ಕಲಾಕೃತಿ ನೀನಿರಬಹುದು. ಕಲ್ಪನೆಗೂ ಮೀರಿದ ಶಿಲ್ಪಕ್ಕೆ ಜೀವ ತುಂಬಿದ ರೂಪ ನಿನ್ನದು. ವಿದ್ಯೆ ಬುದ್ಧಿ ನಡೆ ನುಡಿ ಎಲ್ಲವೂ ಅಕ್ಕರೆ ತರುವಂಥವು.

ಬೆಳ್ಳಂಬೆಳಿಗ್ಗೆ ಮನೆಯ ಮುಂದಿನ ರಂಗೋಲಿಗೆಂದು ಚುಕ್ಕಿಯಿಡುವಾಗ ನಿನ್ನ ದರುಶನಕ್ಕೆಂದೇ ದೇವಿಯ ಪರಮ ಭಕ್ತನಂತೆ ಕಾಯುತ್ತಿದ್ದೆ.ನಿನ್ನ ಹೂ ನಗುವಿಗಾಗಿ ಹಂಬಲಿಸುತ್ತಿದ್ದೆ. ಕದ್ದು ಕದ್ದು ಓರೆಗಣ್ಣಿನಿಂದ ನನ್ನೆಡೆಗೆ ತುಂಟತನದಿಂದ ನೀ ನೋಡುವ ಪರಿಗೆ ಹೃದಯ ಪುಳಕಗೊಳ್ಳುತ್ತಿದ್ದ ರೀತಿಯನ್ನು ನೆನೆಪಿಸಿಕೊಂಡರೆ ಈಗಲೂ ಮೈ ನವಿರೇಳುತ್ತದೆ. ಕಣ್ಣಲ್ಲೇ ಮಾತನಾಡಿ ಬರಸೆಳೆಯುವ ಕಲೆ ಅದ್ಯಾವ ಶಾಲೆಯಲ್ಲಿ ಕಲಿತಿದ್ದಿಯೋ ಗೊತ್ತಿಲ್ಲ. ಗೆಳೆತನವಾದ ಕೆಲ ದಿನಗಳಲ್ಲಿಯೇ ಕಣ್ಣಿನ ಭಾಷೆಯನ್ನು ನಿನ್ನ ಮನೆಯ ಕಿಟಕಿಯಿಂದಲೇ ನನ್ನಂತ ದಡ್ಡನಿಗೂ ಕಲಿಸಿದ್ದೆ. ನಿಶಬ್ದವಾಗಿ ನಕ್ಕು ನನ್ನ ಮನ ಗೆದ್ದಿದ್ದೆ.

ನಾಳೆಯ ಸುಂದರ ಸುದೀರ್ಘ ಬದುಕಿಗೆ ಇಬ್ಬರೂ ಕೂಡಿ ಹೆಜ್ಜೆ ಹಾಕೋಣ ಎಂದಾಗ ಹೂ ನಗೆ ಚೆಲ್ಲಿ ಹಸಿರು ದೀಪ ತೋರಿಸಿದ್ದೆ. ಕಂಗಳಿರುವದೇ ಕನಸು ಕಾಣೋಕೆ. ಜೀವನವಿರುವದೇ ಸಾಧಿಸೋಕೆ ಎಂದು ಸದಾ ಬಡಬಡಿಸುತ್ತಿದ್ದ ನೀನು, ಸಾಧನೆಯ ಗಡಿ ಮುಟ್ಟಿದಾಗ ನಮ್ಮೀರ್ವರ ಪುರ್ನಮಿಲನ ಎಂದು ಷರತ್ತು ವಿಧಿಸಿ ಕ್ಷಣಾರ್ಧದಲ್ಲಿ ಕಣ್ಮರೆಯಾಗಿದ್ದೆ.

ಅಂದಿನಿಂದ ಇಂದಿನವರೆಗೂ ನೀನು ಕನಸಲ್ಲಿ ಕಾಣಿಸಿಕೊಳ್ಳದ ರಾತ್ರಿಯೆ ಇಲ್ಲ. ನನ್ನ ಪಾಲಿನ ಸ್ಪೂರ್ತಿ ದೇವತೆಯಾಗಿ ಗುರಿ ಮುಟ್ಟಲು ಹುರುದುಂಬಿಸಿದ ರೀತಿಗೆ ಕೋಟಿ ಕೋಟಿ ಸಲಾಂ ಹೇಳಲೇ ಬೇಕು. ಎಲ್ಲಿ ನನ್ನ ಪಾಲಿಗೆ ಸಿಗದ ಹುಳಿ ದ್ರಾಕ್ಷಿಯಾಗುತ್ತಿಯೋ ಎಂದು ಎಷ್ಟೋ ಸಾರಿ ಭಯಗೊಂಡದ್ದುಂಟು. ನೂರಾರು ಕಲ್ಲು ಮುಳ್ಳುಗಳ ನಡುವೆ ನಡೆದು ಇಂದು ನೀ ಹೇಳಿದ ಸಾಧನೆಯ ಶಿಖರದ ತುದಿಯಲ್ಲಿ ನಿಂತಿದ್ದೇನೆ. ಎವರೆಷ್ಟ್ ಏರಿದ ಪರ್ವತಾರೋಹಿಯಂತೆ ಸಂಭ್ರಮಿಸುತ್ತಿದ್ದೇನೆ.

ಆದರೂ ಈ ಕ್ಷಣದಲ್ಲಿ ನನ್ನೊಂದಿಗೆ ನೀನಿಲ್ಲವಲ್ಲ ಎಂದು ಕಳವಳಗೊಂಡು ಪರಿತಪಿಸುತ್ತಿದ್ದೇನೆ. ಕೊನೆಗಾಲದಲ್ಲಿರುವ ಪ್ರಾಣದಂತೆ ಚಡಪಡಿಸುತ್ತಿದ್ದೇನೆ. ಸಾಧಿಸಿದ ಸ್ಥಿತಿಗೆ ಖುಷಿ ಪಡಲೋ ನೀನಿಗ ಜೊತೆಗಿಲ್ಲದ್ದಕ್ಕೆ ಕಣ್ಣ ಹನಿ ಸುರಿಸಲೋ ತಿಳಿಯುತ್ತಿಲ್ಲ. ಕಾಡಿನಲ್ಲಿ ದಾರಿ ಕಾಣದವನಂತೆ ಈ ಗೆಲುವಿನಲ್ಲೂ ದುಃಖಿಸುತ್ತಿದ್ದೇನೆ.

ಒಮ್ಮಿಂದೊಮ್ಮೆಲೇ ನಿನ್ನೆ ರಾತ್ರಿ ನಾಳೆ ಭೇಟಿಯಾಗಲು ಬರುತ್ತಿದ್ದೇನೆ ಎಂಬ ನಿನ್ನ ಸಂದೇಶ ಮೊಬೈಲಲ್ಲಿ ಹೊಳೆದಾಗ ಹೃದಯ ಕುಣಿಯಿತು ಸುಂದರವಾದ ಬಾಹುಗಳನ್ನು ಚಾಚಿ ನೀನೇ ನನ್ನನ್ನು ಆಹ್ವಾನಿಸಿದಂತಾಯಿತು. ಹರುಷ ತಾಳಲಾರದೇ ಕಂಗಳು ಪನ್ನೀರಿನಿಂದ ಜಿನುಗಿದವು.

ಈ ದಿನಕ್ಕೆಂದೇ ಅಲ್ಲವೆ ನಾನು ಕಠೋರ ತಪಸ್ಸು ಮಾಡಿದ್ದು. ರಾತ್ರಿಯೆಲ್ಲ ಮಗ್ಗಲು ಹೊರಳಾಡಿಸಿದ್ದೇ ಬಂತು. ಭವಿಷ್ಯದ ಬದುಕಿಗೆ ಮುನ್ನುಡಿ ಬರೆಯುವ ಹೊಸ ಖುಷಿಗೆ ಕಾತರಿಸುತ್ತಿದ್ದೇನೆ.ಹಿಂದೆಂದೂ ಕಾಣದ ವಿಚಿತ್ರ ಸ್ಥಿತಿಗೆ ನನ್ನೆದೆ ಇಂದು ಸಾಕ್ಷಿಯಾಗಿದೆ.

ಭೇಟಿಯ ಕ್ಷಣ ನೆನೆಯುತ್ತ ಎದೆ ತಾಳ ತಪ್ಪುತ್ತಿದೆ.ಚಂದ್ರನೇಕೆ ತನ್ನ ಮನೆಯೆಡೆಗೆ ಬೇಗ ಮುಖ ಮಾಡುತ್ತಿಲ್ಲ ಎಂಬ ಅಸಹನೆ ಕಾಡುತ್ತಿದೆ. ನಿನ್ನೊಂದಿಗೆ ಕಳೆದ ಸವಿ ಕ್ಷಣಗಳ ನೆನಪಿನ ಗುಡ್ಡೆ ಹಾಕಿಕೊಂಡು ನೋವು ನಲಿವು ಮಿಶ್ರಿತ ವಿಚಿತ್ರ ಸ್ಥಿತಿಗೆ ಬಲಿಯಾಗಿದ್ದೇನೆ. ನನ್ನೆಲ್ಲ ತಳಮಳ ಕಳವಳಕ್ಕೆ ಪೂರ್ಣವಿರಾಮ ಹಾಕಿ ನವ ಬಾಳಿಗೆ ಹೊಸ ಬಾಷ್ಯ ಬರೆಯಲು ನಾಳೆ ಹೇಗಿದ್ದರೂ ಭೇಟಿಯಾಗುತ್ತಿಯಲ್ಲ ಅನ್ನೋದನ್ನು ನೆನೆಯುತ್ತ ನೆಮ್ಮದಿ ಚಿಗುರೊಡೆಯುತ್ತಿದೆ.

ಎಂದಿನಂತೆ ನೀನು ಬರೀ ಕಣ್ಣಲ್ಲಿ ಮಾತನಾಡಿದರೆ ಸಾಕು. ಮುಂಜಾವಿನ ಮಂಜಿನ ಹನಿ ನೇಸರನ ಕಿರಣಗಳಿಗೆ ನಾಚಿ ಕರಗುವಂತೆ ನಿನ್ನ ಕರಗಳಲ್ಲಿ ಕರಗಿ ಹೋಗುವೆ. ಪ್ರೀತಿಯ ಹೂವಿನ ರಾಶಿ ಹಾಕಿ, ಕಣ್ಣು ರೆಪ್ಪೆ ಮಿಟುಕಿಸಿದೆ ಕಂಪಿಸುವ ಹೃದಯದೊಂದಿಗೆ ನಿನ್ನ ಮಧುರ ಪಿಸುಮಾತಿಗೆ ಸುರಿವ ಸವಿ ಜೇನಿಗೆ ಒಂಟಿಗಾಲಲ್ಲೇ ನಿಂತು ಕಾಯುತ್ತಿದ್ದೇನೆ. ತಡೆ ರಹಿತ ರೈಲಿನಂತೆ ಬಂದು ಬಿಡು ಬೇಗ.

-ಇಂತಿ ನಿನ್ನ ಜೀವದ ಗೆಳೆಯ


ಜಯಶ್ರೀ.ಜೆ.ಅಬ್ಬಿಗೇರಿ (ಬೆಳಗಾವಿ)
ಸ ಪ ಪೂ ಕಾಲೇಜು ಹಿರೇಬಾಗೇವಾಡಿ

1 COMMENT

Comments are closed.

Latest News

ವಿದ್ಯಾರ್ಥಿಗಳು ತಂತ್ರಜ್ಞಾನದಿಂದಾಗಿ ದಾರಿ ತಪ್ಪಬಾರದು – ಲಕ್ಷ್ಮಿ ಸಾಲೊಡಗಿ

ಸಿಂದಗಿ - ಇಂದಿನ ಯುವ ಜನಾಂಗ ಮೊಬೈಲ್ ಅವಲಂಬಿತ ಜಗತ್ತಿನಲ್ಲಿದೆ. ಎಲ್ಲವೂ ಅಂಗೈನಲ್ಲಿಯೇ ಹಿಡಿದಿಟ್ಟುಕೊಳ್ಳುವ ಮನೋಭಾವದ ವಯಸ್ಸಿನ ಹದಿ ಹರೆಯದವರು ತಂತ್ರಜ್ಞಾನಗಳ ಪ್ರಭಾವಕ್ಕೆ ಒಳಗಾಗಿ ಹಾದಿ...

More Articles Like This

error: Content is protected !!
Join WhatsApp Group