spot_img
spot_img

ಮಹಾಮಾತೆ ಜೀಜಾಬಾಯಿ

Must Read

- Advertisement -

ಮಹಿಳೆ ತೊಟ್ಟಿಲು ತೂಗಬಲ್ಲಳು. ಸಂಸಾರವನ್ನೂ ನಿಭಾಯಿಸಬಲ್ಲಳು. ಜೊತೆಗೆ ರಾಷ್ಟ್ರದ ಚುಕ್ಕಾಣಿಯನ್ನೂ ಹಿಡಿಯಬಲ್ಲಳು ಎಂಬುದಕ್ಕೆ ನಮ್ಮ ಇತಿಹಾಸದಿಂದಲೂ ಬಹಳಷ್ಟು ದೃಷ್ಟಾಂತಗಳು ಲಭ್ಯವಾಗುತ್ತವೆ. ತೊಟ್ಟಿಲು ತೂಗುವ ಈ ಕೈಗಳು ದೇಶವನ್ನಾಳುವುದಕ್ಕೆ ಅಥವಾ ಪುರುಷರ ಹಿಂದೆ ಅಜ್ಞಾತವಾಗಿದ್ದು ಕಾರ್ಯಭಾರ ಮಾಡುವುದೆಂದರೆ ಅದು ಸುಲಭದ ಮಾತೇನೂ ಅಲ್ಲ!.

ಇಂತಹ ಸ್ತ್ರೀಯರು ಅದೆಷ್ಟು ಕಷ್ಟ-ಕಾರ್ಪಣ್ಯಗಳನ್ನು ನುಂಗಿ; ತಮ್ಮ ಗುರಿ ಸಾಧಿಸುತ್ತಾರೆ ಎಂದರೆ ಅಚ್ಚರಿಯಾಗುತ್ತದೆ. ಅವರಲ್ಲಿ ಜನ ಮೆಚ್ಚಿದ ಮಾತೆ ಶಿವಾಜಿ ಮಹಾರಾಜನ ಹೆತ್ತವ್ವ ಜೀಜಾಬಾಯಿ!.

ಮಕ್ಕಳನ್ನು ಬೆಳೆಸುವಲ್ಲಿ ಹಾಗೂ ತನ್ನ ತಾಯ್ನಾಡಿನ ಬಗ್ಗೆ ಅಪಾರ ಕಾಳಜಿ, ರಕ್ಷಣಾ ಮನೋಭಾವ ಇರುವ ಈಕೆ ಸಮಸ್ತ ಅಮ್ಮಂದಿರಿಗೆ ದಾರಿದೀಪವಾಗುತ್ತಾಳೆ ಎಂಬುದು ಅದನ್ನೋದಿದವರು ಒಪ್ಪಲೇಬೇಕು.

🌹ಅಪರೂಪದ ಐತಿಹಾಸಿಕ ಮಹಿಳೆ:    

- Advertisement -

ಮಹಾರಾಷ್ಟ್ರದ ಸಿಂಧಖೇಡ್ ಎಂಬ ಊರಿನಲ್ಲಿ ಲಖೂಜಿ ಜಾದವರಾವ್ ಎಂಬ ಮರಾಠಾ ಸರದಾರನ ಮಗಳಾಗಿ ಜೀಜಾಬಾಯಿ ಜನವರಿ 12, 1598 ರಲ್ಲಿ ಜನ್ಮವೆತ್ತಿದಳು. ತಾಯಿಯ ಹೆಸರು ಮಾಳಸಾಬಾಯಿ.

ನಿಜಾಮಶಾಹಿಯ ಆಡಳಿತದಲ್ಲಿ ಮೊದಲನೆಯ ಹಾಗೂ ಅತ್ಯಂತ ಶೂರನೆಂದು ಖ್ಯಾತಿವೆತ್ತ ಸರದಾರ ಲಖೂಜಿ ಜಾದವರಾವ್ ಅವರ ಮುದ್ದಿನ ಮಗಳಾಗಿ ಬೆಳೆದಳು. ಜಾದವರಾವ್ ಕೈಕೆಳಗಿದ್ದ ಮಾಲೋಜಿಯ ಮಗ ಶಾಹಜಿ ಸುಂದರ ಬಾಲಕ. ಒಮ್ಮೆ ಹೋಳಿಹಬ್ಬದ ದಿನ ಜೀಜಾ ಹಾಗೂ ಶಾಹಜಿ ಪರಸ್ಪರ ಬಣ್ಣ ಎರಚಿಕೊಂಡು ವಿನೋದವಾಡಿದರು.

ಇದನ್ನು ಗಮನಿಸಿದ ಜಾದವರಾವ್ ಜೀಜಾ ಹಾಗೂ ಶಾಹಜಿ ಸುಂದರಜೋಡಿ. ಈ ಸ್ಪುರದ್ರೂಪಿ ಹುಡುಗನಿಗೆ ನನ್ನ ಮಗಳನ್ನು ಮದುವೆ ಮಾಡುತ್ತೇನೆ ಎಂದುಬಿಟ್ಟ. ಅಪ್ಪನ ಮಾತು ಮಗಳ ಮನದಲ್ಲಿ ತಳವೂರಿತು. ಮಾಲೋಜಿಗೂ ಸಂತಸವಾಗಿ ಈ ಮಾತನ್ನು ನಂಬಿದ್ದ ಮಾಲೋಜಿ ಒಂದುದಿನ ನಾವು ಬೀಗರು ಆಗುವುದು ಯಾವಾಗ ಎಂದು ಕೇಳಿದ. ಆಗ ಜಾದವರಾವ್ ನಾನು ಅಂದು ವಿನೋದಕ್ಕಾಗಿ ಹೇಳಿದೆನೇ ಹೊರತು ನನ್ನ ಮಗಳು ಓರ್ವ ಶಿಲೇದಾರನ ಸೊಸೆಯಾಗುವುದು ಎಂದಿಗೂ ಸಾಧ್ಯವಾಗದ ಮಾತು‌ ಎಂದು ಕಠಿಣವಾಗಿ ನುಡಿದ.

- Advertisement -

ಆದರೆ ಬಾಲಕಿ ಜೀಜಾಳಿಗೆ ತನ್ನಮನದಲ್ಲಿ ಶಾಹಜಿರಾಜೆ ಬೋಸ್ಲೆಯನ್ನು ಆಯ್ಕೆ ಮಾಡಿಯಾಗಿತ್ತು. ಮದುವೆಯೂ ನಡೆಯಿತು. ಮೊಗಲ ಷಹಜಹಾನ್‌ನ ಪಕ್ಷಪಾತಿಯಾಗಿದ್ದ ತಂದೆಯ ವಿರುದ್ಧ ಹಿಂದೂಪ್ರೇಮಿ ಜೀಜಾಬಾಯಿ ಸೆಟೆದು ನಿಂತಳು.

🌹ತಾಯ್ನಾಡಿನ ವೀರ ರಾಣಿ: 

ಈ ಮಧ್ಯೆ ದಿಲ್ಲಿಯ ಮೊಗಲ್ ಚಕ್ರವರ್ತಿ ಷಹಜಹಾನ್ ನಿಜಾಮನ ವಿರುದ್ಧ ದಂಡೆತ್ತಿಬಂದ. ಆಗ ನಿಜಾಮನ ಕಡೆಯಲ್ಲಿ ಇಬ್ಬರೇ ಸರದಾರರು. ಒಬ್ಬ ಮಲಿಕ್‌ ಅಂಬರ್ ಹಾಗೂ‌ ಇನ್ನೊಬ್ಬ ಶಾಹಜಿರಾಜ್ ಬೋಸ್ಲೆ. ದುರದೃಷ್ಟವಶಾತ್ ಮಲಿಕ್ ತೀರಿಕೊಂಡ. ಈಗ ಎಲ್ಲ ಹೊಣೆ ಶಾಹಜಿಯ ಮೇಲೆಯೇ ಬಿತ್ತು. ಈ ಸಮಯ ಸಾಧಿಸಿ ಮಾವನಾದ ಜಾದವರಾವ್ ನಿಜಾಮನ ವಿರುದ್ಧ ಮೊಗಲ ಸೈನ್ಯಕ್ಕೆ ಸೇರಿಕೊಂಡು ಮಾಹುಲಿ ಕಿಲ್ಲೆಗೆ ಮುತ್ತಿಗೆ ಹಾಕಿದ.

ಜೀಜಾಬಾಯಿ ಗಂಡನಿಗೆ ಸಹಾಯಕಳಾಗಿ ನಿಂತು ತಂದೆಯ ವಿರುದ್ಧ ಆರು ತಿಂಗಳ ಕಾಲ ಕಿಲ್ಲೆಯನ್ನು ರಕ್ಷಿಸುವ ಹೊಣೆಯಲ್ಲಿ ಕೈಜೋಡಿಸಿದಳು. ಕೊನೆಗೆ ನಿಜಾಮಶಾಹಿಯಲ್ಲಿ ಶಾಹಜಿಯ ವಿರುದ್ಧವೇ ಸಂಚು ನಡೆಯಿತು. ಕಿಲ್ಲೆಯ ರಕ್ಷಣೆಗೆ ಯಾವ ಸಹಾಯವೂ ದೊರೆಯದಾಯಿತು. ನಿರುಪಾಯನಾಗಿ ಶಾಹಜಿ ನಾಲ್ಕು ತಿಂಗಳ ಗರ್ಭಿಣಿ ಜೀಜಾಬಾಯಿಯೊಂದಿಗೆ ಕುದುರೆಯೇರಿ ಅತಿ ದುರ್ಗಮ ದಾರಿಯಲ್ಲಿ ಹೋಗುತ್ತಿದ್ದಾಗ ಜೀಜಾಬಾಯಿಗೆ ಅತೀವ ತೊಂದರೆಯುಂಟಾಗಿ ಆಕೆ ಗಂಡನೊಂದಿಗೆ “ಮಹಾರಾಜಾ, ಶತ್ರು ಅತೀ ಸಮೀಪದಲ್ಲಿ ಬಂದಿದ್ದಾನೆ. ನಾನು ಮುಂದೆಹೋಗುವ ಪರಿಸ್ಥಿತಿಯಲ್ಲಿಲ್ಲ. ನೀವು ನನ್ನ ಚಿಂತೆಮಾಡದೆ ನನ್ನನ್ನು ಇಲ್ಲಿಯೇ ಬಿಟ್ಟು ಮುಂದೆಹೋಗಿರಿ” ಎಂದಳು.

ತಾಯ್ನಾಡಿನ, ಪತಿಯ ರಕ್ಷಣೆಗಾಗಿ ಒಬ್ಬ ವೀರಮಹಿಳೆ ಈ ಪರಿಸ್ಥಿತಿಯಲ್ಲೂ ಧೃತಿಗೆಡದೆ ಆಡುವ ಮಾತು ದಾರಿದೀಪದಂತೆ ಕಾಣುತ್ತಿದೆ.

ಪರಿಸ್ಥಿತಿಯ ಗಂಭೀರತೆಯನ್ನರಿತ ಶಾಹಜಿ ಅವಳನ್ನಲ್ಲಿ ಬಿಟ್ಟು ಮುಂದೆ ಸಾಗುವಾಗ ತನ್ನ ಆಪ್ತ ಸೇವಕನಿಗೆ ಗುಪ್ತವಾಗಿರುವಂತೆ ಹೇಳಿದ್ದ. ಸ್ವಲ್ಪದರಲ್ಲೇ ಜೀಜಾಬಾಯಿ ತನ್ನ ತಂದೆಯ ಕೈಗೆ ಸಿಕ್ಕಿಬಿದ್ದಳು. ಮಗೂ ಜೀಜೂ ನೀನು ಸಿಂಧುಖೇಡ್ಗೆ ನಡೆ ವ್ಯವಸ್ಥೆ ಮಾಡುತ್ತೇನೆ  ಎಂದ. ಜೀಜಾಬಾಯಿ ತಂದೆಯ ಈ ಕನಿಕರ ನುಡಿಗೆ ಮಾಲುವವಳಲ್ಲ.

ವೀರ ಪತ್ನಿಯಾದ ಆಕೆ ವೀರಾವೇಶದಿಂದ ಬಾಬಾ ಸಾಹೇಬ್ ನಿಮಗೆ ಬೋಸ್ಲೆ ಮನೆತನದ ಮೇಲೆ ಸೇಡು ತೀರಿಸುವುದಿದೆಯಲ್ಲ!. ಇಗೋ ನಾನು ನಿಮ್ಮಮುಂದೆ ನಿಂತಿದ್ದೇನೆ. ನಿಮ್ಮ ಇಚ್ಛೆ ಪೂರ್ತಿ ಮಾಡಿಕೊಳ್ಳಿ, ಆದರೆ ನಿಮ್ಮ ಮನೆಯಲ್ಲಿ ನನಗೇನು ಕೆಲಸ? ಕೊಟ್ಟ ಹೆಣ್ಣು ಕುಲಕ್ಕೆ ಹೊರಗಾಗಿದ್ದೇನೆ. ನಾನು ಭೋಸ್ಲೆ ಮನೆತನದ ವೀರಸೊಸೆ. ನಿಮ್ಮಮನೆಯ ಮೃಷ್ಟಾನ್ನಕ್ಕಿಂತ ನಮ್ಮ ಮನೆಯ ಗಂಜಿನೀರೇ ನನಗೆ ಪ್ರೀತಿ ಎಂದಳು.

ಜೀಜೂ.., ನೀನು ಯಾರ ಮುಂದೆ ಹೀಗೆ ಬಡಬಡಿಸುತ್ತಿರುವೆಯೆಂದು ಪರಿವೆಯಿದೆಯೇ? ಎಂದು ಜಾದವರಾವ್ ನುಡಿದಾಗ ಜೀಜಾ ಹೆದರದೆ “ಮೊಗಲರ ಪಕ್ಷಪಾತಿಯೂ ಮರಾಠರ ಶತ್ರುವೂ ಹಾಗೂ ನನ್ನ ಪತಿಯ ಕಟ್ಟಾವೈರಿಯ ಮುಂದೆ ಬಡಬಡಿಸುತ್ತಿರುವೆ. ನಿಮ್ಮ ಜೀಜೂ ಪುಟ್ಟಮಗುವಲ್ಲ. ಮರಾಠಾ ಸ್ತ್ರೀಯು ಪತಿಯನ್ನು ಬಿಟ್ಟು ಯಾರಿಗೂ ಹೆದರಲಾರಳು.

ಹೋಗಿ, ನಿಮ್ಮ ಶಿಕಾರಿಯನ್ನು ಹಿಡಿಯಿರಿ. ನಿಮಗೆ ಭೂಷಣವೆಂದು ತೋರಿದ ಮೊಗಲರ ಇನಾಮು ಪಡೆಯಿರಿ. ಏಕೆ ಸುಮ್ಮನೆ ನಿಂತಿರುವಿರಿ?. ಅದೋ ನೋಡಿ; ಶಿವನೇರಿಕಿಲ್ಲೆ ಅದು ನನ್ನ ಮನೆ. ಅಲ್ಲಿ ಜಗದಂಬೆಯ ಸೇವೆ ಮಾಡಿಕೊಂಡಿರುತ್ತೇನೆ” ಎಂದು ಖಾರವಾಗಿ ಉತ್ತರಿಸಿದಳು. ಮಗಳ ಅವತಾರ ನೋಡಿ ತಂದೆ ನಿರುತ್ತರನಾಗಿ ಮುಂದೆ ನಡೆದ. ಶಾಹಜಿಯ ಆಪ್ತ ಸ್ನೇಹಿತ ಅವಳನ್ನು ಸುರಕ್ಷಿತವಾಗಿ ಶಿವನೇರಿಕಿಲ್ಲೆಗೆ ತಲುಪಿಸಿದ.

🌹ಧೀರೆ ಹೆಣ್ಣು ಜೀಜಾ:

ಜೀಜಾಬಾಯಿ ಆತ್ಮಗೌರವದ ಮೂರ್ತಿ. ಎಂತಹ ಕಠಿಣಪ್ರಸಂಗದಲ್ಲೂ ಎದೆಗುಂದದೆ ಎದುರಿಸುವ ಶಕ್ತಿ ಆಕೆಯಲ್ಲಿತ್ತು. ವಾಸಕ್ಕೆ ವಿಶಾಲ ಅರಮನೆ, ನೌಕರರು, ಆನೆಕುದುರೆ ಮೇಣೆಗಳು ಸಂಪತ್ತೆಲ್ಲವೂ ಇದ್ದರೂ ಅವಳಿಗದರಲ್ಲಿ ಆಸಕ್ತಿ ಇರಲಿಲ್ಲ.

ಮರಾಠರಿಗೆ ಸ್ವಾತಂತ್ರ್ಯ ಕೊಡುತಾಯೀ. ತನ್ನ ಧ್ವಜ ತನ್ನ ಸೈನ್ಯಗಳಿಂದ ಬೆಳಗುವ ಸಾಮ್ರಾಟನನ್ನು ಕರುಣಿಸು ತಾಯೀ. ಶ್ರೀರಾಮನಂತಹ ವೀರಪುತ್ರ ನನ್ನ ಹೊಟ್ಟೆಯಲ್ಲಿ ಹುಟ್ಟುವಂತೆ ಕರುಣಿಸಮ್ಮ ಎಂದು ಸದಾ ಜಗದಂಬೆಯಲ್ಲಿ ಮೂಕವಾಗಿ ಪ್ರಾರ್ಥಿಸುವುದೇ ಅವಳ ಕೆಲಸವಾಯಿತು.

ಪತಿ ಶಾಹಜಿಯು ನಿಜಾಮನ ಸೇವೆಮಾಡುವುದು ಅವಳಿಗೆ ಇಷ್ಟವಿಲ್ಲದ ಕೆಲಸವಾಗಿತ್ತು. ಆದರೆ ಪತಿಯಲ್ಲಿ ಪ್ರೀತಿ ಕಡಿಮೆಯಾಗಲಿಲ್ಲ. ಜೀಜಾಬಾಯಿ ವೃದ್ಧ ಅನುಭವಿ, ರಾಜಕಾರಿಣಿಗಳ ಸಹವಾಸ ಪಡೆದು ಜಟಿಲ ಸಮಸ್ಯೆಗಳನ್ನು ಎದುರಿಸುವಲ್ಲಿ ನಿರತಳಾಗಿದ್ದಳು. ಜೀಜಾಳ ಬಯಕೆ ಎಂದರೆ ಖಡ್ಗಗಳನ್ನು ತಿರುಗಿಸುವುದು, ದುರ್ಗಗಳನ್ನು ಏರುವುದು, ರಾಜಕೀಯ ಚರ್ಚಿಸುವುದು, ಶಸ್ತ್ರಾಸ್ತ್ರ ಹಿಡಿದು ಹುಲಿಯೊಡನೆ ಹೋರಾಡುವುದು ಇದೆಲ್ಲ ಗರ್ಬಿಣಿಯಾದ ಆಕೆಯ ಬಯಕೆಯಾಗಿತ್ತು.

🌹ಅಂತರಂಗದ ತಲ್ಲಣ:

ಈ ಮಧ್ಯೆ ಜಾದವರಾವ್ ನಿಜಾಮಶಾಹಿಯ ಸೇವೆಗೆ ಹಿಂತಿರುಗಲು ತೀರ್ಮಾನಿಸಿ ಮೊಗಲರ ಪಕ್ಷವನ್ನು ತ್ಯಜಿಸಿದ. ಜಾದವರಾವ್ ಹಾಗೂ ಆತನ ಮಕ್ಕಳೆಲ್ಲ ನಿಜಾಮನನ್ನು ಬೇಟಿಯಾಗಿ ಒಪ್ಪಂದ ಮಾಡಿದರು. ಇದೇ ಸಮಯವನ್ನು ಕಾದಿದ್ದ ನಿಜಾಮನ ಸರದಾರರು ಅವರೆಲ್ಲರ ರುಂಡಗಳನ್ನು ಕಡಿದರು. ತವರುಮನೆ ಧ್ವಂಸವಾದ ಸುದ್ದಿತಿಳಿದ ಜೀಜಾಬಾಯಿ ಮಮ್ಮಲ ಮರುಗಿದಳು. ತವರಿನವರು ಎಷ್ಟೇ ವೈರತ್ವ ಬೆಳೆಸಿದರೂ ಹೆಣ್ಣಿಗೆ ತವರಿನ ವ್ಯಾಮೋಹ ಜಾಸ್ತಿ ಎಂಬುದು ಸತ್ಯದ ಮಾತು.

🌹ಇಷ್ಟಾರ್ಥ ಈಡೇರಿಕೆಯ ಲಕ್ಷಣ: 

19-2-1630 ನೇ ಶುಕ್ರವಾರ ಗಂಡುಮಗುವಿಗೆ ಜನ್ಮವಿತ್ತಳು ಜೀಜಾಬಾಯಿ. ಶಿವನೇರಿಯ ಜನರಿಗೆಲ್ಲ ಸಂಭ್ರಮವೋ ಸಂಭ್ರಮ. ಮಗುವಿಗೆ ಹೆಸರಿಡುವ ದಿವಸ ಜೀಜಾಮಾತೆ ಜಗದಂಬೆಗೆ ವಂದಿಸಿ ‘ಶಿವಾಜಿ’ ಎಂದು ಕರೆದು ತೊಟ್ಟಿಲು ತೂಗಿದಳು. ಈ ಪೋರನ ಹೆಸರಿನಲ್ಲಿ ಭಾರತದ ಇತಿಹಾಸ ನಿರ್ಮಿಸುವ ಸಾಮರ್ಥ್ಯ ಅಡಗಿತ್ತು!. ಮರಾಠರ ಭಾಗ್ಯೋದಯದ ವೀರ ತನ್ನ ಮಗನಾಗಬೇಕೆಂದು ಹಂಬಲಿಸಿದ ಜೀಜಾ ಆ ನಿಟ್ಟಿನಲ್ಲಿ ತನ್ನ ಮಗನನ್ನು ಬೆಳೆಸಲು ಪಣತೊಟ್ಟಳು. ಆಕೆಯ ಉಕ್ಕಿನ ಮನಸ್ಸು, ಆತ್ಮಗೌರವ, ಧರ್ಮನಿಷ್ಠೆ ಮೊದಲಾದುವು ಪವಿತ್ರ ಕೆಲಸಕ್ಕೆ ಹೇಳಿ ಮಾಡಿಸಿದಂತಿತ್ತು.

🌹ಮನೆಯೆ ಮೊದಲಪಾಠಶಾಲೆ: 

ಮಗುವಿಗೆ ಮಾತು ಬರುತ್ತಿದ್ದ ಸಮಯಕ್ಕೇ ಭಾರತದ ಹಿಂದಿನ ಹಿರಿಮೆಯನ್ನೂ ವೀರರ ಸಾಹಸ ಕಥೆಗಳನ್ನೂ ನಿರೂಪಿಸತೊಡಗಿದಳು. ‘ಮನೆಯೆ ಮೊದಲ ಪಾಠಶಾಲೆ ಜನನಿಯೇ ಮೊದಲಗುರು’ ಎಂಬ ನಾಣ್ಣುಡಿಯು ಜೀಜಾಬಾಯಿಯ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಶಾಹಜಿಯು ಜೀಜಾಬಾಯಿ ಶಿವಾಜಿಯರನ್ನು ಪುಣೆಗೆ ಕಳುಹಿಸುವ ವ್ಯವಸ್ಥೆ ಮಾಡಿದ. ಮೊಗಲಶಾಹಿ ಹೊಡೆತದಿಂದ ನಿರ್ನಾಮವಾಗಿದ್ದ ಆ ಹಳ್ಳಿಯನ್ನು ಪುನಃ ನಿರ್ಮಾಣ ಮಾಡಲು ಜೀಜಾಬಾಯಿ ಮುಂದಾದಳು. ಪುಣೆಗೆ ಪೂಜ್ಯರಾದ ಸಾಧು-ಸಂತರು ಯಾರೇ ಬಂದರೂ ಶಿವಾಜಿಯ ಕೈಯಿಂದ ಸತ್ಕಾರ ಮಾಡಿಸುತ್ತಿದ್ದಳು.

ಅಂತವರ ಉಪದೇಶ, ಆಶೀರ್ವಾದ ಶಿವಾಜಿಯ ಮೈಯಲ್ಲಿ ಹೊಸಚೈತನ್ಯ ನಿರ್ಮಾಣವಾಗತೊಡಗಿತು. ಅಮ್ಮನ ಅತ್ಯಂತ ಕಟ್ಟು-ನಿಟ್ಟು, ಶಿಸ್ತು, ನ್ಯಾಯ, ನಿಷ್ಠೆ ಶಿವಾಜಿಯ ಉಸಿರಾದವು. ಗೋ ಪ್ರೇಮಿಯಾದ ಬಾಲಕ ಶಿವಾಜಿ ಗೋಹತ್ಯೆ ಮಾಡಿದವರ ಕೈಯನ್ನು ಕಡಿದುಹಾಕುವ ಆಜ್ಞೆ ಮಾಡತೊಡಗಿದ!. ಪರಸ್ತ್ರೀಯ ಅಪಮಾನ ಮಾಡಿದವನಿಗೆ ಮರಣದಂಡನೆ ನೀಡುವಂತಾದ!!.

🌹ಆಪತ್ತಿನಲ್ಲೂ ಧೃತಿಗೆಡದ ನಾರಿ: 

ಮುಂದೆ ಜೀಜಾಳಿಗೆ ಆಪತ್ತಿನ ಸರಮಾಲೆ ಬರತೊಡಗಿತು. ಆಕೆಯ ಪತಿ ಶಹಾಜಿ ಬೆಂಗಳೂರಲ್ಲಿ ತುಕಾಬಾಯಿ ಎಂಬವಳೊಡನೆ ಎರಡನೆ ಲಗ್ನವಾದ. ಆ ಮೇಲೆ ಶಾಹಜಿ ಜೀಜಾಬಾಯಿಯರ ಸಂಪರ್ಕ ದೂರವಾಗುತ್ತಾ ಬಂತು. ಆದರೂ ಅವಳು ದೃತಿಗೆಡದೆ ತನ್ನ ಬಾಲಕನನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಒಂದೇ ಛಲದಲ್ಲೇ ನಿರತಳಾದಳು!. ಶಕುಂತಲೆ ಭರತನಿಗೆ ಕಲಿಸಿದಂತೆ, ಸೀತಾಮಾತೆ ಲವ-ಕುಶರನ್ನು ನಿರ್ಮಿಸಿದಂತೆ ತನ್ನ ಮಾತೃತ್ವದ ನೆರಳಲ್ಲಿ ಭಾವೀ ಸ್ವತಂತ್ರ ಸಾರ್ವಭೌಮನನ್ನು ನಿರ್ಮಾಣ ಮಾಡುವ ಧ್ಯೇಯವೊಂದನ್ನೇ ಹೊತ್ತಳು.

🌹ಆಸೆ ನೆರವೇರಿತು:

ಶಿವಾಜಿಯ ಸಹಚರರಿಗೆಲ್ಲ ಜೀಜಾಮಾತೆ ತಾಯಿಯಂತೆ ಸ್ಪೂರ್ತಿ ನೀಡುತ್ತಿದ್ದಳು. ತಾನಾಜಿಮಾಲಸುರೆ ಶಿವಾಜಿಯ ಸ್ನೇಹಿತ. ಅವನು ಸಿಂಹಶಕ್ತಿಯ ಸೇನಾನಿ. ಸಿಂಹಗಡದಲ್ಲಿ ಹೋರಾಡಿ ಶತ್ರುವನ್ನು ಕೊಂದ. ಸಿಂಹಗಡದಲ್ಲಿ ಪತಾಕೆ ಹಾರುವುದು ಕಂಡು ಜೀಜಾಳಿಗೆ ಆನಂದಾಶ್ರು ತುಂಬಿತು. ಒಂದೊಂದೇ ಕೋಟೆ-ಕೊತ್ತಲಗಳನ್ನು ಶಿವಾಜಿ ಜಯಿಸಿದಾಗ ಅವಳ ಸಂತಸ ಹೇಳತೀರದು.

ಆದರೆ ಸಂತಸದೊಂದಿಗೆ ಒಂದು ದುಃಖವೂ ಎನ್ನುವಂತೆ; 1664 ರಲ್ಲಿ ಶಿವಾಜಿಯ ತಂದೆ ಶಾಹಜಿ ಮರಣಹೊಂದಿದ. ಈ ದುಃಖ ಶಮನಕ್ಕೆ ಶಿವಾಜಿ, ತನ್ನ ತಾಯಿಗೆ ಹಲವು ಬಗೆಯಲ್ಲಿ ನೆರವಾದ. 1674 ರಲ್ಲಿ ರಾಯಗಢದಲ್ಲಿ ಶಿವಾಜಿ ತನ್ನ ತಾಯಿಯ ಪಾದಗಳಿಗೆ ನಮಸ್ಕರಿಸಿ ಚಿನ್ನದ ಸಿಂಹಾಸನವನ್ನು ಏರಿದ.

ಜೀಜಾಮಾತೆ ರಾಜಮಾತೆಯಾದಳು. ಆದರೆ.., ಈ ಸಂತಸದಲ್ಲೂ ನೂರಾರು ಬಲಿದಾನ ಮಾಡಿದ ವೀರರ ನೆನಪು ಅವಳಿಗೆ ವೇದನೆಯನ್ನು ಕೊಡುತ್ತಿತ್ತು. ಮಗನ ರಾಜ್ಯಾಭಿಷೇಕವಾದ ಕೆಲವೇ ದಿನಗಳಲ್ಲಿ ಈ ಮಹಾಮಾತೆಯ ಮಹಾ ನಿರ್ಯಾಣವಾಯಿತು.

ಪುಣ್ಯ ಕ್ಷೇತ್ರವಾದ ರಾಯಘಡದಲ್ಲಿ ಇಂದಿಗೂ ಬಾಲಶಿವಾಜಿ ಮತ್ತು ಜೀಜಾಮಾತೆಯ ಭವ್ಯ ಪ್ರತಿಮೆಗಳಿವೆಯಂತೆ. ಆ ಕಿಲ್ಲೆಯನ್ನೇರಿ ತರುಣರು ಸ್ಪೂರ್ತಿಪಡೆಯಬೇಕು. ಮಾತೆಯರು ಜೀಜಾಮಾತೆಯರ ಆದರ್ಶವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು.

ಇಂತಹ ಮಹಾತಾಯಿ ನಮ್ಮೆಲ್ಲರಿಗೂ ಎಂದೆಂದಿಗೂ ಸ್ಫೂರ್ತಿಯಾಗಬೇಕು.


       ಹೇಮಂತ ಚಿನ್ನು, ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group