spot_img
spot_img

ಮಹಿಮಾ ಪುರುಷ ತಿಮ್ಮಾಪೂರಿನ ಮಾರುತೇಶ

Must Read

spot_img
- Advertisement -

ಬಾಗಲಕೋಟೆಯಲ್ಲಿ ತುಳಸೀಗೇರಿ ಹನುಮಪ್ಪ. ಯಲಗೂರು ಹನುಮಪ್ಪ. ಆಚನೂರು ಹನುಮಪ್ಪ ಮತ್ತು ಹುನಗುಂದ ತಾಲೂಕಿನ ಹನುಮಪ್ಪ ಪ್ರಸಿದ್ದರಾದವರು. ತಿಮ್ಮಾಪೂರ ಶ್ರೀ ಮಾರುತೇಶ್ವರ ಹಾಗೂ

ಶ್ರೀ ಬಸವೇಶ್ವರ ಮಾರುತೇಶ್ವರ ಪ್ರಾಚೀನ ಪರಂಪರೆಯ ದ್ಯೋತಕವಾದ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರದ ಪ್ರಸಿದ್ದ ದೇವಾಲಯ. ಜಾತ್ರೆಯ ಸಂದರ್ಭದಲ್ಲಿ ವಿಸ್ಮಯ ರೀತಿಯ ಹತಾರ ಸೇವೆ ಕಾಯಿ ಒಡೆಯುವುದು, ಹೇಳಿಕೆ ನುಡಿಯುವುದು ವಿಶೇಷ ಆಕರ್ಷಣೆ. ಕರ್ನಾಟಕದ ಯಾವುದೇ  ಹನುಮಾನ ಮಂದಿರಗಳ ಜಾತ್ರೆಗಳಲ್ಲಿ ಹತಾರ ಸೇವೆ ಇಲ್ಲ. ಆದರೆ ಅದು ತಿಮ್ಮಾಪೂರದಲ್ಲಿದೆ. ಅದು ಕೂಡ ಶ್ರದ್ದೆ ಭಕ್ತಿಗಳ  ಸಂಗಮವಾಗಿದೆ. ಇದೇ ಬರುವ ದಿ. 16-17-18 ರಂದು ಜಾತ್ರೆ ಜರಗುವುದು ಇದರ ಪ್ರಯುಕ್ತ ಈ ಲೇಖನ.

- Advertisement -

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ತಿಮ್ಮಾಪೂರ ಅಮರಾವತಿ ಗ್ರಾಮ ಪಂಚಾಯತಿಯಲ್ಲಿ ಬರುತ್ತದೆ. ಈ ಗ್ರಾಮ ಸಾಮರಸ್ಯಕ್ಕೆ ಹೆಸರುವಾಸಿಯಾಗಿದೆ. ಇದು ಬೆಳಗಾವಿ ವಿಭಾಗಕ್ಕೆ ಸೇರಿದೆ. ಇದು ಜಿಲ್ಲೆಯ ಪ್ರಧಾನ ಕಛೇರಿಗಳು ಬಾಗಲಕೋಟೆಯಿಂದ ಪೂರ್ವಕ್ಕೆ 46 ಕಿ.ಮೀ. ಹುನಗುಂದ ತಾಲೂಕದಿಂದ 6 ಕಿ.ಮೀ. ರಾಜ್ಯ ರಾಜಧಾನಿ ಬೆಂಗಳೂರಿನಿಂದ 452 ಕಿ.ಮೀ. ಇದ್ದು ಈ ಗ್ರಾಮಕ್ಕೆ ಹುನಗುಂದ ಗ್ರಾಮದ ಮೂಲಕ ತಲುಪಲು ಸಾರಿಗೆ ವ್ಯವಸ್ಥೆ ಇದೆ. ಹತ್ತಿರದ ರೈಲು ಮಾರ್ಗ ಬಾಗಲಕೋಟೆ. ಈ ದೇವರಿಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲದೆ ಪಕ್ಕದ ರಾಜ್ಯದ ಮಹಾರಾಷ್ಟ್ರ ಮತ್ತು ಗೋವಾಗಳಿಂದಲೂ ಅಪಾರ ಭಕ್ತರು ಆಗಮಿಸುವರು.

ಹನಮಂತದೇವರು ಬೆಳೆದು ಬಂದ ದಾರಿ:

ಭರತಖಂಡದಲ್ಲಿ ಹನಮಂತ ಜನಪ್ರಿಯ ದೇವರು. ಕರ್ನಾಟಕದಲ್ಲಿ ಸಮಾಜದ ಎಲ್ಲ ವರ್ಗಗಳ ಜನರ ಆರಾದ್ಯದೈವ. ಅಂತೆಯೇ ಹನಮಂತನ ವಿಗ್ರಹಗಳು ನಾಡಿನೆಲ್ಲೆಲ್ಲ ಸ್ಥಾಪನೆಗೊಂಡು ಅನೇಕ ಹೆಸರುಗಳಿಂದ ಆತನು ಪೂಜಿಸಲ್ಪಡುತ್ತಿರುವನು. ಹಲವಾರು ಕ್ಷೇತ್ರಗಳು ಕರ್ನಾಟಕದಲ್ಲಿ ಪೌರಾಣಿಕವಾಗಿ ಐತಿಹಾಸಿಕವಾಗಿ ಚಾರಿತ್ರಿಕವಾಗಿ ಹಲವು ಐತಿಹ್ಯಗಳನ್ನೊಳಗೊಂಡು ಭಕ್ತ ಜನರ ಕ್ಷೇತ್ರಗಳಾಗಿ ಪ್ರಸಿದ್ದಿ ಹೊಂದಿವೆ.

ಪರಾಕ್ರಮಿಯಾದ ಕೇಸರಿ ಎಂಬ ವಾನರ ಮತ್ತು ಅಂಜನಿ ಎಂಬ ದಂಪತಿಗಳ ಉದರದಲ್ಲಿ ಹನುಮಂತನು ಜನಿಸಿದನೆಂದು ತಿಳಿದು ಬರುವದು. ರಾಮಾಯಣದಲ್ಲಿ ಪ್ರಮುಖ ನಿರ್ಣಾಯಕ ಪಾತ್ರ ಹನುಮಂತನದ್ದು. ಕಿಷ್ಕಿಂದಾ ಕಾಂಡದಿಂದ ಶ್ರೀರಾಮನ ಪಟ್ಟಾಭಿಷೇಕ ದವರೆಗೆ ಪ್ರತಿ ಪ್ರಕರಣದಲ್ಲಿ ಶ್ರೀ ಮಾರುತಿಯು ಪ್ರಧಾನ ಪಾತ್ರದಲ್ಲಿ ಕಂಡು ಬರುತ್ತಾನೆ, ಅಂತೆಯೇ ಹನುಮಂತನಿಲ್ಲದ ರಾಮಯಾಣವು ಅಪೂರ್ಣ. ಶ್ರದ್ದೆ ಭಕ್ತಿಯಿಂದ ಶ್ರೀ ಮಾರುತೇಶ್ವರನನ್ನು ನೆನೆದರೆ ಇಷ್ಟಾರ್ಥ ಸಿದ್ದಿಸುವುದೆನ್ನುವ ನಂಬಿಕೆ ಇಂದಿಗೂ ನಮ್ಮಲ್ಲಿ ಆಳವಾಗಿ ಬೇರೂರಿದೆ.

ಅವಳಿ ಜಿಲ್ಲೆಯ ಮಾರುತೇಶ್ವರ ದೇವಸ್ಥಾನಗಳ ವಿವರ:

- Advertisement -

ವಿಜಯಪುರ-ಬಾಗಲಕೋಟ ಜಿಲ್ಲೆಯಲ್ಲಿ ಐವರು ಪ್ರಾಣದೇವರನ್ನು ಜಾಗೃತ ದೇವರೆಂದು ಕರೆಯಲಾಗಿದೆ. ಹಲಗಲಿ, ಯಲಗೂರ, ತುಳಸಿಗೇರಿ, ಅಚನೂರ ಹಾಗೂ ಕೋರವಾರ ದೇವರನ್ನು ಜಾಗೃತ ದೇವರೆನ್ನುವ ಪ್ರತೀತಿ ಇದೆ. ಅದರಂತೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಹನಮಂತ ದೇವರು ಜಾಗೃತ ದೇವರೆಂದು ಹೇಳಬಹುದು. 

ತಿಮ್ಮಾಪೂರ ಸೇರಿದಂತೆ ಸುತ್ತಮುತ್ತಲೂ ಸರ್ವಧರ್ಮದವರು ಪೂಜಿಸುವ ಹೆಸರಾಂತ ದೇವರು ಹನಮಪ್ಪ. ಇಂದೊಂದು ಜಾಗೃತ ಸ್ಥಾನ. ಉಳಿದ ದೇವಾಲಯಗಳಂತೆ ದೊಡ್ಡ ದೇವಾಲಯ. ದೊಡ್ಡ ಮೂರ್ತಿ ಇದೆ ಹಾಗೂ ಕೀರ್ತಿಯೂ ದೂಡ್ಡದು ಇದೆ. ಇಲ್ಲಿ ಪವಾಡ ಸದೃಶ ಘಟನೆಗಳು ಈಗಲೂ ನಡೆಯುತ್ತಿವೆ ಇದರ ಬಗ್ಗೆ ಸರಿಯಾದ ಪ್ರಚಾರ ಸಿಕ್ಕಿಲ್ಲ.

ವಿಶಿಷ್ಟ ಆಕರ್ಷಣೆಯ ಜೋಡಿ ಗುಡಿಗಳು: 

ಈ ಗ್ರಾಮಕ್ಕೆ ಭೇಟಿ ಕೊಟ್ಟವರಿಗೆ ಸುಂದರವಾದ ಎರಡು ಗುಡಿಗಳು ಕಾಣಿಸುತ್ತವೆ. ಅವುಗಳಲ್ಲಿ ಒಂದು ಶ್ರೀ ಮಾರುತೇಶ್ವರ ದೇವಸ್ಥಾನ ಇನ್ನೂಂದು ಶ್ರೀ ಬಸವೇಶ್ವರ ದೇವಸ್ಥಾನಗಳಾಗಿವೆ. ಇದೇ ರೀತಿ ಕಿರಸೂರ ಹಾಗೂ ಹಡಗಲಿ ಗ್ರಾಮಗಳಲ್ಲಿ ಜೋಡಿ ಗುಡಿಗಳು ಇರುವದು ಕಂಡು ಬರುತ್ತಿದ್ದು, ಜಾತ್ರೆಯ ಹಿಂದಿನ ದಿನ ಕಿರಸೂರ ಗ್ರಾಮದಲ್ಲಿ ಜಾತ್ರೆಯ ಮುಂದೆ ಹಡಗಲಿ ಗ್ರಾಮಕ್ಕೆ ಹೋಗಿರುತ್ತಾನೆ. ಮೂರು ಊರುಗಳಲ್ಲಿ ಹನುಮಂತ ಹಾಗೂ ಬಸವಣ್ಣ ದೇವರ ಮೂರ್ತಿ ಹಾಗೂ ಗುಡಿಗಳು ಇರುವದು ತಾಲೂಕಿನಲ್ಲಿಯೇ ವಿಶೇಷವಾಗಿದ್ದು ಮೂರು ಗ್ರಾಮಗಳಲ್ಲಿ ಜಾತ್ರೆ ನಡೆಯುತ್ತಿದ್ದು ಪ್ರಾರಂಭಗೊಂಡ 24 ಗಂಟೆಗಳಲ್ಲಿ ಮೂರು ಗ್ರಾಮಗಳಲ್ಲಿ ಜಾತ್ರೆ ಜರಗುತ್ತದೆ.

ಶ್ರೀ ಮಾರುತೇಶ್ವರ ಗರ್ಭ ಗುಡಿಯನ್ನು ಸಂಗ್ಮರಿ ಕಲ್ಲಿನಿಂದ ಮಾಡಲಾಗಿದ್ದು ದೇವಸ್ಥಾನದ ಎದುರಿಗೆ ದೀಪಸ್ಥಂಭ ಬಲಬದಿಗೆ ಬಸವೇಶ್ವರ ದೇವಾಲಯವಿದೆ. ಇದರ ಜಾತ್ರೆಯೂ ಸಹ ಈ ಜಾತ್ರೆಯ ಜೊತೆ ನಡೆಯುತ್ತದೆ. ಪಕ್ಕದಲ್ಲಿ ಪವಾಡ ಪುರುಷರ 2 ಕಟ್ಟೆಗಳಿವೆ. ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನವೂ ಸಹ ಇಲ್ಲಿದೆ.

ತಿಮ್ಮಾಪೂರ ಮಾರುತೇಶ್ವರನ ಹಿನ್ನೆಲೆ:

ಈ ಊರಿನ ಪೂಜಾರಿಗಳು ಹರಪನಹಳ್ಳಿಯ ದೇಸಾಯಿಯರೆಂದು ಎಂಬ ಪ್ರತೀತಿ ಇದೆ. ಅವರು ಒಂದು ಕಾಲದಲ್ಲಿ ಹರಪನ ಹಳ್ಳಿಯ, ಊರನ್ನು ಬಿಟ್ಟು ಬರುವ ಕಾಲಕ್ಕೆ ಹುನಗುಂದ ತಾಲೂಕಿನ ದಮ್ಮೂರದ ಗುಡ್ಡದಲ್ಲಿ ಬರುತ್ತಿರುವಾಗ ಅಲ್ಲಿ ಏನೋ ಅವರ ಮನದಲ್ಲಿ ಮೂಡಿ ಬಂದು ಕಲ್ಲಿನ ಮೇಲೆ ನಿಂತರಂತೆ. ಆ ಸಂಧರ್ಭದಲ್ಲಿ ಅವರ ಕಣ್ಣುಗಳು ಕಾಣದಂತಾಯಿತಂತೆ. ಮತ್ತೆ ಸ್ವಲ್ಪದರಲ್ಲಿ ಕಣ್ಣುಗಳು ಕಾಣಿಸಿದಂತಾಗತೊಡಗಿತು. ಕಣ್ಣು ತರೆದು ನೋಡಿದಾಗ ಆ ಸಂಧರ್ಭದಲ್ಲಿ  ಮಾರುತೇಶ್ವರನು ಭಕ್ತನೇ, ನೀನು ಎಲ್ಲಿಗೆ ಹೋಗುವೆ.? ನನ್ನನ್ನು ಅಲ್ಲಿಗೆ ಕರದುಕೊಂಡು ಹೋಗು. ನಾನು ನಿನ್ನ ಜೊತೆ ಬರುತ್ತೇನೆ. ಎಂದು ವಾಣಿಯಾಯಿತಂತೆ. ಆಗ ಆ ಭಕ್ತನು “ನಿನ್ನನ್ನು ಒಯ್ಯುವುದು ಹೇಗೆ ಸಾಧ್ಯ? ಎಂದು ಅವನನ್ನು ಕೇಳಿದನಂತೆ. ಆಗ ಮಾರುತೇಶ್ವರನು  ನಾನು ರೋಟಿ ತೂಕದಲ್ಲಿ ಬರುತ್ತೇನೆ ಎನ್ನಲು, ಆ ವ್ಯಕ್ತಿ ನೆಲದಲ್ಲಿಯ ಆ ಕಲ್ಲನ್ನು ಎತ್ತಿಕೊಳ್ಳಲು ಅದು ಬಹಳ ಹಗುರವಾಯಿತು. ಅದನ್ನು ಎತ್ತಿಕೊಂಡು ಅಲ್ಲಿಂದ ಹುನಗುಂದ ತಾಲೂಕಿನ ತಿಮ್ಮಾಪೂರ ಸಮೀಪಕ್ಕೆ ಬಂದು ಆ ಕಲ್ಲು  ಭಾರವಾಯಿತಂತೆ. ಆಗ ಆ ವ್ಯಕ್ತಿಯು ಆ ಮೂರ್ತಿಯನ್ನು ಒಗೆದು ಹೊರಟನಂತೆ. ಆಗ ಆ ಮೂರ್ತಿಯು ನನ್ನನ್ನು ಇಲ್ಲಿ ಬಿಟ್ಟು ಹೋಗಬೇಡಾ. ನನಗೆ ಈ ಊರಿನ ಡೊಳ್ಳು ಕಳಸದೊಂದಿಗೆ ಬಂದು ಕರೆದುಕೊಂಡು ಹೋಗು.

ನನಗೆ ಸಂಗಟಿ ಎಡೆಯನ್ನು ಮಾಡಿ ತರಲು ಹೇಳಿದನಂತೆ. ಆ ಪ್ರಕಾರ ಅವನು ಗ್ರಾಮಕ್ಕೆ ತೆರಳಿ ಗ್ರಾಮದ ಕೆಲವು ಮನೆತನದವರನ್ನು ಕರೆದುಕೊಂಡು ಸಂಗಟಿ ಎಡೆಯನ್ನು ಮಾಡಿಕೊಂಡು ಮೆರವಣಿಗೆ ಮೂಲಕ ಗ್ರಾಮಕ್ಕೆ ತಂದು ಪ್ರತಿಷ್ಠಾಪಿಸಿದರು. ಈ ರೀತಿ ಮಾರುತೇಶ್ವರನ ಪ್ರತಿಷ್ಠಾಪನೆ ಹಿಂದೆ ಕಥೆಯೊಂದಿದೆ ಎಂದು ಹಿರಿಯರು ಹೇಳುವರು.  ಅಂದಿನಿಂದ ಇಂದಿನವರೆಗೂ ಮಾರುತೇಶ್ವರನಿಗೆ ಸಂಗಟಿಯನ್ನು ಜಾತ್ರೆಯಲ್ಲಿ ನೈವೇದ್ಯ ಮಾಡುವ  ಪರಂಪರೆ ಮುಂದುವರೆದುಕೊಂಡು ಬಂದಿದೆ.

ಈ ಜಾತ್ರೆಯ ಸಂದರ್ಭದಲ್ಲಿ  ಅಲಗನ್ನು ಹಾಕಿಕೊಳ್ಳುವ ಪದ್ಧತಿಯಿದೆ. ಇದು ವಿಶೇಷ ಕೂಡ. ಅಲಗ ಹಾಯುವ (ಹತ್ತಾರ ಸೇವೆ) ಪದ್ಧತಿ ಇಂಥ ಕಂಪ್ಯೂಟರ ಯುಗದಲ್ಲಿಯೂ ಮುಂದುವರೆದಿದೆ. ಸಾಯಂಕಾಲ ಹೊತ್ತಿಗೆ ಇಲ್ಲಿ ಹೇಳಿಕೆ ಕೂಡ ನಡೆಯುತ್ತದೆ, ಮಳೆ ಬೆಳೆ ಇತ್ಯಾದಿ ವಿಚಾರವಾಗಿ ವಾಣಿ ನುಡಿಯುವ ಪದ್ದತಿ ಇಂದಿಗೂ ಇದೆ.. ಈ ಹೇಳಿಕೆ ಜಾತ್ರೆಯ ದಿವಸ ರವಿವಾರ ಸಾಯಂಕಾಲ ನಡೆಯುತ್ತದೆ.

ದೇವಾಲಯದ ಹಿನ್ನೆಲೆ:

ಹುನಗುಂದದ ಜನಾದ್ರಿ ಮನೆತನದ ಹಿರಿಯರೊಬ್ಬರು ವೈಶ್ಯ ಧರ್ಮದಂತೆ ವ್ಯಾಪಾರ ಮಾಡಿಕೊಂಡಿದ್ದರು. ಹಳ್ಳಿ ಹಳ್ಳಿಗೆ ತಿರುಗಿ ಹತ್ತಿ ತುಂಬುವದು ವಗೈರೆ ವ್ಯವಹಾರ ಮಾಡುವ ಅವರು ಒಮ್ಮೆ ತಿಮ್ಮಾಪೂರಕ್ಕೆ ಹೋಗಿದ್ದರಂತೆ, ಅಲ್ಲಿ ಗಿಡದ ಬುಡದಲ್ಲಿ ಒಂದು ಹನಮಪ್ಪನ ಮೂರ್ತಿ ಇತ್ತಂತೆ ಅಲ್ಲಿಯೇ ಕುಳಿತು ವಿಶ್ರಾಂತಿಗಾಗಿ ಮಲಗಿದಾಗ ಹನಮಪ್ಪನು ಕನಸಿನಲ್ಲಿ ಬಂದು ನೀನು ನನ್ನ ದೇವಸ್ಥಾನ ಕಟ್ಟಿಸು ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿದನಂತೆ. ಕನಸೋ ನನಸೋ ತಿಳಿಯದು ಒಟ್ಟಿನಲ್ಲಿ ಹುನಗುಂದದ ಜನಾದ್ರಿ ಮನೆತನದ ಹಿರಿಯರೊಬ್ಬರು ಈ ದೇವಸ್ಥಾನ ಕಟ್ಟಿಸಿದರು ಎಂಬ ಪ್ರತೀತಿ ಇದೆ. ಆದರೆ ಮುಂದಿನ ದಿನಮಾನದಲ್ಲಿ ತಿಮ್ಮಾಪೂರ ಗ್ರಾಮಸ್ತರು ಜೀಣೋದ್ದಾರ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಪವಾಡಗಳು:

  1. ಈ ಮಾರುತೇಶ್ವರನ ಪೂಜಾರಿಯು ಗೂಡೂರ ಗ್ರಾಮದಲ್ಲಿ ಅಲ್ಲಿಯೆ ಗ್ರಾಮಸ್ಥರು ಆ ವರ್ಷ ಭೀಕರ ಬರಗಾಲವಿದ್ದರೂ ಪೂಜಾರಿಯನ್ನು ಮಳೆಯ ಬಗ್ಗೆ ಕೇಳಿದರಂತೆ ಆಗ ಆ ಪೂಜಾರಿಯು ನೀವು ಮಾಳಿಗೆ ಏರಿ ಬೆಳಕಿಂಡಿ ಮುಚ್ಚಿರೀ ನಾನು ಊರು ದಾಟುವದರೊಳಗೆ ಮಳೆ ಬರುತ್ತೆ ಎಂದು ಹೇಳಿದನಂತೆ. ಆ ಪ್ರಕಾರ ಮಳೆಯಾಯಿತು ಎಂದು ಹೇಳಲಾಗುತ್ತಿದೆ.
  2. ಹಿಂದೊಮ್ಮೆ ಒಬ್ಬ ಕಳ್ಳ ಹನಮಂತ ದೇವರ ಕ್ವಾರಿ ಮೀಶಿಯನ್ನು ಕಳವು ಮಾಡಿ ಒಯ್ಯುತ್ತಿರುವಾಗ ಅವನ ಕಣ್ಣುಗಳು ಕಾಣಿಸಲಿಲ್ಲವಂತೆ. ಅವನು ಜನರ ಸಮಕ್ಷಮ ದೇವರಿಗೆ ಕ್ಷಮಾಪಣೆ ಕೇಳಿ ಆ ಕ್ವಾರಿ ಮೀಸಿಯನ್ನು ಮರಳಿಸಿದ ನಂತರ ಅವನಿಗೆ ಕಣ್ಣುಗಳು ಬಂದವು ಎಂದು ಹಿರಿಯರು ಹೇಳುತ್ತಾರೆ.
  3. ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ದೇವರಿಗೆ ಹೂ ತನ್ನಿಂದ ತಾನೆ ಕೆಳಗೆ ಬೀಳುತ್ತದೆ. ಹೂ ಬಿದ್ದರೆ ತಮ್ಮ ಬೇಡಿಕೆ ಈಡೇರುತ್ತದೆ. ಎಂಬ ನಂಬಿಕೆ ಇಲ್ಲಿನ ಜನರಲ್ಲಿ ವ್ಯಾಪಕವಾಗಿದೆ.

ಎರಡು ಪವಾಡ ಪುರುಷರ ಕಟ್ಟೆಗಳು:

ಒಬ್ಬ ಪೂಜಾರಿಯು ನಾಲಿಗೆಯನ್ನು ಕೊಯ್ದುಕೊಂಡು ಆ ನಾಲಗೆ ಮರಳಿ ಜೋಡಿಸಿಕೊಂಡರಂತೆ. ಇನ್ನೊಬ್ಬ ಪೂಜಾರಿಯು ಕಾಲಿನ ಚಿಪ್ಪನ್ನು ಕೊರೆದುಕೊಂಡು ದೀಪವನ್ನು ಹಚ್ಚಿದರಂತೆ ಎಂಬ ಪ್ರತೀತಿ ಇದೆ ಹಾಗೂ ಭರಮದೇವರ ಕಟ್ಟೆ ಇದು ಜಾತ್ರೆಯ ದಿವಸ ಹತ್ಯಾರ ಶ್ಯಾವಿ ನಡೆದ ನಂತರ ಕೂನೆಯ ಪೂಜಾರಿಯು ಈ ಕಟ್ಟೆಯ ಮೇಲೆ ನಿಂತು ಹೇಳಿಕೆಯನ್ನು ನುಡಿಯುತ್ತಾನೆ.

ಶ್ರೀ ಕ್ಷೇತ್ರದ ವಿಶೇಷ ಪೂಜೆಗಳು, ಆಚರಣೆಗಳು:

  • ಮುಂಜಾನೆ ದಿನಂಪ್ರತಿ ಅರ್ಚಕರು ಅಮರೇ ಹೂವು ಪೂಜೆ ಪ್ರಾರಂಭಿಸುವುದರೊಂದಿಗೆ ಪ್ರಾರಂಭಗೊಂಡು  ಇತರ ಪೂಜೆಗಳಲ್ಲಿ ಗಂಧದ ಪೂಜೆ, ಇತರೆ ಪೂಜೆಗಳು ಜರುಗುತ್ತವೆ.
  • ತಮ್ಮ ಇಷ್ಟಾರ್ಥಸಿದ್ಧಿಗಾಗಿ ಬೇಡಿಕೊಂಡವರು ಬುತ್ತಿ ಪೂಜೆಯನ್ನು ಮಾಡಿಸುತ್ತಾರೆ. ಏಕೆಂದರೆ ಈ ಸಂದರ್ಭದಲ್ಲಿ ಅವರು ಹಲವಾರು ದಿನಗಳವರೆಗೆ ಅನ್ನವನ್ನು ಸೇವಿಸಿರುವುದಿಲ್ಲ ಎಂದು ಪ್ರತೀತಿ ಇದೆ. ಇಂತಹ ಪೂಜೆಯನ್ನು ಹಲವಾರು ಜನರು ಮಾಡಿಸಿದ್ದಾರೆ ಎನ್ನುತ್ತಾರೆ ಅರ್ಚಕ ಸೀತಾರಾಮಪ್ಪ (ರಮೇಶ) ಪೂಜಾರಿ ಅವರು ಅಭಿಪ್ರಾಯಪಡುತ್ತಾರೆ.
  • ಜಾತ್ರೆ ಹಾಗೂ ದಾಸೋಹ ಸಂದರ್ಭದಲ್ಲಿ ಹನಮಪ್ಪನಿಗೆ ಪ್ರಿಯವಾದ ಎಲೆಪೂಜೆ ಮಾಡಿಸುವ ಸಂಪ್ರದಾಯವಿದೆ.
  • ಜಾತ್ರೆಯ ಪ್ರಾರಂಭದಂದು ಹೊಳೆಗೆ ಹೋಗುವ ದಿನದಂದು ಶನಿವಾರ ಮಾದಲಿ, ರವಿವಾರ ಜಾತ್ರೆಯ ದಿವಸ ಸಂಜೆ ಕೊಟೊಡ ಅನ್ನ, ಸೋಮವಾರ ಕರಿಗಡಬು ನೈವೇದ್ಯವನ್ನು ದೇವರಿಗೆ ಅರ್ಪಿಸುತ್ತಾರೆ.

ಶ್ರಾವಣ ಮಾಸದಲ್ಲಿ ಪ್ರತಿ ನಿತ್ಯವೂ ಪೂಜೆ ಪುನಸ್ಕಾರ, ಅಭಿಷೇಕ, ಮಾಡಲಾಗುವದು ಹಾಗೂ ರಾತ್ರಿ ಭಜನೆ, ಮಂಗಳಾರತಿ ಕಾರ್ಯಕ್ರಮಗಳು ನಡೆಯುತ್ತಿವೆ. ಇಲ್ಲಿ ವರ್ಷ ಪೂರ್ತಿ ಭಕ್ತರು ಬರಗಾಲಿನಿಂದ ಈ ದೇವಸ್ಥಾನಕ್ಕೆ ಭಕ್ತಿಯಿಂದ ಆಗಮಿಸಿ ತಮ್ಮ ಇಷ್ಟಾರ್ಥಕ್ಕಾಗಿ ಬೇಡಿಕೊಳ್ಳುವರು. ತಿಮ್ಮಾಪೂರ ಹಾಗೂ ಸುತ್ತಮುತ್ತಲಿನ ಸಾಕಷ್ಟು  ಭಕ್ತರು ಮಾರುತೇಶ್ವರನನ್ನು ತಮ್ಮ ಆರಾಧ್ಯದೇವನನ್ನಾಗಿಸಿಕೊಂಡಿದ್ದಾರೆ.

ವಿಜಯ ದಶಮಿಯಂದು ಮಾರುತೇಶ್ವರ ಪಲ್ಲಕ್ಕಿಯು ವಾದ್ಯ ಮೇಳಗಳೊಂದಿಗೆ ನೂರಾರು ಭಕ್ತರ ಮಧ್ಯೆ ಗ್ರಾಮದ ಹೊರವಲಯದಲ್ಲಿರುವ ಸಂಗಪ್ಪ ಮಡಿವಾಳರ ಹೊಲದಲ್ಲಿರುವ ಬನ್ನಿ ಮರಕ್ಕೆ ಪೂಜೆ ಮಾಡಿ ಅಲ್ಲಿಂದ ಬನ್ನಿ ತಪ್ಪಲನ್ನು ತರಲಾಗುತ್ತದೆ. ಬಳಿಕ ಭಕ್ತರು ಬನ್ನಿ ಎಲೆಗಳನ್ನು ವಿನಮಯ ಮಾಡಿಕೊಳ್ಳುವ ದೃಶ್ಯ ನಡುರಾತ್ರಿವರೆಗೆ ನಡೆಯುತ್ತದೆ. ಬನ್ನಿ ವಿನಿಮಯದಿಂದ ಬಾಂಧ್ಯವ್ಯ ವೃದ್ಧಿಸುತ್ತದೆ. ಎಂಬ ನಂಬಿಕೆ ಇದೆ. ಹಾಗೂ ಕಾರ್ತಿಕೋತ್ಸವ ಕೂಡ ಈ ಸಂದರ್ಭದಲ್ಲಿ ಜರುಗುತ್ತದೆ.

ಈ ಗ್ರಾಮದಲ್ಲಿ ಕೆಲವು ಸಮುದಾಯಗಳಲ್ಲಿ ವಿವಾಹವಾಗುವ ಪೂರ್ವದಲ್ಲಿ ಹಣಮಂತ ದೇವರಿಗೆ ದೀಡ ನಮಸ್ಕಾರ ಹಾಕುವ ಪದ್ದತಿ ಇದೆ. ನಂತರ ಗೋಪಾಳ ತುಂಬಿಸುವ ಪದ್ದತಿ ಇದ್ದು ಮತ್ತು ರಡ್ಡಿ ಸಮುದಾಯದಲ್ಲಿ ವರ್ಷಕ್ಕೆ ಒಂದೇ ವಿವಾಹ ಎಂಬ ನಿಯಮವಿದ್ದು 2 ವಿವಾಹವಾದರೇ ಆ ಕುಟುಂಬದಲ್ಲಿ ಅವಘಢ ಸಂಭವಿಸಿವೆ ಕೆಲವು ಮನೆತನಗಳಲ್ಲಿ ಜರುಗಿವೆ. ಕಾರಣ ವರ್ಷಕ್ಕೆ ಒಂದೇ ಮದುವೆ ಜರುಗುತ್ತಿವೆ. ಇದು ಹಣಮಂತ ದೇವರು ಕಟ್ಟಾಜ್ಞೆಯನ್ನು ಗ್ರಾಮಸ್ಥರು ಪಾಲಿಸಿಕೊಂಡು ಬಂದಿರುತ್ತಾರೆ. ಹಣಮಂತದೇವರಿಗೆ ನೀರು ಎರೆದ ನಂತರ ವರ್ಷ ಪೂರ್ತಿ ಯಾವ ಮಳೆಯಾಗದಿದ್ದರು ಉತ್ತರಿ ಮಳೆಯು ಆಗಿದ್ದು ರೈತರಿಗೆ ಹಿಂಗಾರಿ ಬಿತ್ತನೆಗೆ ಇದು ಹನಮಂತ ದೇವರ ಮಹಿಮೆಯಾಗಿದೆ. ಕೆಲವು ವರ್ಷಗಳ ಹಿಂದೆ ಜರುಗಿವೆ ಎನ್ನುತ್ತಾರೆ.

ತಿಮ್ಮಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.   

ವಿಶೇಷ ಕಾರ್ತಿಕೋತ್ಸವ:

ಪ್ರತಿ ವರ್ಷ ಗ್ರಾಮದ ದೈವ ಮಂಡಳಿಯಿಂದ ಪ್ರತಿ ರಾತ್ರಿ   ಗುಡಿಯ ಸುತ್ತಲೂ ಐದು ಸುತ್ತು ಪಲ್ಲಕ್ಕಿ ಪ್ರದರ್ಶನ ಜರುಗುತ್ತದೆ ಹಾಗೂ ವಿಶೇಷ ಪೂಜೆ ಧಾರ್ಮಿಕ ಆಚರಣಿಗಳು ನಡೆಯುತ್ತದೆ. ಕಾರ್ತಿಕೋತ್ಸವ ನಿತ್ಯ ಶಿವ ಭಜನೆ, ಮನರಂಜನಾ ಕಾರ್ಯಕ್ರಮಗಳು ಈ ಸಂದರ್ಭ ಇಲ್ಲಿ ಜರುಗುತ್ತದೆ. ಮದುವೆಯ ಸಂದರ್ಭದಲ್ಲಿ ದೀಡದಂಡ ನಮಸ್ಕಾರ ಹಾಕುವ ಪದ್ದತಿ ಇದೆ. ಜವಳದ ಕಾರ್ಯಗಳು, ಗೋಪಾಳ ಪದ್ದತಿ ಇತರೆ ದಾರ್ಮಿಕ ಆಚರಣೆಗಳು ಜರಗುತ್ತವೆ.

ಗ್ರಾಮೀಣ ಭಾರತದಲ್ಲಿ ಜಾತ್ರೆ ಉತ್ಸವಾದಿ ಮೋಜು ಮಜಲಿನದ್ದೇ ವೈಭವ. ವರ್ಷವಿಡಿ ದುಡಿದು ದಣಿದ ದೇಹಕ್ಕೆ, ರೈತ ವರ್ಗಕ್ಕೆ ಅದರಲ್ಲೂ ಮನರಂಜನೆ ಆಧಾರದ ಜಾತ್ರೆ ಉತ್ಸವಾದಿಗಳು ಸಮೂಹ ಸಂಸ್ಕೃತಿಯ ವಾಹಕಗಳು ಹೌದು. ವರ್ಷಕ್ಕೊಮ್ಮೆ ಅದು ಸುಗ್ಗಿ ಮುಗಿದು ರೈತ ಕಾರ್ಮಿಕರ ಕೈಯಲ್ಲಿ ಹಣ ಬಂದ ಕಾಲ ಜಾತ್ರೆಗಳ ಸಡಗರ, ಜಾತ್ರೆ ಬಂತೆಂದರೆ ಸಾಕು ಜಾತ್ರೆಯೆಂದರೆ ಮೋಜು ಮಜಲಿನ ಭಕ್ತಿರಸದ ಕೇಂದ್ರಸ್ಥಾನ. ಮಾನವ ಸಂಬಂಧಗಳ ಬೆಸುಗೆ. ಕೌಟುಂಬಿಕ ಸಂಬಂಧಗಳಲ್ಲಿ ಸ್ಪಂದಿಸುವ ಕರುಳು ಬಳ್ಳಿಯ ಆಡುಂಬೊಲ ಭಯ, ಭಕ್ತಿ ನಂಬಿಕೆ ಆಚರಣೆ, ನಿಷಿದ್ದಗಳ ಆಗರ. ಹಾಗೆಯೇ ಪ್ರಿಯ-ಪ್ರೇಯಸಿಯರ ರಸಕೇಳಿಯೂ ಹೌದು. ಜನಪದರದಲ್ಲಿನ ಗಾದೆಯೊಂದು ಅರ್ಥಪೂರ್ಣ.

ಮಕ್ಕಳನ್ನು ಕರಕೊಂಡು ಮದುವೆಗೆ ಹೋಗಬಾರದು

ಗಂಡನನ್ನು ಕರಕೊಂಡು ಜಾತ್ರೆಗೆ ಹೋಗಬಾರದು

ಅಂದರೆ ಮಕ್ಕಳನ್ನು ಕರಕೊಂಡು ಹೋದರೆ ಮಕ್ಕಳ ತೊಳಿಯೇ ಬಳಿಯೋದರೊಳಗೆ ಮದುವೆ ನೋಡುವುದು ಯಾವಾಗ. ಹಾಗೆಯೇ ಜಾತ್ರೆಯಲ್ಲಿ ತವರು ಮನೆಯವರು ಮಾತಾಡಿದರೆ ಗಂಡನಿಗೆ ಸಂಶಯಪಡುವ ಪ್ರಸಂಗವನ್ನು ನಿರ್ಮಿಸುವುದು ಎಂದು ಇಂಥ ಗಾದೆ ಹುಟ್ಟಿಕೊಂಡರೆ, ಬದುಕಿನ ಹೊಸ ಅನುಭವ ಅನಾವರಣವಾಗುವುದು ಜಾತ್ರೆ ಉತ್ಸವಗಳಲ್ಲಿ ಮಾತ್ರ ಎನ್ನಬಹುದು.

ಉತ್ತರಿ ಮಳೆಯಲ್ಲಿ ಜಾತ್ರೆ:

ಜಾತ್ರೆಗಳು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸ್ಥಳೀಯ ಆಶಯಗಳ ಆಧಾರದ ಮೇಲೆ ಜರಗುವುದು. ಜನತೆಯ ಮನೋಧರ್ಮ, ಅಭಿರುಚಿಯಂತೆ ವಿಭಿನ್ನ ಮತಧರ್ಮಗಳ ಕರಣಗಳಿಂದಾಗಿ ಜಾತ್ರೆಗಳ ಆಚರಣೆ ವಿಶಿಷ್ಟತೆಯಿಂದ ಕೂಡಿರುತ್ತವೆ. ಅಂತಹ ವಿಶಿಷ್ಟ ಜಾತ್ರೆಗಳಲ್ಲಿ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಜಾತ್ರೆ ವಿಶಿಷ್ಟತೆಯಲ್ಲಿಯೇ ವಿಶಿಷ್ಟವಾಗಿದೆ.

ಈ ಜಾತ್ರೆಯು ಪ್ರತಿ ವರ್ಷ ಉತ್ತರಿ ಮಳೆ ಒಂದನೇ ಪಾದ ರವಿವಾರದಂದು ನಡೆಯುತ್ತದೆ. ಕೆಲವೊಮ್ಮೆ ಎರಡನೇ ಪಾದದಲ್ಲಿ ಜರಗುವುದುಂಟು. ಅದಕ್ಕಾಗಿ ಈ ಜಾತ್ರೆಯ ಉತ್ತರಿ ಮಳೆ ಜಾತ್ರೆ ಎಂದು ಈ ಭಾಗದಲ್ಲಿ ಪ್ರಸಿದ್ದಿ ಪಡೆದಿದೆ. ಆದರೆ ಈ ಜಾತ್ರೆಯು ಪ್ರಾರಂಭ ಹುಬ್ಬಿ ಮಳೆ ಕೊನೆಯ ಪಾದದಲ್ಲಿ ಬರುವ ಶನಿವಾರ ಬರುತ್ತದೆ. ಆದರೆ ಉತ್ತರಿ ಮಳೆಯ ಒಂದನೇ ಪಾದದ ಶನಿವಾರರಂದು ಊರಿನ ಎಲ್ಲಾ ದೇವರುಗಳಿಗೆ ನೀರೆರೆಯುವದರಿಂದ ಪ್ರಾರಂಭವಾಗುತ್ತದೆ ಎರಡನೇ ಪಾದದ ಶನಿವಾರದಿಂದ ಜಾತ್ರೆ ಪ್ರಾರಂಭಗೊಳ್ಳುತ್ತದೆ.

ಇಲ್ಲಿಯ ಮಾರುತೇಶ್ವರ ಬಸವೇಶ್ವರ  ಜಾತ್ರೆಯು ಹುಬ್ಬಿ ಮಳೆಯ ಕೊನೆಯಪಾದದಲ್ಲಿ ನೀರನ್ನು ಹನಿಸುವದರೊಂದಿಗೆ ಜಾತ್ರೆ ಪ್ರಾರಂಭಗೊಂಡು ಈ ಸಂದರ್ಭದಲ್ಲಿ ದೇವಸ್ಥಾನವನ್ನು ವಿಶೇಷವಾಗಿ ಶೃಂಗರಿಸುವರು, ಗೋಪಾಳವನ್ನ ಗ್ರಾಮದಲ್ಲಿ ಸಂಚರಿಸುವುದು ಮುಂದೆ ಬರುವ ಶನಿವಾರ, ರವಿವಾರ ಸೋಮವಾರ ಜಾತ್ರೆ ನಡೆಯುತ್ತದೆ. ಈ ಜಾತ್ರೆಯು ಉತ್ತರಿ ಮಳೆಯಲ್ಲಿ ನಡೆಯುವುದರಿಂದ ಈ ಭಾಗದಲ್ಲಿ ಉತ್ತರಿ ಮಳೆಯ ಜಾತ್ರೆ ಎಂದು ಹೆಸರಾಗಿದೆ.

ಒಂದೊಂದು ಜಾತ್ರೆಯಲ್ಲಿ ಒಂದೊಂದು ವಿಶೇಷತೆ ಎನ್ನುವ ಹಾಗೆ ಈ ಜಾತ್ರೆಯಲ್ಲಿ ಹನುಮಪ್ಪ ಬಸಪ್ಪ ಎರಡು ದೇವರುಗಳ ಜಾತ್ರೆಯು ಒಂದೆ ನಡೆಯುತ್ತಿರುವದು ವಿಶೇಷತೆಯಲ್ಲೊಂದಾಗಿದೆ. 

ಎಲ್ಲಾ ಆಚರಣೆಗಳಿಗಿಂತಲೂ ಬಿನ್ನವಾದ ಅಪರೂಪವೆನಿಸಿರುವ ಹತಾರ ಸೇವೆಯ ಈ ನೋಟ ನೋಡುಗರ ಕಣ್ಮಣಗಳಿಗೆ ರೋಮಾಂಚನ ಉಂಟುಮಾಡುತ್ತದೆ. ಬೇರೆ ಬೇರೆ ಕಡೆಗಳಿಂದ ಜನರು ಹತಾರ ಸೇವೆಯ ವೈಭವ ನೋಡುಲು ಆಗಮಿಸುತ್ತಾರೆ.

ಕಾಯಿ ಒಡೆಯುವ ಸಂಭ್ರಮ:

ಜಾತ್ರೆಯ ದಿನ ಸಾಯಂಕಾಲ ಸಕಲ ವಾಧ್ಯಗಳೊಂದಿಗೆ ಗುಡಿ ಪ್ರದಕ್ಷಿಣೆ ಹಾಕುವ ದೃಶ್ಯ ರಂಜನೀಯ. ಪ್ರತಿ ಸುತ್ತಿಗೂ ಪ್ರತಿಯೊಂದು ಮನೆಯವರು ಸುತ್ತಿಗೊಂದರಂತೆ ಸುತಗಾಯಿ (ಟೆಂಗಿನಕಾಯಿ) ಬೇಡಿಕೊಂಡವರು 101 ಕಾಯಿಗಳನ್ನೂ ಸಹ ಒಡೆಯುವ ಸಂಪ್ರದಾಯ ಇಲ್ಲಿ ವಿಶೇಷ. ಮಾರುತೇಶ್ವರನ ಗುಡಿ ಎದುರು 4 ಜನ ಕಂಬಳಿ ಹಿಡಿದು ನಿಂತಿರುತ್ತಾರೆ. ಅದರ ಒಳಗೆ ತೆಂಗಿನಕಾಯಿ ಜೋರಾಗಿ ಒಗೆದು ಒಡೆಯುವುದು ಎಲ್ಲರಿಗೂ ಖುಷಿ ಕೊಡುವಂತಹದು. ಈ ಎಲ್ಲಾ ಕಾಯಿಗಳನ್ನು ವಡ್ಡರ ಸಮುದಾಯದವರು ಕಂಬಳಿಯಲ್ಲಿ ಕಟ್ಟಿಕೊಂಡು ಹೋಗಿ ವಡ್ಡರ ಸಮುದಾಯದ ಎಲ್ಲ ಮನೆಗಳಿಗೆ ಹಂಚಿಕೆ ಮಾಡುತ್ತಾರೆ. ನಂತರ ಜಾತ್ರೆಗೆ ಬಂದ ಬೀಗರು, ಮನೆಗೆ ಬಂದ ಅತಿಥಿಗಳಿಗೆ ದೇವರ ಪ್ರಸಾದ ಎಂದು ಹಂಚಿಕೆ ಮಾಡುತ್ತೇವೆ ಎನ್ನುತ್ತಾರೆ ಆ ಸಮುದಾಯದ ಯುವಕ ಎಸ್.ಡಿ.ಎಂ.ಸಿ. ಅಧ್ಯಕ್ಷ ನಾಗೇಶ ವಡ್ಡರವರು ಹೇಳುತ್ತಾರೆ. ಈ ಜಾತ್ರೆಯ ಹತ್ತಾರು ಸಾವಿರ ಕಾಯಿಗಳು ಈಗಲೂ ಮಾರಾಟವಾಗುತ್ತವೆ. ಹೀಗಾಗಿ ಈ ಜಾತ್ರೆಯು ಕಾಯಿ ಜಾತ್ರೆಯಂತಲೂ ಪ್ರಸಿದ್ಧಿ ಪಡೆದಿದೆ.

ಈ ಎಲ್ಲಾ ಕಾಯಿಗಳನ್ನು ವಡ್ಡರ ಸಮುದಾಯದವರು ಕಂಬಳಿಯಲ್ಲಿ ಕಟ್ಟಿಕೊಂಡು ಹೋಗಿ ವಡ್ಡರ ಸಮುದಾಯದ ಎಲ್ಲಾ ಮನೆಗಳಿಗೆ ಹಚ್ಚಿಕ್ಕೆ ಮಾಡುತ್ತಾರೆ. ನಂತರ ಜಾತ್ರೆಗೆ ಬಂದ ಅತಿಥಿಗಳಿಗೆ ದೇವರ ಪ್ರಸಾದವೆಂದು ಎಲ್ಲರಿಗೂ ಹಂಚಿಕೆ ಮಾಡುತ್ತೇವೆ ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ನಾಗೇಶ ವಡ್ಡರ ರವರು.

ಹೇಳಿಕೆಗಳು:

ಉತ್ತರಿ ಮಳೆಯ ಕಾಲ ರೈತನಿಗೆ ಉಪಯುಕ್ತವಾದ ಕಾಲ. ರೈತ ಹಿಂಗಾರಿ ಬೆಳೆಯನ್ನು ಬಿತ್ತುವ ದಿನ. ಈ ಜಾತ್ರೆಯ ದಿವಸ ಮುಂಜಾನೆ 4-30 ಸುಮಾರಿಗೆ ಹಡಗಲಿ ಗ್ರಾಮದಲ್ಲಿ, ಅಂದು ಸಾಯಂಕಾಲ ತಿಮ್ಮಾಪೂರ ಗ್ರಾಮದಲ್ಲಿ ಹನಮಪ್ಪ ಹೇಳಿಕೆ ಆಗುತ್ತದೆ. ಆವೇಶಗೊಂಡ ಪೂಜಾರಿಗಳು ಕೈಯತ್ತಿ ಸನ್ನೆ ಮಾಡುತ್ತಿದ್ದಂತೆ ಹೇಳಿಕೆ ಕೇಳಲು ಕಾತುರರಾದ ಸಾವಿರಾರು ಜನರ ಸಮೂಹ ಕ್ಷಣಾರ್ಧದಲ್ಲಿ ಸ್ಥಭ್ದವಾಗುತ್ತದೆ. ಆಗ ಪೂಜಾರಿಯು ಹೇಳಿಕೆಯನ್ನು ಹೇಳುತ್ತಾನೆ.

ದಿನಾಂಕ 16 ರಂದು ಶನಿವಾರ ರಾತ್ರಿ 8-00 ಕ್ಕೆ ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ನೂರಾರು ಭಕ್ತರು ಬರಿಗಾಲಿನಿಂದ ತಿಮ್ಮಾಪೂರ ಪತ್ರಿಗಿಡದ ಬಸವೇಶ್ವರನಿಗೆ ಪೂಜೆ ಸಲ್ಲಿಸಿ, ಕಿರಸೂರ ಗ್ರಾಮಕ್ಕೆ ತೆರಳುತ್ತಾರೆ. ಕಿರಸೂರಿನ ಗ್ರಾಮಸ್ಥರು ಶ್ರೀ ಮಾರುತೇಶ್ವರ ಪಲ್ಲಕ್ಕಿ ಹಾಗೂ ಭಕ್ತರನ್ನು ಬರಮಾಡಿಕೊಳ್ಳುತ್ತಾರೆ. ಅಲ್ಲಿನ ಹನಮಂತ ದೇವರಿಗೆ ಪೂಜೆ ಸಲ್ಲಿಸುವರು. ಅಲ್ಲಿಂದ ಕಿರಸೂರು ಗ್ರಾಮಸ್ಥರು ಡೊಳ್ಳಿನ ಸಂಗಡ 5 ಕುಂಬಳ ಎಲೆ ತೆಗೆದುಕೊಂಡು ರಾತ್ರಿ 12-00 ಘಂಟೆಯ ಸುಮಾರಿಗೆ ಹಡಗಲಿ ಸಮೀಪದ ಮಲಪ್ರಭಾ ನದಿಗೆ ತೆರಳುತ್ತಾರೆ.

ಮಲಪ್ರಭಾ ನದಿಯಲ್ಲಿ ಸ್ನಾನ ಮಾಡಿದ ನಂತರ ಹೊಳೆಯಲ್ಲಿ ಪೂಜೆ, ಪುನಸ್ಕಾರಗಳು ನಡೆಯುವವು. ಅಲ್ಲಿಂದ ಹೊರಟು ಹಡಗಲಿ ಗ್ರಾಮಕ್ಕೆ ತೆರಳಿ ಅಲ್ಲಿಯ ಹನಮಂತ ದೇವರಿಗೆ ಪೂಜೆ ಸಲ್ಲಿಸಿದ ನಂತರ ಅಲ್ಲಿ ಮುಂಜಾನೆ 4-00 ರ ಸುಮಾರಿಗೆ ಹನುಮಂತ ದೇವರ ಕಟ್ಟೆಯ ಮೇಲೆ ಮಾರುತೇಶ್ವರ ಪೂಜಾರಿಯು ಭವಿಷ್ಯದ ಮಳೆ, ಬೆಳೆ, ಹೇಳಿಕೆ ನಡೆಯುವದು. ನಂತರ ಪಲ್ಲಕ್ಕಿ ಹಾಗೂ ಭಕ್ತರಿಗೆ ಕುರಹಟ್ಟಿ ಸಹೋದರರು ಅಲ್ಪೋಪಹಾರದ ಸೇವೆಯನ್ನು ಸಲ್ಲಿಸುತ್ತಾರೆ. ಪ್ರಸಾದ ನಂತರ ಮರಳಿ ಪಲ್ಲಕ್ಕಿಯೊಂದಿಗೆ ಗ್ರಾಮಕ್ಕೆ ಬಂದು ತಲಪುತ್ತಾರೆ.

ದಿನಾಂಕ 17 ರಂದು ರವಿವಾರ ಮುಂಜಾನೆ 8-00 ಕ್ಕೆ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ನಡೆದು ಸಕಲ ವಾದ್ಯ-ಮೇಳದೊಂದಿಗೆ ಕಳಸದ ಮೆರವಣಿಗೆ. ನಂತರ ಗೋಪುರಕ್ಕೆ ಕಳಸಾರೋಹಣ, ಮುಂಜಾನೆ 11-00 ಕ್ಕೆ ಶ್ರೀ ಮಾರುತಿದೇವರ ಪಲ್ಲಕಿಯನ್ನು ಶ್ರೀ ವಿರುಪಾಕ್ಷಗೌಡ ದಾದ್ಮಿಯವರ ಹೊಲದಿಂದ ದೇವಸ್ಥಾನಕ್ಕೆ ಕರೆತರಲಾಗುವದು.  Lನಂತರ ಹೊಳೆಯಿಂದ ತಂದ ನೀರನ್ನು ದೇವರಿಗೆ ಸ್ನಾನ ಮಾಡಿಸುವುದು. ಮಧ್ಯಾಹ್ನ 12-00 ಘಂಟೆಗೆ ಪೂಜಾರಿಗಳಿಂದ ವಿಶಿಷ್ಟವಾದ ಹತಾರ ಸೇವೆ ನಡೆಯುವದು.

ಅಂದು ಸಾಯಂಕಾಲ 4-00 ಕ್ಕೆ ಪೂಜಾರಿ ಮನೆಯಿಂದ ಮಾವಿನ ಮರತಪ್ಪ ಎಂಬ ಹನಮಂತ ದೇವರ ಮೂರ್ತಿಯನ್ನು ಗುಡಿಗೆ ತರಲಾಗುತ್ತದೆ. ಸಾಯಂಕಾಲ 5-00 ಕ್ಕೆ ವಿಶಿಷ್ಟ ರೀತಿಯ ಹತಾರ ಸೇವೆಯೊಂದಿಗೆ ಇದೇ ಸಂದರ್ಭದಲ್ಲಿ ಸುತಕಾಯಿ (ತೆಂಗಿನಕಾಯಿ) ಒಡೆಯುವ ಕಾರ್ಯ ನಡೆಯುವುದು. ನಂತರ ಹನಮಂತ ದೇವರ ಪೂಜಾರಿಯು ಭರಮದೇವರ ಕಟ್ಟೆಯ ಮೇಲೆ ನಿಂತು ಹತಾರ ಸೇವೆ ಆದ ನಂತರ ಭವಿಷ್ಯದ ಮಳೆ, ಬೆಳೆಗಳ ಬಗ್ಗೆ ಹೇಳಿಕೆ ನಡೆಯುವದು

ದಿನಾಂಕ 18 ರಂದು ಸೋಮವಾರ ಮುಂಜಾನೆ 9-00 ಘಂಟೆಗೆ ಶ್ರೀ ಮ.ಘ.ಚ. ರುದ್ರಮುನಿ ಶಿವಾಚಾರ್ಯರು ಹಡಗಲಿ, ನಿಡಗುಂದಿ ಹಾಗೂ ಆಳಂದ, ನಂದವಾಡಗಿ ಮತ್ತು ಜಾಲವಾದ ಮ.ನಿ.ಪ್ರ. ಮಹಾಂತಲಿಂಗ ಶಿವಾಚಾರ್ಯರು ಇವರ ಸಾನಿಧ್ಯದಲ್ಲಿ ಬಸವೇಶ್ವರನಿಗೆ ರುದ್ರಾಭಿಷೇಕ ಹಾಗೂ ಬಸವ ಪಟ ಏರಿಸುವುದು.

ಮಧ್ಯಾಹ್ನ 3-00 ಭಾವಚಿತ್ರ ಮೆರವಣಿಗೆ ಹಾಗೂ ಹುಚ್ಚಯ್ಯ ಎಳೆಯುವ ಕಾರ್ಯಕ್ರಮ ನಡೆಯುವುದು. ಸಂಜೆ 6-00 ಕ್ಕೆ ಸಕಲ ವಾದ್ಯ-ಮೇಳಗಳೊಂದಿಗೆ ಮಹಾ ರಥೋತ್ಸವ ಜರುಗಲಿದೆ ಎಂದು ಜಾತ್ರಾ ಸಮಿತಿಯವರು ತಿಳಿಸಿದ್ದಾರೆ.

ದೇವಾಲಯಗಳು ಪ್ರಾಚೀನ ಪರಂಪರೆಯ ಪ್ರತೀಕಗಳು. ಗ್ರಾಮೀಣ ಬದುಕಿನ ಸಂತಸದ ಸಂಕೇತಗಳು. ಆಧುನಿಕತೆಯ ಭರಾಟೆಯ ಮಧ್ಯೆಯು ವಿಲಕ್ಷವೆನಿಸಿದರೂ ಭಾಂಧವ್ಯ ಭಾವೈಕ್ಯತೆಗೆ ನಾಂದಿ ಹಾಡುವ ತಿಮ್ಮಾಪೂರದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ದೇವಾಲಯಗಳು ಉದ್ಗರಗೊಳಿಸುವ ಸುತಗಾಯಿ ಒಡೆಯುವಿಕೆ, ಲೆಕ್ಕಾಚಾರಕ್ಕೆ ಹಚ್ಚಿಸುವ ಹೇಳಿಕೆಗಳು, ಅಪರೂಪದ ದೃಶ್ಯಗಳಾಗಿವೆ. ಈ ಹನಮಂತ ದೇವರ ಪವಾಡಗಳನ್ನು ಕ್ರೋಢೀಕರಿಸುವ ಕಾರ್ಯವಾಗಬೇಕಾಗಿದೆ. ಕಲಿಯುಗದಲ್ಲಿ ದೇವರಿಲ್ಲವೆನ್ನುವ ನಾಸ್ತಿಕರಿಗೆ ಈ ದೇವಸ್ಥಾನಗಳು ಒಂದು ಸವಾಲು ಎಂದು ಹೇಳಬಹುದಾಗಿದೆ.

ಈ ಎಲ್ಲ ಕಾರ್ಯಕ್ರಮಗಳಲ್ಲಿ ಸುತ್ತಮುತ್ತಲಿನ ಸಕಲ-ಸದ್ಭಕ್ತರು ಪಾಲ್ಗೊಂಡು ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರ ಪರವಾಗಿ ಸ್ಥಳೀಯ ಸ್ವಾಮಿ ವಿವೇಕಾನಂದ ಯುವಕ ಮಂಡಳದ ಸದಸ್ಯ ಹಾಗೂ ಪತ್ರಕರ್ತ ಜಗದೀಶ ಹದ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಜಗದೀಶ ಮಲ್ಲಪ್ಪ ಹದ್ಲಿ, ಪತ್ರಕರ್ತರು

ತಿಮ್ಮಾಪೂರ  9611761979

ತಾ: ಹುನಗುಂದ ಜಿ: ಬಾಗಲಕೋಟ

ಪೋನ್ :9900895218

ವಾಟ್ಸಪ್ ನಂ;    961176979

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group